More

    ಅವ್ವೇರಹಳ್ಳಿಯಲ್ಲಿ ಮತ್ತೆ ವಕ್ಕರಿಸಿದ ಕರೊನಾ: 9ನೇ ತರಗತಿ ವಿದ್ಯಾರ್ಥಿನಿಗೆ ಸೋಂಕು ದೃಢ

    ಕೈಲಾಂಚ: ಅವ್ವೇರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಗೆ ಕರೊನಾ ದೃಢಪಟ್ಟಿದ್ದು, ಮಕ್ಕಳ ಪಾಲಕು, ಶಿಕ್ಷಕರಲ್ಲಿ ಆತಂಕ ಹುಟ್ಟಿಸಿದೆ.

    ಮುಚ್ಚಿದ್ದ ಶಾಲೆಗಳನ್ನು ಸರ್ಕಾರ ಜ.1ರಿಂದ ಆರಂಭಿಸಿತ್ತು. ದಿನದಿಂದ ದಿನಕ್ಕೆ ಶಾಲೆಗೆ ಹಾಜರಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಅವ್ವೇರಹಳ್ಳಿ ಶಾಲೆ ವಿದ್ಯಾರ್ಥಿನಿಗೆ ಕರೊನಾ ದೃಢಪಟ್ಟಿರುವುದು ಶಿಕ್ಷಣ ಇಲಾಖೆಯನ್ನು ಆತಂಕಕ್ಕೆ ದೂಡಿದೆ.

    ಸರ್ಕಾರ ತರಗತಿಗೆ ಹಾಜರಾಗುವ ಮಕ್ಕಳಿಗೆ ಕರೊನಾ ಪರೀಕ್ಷೆ ಕಡ್ಡಾಯ ಎಂದು ಹೇಳಿದ್ದರಿಂದ, ವಿದ್ಯಾರ್ಥಿನಿ ಕೈಲಾಂಚ ಪ್ರಾಥಮಿಕ ಆರೋಗ್ಯದಲ್ಲಿ ಜ.1ರಂದು ಪರೀಕ್ಷೆಗೆ ಒಳಪಟ್ಟಿದ್ದಳು. ವರದಿ ಬರುವ ಮುನ್ನವೇ 4 ತಾರೀಕಿನಂದು ವಿದ್ಯಾರ್ಥಿನಿ ಶಾಲೆಗೆ ಹಾಜರಾಗಿದ್ದಳು. ಅಂದು ಇತರ 18 ವಿದ್ಯಾರ್ಥಿನಿಯರು ಈಕೆಯ ಜತೆಯಲ್ಲಿ ಪಾಠ ಕೇಳಿದ್ದರು. ಮಂಗಳವಾರ ಸಂಜೆ ವರದಿ ಕೈಸೇರಿದ್ದು, ಕರೊನಾ ಪಾಸಿಟಿವ್ ದೃಢಪಟ್ಟಿದೆ.

    ಸೋಂಕು ದೃಢಪಡುತ್ತಿದ್ದಂತೆ ಎಸ್‌ಆರ್‌ಎಸ್ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಬುಧವಾರ ಶಾಲೆಗೆ ಭೇಟಿ ನೀಡಿ ಮುಖ್ಯಸ್ಥರಿಗೆ ವಿಷಯ ತಿಳಿಸಿ, ಶಾಲೆಗೆ ಬಂದ ಮಕ್ಕಳ ಆರೋಗ್ಯ ಪರಿಶೀಲಿಸಿದರು. ತರಗತಿಯಲ್ಲಿ ಮತ್ತಷ್ಟು ಅಂತರ, ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಸೇರಿದಂತೆ ಮತ್ತಷ್ಟು ಮನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಶಿಕ್ಷಕರಿಗೆ ತಿಳಿಸಿದರು. ಬುಧವಾರ ತರಗತಿ ಇತ್ತಾದರೂ ಸೋಂಕಿತ ವಿದ್ಯಾರ್ಥಿನಿ ಶಾಲೆಗೆ ಹಾಜರಾಗಿರಲಿಲ್ಲ.

    ಸೋಂಕಿತ ವಿದ್ಯಾರ್ಥಿನಿಯನ್ನು ಆರೋಗ್ಯ ಇಲಾಖೆ ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿದೆ. ಶಾಲೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ಮಾಡಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿ ನಡೆಸಲು ಮುಂದಾಗಿದೆ.

    9ನೇ ತರಗತಿ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟಿದ್ದು, ಈಕೆ ಸೋಮವಾರ ಒಂದು ದಿನ ಶಾಲೆಗೆ ಹಾಜರಾಗಿದ್ದಾಳೆ. 8-9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ದಿನ ರಜೆ ಕೊಟ್ಟು ಪ್ರತಿ ಕೊಠಡಿಯನ್ನು ಸ್ಯಾನಿಸೈಸ್ ಮಾಡಿಸಲಾಗುವುದು. ಅಲ್ಲದೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ಗುರುವಾರ ಕರೊನಾ ಪರೀಕ್ಷೆ ಮಾಡಿಸಲಾಗುವುದು. 10ನೇ ತರಗತಿಗಳು ಎಂದಿನಂತೆ ನಡೆಯಲಿವೆ.
    ಬಿ.ಎನ್. ಮರೀಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಮನಗರ

    ಸೋಂಕು ದೃಢಪಟ್ಟ ವಿದ್ಯಾರ್ಥಿನಿ ಬುಧವಾರ ಶಾಲೆಗೆ ಬಂದಿಲ್ಲ. ಶಾಲೆಗೆ ಬಂದಿರುವ ಎಲ್ಲ ವಿದ್ಯಾರ್ಥಿಗಳು ಆರೋಗ್ಯ ಗಮನಿಸಲಾಗಿದೆ. ಗುರುವಾರ 9ನೇ ತರಗತಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಾಲಾ ಆವರಣದಲ್ಲಿಯೇ ಕರೊನಾ ಪರೀಕ್ಷೆ ನಡೆಸಲಾಗುವುದು.
    ಡಾ. ಸುನಿಲ್ ವೈದ್ಯ, ರೇವಣಸಿದ್ದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ, ಅವ್ವೇರಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts