More

    ಹೊಸದುರ್ಗದಲ್ಲಿ ಪೊಕ್ಸೋ ಪ್ರಕರಣ ಹೆಚ್ಚಳ

    ಹೊಸದುರ್ಗ: ತಾಲೂಕಿನಲ್ಲಿ ಪೊಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಆತಂಕ ವ್ಯಕ್ತಪಡಿಸಿದರು.

    ಶಾಲಾ ಶಿಕ್ಷಣ ಇಲಾಖೆ ಹಾಗೂ ಕಾನೂನು ಸೇವಾ ಸಮಿತಿ ಸೋಮವಾರ ಪಟ್ಟಣದ ತೋಟದ ರಾಮಯ್ಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೊಕ್ಸೋ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪರಿಚಿತರಿಂದಲೇ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ.

    ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳು ಅವಮಾನ ತಡೆಯಲಾಗದೆ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ ಎಂದರು.

    ಪ್ರಜ್ಞಾವಂತ ಸಮಾಜದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಸರ್ಕಾರ 2012ರಲ್ಲಿ ಪೊಕ್ಸೋ ಜಾರಿಗೊಳಿಸಿದೆ.

    ಮಕ್ಕಳ ಪಾಲಕರು ಹಾಗೂ ಶಿಕ್ಷಕರು ಈ ಕುರಿತು ಅಗತ್ಯ ಮಾಹಿತಿ ತಿಳಿದುಕೊಳ್ಳಬೇಕು. ಕಾನೂನಿನ ಅರಿವಿದ್ದರೆ ಇಂತಹ ಘಟನೆಗಳನ್ನು ತಡೆಯಬಹುದು ಎಂದು ತಿಳಿಸಿದರು.

    ಮಕ್ಕಳ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ. ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದ ಸಮಯದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ.

    ಮೊಬೈಲ್ ಮೇಲೆ ಅವಲಂಬಿಸಿರುವುದು ಕೂಡ ಕಾರಣವಾಗಿದೆ. ಮಕ್ಕಳ ವರ್ತನೆಯ ಮೇಲೆ ಪಾಲಕರು, ಶಿಕ್ಷಕರು ನಿಗಾವಹಿಸುವ ಮೂಲಕ ಅವರ ಪ್ರಗತಿಗೆ ಶ್ರಮಿಸಬೇಕು ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಮಾತನಾಡಿ, ಪೊಕ್ಸೋ ಕುರಿತು ಶಿಕ್ಷಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮುಖ್ಯ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.

    ಈ ಮೂಲಕ ಮಕ್ಕಳಿಗೆ ಕಾನೂನು ಕುರಿತು ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ವಕೀಲರ ಸಂಘದ ಕಾರ್ಯದರ್ಶಿ ಬಸವಲಿಂಗಪ್ಪ, ಬಿಆರ್‌ಸಿ ಶ್ರೀನಿವಾಸ್, ಟಿ.ಶೇಖರಪ್ಪ ಇತರರಿದ್ದರು.

    ಶಿಕ್ಷಕರ ಜವಾಬ್ದಾರಿ ಹೆಚ್ಚು: ಶಿಕ್ಷಕರು ಮನಸ್ಸು ಮಾಡಿದರೆ ಪೊಕ್ಸೋ ಪ್ರಕರಣಗಳನ್ನು ತಡೆಯಬಹುದು. ಆದರೆ, ಯಾರೂ ಇಂತಹ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ನ್ಯಾಯಾಧೀಶೆ ಶಶಿಕಲಾ ಬೇಸರಿಸಿದರು.

    ಪೊಲೀಸರೇ ಬರಲಿ ಎನ್ನುವುದು ಎಷ್ಟು ಸರಿ, ಇಂತಹ ಕೇಸ್‌ಗಳು ಠಾಣೆಯಲ್ಲಿ ಬಗೆಹರಿಯದಿದ್ದರೆ ನ್ಯಾಯಲಯಕ್ಕೆ ಬನ್ನಿ. ಸೂಕ್ತ ಪರಿಹಾರ ಕಲ್ಪಿಸಲಾಗುವುದು.

    ಪಟ್ಟಣದಲ್ಲಿ ಕಾಲೇಜುಗಳ ಬಳಿ ಪುಂಡರ ಹಾವಳಿ ಹೆಚ್ಚಾಗಿದೆ. ಬೈಕ್ ವ್ಹೀಲಿಂಗ್ ಮಾಡುತ್ತಿರುವ ಯುವಕರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts