More

    ಡ್ರೈನೇಜ್ ಕ್ಲೀನಿಂಗ್ ಯಂತ್ರಕ್ಕೆ ಪ್ರಶಸ್ತಿ

    ಜಮಖಂಡಿ: ಪೌರಕಾರ್ಮಿಕರು ಎಲ್ಲರಂತೆ ಸ್ವಚ್ಛಂದವಾಗಿ ಕಾರ್ಯ ನಿರ್ವಹಿಸಲಿ ಎಂಬ ಉದ್ದೇಶದಿಂದ ತಾಲೂಕಿನ ಹುನ್ನೂರು ಗ್ರಾಮದ ವಿದ್ಯಾರ್ಥಿನಿ ರೋಹಿಣಿ ಗಂಗಾರಾಮ ದೊಡಮನಿ ರೂಪಿಸಿದ ಸುಲಭ ಸ್ವಚ್ಛತಾ ಸಲಕರಣೆಗೆ ರಾಷ್ಟ್ರಮಟ್ಟದ ಇನ್‌ಸ್ಪೈರ್ ಅವಾರ್ಡ್ ಲಭಿಸಿದೆ.

    ಹುನ್ನೂರು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುವಾಗ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಗೆ ಅನುಕೂಲವಾಗುವಂತಹ ಏನೆಲ್ಲ ಮಾದರಿ ತಯಾರಿಸಬಹುದು ಎಂಬುದಕ್ಕೆ ವಿಜ್ಞಾನ ಶಿಕ್ಷಕರು ಸಲಹೆ ನೀಡಿದ್ದರು.

    ಚರಂಡಿಯಲ್ಲಿನ ತಾಜ್ಯವನ್ನು ಪೌರಕಾರ್ಮಿಕರು ಕೈಯಿಂದ ಸ್ವಚ್ಛಗೊಳಿಸುವುದನ್ನು ತಪ್ಪಿಸಲು ಸುಲಭ ಪರಿಕರ ತಯಾರಿಸುವ ನಿಟ್ಟಿನಲ್ಲಿ ಆಲೋಚಿಸಿದ ವಿದ್ಯಾರ್ಥಿನಿ ರೋಹಿಣಿ ದೊಡಮನಿ ಶಾಲೆಯ ವಿಜ್ಞಾನ ಶಿಕ್ಷಕ ನಿತಿನ್ ವಿ.ಕುಲಕರ್ಣಿ ಅವರ ಮಾರ್ಗದರ್ಶನದೊಂದಿಗೆ 2020ರಲ್ಲಿ ತಯಾರಿಸಿದ್ದ ಡ್ರೈನೇಜ್ ಕ್ಲೀನಿಂಗ್ ಯಂತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

    ಸದ್ಯ ಹುನ್ನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ರೋಹಿಣಿ ಅವರಿಗೆ ನವದೆಹಲಿ ಪ್ರಗತಿ ಭವನದಲ್ಲಿ ಸೆ.16ರಂದು ನಡೆದ 9 ನೇ ರಾಷ್ಟ್ರೀಯ ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

    ಕರ್ನಾಟಕದಿಂದ ಎಂಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಆ ಪೈಕಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಎಂಪಿಎಸ್ ಹುನ್ನೂರು ಶಾಲೆಯ ರೋಹಿಣಿ ದೊಡಮನಿ ಒಬ್ಬಳಾಗಿದ್ದಾಳೆ. ಪರಿಸರ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಕಾರ್ಮಿಕರ ಕಾರ್ಯ ಅಮೂಲ್ಯವಾಗಿದೆ. ಚರಂಡಿ ಸ್ವಚ್ಛತೆಯಲ್ಲಿ ತೊಡಗುವ ಕಾರ್ಮಿಕರಿಗೆ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಗಳಿರುತ್ತವೆ. ರೋಹಿಣಿ ದೊಡಮನಿ ತಯಾರಿಸಿದ ಚರಂಡಿ ಸ್ವಚ್ಛತಾ ಯಂತ್ರ ಕಾರ್ಮಿಕರಿಗೆ ವರದಾನವಾಗಲಿದೆ. ವಿದ್ಯಾರ್ಥಿನಿ ಸಾಧನೆಗೆ ಶಾಲೆ ಮುಖ್ಯಶಿಕ್ಷಕ ಬಸವರಾಜ ಬಾಗೆನ್ನವರ ಹಾಗೂ ಶಿಕ್ಷಕ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಾನು ರೂಪಿಸಿದ ಯಂತ್ರ ಸರಳ ಸನ್ನೆಗಳ ತತ್ವ ಅವಲಂಬಿಸಿದೆ. ಚರಂಡಿ ಕೊಳಚೆಯನ್ನು ಕೈಯಿಂದ ಮುಟ್ಟದೆ ಯಂತ್ರದ ಸಹಾಯದಿಂದ ಸರಳವಾಗಿ ಸಂಗ್ರಹಿಸಿ ಸಾಗಿಸಲು ಸಹಾಯಕವಾಗಿದೆ. ಯಂತ್ರವನ್ನು ಕಡಿಮೆ ಖರ್ಚಿನಲ್ಲಿ ಸ್ಥಳೀಯವಾಗಿ ತಯಾರಿಸಿ ಬಳಸಬಹುದು ಎಂದು ವಿದ್ಯಾರ್ಥಿನಿ ರೋಹಿಣಿ ಹೇಳುತ್ತಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts