More

    ಇಂದು ಅಂಬೇಡ್ಕರ್ ಜಯಂತಿ; ಸಾಂಪ್ರದಾಯಿಕತೆಗೆ ಸವಾಲು…

    ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ನಾಡಿನಾದ್ಯಂತ ಇಂದು ಗೌರವಪೂರ್ವಕವಾಗಿ ಆಚರಿಸಲಾಗುತ್ತಿದೆ. ಅವರ ವಿಚಾರಧಾರೆ, ರಾಷ್ಟ್ರಕ್ಕೆ- ಜನತೆಗೆ ನೀಡಿದ ಕೊಡುಗೆಗಳ ಕುರಿತು ಲೇಖಕ ವಿ.ಎಲ್.ನರಸಿಂಹಮೂರ್ತಿ ಈ ಸಂದರ್ಭದಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಇಂದು ಅಂಬೇಡ್ಕರ್ ಜಯಂತಿ; ಸಾಂಪ್ರದಾಯಿಕತೆಗೆ ಸವಾಲು…ವಿ.ಎಲ್.ನರಸಿಂಹಮೂರ್ತಿ

    ತೆಲಂಗಾಣ ಸರ್ಕಾರವು ಹೈದರಾಬಾದಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 125 ಅಡಿ ಕಂಚಿನ ಪ್ರತಿಮೆಯನ್ನು ನಿರ್ವಿುಸಿದೆ. ಈ ಮೂಲಕ ತಾನೆಷ್ಟು ದಲಿತಪರ ಎನ್ನುವುದನ್ನು ತೋರಿಸಿಕೊಳ್ಳುವ ಉತ್ಸಾಹದಲ್ಲಿ ತೆಲಂಗಾಣ ಸರ್ಕಾರ ಇದೆ. ಒಂದು ಪ್ರಭುತ್ವವೇ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ಇದು ಮೊದಲೇನಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅಂಬೇಡ್ಕರ್ ವಾಸವಿದ್ದ ದೆಹಲಿಯ ಮನೆಯೂ ಸೇರಿದಂತೆ ಅವರಿಗೆ ಸೇರಿದ ಹಲವು ಸ್ಥಳಗಳನ್ನು ಸ್ಮಾರಕಗಳಾಗಿ ಪರಿವರ್ತಿಸಿ ಅವುಗಳನ್ನು ‘ಪೂಜಾಸ್ಥಳ’ಗಳಾಗಿ ಮಾಡುವ ಪ್ರಯತ್ನ ನಡೆಸಿತು.

    ಅಂಬೇಡ್ಕರ್ ವಿಚಾರದಲ್ಲಿ ಕೇಂದ್ರ ಸರ್ಕಾರದ ಈ ನಡೆಯನ್ನು ದಲಿತ ಚಿಂತಕರು ಸೇರಿದಂತೆ ಹಲವರು ವಿರೋಧಿಸಿದ್ದರು ಕೂಡ. ಒಂದು ಕಾಲದಲ್ಲಿ ದಲಿತರಿಗೆ ಅಂಬೇಡ್ಕರ್ ಹೆಸರು ಹೇಳುವುದಕ್ಕೆ, ಫೋಟೋ ಇಟ್ಟುಕೊಳ್ಳುವುದಕ್ಕೆ ಹಿಂಜರಿಯಬೇಕಿದ್ದ ಪರಿಸ್ಥಿತಿ ಇತ್ತು. ತಮ್ಮ ಜಾತಿಗಳನ್ನು ಹೇಳಿಕೊಳ್ಳಲಾಗದಷ್ಟು, ತಮ್ಮ ನಾಯಕನ ಜತೆ ಗುರುತಿಸಿಕೊಳ್ಳಲಾಗದಷ್ಟು ಕೀಳರಿಮೆಯನ್ನು ದಲಿತ ಸಮುದಾಯದಲ್ಲಿ ಬಿತ್ತಲಾಗಿತ್ತು. ಆದರೆ, ಈಗ ಪ್ರಭುತ್ವಗಳೇ ಮುಂದೆ ನಿಂತು ಅಂಬೇಡ್ಕರ್ ಜಯಂತಿ ಆಚರಣೆ, ಪ್ರತಿಮೆಗಳ ಸ್ಥಾಪನೆಯಂತಹ ಕೆಲಸಗಳನ್ನು ಮಾಡುತ್ತಿವೆ. ಆ ಮೂಲಕ ದಲಿತ ಸಮುದಾಯದ ಓಲೈಕೆ ಮಾಡಬಹುದು ಎಂದು ಭಾವಿಸಿದಂತಿವೆ.

    ಅಂಬೇಡ್ಕರ್ ಚಿಂತನೆಗಳ ಜತೆಗೆ ಸಹಮತವಿಲ್ಲದ ರಾಜಕೀಯ ಪಕ್ಷಗಳೂ ಸೇರಿದಂತೆ ಎಲ್ಲ ಸೈದ್ಧಾಂತಿಕ ವಲಯಗಳಿಗೂ ಅವರ ಬಗ್ಗೆ ಹುಟ್ಟಿರುವ ಈ ಆಸಕ್ತಿಯ ಹಿಂದಿರುವುದು ಕೇವಲ ‘ರಾಜಕೀಯ ಹಿತಾಸಕ್ತಿ’ ಎನ್ನುವುದು ಗೊತ್ತಿಲ್ಲದ ವಿಷಯವೇನಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೇವಲ ರಾಜಕೀಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದ ರಾಷ್ಟ್ರೀಯ ನಾಯಕರ ಮಧ್ಯೆ ರಾಜಕೀಯ ಸ್ವಾತಂತ್ರ್ಯದ ಜತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಕೂಡ ಅಷ್ಟೇ ಮುಖ್ಯ ಎನ್ನುವ ಪ್ರತಿಪಾದನೆಯನ್ನು ಅಂಬೇಡ್ಕರ್ ಮಾಡಿದರು. ಅಂಬೇಡ್ಕರರ ‘ಸ್ವಾತಂತ್ರ್ಯ’ದ ಪರಿಕಲ್ಪನೆಯು ಸಮಾನತೆ ಆಧರಿಸಿದುದಾಗಿತ್ತು. ಬ್ರಿಟಿಷ್ ವಸಾಹತುಶಾಹಿಯ ಹಿಡಿತದಿಂದ ಬಿಡಿಸಿಕೊಳ್ಳುವ ತುಡಿತದಲ್ಲಿದ್ದ ರಾಷ್ಟ್ರಿಯ ಹೋರಾಟದ ನಾಯಕರಿಗೆ ಅಂಬೇಡ್ಕರ್ ಚಿಂತನೆ ಅಪಥ್ಯವಾಗಿತ್ತು. ಹಾಗಾಗಿಯೇ ಅವರನ್ನು ಕೇವಲ ದಲಿತರ ಹಿತಾಸಕ್ತಿಗಾಗಿ ಹೋರಾಡುವ ನಾಯಕ ಅಂತ ಸೀಮಿತಗೊಳಿಸಲಾಯಿತು. ಅಂಬೇಡ್ಕರ್ ಅವರ ರಾಷ್ಟ್ರದ ಪರಿಕಲ್ಪನೆ ರಾಜಕೀಯ ಸ್ವಾತಂತ್ರ್ಯ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಎನ್ನುವುದು ಸಮಾಜಕ್ಕೆ ಅರ್ಥವಾಗಲಿಲ್ಲ.

    ಇನ್ನೇನು ಸ್ವಾತಂತ್ರ್ಯ ಬಂದಿತು ಅನ್ನುವಾಗ ದೇಶಕ್ಕೆ ಸಂವಿಧಾನ ರಚನೆ ಮಾಡಿಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗಿ ಆ ಜವಾಬ್ದಾರಿ ಅಂಬೇಡ್ಕರರ ಹೆಗಲಿಗೆ ಬಿದ್ದಿತು. ದೇಶದ ಎಲ್ಲ ಜಾತಿ-ಮತ-ವರ್ಗದ ಜನರನ್ನು ಸಮಾನತೆಗೆ ಕೊಂಡೊಯ್ಯುವ ಆಶಯಗಳನ್ನುಳ್ಳ ಸಂವಿಧಾನ ರಚಿಸಿಕೊಡುವುದರ ಮೂಲಕ ಅಂಬೇಡ್ಕರ್ ಆಧುನಿಕ ಭಾರತ ರೂಪುಗೊಳ್ಳಬೇಕಾದ ದಾರಿಯನ್ನು ತೋರಿಸಿದರು.

    ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ತಮ್ಮ ಚಿಂತನೆ, ಹೋರಾಟದ ಮೂಲಕ ರಾಷ್ಟ್ರ ಕಟ್ಟುವುದಕ್ಕೆ ಹಲವು ಬಗೆಯಲ್ಲಿ ದುಡಿದ ಅಂಬೇಡ್ಕರ್ ಅವರನ್ನು ವಿಸ್ಮೃಗೆ ತಳ್ಳುವ ಕೆಲಸ ನಿರಂತರವಾಗಿ ನಡೆದುಕೊಂಡು ಬಂದಿತು. ದೇಶ ಅವರನ್ನು ಎಷ್ಟೇ ವಿಸ್ಮೃಗೆ ತಳ್ಳಿದರೂ ದಲಿತ ಸಮುದಾಯ ಅವರನ್ನು ತಮ್ಮ ಪ್ರಜ್ಞೆಯನ್ನಾಗಿ ರೂಪಿಸಿಕೊಂಡು ತಲೆಮಾರಿನಿಂದ ತಲೆಮಾರಿಗೆ ದಾಟಿಸಿಕೊಂಡು ಬಂದಿತು.

    ರಾಜಕೀಯ ಅಧಿಕಾರ ಮತ್ತು ಸಾಂವಿಧಾನಿಕ ಅವಕಾಶಗಳನ್ನು ಬಳಸಿಕೊಂಡು ದಲಿತ ಸಮುದಾಯ ಸಧೃಡವಾಗಬೇಕು ಎಂದು ಅಂಬೇಡ್ಕರ್ ನಂಬಿಕೆ ಇಟ್ಟಿದ್ದರು. ಈ ಎರಡೂ ಮಾರ್ಗಗಳನ್ನು ಬಳಸಿಕೊಂಡ ದಲಿತ ಸಮುದಾಯ ಭಾರತದ ಸಾಂಪ್ರದಾಯಿಕ ಮನಸ್ಸಿಗೆ ದೊಡ್ಡ ಸವಾಲಾಗಿ ಬೆಳೆದುಕೊಂಡು ಬಂದಿದೆ.

    ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ದೇಶದಲ್ಲಿ ಮತ್ತು ವಿಶ್ವದ ಹಲವು ಕಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಜತೆಗೆ ಅಂಬೇಡ್ಕರ್ ಜಯಂತಿ ಟೀಕೆಗಳಿಗೂ ಗುರಿಯಾಗುತ್ತದೆ. ಸ್ವತಃ ಅಂಬೇಡ್ಕರ್ ಯಾವುದೇ ತರದ ಪ್ರತಿಮೀಕರಣ ಮತ್ತು ವ್ಯಕ್ತಿಪೂಜೆಯನ್ನು ಒಪು್ಪತ್ತಿರಲಿಲ್ಲ. ಹಾಗಾಗಿ ಈ ರೀತಿಯ ಆಚರಣೆಗಳು ಅವರ ಆಶಯಗಳಿಗೆ ಪೂರಕವಲ್ಲ ಎನ್ನುವುದು ಈ ಟೀಕಾಕಾರರು ಕೊಡುವ ಒಂದು ಕಾರಣವಾದರೆ, ಭಾರತೀಯ ಸಾಂಪ್ರದಾಯಿಕ ಮನಸ್ಸಿನ ಆಳದಲ್ಲಿ ಅಂಬೇಡ್ಕರ್ ಮತ್ತು ದಲಿತರ ಕುರಿತ ಅಸಹನೆ ಇನ್ನೊಂದು ಕಾರಣ.

    ಯಾವುದೇ ರಾಜಕೀಯ ನಾಯಕನಿಗೆ ಸಿಗುವ ‘ಪಬ್ಲಿಕ್ ಸ್ಪೇಸ್’ ಪ್ರಭುತ್ವದಿಂದ ಕೊಡಲ್ಪಟ್ಟಿರುತ್ತದೆ. ಆಳುವ ಸರ್ಕಾರಗಳು ಅಧಿಕಾರವನ್ನು ಬಳಸಿ ತಮ್ಮ ಸೈದ್ಧಾಂತಿಕ ಗುರುಗಳಿಗೆ, ನಾಯಕರಿಗೆ ‘ಪಬ್ಲಿಕ್ ಸ್ಪೇಸ್’ ಅನ್ನು ಸುಲಭವಾಗಿ ದೊರಕಿಸಿಕೊಡುತ್ತವೆ. ಅಂಬೇಡ್ಕರ್ ಅವರನ್ನು ಸಂಭ್ರಮಿಸುವುದನ್ನು ಟೀಕಿಸುವವರು ಅರ್ಥ ಮಾಡಿಕೊಳ್ಳಬೇಕಿರುವುದು ಅಂಬೇಡ್ಕರ್ ಈ ಹೊತ್ತು ದೇಶದೆಲ್ಲೆಡೆ ತಲುಪಿರುವ ರೀತಿ ಮತ್ತು ಸಾರ್ವಜನಿಕ ಸ್ಥಳಗಳನ್ನು ಆವರಿಸಿಕೊಂಡಿರುವ ರೀತಿ ಯಾವುದೇ ಪ್ರಭುತ್ವ ದೊರಕಿಸಿಕೊಟ್ಟ ಕೊಡುಗೆಯಲ್ಲ. ದೇಶಕ್ಕೆ ಸಂವಿಧಾನವನ್ನು ಕೊಟ್ಟು, ಒಟ್ಟು ಭಾರತೀಯ ಸಮಾಜದ ವಿಮೋಚನೆಗೆ ದುಡಿದ ಅಂಬೇಡ್ಕರ್ ಭಾವಚಿತ್ರಕ್ಕೆ ಸಂಸತ್ ಭವನದಲ್ಲಿ ಜಾಗ ಸಿಗಲು ತೊಂಬತ್ತರ ದಶಕದವರೆಗೆ ಕಾಯಬೇಕಾದ ಸಂದರ್ಭದಲ್ಲೆ ಪ್ರಭುತ್ವದ ಸಹಾಯವಿಲ್ಲದೆ ಜಗತ್ತಿನ ಯಾವುದೇ ನಾಯಕನಿಗೂ ಸಿಗದ ‘ಪಬ್ಲಿಕ್ ಸ್ಪೇಸ್’ಅವರಿಗೆ ಸಿಕ್ಕಿದೆ ಅಂದರೆ ಅದು ದಲಿತ ಸಮುದಾಯ ಅವರನ್ನು ತನ್ನ ಪ್ರಜ್ಞೆಯನ್ನಾಗಿ ಸ್ವೀಕರಿಸಿರುವ ಕಾರಣಕ್ಕಾಗಿ.

    ದಲಿತ ಸಮುದಾಯ ಅಂಬೇಡ್ಕರರನ್ನು ಸಂಭ್ರಮಿಸುವುದು, ಅವರ ಚಿಂತನೆ, ಹೋರಾಟಗಳನ್ನು ಜೀವಂತ ಪ್ರಕ್ರಿಯೆಯಾಗಿ ಮುಂದುವರಿಸುವುದು ಸಂಪ್ರದಾಯಸ್ಥ ಮನಸ್ಸಿಗೆ ಸವಾಲಾಗಿ ಬೆಳೆಯುತ್ತದೆ. ಇದನ್ನು ದಲಿತ ಸಮುದಾಯ ಎಚ್ಚರದಿಂದ ಕಾಯ್ದುಕೊಳ್ಳದಿದ್ದರೆ ಅಂಬೇಡ್ಕರ್ ಚಿಂತನೆಯ ಜತೆಗೆ ಮುಖಾಮುಖಿಯಾಗಲು ಶಕ್ತಿಯಿಲ್ಲದ ಆಳುವ ಸರ್ಕಾರಗಳು, ಬೇರೆ ಬೇರೆ ರಾಜಕೀಯ ಗುಂಪುಗಳು ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ದಲಿತರನ್ನು ಓಲೈಸುವ ಅಸ್ತ್ರವಾಗಿ ಅಂಬೇಡ್ಕರರನ್ನು ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂಬೇಡ್ಕರ್ ಸಂಪ್ರದಾಯಸ್ಥ ಮನಸ್ಸಿನ ಸವಾಲಾಗಿ ಉಳಿಯಬೇಕೆ ಹೊರತು ಸುಲಭವಾಗಬಾರದು.

    (ಲೇಖಕರು ಇಂಗ್ಲಿಷ್ ಅಧ್ಯಾಪಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts