More

    ಶ್ರೀಮಠದಲ್ಲಿ ವಿದ್ಯಾದಾನಕ್ಕೆ ಆದ್ಯತೆ

    ವಿಜಯವಾಣಿ ಸುದ್ದಿಜಾಲ ದಾಬಸ್ ಪೇಟೆ
    ಶಿವಗಂಗೆಯ ಹೊನ್ನಮ್ಮಗವಿ ಮಠ ಕಷ್ಟದಲ್ಲಿದ್ದಾಗ ಕೃಷಿಯನ್ನೇ ಅವಲಂಬಿಸಿತ್ತು. ಅಂತಹ ಸನ್ನಿವೇಶದಲ್ಲಿ ಹಿರಿಯ ಲಿಂಗೈಕ್ಯ ಶ್ರೀಗಳಾದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀ ಶಿವಗಂಗಾ ಪ್ರೌಢಶಾಲೆ ತೆರೆದು, ಎಲ್ಲರಿಗೂ ಶಿಕ್ಷಣ ನೀಡುವ ಕಾರ್ಯ ಮಾಡಿದರು ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
    ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀ ಸದ್ಧರ್ಮ ಸಿಂಹಾಸನ ಸಂಸ್ಥಾನ ಹೊನ್ನಮ್ಮಗವಿಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಚೋಟಿ ವೀರಭದ್ರಸ್ವಾಮಿ ಮಂಟಪೋತ್ಸವ, ಭೃಂಗಿಮಠದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
    ಕಷ್ಟ ಕಾಲದಲ್ಲಿ ಶಾಲೆ ಕಟ್ಟುವುದು ಮತ್ತಷ್ಟು ಕಷ್ಟದ ಕೆಲಸ. ಅಂಥದ್ದರಲ್ಲಿ ಶ್ರೀಗಳು ಶಾಲೆ ತೆರೆದು, ಗ್ರಾಮೀಣ ಮಕ್ಕಳು ಶಿಕ್ಷಣ ಪಡೆಯಲು ಅನುವು ಮಾಡಿಕೊಟ್ಟರು. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅನೇಕರು ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಅವರಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಮತ್ತು ಮೌಲ್ಯ ನೀಡಿದ ಕೀರ್ತಿಗೆ ಶ್ರೀಮಠ ಪಾತ್ರವಾಗಿದೆೆ ಎಂದರು.
    ಇಂದು ಅನೇಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅದಕ್ಕೆಲ್ಲ ಕಾರಣ ಅವರ ಸಾಧನೆ. ಪ್ರಶಸ್ತಿ ಕೇಳಿ ಪಡೆಯಬಾರದು. ಅದು ನಮ್ಮನ್ನು ಹುಡುಕಿಕೊಂಡು ಬರುವಂಥ ಸಾಧನೆ ಮಾಡಬೇಕು. ಆಗ ಮನುಷ್ಯ ಜೀವನ ಸಾರ್ಥಕ ಎನಿಸುತ್ತದೆ ಎಂದರು.
    ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನ್ಯಾಯಾಲಯದ ಮೆಟ್ಟಿಲೇರಿದ್ದ ಶಿವಗಂಗೆಯ ಭೃಂಗಿ ಮಠ ವಿವಾದ ಆದೇಶ ನಮ್ಮ ಪರವಾಗಿ ಬಂದಿದೆ. ಇಂದು ಅಲ್ಲಿ ಧಾರ್ಮಿಕ ಕಾರ್ಯ ಮಾಡಲಾಗುತ್ತಿದೆ. ಇದು ಹಿರಿಯ ಶ್ರೀಗಳ ಆಸೆಯಾಗಿತ್ತು. ಆವರ ಆಸೆ ಈಗ ಈಡೇರಿದೆ ಎಂದರು.
    ರಂಗಾಪುರ ಕೆರೆಗೋಡು ಮಠದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ, ಬೇಲಿಮಠದ ಮಹಾಸಂಸ್ಥಾನ ಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ತುಮಕೂರು ರಾಮಕೃಷ್ಣ ಆಶ್ರಮದ ಡಾ.ವೀರೇಶಾನಂದ ಸ್ವಾಮೀಜಿ, ನಿಜಗಲ್ ಮಠದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಮಹದೇಶ್ವರ ಮಠದ ಶ್ರೀ ಇಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುಬ್ಬಿ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಶಿವಗಂಗೆಯ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ವನಕಲ್ಲು ಮಠದ ಡಾ. ಶ್ರೀ ಬಸವ ರಮಾನಂದ ಸ್ವಾಮೀಜಿ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್, ನೆಲಮಂಗಲ ಶಾಸಕ ಎಸ್.ಶ್ರೀನಿವಾಸಯ್ಯ, ಮುಖಂಡರಾದ ರಾಜೇಂದ್ರ, ಕಾಶಿನಾಥ, ಜಿ.ಮರಿಸ್ವಾಮಿ, ಕೆ.ಗೋವಿಂದರಾಜು, ಎಚ್.ಪಿ.ಸುರೇಶ, ಕಂಬಾಳು ಉಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts