More

    ಬಾಂಗ್ಲಾದೇಶ ಚುನಾವಣೆಯಲ್ಲಿ ಆವಾಮಿ ಲೀಗ್​ಗೆ ಜಯ: ನಾಲ್ಕನೇ ಬಾರಿ ಪ್ರಧಾನಿಯಾಗಲಿದ್ದಾರೆ ಶೇಖ್ ಹಸೀನಾ

    ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ ಸಾರ್ವತ್ರಿಕ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆಲ್ಲುವ ಮೂಲಕ ಐದನೇ ಅವಧಿಗೆ ಅಧಿಕಾರ ಪಡೆದುಕೊಂಡಿದ್ದು, ಶೇಖ್​ ಹಸೀನಾ ಅವರು ನಾಲ್ಕನೇ ಅವಧಿಗೆ ದೇಶದ ಪ್ರಧಾನಿಯಾಗಲಿದ್ದಾರೆ.

    ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತ್ತು ಅದರ ಮಿತ್ರಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಹಸೀನಾ ಅವರ ಗೆಲುವು ನಿರೀಕ್ಷಿತವಾಗಿತ್ತು. ಮತದಾನಕ್ಕೂ ಮುನ್ನ ಅಲ್ಲಲ್ಲಿ ಹಿಂಸಾಚಾರ ನಡೆದಿತ್ತು. ಮತಗಟ್ಟೆಗಳಿಗೆ, ಶಾಲೆಗಳಿಗೆ ಬೆಂಕಿ ಹಚ್ಚಲಾಗಿತ್ತು.

    ಈ ಗೆಲುವಿ ಮೂಲಕ ಹಸೀನಾ ಅವರು ಬಾಂಗ್ಲಾದೇಶದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇದುವರೆಗೆ ಪ್ರಕಟವಾದ ಫಲಿತಾಂಶಗಳ ಪೈಕಿ ಅವಾಮಿ ಲೀಗ್ ಇಲ್ಲಿಯವರೆಗೆ 224 ಸ್ಥಾನಗಳನ್ನು ಗೆದ್ದಿದೆ, 62 ಕ್ಷೇತ್ರಗಳಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ. ಜಾತಿಯೋ ಪಕ್ಷವು ನಾಲ್ಕು ಸ್ಥಾನಗಳನ್ನು ಗೆದ್ದಿದ್ದರೆ, ಒಂದು ಸ್ಥಾನವನ್ನು ಇನ್ನೊಂದು ಪಕ್ಷ ಗೆದ್ದಿದೆ.

    “ನಾವು ಈಗಾಗಲೇ ಲಭ್ಯವಿರುವ ಫಲಿತಾಂಶಗಳೊಂದಿಗೆ ಅವಾಮಿ ಲೀಗ್ ಪಕ್ಷವನ್ನು ವಿಜೇತ ಎಂದು ಕರೆಯಬಹುದು, ಆದರೆ ಉಳಿದ ಕ್ಷೇತ್ರಗಳ ಮತಗಳ ಎಣಿಕೆ ಮುಗಿದ ನಂತರ ಅಂತಿಮ ಘೋಷಣೆ ಮಾಡಲಾಗುವುದು” ಎಂದು ಚುನಾವಣಾ ಆಯೋಗದ ವಕ್ತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಹಸೀನಾ ಅವರು 1986 ರಿಂದ ಎಂಟನೇ ಬಾರಿಗೆ ಗೋಪಾಲ್‌ಗಂಜ್-3 ಕ್ಷೇತ್ರದಿಂದ ಜಯಶಾಲಿಯಾಗಿದ್ದಾರೆ.

    ಚುನಾವಣೆಯಲ್ಲಿ ಶೇಕಡಾ 40 ರಷ್ಟು ಮತದಾನ ಮಾತ್ರವಾಗಿದೆ.

    ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿಯು ಮಂಗಳವಾರದಿಂದ ತನ್ನ ಸರ್ಕಾರಿ ವಿರೋಧಿ ಆಂದೋಲನವನ್ನು ತೀವ್ರಗೊಳಿಸಲು ಯೋಜಿಸಿದೆ. ಈ ಚುನಾವಣೆಗಳನ್ನು ಅದು “ನಕಲಿ” ಎಂದು ಕರೆದಿದೆ.

    ಬಿಎನ್​ಪಿಯು 2014ರಲ್ಲಿಯೂ ಚುನಾವಣೆಗಳನ್ನು ಬಹಿಷ್ಕರಿಸಿತ್ತು, ಆದರೆ, 2018 ರಲ್ಲಿ ಸ್ಪರ್ಧಿಸಿತ್ತು. ಈ ಬಾರಿ, ಬಿಎನ್​ಪಿಪಿ ಜತೆಗೆ ಇತರ 15 ರಾಜಕೀಯ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿವೆ.

    ತಮ್ಮ ಬಹಿಷ್ಕಾರ ಚಳವಳಿ ಯಶಸ್ವಿಯಾಗಿದೆ ಎಂಬುದಕ್ಕೆ ಕಡಿಮೆ ಮತದಾನವಾಗಿರುವುದು ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಶಾಂತಿಯುತ ಪ್ರಜಾಸತ್ತಾತ್ಮಕ ಪ್ರತಿಭಟನೆ ಕಾರ್ಯಕ್ರಮಗಳನ್ನು ಚುರುಕುಗೊಳಿಸಲಾಗುವುದು ಮತ್ತು ಈ ಕಾರ್ಯಕ್ರಮದ ಮೂಲಕ ಜನರ ಮತದಾನದ ಹಕ್ಕನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ಲಾಟರಿಯಲ್ಲಿ ಹಣ ಗಳಿಸಲು ಲಕ್​ ಇರಲೇಬೇಕೆಂದಿಲ್ಲ: ಚಲನಚಿತ್ರ ಕಥೆಗೆ ಸ್ಫೂರ್ತಿಯಾದ ದಂಪತಿ ರೂ. 200 ಕೋಟಿ ಗಳಿಸಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts