More

    ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರಕ್ಕೆ ಶಕ್ತಿ ಸಂಜೀವಿನಿ

    ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರಕ್ಕೆ ಶಕ್ತಿ ಸಂಜೀವಿನಿರಾಷ್ಟೀಯ ಶಿಕ್ಷಣ ನೀತಿಯು ಭಾರತೀಯರಿಗೆ ಭಾರತವನ್ನು ಪುನಃ ವ್ಯಾಖ್ಯಾನಿಸುವ ಯೋಜನೆಯೇ ಆಗಿದೆ. ಇದರಲ್ಲಿ ಮೂಡಿ ಬಂದ ಅಂಶಗಳು ಹಲವು ವರ್ಷಗಳ ಕಾಲ ಲಕ್ಷಾಂತರ ಪ್ರಜ್ಞಾವಂತರಿಂದ ಸಂಗ್ರಹಿತವಾದ ಅಭಿಪ್ರಾಯಗಳ ಮೊತ್ತವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಡಾ. ಕಸ್ತೂರಿ ರಂಗನ್ ನೇತೃತ್ವದಲ್ಲಿ ರೂಪಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ಸರ್ಕಾರ ಈ ವರ್ಷದಿಂದಲೇ ಜಾರಿಗೊಳಿಸುತ್ತಿರುವುದು ಹರ್ಷದಾಯಕ ಸಂಗತಿ.

    ಸ್ವಾಮಿ ವಿವೇಕಾನಂದರು ಬ್ರಿಟಿಷರು ನಮಗಿತ್ತಿದ್ದ ಶಿಕ್ಷಣ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸಿದ್ದರು. ‘ಆಂಗ್ಲ ಶಿಕ್ಷಣ ವ್ಯವಸ್ಥೆ ನಮ್ಮ ಮಕ್ಕಳಿಗೆ ನಿಮ್ಮ ತಂದೆ ಮೂರ್ಖನೆಂದು, ನಿನ್ನ ಶಿಕ್ಷಕ ಆಷಾಢಭೂತಿಯೆಂದು ಮತ್ತು ನಿನ್ನ ಧಾರ್ವಿುಕ ಗ್ರಂಥಗಳೆಲ್ಲವೂ ಸುಳ್ಳಿನ ಕಂತೆಗಳೆಂದೂ ಬೋಧಿಸುತ್ತವೆ. ಕೇವಲ ನಕಾರಾತ್ಮಕವಾದುದನ್ನೇ ಕಲಿಸುವ ಪಾಶ್ಚಾತ್ಯ ಶಿಕ್ಷಣವು ಭಾರತೀಯರನ್ನು ದಯನೀಯರನ್ನಾಗಿಸಿದೆ’ ಎಂದಿದ್ದಾರೆ ಸ್ವಾಮೀಜಿ. ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯಪೂರ್ವದಲ್ಲೇ ನಮ್ಮ ರಾಷ್ಟ್ರವನ್ನು ಯೋಗ್ಯ ರೀತಿಯಲ್ಲಿ ನಿರ್ವಿುಸಲು ಪೂರಕವಾಗುವಂತಹ ಹತ್ತಾರು ಉಪಯುಕ್ತ ಸಲಹೆಗಳನ್ನು ಇತ್ತಿದ್ದರು. ’What is it that cannot be solved by the magic word- Education? Education is the only panacea for all human problems.’ ಶಿಕ್ಷಣವು ಚಾರಿತ್ರ್ಯವನ್ನು ರೂಪಿಸಬೇಕು, ಮನೋದೃಢತೆ ಹೆಚ್ಚಿಸಬೇಕು, ಬುದ್ಧಿವಂತಿಕೆಯನ್ನು ವಿಸ್ತರಿಸಬೇಕು ಮತ್ತು ಸ್ವಾವಲಂಬಿ ಬದುಕನ್ನು ನೀಡಬೇಕು’ ಎಂದಿದ್ದಾರೆ ಸ್ವಾಮೀಜಿ.

    ಸ್ವಾತಂತ್ರ್ಯಾನಂತರದಲ್ಲಿ ನಮ್ಮನ್ನಾಳಿದವರು ಶಿಕ್ಷಣದಲ್ಲಿ ಸಕಾರಾತ್ಮಕ ಬದಲಾವಣೆ ತಾರದೇ ಹೋದದ್ದು ದುರಂತ. ಭಾರತದ ಶಿಕ್ಷಣದಲ್ಲಿ ಇಂದು ಭಾರತದ ಮತ್ತು ಇತರ ದೇಶಗಳ ಉಪಯುಕ್ತ ವಿಚಾರಗಳಿಗಿಂತ ಇವೆರಡರ ಕಳಪೆ ವಿಚಾರಗಳೇ ತುಂಬಿವೆ! ನಮ್ಮ ಇಲ್ಲಿಯವರೆಗಿನ ಶಿಕ್ಷಣದ ಸಿಂಹಪಾಲು ಕಳಪೆ, ದೌರ್ಬಲ್ಯ ಮತ್ತು ರಾಷ್ಟ್ರಕ್ಕೆ ಮಾರಕವಾಗುವಂಥ ವಿಚಾರಗಳ ಗೊಂದಲದ ಗೂಡೇ ಆಗಿತ್ತು. ಶಿಕ್ಷಣವಿಂದು ನಕಲು ಮಾಡುವುದೇ ಆಗಿದೆ, ನೌಕರಿಗಾಗಿ ನಕಲು ಎಂಫಿಲ್ ಮತ್ತು ಪಿ.ಎಚ್.ಡಿ ಮಾರಾಟಕ್ಕಿವೆ! ಪಿ.ಎಚ್.ಡಿ ಕೆಲಸವೂ ಬಡ್ತಿಗಾಗಿಯೇ ಹೊರತು ಸಂಶೋಧನೆಗಲ್ಲ! ಶಿಕ್ಷಣದಲ್ಲಿ ಅಂಕಗಳು ವಿಜೃಂಭಿಸುತ್ತಿವೆ, ಚಾರಿತ್ರ್ಯದ ಅಂಕೆ ಬದುಕಿನಲ್ಲಿ ಮಾಯವಾಗಿದೆ! ಬೋಧಕರಾಗಿ ಕೆಲಸ ಮಾಡುತ್ತಿರುವವರಿಗೆ ಸಿಸಿಟಿ.ವಿ ಕಣ್ಗಾವಲಿದೆ. ಅವರ ಸಮಯಪ್ರಜ್ಞೆಗೆ ಸಾಕ್ಷಿ ಬೈಯೋಮೆಟ್ರಿಕ್ ಯಂತ್ರವಿದೆ! ಇಂತಹ ರೋಗಗ್ರಸ್ತ ವಾತಾವರಣದಲ್ಲಿ ಹೊರಬರುತ್ತಿರುವ ಯುವಜನರು ಮುಂದಿನ ದಿನಮಾನಗಳಲ್ಲಿ ದೀನರೊಂದಿಗೆ ದರ್ಪತೋರುವ, ಶಕ್ತರ ಮುಂದೆ ಮೆತ್ತಗಿರುವ ಮತ್ತು ಅಧಿಕಾರಿಗಳ ಎದುರು ಮುದುಡಿಕೊಳ್ಳುವ ಆಷಾಢಭೂತಿಗಳಾಗಿ ರೂಪುಗೊಳ್ಳುತ್ತಿದ್ದಾರೆ.

    ನಮ್ಮ ದೇಶದ ಇತಿಹಾಸವನ್ನು ಸುಳ್ಳಿನ ಕಂತೆಮಾಡಿ ಮಕ್ಕಳಿಗೆ ಬಿಂಬಿಸುತ್ತಿದ್ದೇವೆ. ಮಕ್ಕಳು ಗಮನಿಸುವುದು ನಮ್ಮ ಹಿರಿಯರ ಸಾವನ್ನು, ಇಲ್ಲವೇ ಸೋಲನ್ನು ಮಾತ್ರ! ದೇಶಭಕ್ತಿಯನ್ನು ಊರ್ಜಿತಗೊಳಿಸುವ, ರಾಷ್ಟ್ರಕ್ಕೆ ಬದ್ಧರಾಗಲು ಪೂರಕವಾಗುವ ಯಾವುದೇ ಸಕಾರಾತ್ಮಕ ವಿಚಾರಗಳು ಕಾಣಸಿಗವು! ಇತಿಹಾಸದ ಕುಖ್ಯಾತ ಲೂಟಿಕೋರ ಮೊಹಮ್ಮದ್ ಘಸ್ನಿಯ ವೈಭವದ ವರ್ಣನೆ ಇದೆ. ಅವನೊಂದಿಗೆ ಭಾರತಕ್ಕೆ ಬಂದು ಇಲ್ಲಿನ ಮಹಾನ್ ಪರಂಪರೆಗೆ ಮಾರುಹೋಗಿ, ‘ಇಂಡಿಯಾ’ ಎಂಬ ಪುಸ್ತಕ ಬರೆದು ಬದುಕಿನುದ್ದಕ್ಕೂ ಭಗವದ್ಗೀತೆಯಿಂದ ಸ್ಪೂರ್ತಿಪಡೆದು ಭಾರತೀಯ ವಿಚಾರಗಳಿಗೆ ಕೃತಜ್ಞನಾಗಿದ್ದ ಆಲ್ಬರೂನಿ ಕುರಿತಾದ ವಿಚಾರಗಳು ನಮಗೆ ಪರಿಚಯವಾಗಲೇ ಇಲ್ಲ! ಉತ್ಕ ೃ್ಟವಾದ ವಿಚಾರಗಳನ್ನು ಪರಿಚಯಿಸದೆ ಯುವಸಮುದಾಯ ಮಾತೃಭೂಮಿ ಯಲ್ಲೇ ನಿರಾಶ್ರಿತರಂತೆ ಅನಾಥ ಪ್ರಜ್ಞೆಯಲ್ಲಿ ಜೀವನ ಸವೆಸು ವಂತೆ ಮಾಡಿದ್ದು ನಮ್ಮ ಶಿಕ್ಷಣ ವ್ಯವಸ್ಥೆಯೇ! ಇನ್ನು ಕೇವಲ ಬುದ್ಧಿವಂತಿಕೆಗಷ್ಟೇ ಬೆಲೆ ಕೊಡುವ ಯುವಜನತೆ ಐಐಟಿ ಮುಂತಾದ ಸಂಸ್ಥೆಗಳಿಂದ ಶಿಕ್ಷಣ ಪಡೆದು ಹೊರಬಂದ ನಂತರ ಹೊರರಾಷ್ಟ್ರಗಳತ್ತ ಧಾವಿಸುತ್ತಿರುವುದು ಸರ್ವೆ ಸಾಮಾನ್ಯ

    ಸಂಗತಿ. ಮಾತೃಭೂಮಿಯ ಬಂಡವಾಳದಲ್ಲಿ ಮೂಡಿಬಂದ ನಮ್ಮ ಕುಡಿಗಳು ಪರಕೀಯರ ಸೇವೆಗೆ ಸನ್ನದ್ಧರಾಗಿ ಸಂಕಲ್ಪಿಸುತ್ತಿರುವುದಕ್ಕೆ ಪ್ರಮುಖ ಕಾರಣ ನಮ್ಮ ಶಿಕ್ಷಣವು ಮಕ್ಕಳಿಗೆ ಸಮಾಜ ಮತ್ತು ದೇಶದ ಕುರಿತಾಗಿ ಬದ್ಧತೆ ಮೂಡಿಸುವಲ್ಲಿ ವಿಫಲವಾಗಿದೆ. ಅಲ್ಲದೆ ಮತ್ತೇನು? ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಪ್ರದೇಶದ ಜನರು ತಮ್ಮ ಪೌರತ್ವದ ಅತ್ಯಮೂಲ್ಯ ಕರ್ತವ್ಯವಾದ ‘ಮತಚಲಾವಣೆ’ಯನ್ನು ನಿರ್ಲಕ್ಷಿಸುತ್ತಿರುವುದು ವಿದ್ಯಾವಂತರ ವ್ಯಕ್ತಿತ್ವದ ವೈಫಲ್ಯವಲ್ಲವೇ? ಯಾವುದೇ ರಾಷ್ಟ್ರವು ಅಲ್ಲಿನ ಶಿಕ್ಷಕನ ಮಟ್ಟವನ್ನು ಮೀರದು. ಶಿಕ್ಷಕರಿಗೆ ವೈಯಕ್ತಿಕ ಜೀವನ, ಕುಟುಂಬ ವ್ಯವಸ್ಥೆ ಮತ್ತು ಸದಾಪೇಕ್ಷೆಗಳಿರುವುದು ದಿಟವೇ ಆದರೂ ವೈಯಕ್ತಿಕ ಸ್ವಾತಂತ್ರ್ಯವೆಂಬುದು ಸಾಮಾಜಿಕ ಜವಾಬ್ದಾರಿಯೊಂದಿಗೆ ಮೇಳೈಸಿದಾಗಷ್ಟೇ ಮಹಾಮೌಲ್ಯವಾಗಿ ರೂಪುಗೊಳ್ಳಲು ಸಾಧ್ಯ.

    ಕಳೆದ ಮೂರು ದಶಕಗಳಲ್ಲಿ 10 ಲಕ್ಷ ವಿದ್ಯಾರ್ಥಿಗಳನ್ನು ಮತ್ತು 1 ಲಕ್ಷ ಶಿಕ್ಷಕ, ಉಪನ್ಯಾಸಕರನ್ನು ಕುರಿತು ಉಪನ್ಯಾಸ ನೀಡಿದ್ದೇನೆ. ಜಗತ್ತಿನ ಹತ್ತು ರಾಷ್ಟ್ರಗಳಲ್ಲಿ ಆಹ್ವಾನದ ಮೇರೆಗೆ ನಾಲ್ಕಾರು ಬಾರಿ ಪ್ರವಚನ ಪ್ರವಾಸ ಕೈಗೊಂಡಿದ್ದೇನೆ. 2004ರ ಜುಲೈನಲ್ಲಿ ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಯುನೆಸ್ಕೊ ಮಾರ್ಗದರ್ಶನದಲ್ಲಿ ನೆರವೇರಿದ ನಾಲ್ಕನೇ ವಿಶ್ವಧರ್ಮ ಸಮ್ಮೇಳನದಲ್ಲಿ ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತೀ, ‘ಭಾರತೀಯ ಶೈಕ್ಷಣಿಕ ಪದ್ಧತಿ’ ಕುರಿತು ಮಾತನಾಡಿದರೆ ನಾನು ‘ಮತಾಂಧತೆಯಿಂದ ಉಂಟಾಗುವ ಹಿಂಸೆಗಳನ್ನು ತಡೆಯುವುದು ಹೇಗೆ?’ ಎಂಬ ವಿಷಯಾಧಾರಿತ ಸಂವಾದ ಗೋಷ್ಠಿಯಲ್ಲಿ ದೇಶವನ್ನು ಪ್ರತಿನಿಧಿಸಿದ್ದೇನೆ. ಐರೋಪ್ಯ ರಾಷ್ಟ್ರಗಳಲ್ಲಿ ಮ್ಯಾನೇಜ್​ವೆುಂಟ್ ವಿಭಾಗದಲ್ಲಿ ಭಗವದ್ಗೀತೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರಗಳು ರೆಫರೆನ್ಸ್ ಪುಸ್ತಕಗಳಾಗಿರುವುದನ್ನು ಕಣ್ಣಾರೆ ಕಂಡಿದ್ದೇನೆ.

    2018ರಲ್ಲಿ ಆಕ್ಸಫರ್ಡ್ ವಿಶ್ವವಿದ್ಯಾನಿಲಯದ ‘The Centre for Hindu Studies’ ವಿಭಾಗಕ್ಕೆ ಭೇಟಿ ಇತ್ತಾಗ ಅದರ ನಿರ್ದೇಶಕರಾದ ಡಾ. ತಿಮೋತಿ ಕಿರ್ನನ್, ‘ಪೂಜ್ಯರೇ, ನಮ್ಮ ಆಕ್ಸಫರ್ಡ್​ನಲ್ಲಿ ಹಿಂದೂಧರ್ಮ ಕುರಿತು 52 ವಿದ್ಯಾರ್ಥಿಗಳು ಪಿ.ಎಚ್.ಡಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಆಶ್ಚರ್ಯವೆಂದರೆ ಈ ವಿದ್ಯಾರ್ಥಿಗಳಲ್ಲಿ ಭಾರತೀಯರಾರೂ ಇಲ್ಲ! ಏಕೆ ಹೀಗೆ? ನಿಮ್ಮ ದೇಶದ ಸಂಸ್ಕೃತಿ ಹೀಗೇಕೆ?’ ಎಂದು ಪ್ರಶ್ನಿಸಿದರು. ನಾನು ಆಘಾತಕ್ಕೊಳಗಾದೆ. ನನ್ನ ಅಂತರಂಗ ಹೇಳುತ್ತಿತ್ತು : ‘Yes, we are poor not by nature, but by policy!’

    ನೂತನ ಶಿಕ್ಷಣ ನೀತಿ ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂಬ ಬಾಲಿಶ ಉದ್ಗಾರಗಳು ಮೊಳಗುತ್ತಿವೆ. ಟೀಕೆಗೊಸ್ಕರ ಟೀಕೆ ಮಾಡುವುದು ಬಾಲಿಶವಾದದ್ದು, ಅರ್ಥವಿಲ್ಲದ್ದು. ಗುಲಾಮಗಿರಿ ಎಂಬುದು ನಮಗೆ ರಕ್ತಗತವಾಗಿ ಬಿಟ್ಟಿದೆ. ಗುಲಾಮಗಿರಿ ನಮ್ಮ ವ್ಯಕ್ತಿತ್ವದಲ್ಲಿ ಆಳವಾಗಿ ಬೇರೂರಿ ಶತಮಾನಗಳನ್ನು ಸವೆಸಿದ್ದೇವೆ. ಹಾಗಾಗಿ ಕೇವಲ ರಾಜಕೀಯ ಸ್ವಾತಂತ್ರ್ಯವು ನಮಗೆ ಬಂದು ಎಪ್ಪತೆôದು ವರ್ಷಗಳೇ ಆದರೂ ಅದೊಂದೇ ನಮ್ಮ ದಾಸ್ಯ ಪ್ರವೃತ್ತಿಯ ವಿವಿಧ ಆಯಾಮಗಳಿಗೆ ಪರಿಹಾರವಾಗಲಿಲ್ಲವೆಂಬುದು ಸಾಬೀತಾಗಿದೆ. ‘ಬಲಿಷ್ಠರನ್ನು ದುರ್ಬಲಗೊಳಿಸುವುದು ಸುಲಭ ಸಾಧ್ಯ, ಆದರೆ ದುರ್ಬಲರನ್ನು ಬಲಿಷ್ಠರನ್ನಾಗಿಸುವುದು ಕಷ್ಟಸಾಧ್ಯ’ ಎಂಬ ಅಬ್ರಹಾಂ ಲಿಂಕನ್ನರ ಮಾತನ್ನು ಮತ್ತು ‘ಮೂರ್ಖರನ್ನು ಅಕ್ಷರಸ್ಥರನ್ನಾಗಿಸಬಹುದೇನೋ, ಆದರೆ ವಿಚಾರವಂತರನ್ನಾಗಿಸುವುದು ಕಷ್ಟ’ ಎಂಬ ಲಿಯೋ ಟಾಲ್​ಸ್ಟಾಯ್ ಮಾತುಗಳನ್ನು ಭಾರತೀಯರಾದ ನಾವು ನೂರಕ್ಕೆ ನೂರರಷ್ಟು ಸಾಬೀತುಪಡಿಸಿದ್ದೇವೆ! ಸೋಮಾರಿತನ ಮತ್ತು ಗುಲಾಮಗಿರಿ ಭಾರತದಲ್ಲಿಂದು ಪರ್ಯಾಯ ಪದಗಳಾಗಿವೆ! ಅಜ್ಞಾನವು ಆಘಾತಕಾರಿ! ಆದರೆ ಸಾಂಸ್ಕೃತಿಕ ಅಜ್ಞಾನ ಹೆಚ್ಚಿನ ಆಘಾತಕಾರಿ ವಿಚಾರವಾಗಿದೆ! ಈ ಎಲ್ಲ ಆಘಾತಗಳ ನಡುವೆ ದೇಶವಿಂದು, ‘ಕುರುಡು ಮಿದುಳಿನ ಬುದ್ಧಿಜೀವಿಗಳಿಗಿಂತ ಕುರುಡುಗಣ್ಣಿನವರೇ ಹೆಚ್ಚು ಉತ್ತಮವಾಗಿ ನೋಡಬಲ್ಲರು’ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳುತ್ತ ಸಾಗಿದೆ. ಯಾವ ಮನೋಸ್ಥಿತಿಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿಕೊಂಡೆವೋ ಅದೇ ಮನೋಸ್ತರದಲ್ಲಿ ನಾವು ನಿರ್ವಿುಸಿಕೊಂಡ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾದೀತೇ? ಹಾವು ಪೊರೆಯನ್ನು ಕಳಚಿದ ಮೇಲಷ್ಟೇ ಹೊಸ ಚೈತನ್ಯ ಮತ್ತು ಜೀವನದ ಮುಂದುವರಿದ ಭಾಗವನ್ನು ನಿರೀಕ್ಷಿಸಬಹುದು. ಆದರೆ ಪೊರೆ ಕಳಚುವ ಪ್ರಕ್ರಿಯೆ ನೋವನ್ನು ಉಂಟುಮಾಡುವಂಥದ್ದೇ. ಆದರೆ ನವಚೈತನ್ಯ ಪ್ರಾಪ್ತಿಗೆ ಇದು ಅನಿವಾರ್ಯ. ಅಂತೆಯೇ ಜಡ್ಡುಗಟ್ಟಿದ ಪೊರೆಯನ್ನು ನಾವು ಕಳಚಿಯೇ ಮುನ್ನಡೆಯಬೇಕಿದೆ.

    ಜಗತ್ತಿನಲ್ಲಿ ಸಲಹೆಗಳನ್ನು ಸ್ವಾಗತಿಸುವವರು ಅತಿ ವಿರಳ. ಅದರಲ್ಲೂ ಯಾರಿಗೆ ಸಲಹೆಗಳು ಗರಿಷ್ಠ ಮಟ್ಟದಲ್ಲಿ ಅವಶ್ಯಕತೆ ಇದೆಯೋ ಅವರು ಅವುಗಳನ್ನು ಅಪೇಕ್ಷಿಸುವುದು ಮತ್ತು ಸ್ವೀಕರಿಸುವುದು ಕನಿಷ್ಟ ಪ್ರಮಾಣದಲ್ಲಿ ಎಂಬುದು ಲೋಕಾರೂಢಿ. ಯಾವುದೇ ಹೊಸ ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯದೆ ಕೇವಲ ಟೀಕಿಸುವ ಅಥವಾ ವಿರೋಧಿಸುವ ಮನೋಭಾವ ಮಾನವ ಸಮಾಜದಲ್ಲಿ ಅನಾದಿ ಕಾಲದಿಂದ ಕಂಡುಬಂದಿದೆ. ಮುಂದಿನ ಕಾಲದಲ್ಲಿಯೂ ಇದು ಮುಂದುವರಿಯುವಂಥದ್ದೇ! ಆದರೆ ರಚನಾತ್ಮಕವಾದ ಟೀಕೆಗಳನ್ನು ನಾವು ಸ್ವೀಕರಿಸಲೇಬೇಕು. ಸ್ವಾಮಿ ವಿವೇಕಾನಂದರೆನ್ನುವಂತೆ ‘ಯಾವುದೇ ಉತ್ತಮ ಕೆಲಸವು ಅಪಹಾಸ್ಯ, ಪ್ರತಿರೋಧ ಮತ್ತು ಸಹಮತ ಎಂಬ ಹಂತಗಳ ಮೂಲಕ ಯಶಸ್ವಿಯಾಗಿ ಹಾದುಹೋಗುವುದರಿಂದ ಮಾತ್ರ ಸಾರ್ಥಕತೆಯನ್ನು ತನ್ನದಾಗಿಸಿಕೊಳ್ಳುತ್ತದೆ’. ರಾಷ್ಟಿ್ರಯ ಶಿಕ್ಷಣ ನೀತಿಯನ್ನು ನಾವು ಧೃತಿಗೆಡದೆ ಕಾರ್ಯರೂಪಗೊಳಿಸುತ್ತ ಹೊಸಚೈತನ್ಯದೊಂದಿಗೆ ಭವ್ಯ ಭಾರತ ನಿರ್ವಣಕ್ಕೆ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಸಕಲ ಭಾರತೀಯರ ಸಹಾಯ, ಸಹಕಾರಗಳು ಅತ್ಯಗತ್ಯ ಮತ್ತು ಅನಿವಾರ್ಯವೂ ಹೌದು.

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts