More

    ನೀರಿನ ಮಿತ ಬಳಕೆಯ ಅರಿವು ಅಗತ್ಯ

    ಪಿರಿಯಾಪಟ್ಟಣ: ವಿಶ್ವದಲ್ಲಿ ಬರಗಾಲ ಮತ್ತಿತರ ಕಾರಣಗಳಿಂದ ಅಂತರ್ಜಲ ಕುಸಿತ ಉಂಟಾಗಿ ಜಲಕ್ಷಾಮ ಎದುರಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನೀರಿನ ಮಿತ ಬಳಕೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಅಭಿಪ್ರಾಯಪಟ್ಟರು.


    ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣದಲ್ಲಿ ಈಗಾಗಲೇ ನೀರಿನ ಅಭಾವದಿಂದ ಕೆಲವೆಡೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ನಲ್ಲಿ ಅಳವಡಿಸಿಕೊಳ್ಳದೆ ನೀರು ಪೋಲಾಗಲು ಬಿಡುತ್ತಿರುವವರನ್ನು ಗುರುತಿಸಿ ಅಂತಹವರಿಗೆ ಮನವರಿಕೆ ಮಾಡಿಕೊಡಬೇಕು, ತಪ್ಪು ತಿದ್ದಿಕೊಳ್ಳದೆ ಹೋದಲ್ಲಿ ದಂಡ ವಿಧಿಸಬೇಕು. ಆಗಮಾತ್ರ ನೀರಿನ ಮಹತ್ವ ತಿಳಿಯಲಿದೆ ಎಂದರು.


    ಪೌರಕಾರ್ಮಿಕರು ಸ್ವಚ್ಛತೆಯ ಕೆಲಸವನ್ನು ನಿಮಗೆ ಮಾತ್ರ ಸೀಮಿತಗೊಳಿಸಿಕೊಳ್ಳಿ, ನಿಮ್ಮ ಮಕ್ಕಳನ್ನು ಈ ವೃತ್ತಿಗೆ ತರುವ ಯೋಚನೆ ಮಾಡದೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.


    ದುಂದು ವೆಚ್ಚ ಮಾಡುವುದು, ದುಶ್ಚಟಗಳಿಗೆ ಮೊರೆ ಹೋಗುವುದರಿಂದ ದುಡಿದ ಬಹುಪಾಲು ಹಣ ಕಳೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯೊಂದಿಗೆ ಜೀವನ ನಡೆಸುವಂತೆ ತಿಳಿಸಿದರು.


    ದಿನದ ಮಹತ್ವದ ಬಗ್ಗೆ ಮಾತನಾಡಿದ ಸರ್ಕಾರಿ ಸಹಾಯಕ ಅಭಿಯೋಜಕ ಆರ್.ಕೆ.ಶ್ರೀನಾಥ್, ಈ ಭಾಗದಲ್ಲಿ 50 ರಿಂದ 100 ಅಡಿ ಆಳ ಕೊರೆದರೆ ಸಾಕು ನೀರು ಸಿಗಲಿದೆ ಎಂಬ ಕಾರಣದಿಂದ ನೀರನ್ನು ಪೋಲು ಮಾಡಲಾಗುತ್ತಿದೆ. ಆದರೆ ಕೋಲಾರ ಮತ್ತಿತರ ಕಡೆಗಳಲ್ಲಿ 1500 ಅಡಿ ಕೊರೆದರೂ ನೀರು ಸಿಗುತ್ತಿಲ್ಲ, ಆ ಪರಿಸ್ಥಿತಿಯನ್ನು ಈ ಭಾಗದವರು ತಂದುಕೊಳ್ಳುವ ಮೊದಲು ನೀರಿನ ಮಹತ್ವ ಅರಿತು ನೀರನ್ನು ಪೋಲಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.


    ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಮಾತನಾಡಿ, ಮುಂದಿನ ದಿನಗಳಲ್ಲಿ ಮೂರನೇ ವಿಶ್ವ ಯುದ್ಧ ನಡೆದರೆ ನೀರಿಗಾಗಿ ನಡೆಯಲಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಪರಿಸ್ಥಿತಿಯ ಗಂಭೀರತೆ ಅರಿತು ಮಿತವಾಗಿ ನೀರನ್ನು ಬಳಸುವ ಮೂಲಕ ಮುಂದಿನ ಪೀಳಿಗೆಗೆ ಅಂತರ್ಜಲ ಬತ್ತದಂತೆ ನೋಡಿಕೊಳ್ಳೋಣ. ನೀರು ಪೋಲು ಮಾಡುತ್ತಿರುವವರಿಗೆ ದಂಡ ವಿಧಿಸುವ ಮೂಲಕ ಅವರಿಗೆ ಗಂಭೀರ ಎಚ್ಚರಿಕೆ ಕೊಡುವ ಕೆಲಸವಾಗಬೇಕು ಎಂದು ತಿಳಿಸಿದರು.


    ವಕೀಲ ಎಂ.ಸಿ.ಹರೀಶ್, ಪುರಸಭೆಯ ಆರ್‌ಐ ಮೋಹನ್, ಪೌರಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts