More

    ಅವೆನ್ಯೂ ರಸ್ತೆ ಸ್ಮಾರ್ಟ್ ಕಾಮಗಾರಿ ಶೀಘ್ರ ಆರಂಭ : ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ

    ಬೆಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಅವೆನ್ಯೂ ಮುಖ್ಯರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗಕ್ಕೆ ವ್ಯವಸ್ಥೆ ಮಾಡುತ್ತಲೇ ಕಾಮಗಾರಿ ಆರಂಭಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

    ಬುಧವಾರ ಅವೆನ್ಯೂ ರಸ್ತೆ, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆಗಳ ಕಾಮಗಾರಿ ತಪಾಸಣೆ ನಡೆಸಿದ ಬಳಿಕ ಮಾತನಾಡಿದ ಗೌರವ್, ಅವೆನ್ಯೂ ರಸ್ತೆಯ1 ಕಿ.ಮೀ. ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವ ಸಂಬಂಧ ವಾಹನ ಸವಾರರಿಗೆ ಬದಲಿ ಮಾರ್ಗ ಗುರುತಿಸಬೇಕು. ಕಾಮಗಾರಿ ಆರಂಭ, ಮುಕ್ತಾಯ ಹಾಗೂ ಅವಶ್ಯವಿದ್ದಲ್ಲಿ ವಿನ್ಯಾಸ ಮಾರ್ಪಡಿಸಿ ವಾರದೊಳಗೆ ಪಾಲಿಕೆಗೆ ಮಾಸ್ಟರ್ ಪ್ಲಾನ್ ಸಲ್ಲಿಸಬೇಕು. ಜತೆಗೆ ಎಸ್‌ಜೆಪಿ ರಸ್ತೆಯನ್ನು ಅಭಿವೃದ್ಧಿಗೆ ಕಾಮಗಾರಿ ಅನುಷ್ಠಾನಗೊಳಿಸಲು ಸಾಧ್ಯವೇ ಎಂಬ ಬಗ್ಗೆ ವರದಿ ನೀಡುವಂತೆ ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್‌ಗೆ ಸೂಚಿಸಿದರು.

    ಅವೆನ್ಯೂ ರಸ್ತೆಯಲ್ಲಿ ಜಲಮಂಡಳಿಯ ಒಳಚರಂಡಿ ಕಾಮಗಾರಿ ಪೂರ್ಣಗೊಂಡು ತಾತ್ಕಾಲಿಕ ಡಾಂಬರೀಕರಣ ಮಾಡಲಾಗಿದೆ. ಇನ್ನು ಚಿಕ್ಕಪೇಟೆ ವ್ಯಾಪ್ತಿಯ ಗುಂಡಪ್ಪ ಬೀದಿ, ಮಾಮೂಲ್ಪೇಟೆ, ಹಳೇ ತರಗುಪೇಟೆ, ಸುಲ್ತಾನ್‌ಪೇಟೆ, ಒಟಿಸಿ ರಸ್ತೆ, ಅಕ್ಕಿಪೇಟೆ ಹಾಗೂ ಬಳೆಪೇಟೆ ಸೇರಿ ಹಲವು ರಸ್ತೆಗಳಲ್ಲಿ ಜಲಮಂಡಳಿ ಕಾಮಗಾರಿ ಪೂರ್ಣಗೊಂಡ ನಂತರ ಕಾಂಕ್ರೀಟ್‌ನಿಂದ ರಸ್ತೆ ದುರಸ್ತಿ ಮಾಡಲಾಗಿದೆ. ಇನ್ನೂ ಕೆಲವೆಡೆ ರಸ್ತೆ ಅಗೆದಿರುವ ಸ್ಥಳದಲ್ಲಿ ಕಾಂಕ್ರೀಟ್ ಅಥವಾ ಡಾಂಬರೀಕರಣ ಮಾಡಬೇಕು ಎಂದು ಆದೇಶಿಸಿದರು.

    ಮಾಸ್ಟರ್‌ಪ್ಲಾನ್ ಆಧರಿಸಿ ಕಾಮಗಾರಿ : ಚಿಕ್ಕಪೇಟೆ ಸುತ್ತಲಿನ ಪ್ರದೇಶಗಳಲ್ಲಿ ಜಲಮಂಡಳಿಯು ನೀರು ಮತ್ತು ಕೊಳಚೆ ನೀರಿನ ಕೊಳವೆಗಳ ವ್ಯವಸ್ಥೆಗೆ ಜಿಐಎಸ್ ಮ್ಯಾಪ್ ಲಭ್ಯ ಇವೆ. ಎಲ್ಲೆಲ್ಲಿ ನೀರಿನ ಸಂಪರ್ಕ ಕಡಿತಗೊಂಡಿದೆ, ಕೊಳವೆಗಳು ಬ್ಲಾಕ್ ಆಗಿವೆ. ಇಲ್ಲಿ ಎಷ್ಟು ಸಾಮರ್ಥ್ಯದ ಕೊಳವೆಗಳು ಅಗತ್ಯವಿದೆ ಎಂಬುದರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು. ನಂತರ ಹಂತಹಂತವಾಗಿ ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ವರದಿ ಸಿದ್ಧಪಡಿಸಬೇಕು. ಇಂದಿನ ತಪಾಸಣೆಯಲ್ಲಿ ಸೂಚಿಸಿದ ಎಲ್ಲ ಕಾರ್ಯಗಳ ಸಿದ್ಧತೆ ಬಗ್ಗೆ ಮುಂದಿನ ವಾರ ಸಭೆ ಕರೆದು ಪರಿಶೀಲಿಸಲಾಗುವುದು ಎಂದು ಗೌರವ್ ಗುಪ್ತ ಎಚ್ಚರಿಕೆ ನೀಡಿದರು.

    ಸಂಸದ ಪಿ.ಸಿ. ಮೋಹನ್, ವಿಶೇಷ ಆಯುಕ್ತರಾದ ಬಸವರಾಜು, ತುಳಸಿ ಮದ್ದಿನೇನಿ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್. ವೆಂಕಟೇಶ್, ವಲಯ ಜಂಟಿ ಆಯುಕ್ತರಾದ ಚಿದಾನಂದ, ವೀರಭದ್ರಸ್ವಾಮಿ, ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ರಂಗನಾಥ್ ನಾಯ್ಕ, ಜಲಮಂಡಳಿ (ಪಶ್ಚಿಮ) ಮುಖ್ಯ ಇಂಜಿನಿಯರ್ ದೇವರಾಜ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

    ವಾಹನ ಸಂಚಾರಕ್ಕೆ ತೊಂದರೆ ದೂರು : ಮಾಮೂಲ್ಪೇಟೆ ಮತ್ತು ಸುಲ್ತಾನ್‌ಪೇಟೆಗಳಲ್ಲಿ ಒಳಚರಂಡಿ ಪೈಪ್ ಅಳವಡಿಕೆಗೆ ರಸ್ತೆಗಳನ್ನು ಅಗೆದಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಆಗುತ್ತಿದೆ. ರಸ್ತೆ ಇಕ್ಕೆಲಗಳ ಮೋರಿಗಳಲ್ಲಿನ ಹೂಳು ತೆಗೆದು, ನೀರು ಹರಿಯಲು ವ್ಯವಸ್ಥೆ ಮಾಡುವಂತೆ ಸ್ಥಳೀಯರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೌರವ್ ಗುಪ್ತ, ಎಲ್ಲ ರಸ್ತೆಗಳ ಪಕ್ಕದ ಮೋರಿಗಳ ಹೂಳು ತೆಗೆಯಬೇಕು. ಜತೆಗೆ, ಸುಲ್ತಾನ್‌ಪೇಟೆ ಮುಖ್ಯ ರಸ್ತೆಯಲ್ಲಿ ಸ್ಯಾನಿಟರಿ ಲೈನ್ ಮಾಡಲು 300 ಎಂಎಂ ಪೈಪ್‌ಗಳನ್ನು ರಸ್ತೆಯಲ್ಲಿ ಹಾಕಲಾಗಿದ್ದು, ಅವುಗಳನ್ನು ಬೇರೆಡೆ ಸ್ಥಳಾಂತರಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts