More

    ಶಿಕ್ಷಕರು ಧೈರ್ಯವಿತ್ತರೆ ಮಕ್ಕಳು ಧೀಮಂತರಾಗುತ್ತಾರೆ..

    ಶಿಕ್ಷಕರು ಧೈರ್ಯವಿತ್ತರೆ ಮಕ್ಕಳು ಧೀಮಂತರಾಗುತ್ತಾರೆ..ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಯಾವುದೇ ಹಂತದಲ್ಲೂ ರೂಪಿಸುವ ಕ್ರಿಯೆಯಲ್ಲಿ ಇನ್ಯಾವುದೇ ವ್ಯಕ್ತಿಗಿಂತ ಶಿಕ್ಷಕನದ್ದೇ ಸಿಂಹಪಾಲು. ಶಿಕ್ಷಕರಿಗೆ ತಮ್ಮ ವೃತ್ತಿಯ ಬಗ್ಗೆ ಹತಾಶೆ ಬೇಡ. ಯಾವುದೇ ಉದ್ಯೋಗಕ್ಕೆ ಸ್ವಂತ ಭವಿಷ್ಯ ಇರುವುದಿಲ್ಲ, ಬದಲಾಗಿ ಅದಕ್ಕೆ ಭವಿಷ್ಯ ಬರುವುದು ಆ ಉದ್ಯೋಗ ಮಾಡುವ ವ್ಯಕ್ತಿಯಿಂದ!

    ಮನುಷ್ಯನ ಜೀವನಾಭ್ಯುದಯದ ಪಯಣದಲ್ಲಿ ಜನ್ಮದಾತರಾದ ಮಾತಾಪಿತೃಗಳು ಮತ್ತು ಜ್ಞಾನದಾತರಾದ ಗುರುಹಿರಿಯರು ಗುರುತರ ಪಾತ್ರ ವಹಿಸುತ್ತಾರೆ. ಈ ಮೂವರೊಂದಿಗೆ ಪ್ರತಿಯೊಬ್ಬ ವ್ಯಕ್ತಿಯ ಸಂಬಂಧ ಅದೆಷ್ಟು ಗಾಢ, ಮುಖ್ಯ ಹಾಗೂ ಅನಿವಾರ್ಯ ಎಂಬ ವಿಚಾರವಾಗಿ ಜಗತ್ತಿನ ಪ್ರತಿಯೊಂದು ಪರಂಪರೆಗಳೂ ಹೃನ್ಮನಗಳನ್ನು ತಟ್ಟುವಲ್ಲಿ ಯಶಸ್ವಿಯಾಗಿವೆ.

    ‘ವಿದ್ಯೆ ಇಲ್ಲದವನು ಪಶುವಿಗೆ ಸಮಾನ’ ಎಂದಿದ್ದಾನೆ ಭರ್ತಹರಿ. ‘ಮಾನವನ ಸಕಲ ಸಮಸ್ಯೆಗಳಿಗೂ ಶಿಕ್ಷಣವೊಂದೇ ಪರಿಹಾರ ನೀಡುವ ರಾಮಬಾಣ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಮನುಷ್ಯನಿಗೂ ಮತ್ತು ಮೃಗಗಳಿಗೂ ವ್ಯತ್ಯಾಸ ಮೂಡಿಸುವಲ್ಲಿ, ಅಶನ, ವಸನ ಮತ್ತು ವಸತಿಗಳಲ್ಲಿ ಸಾಮ್ಯ ಇದ್ದರೂ, ಈರ್ವರನ್ನೂ ಬೇರ್ಪಡಿಸುವ ಶ್ರೇಷ್ಠ ಸಂಸ್ಕಾರವೇ ಶಿಕ್ಷಣ! ಅಲ್ಲದೆ ಜಗತ್ತನ್ನು ನೋಡುವ ವಿಚಾರದಲ್ಲಿ ವಿದ್ಯಾವಂತ ಹಾಗೂ ಅವಿದ್ಯಾವಂತರಲ್ಲಿ ಭಿನ್ನತೆಯಿಲ್ಲವೇ? ಆದ್ದರಿಂದ ಶಿಕ್ಷಣ ಎಂದರೇನು? ಶಿಕ್ಷಕನ ಕರ್ತವ್ಯಗಳು ಕೇವಲ ಲೌಕಿಕ ಗಡಿಯಾರದಿಂದ ನಿರ್ಧಾರಿತವೋ ಅಥವಾ ಅಂತರಂಗ-ಅಂತರ್ಧ್ವನಿಯ ಸಾಕ್ಷೀಭೂತವೋ? ಗುರು-ಶಿಷ್ಯರ ಸಂಬಂಧಗಳು ’womb to tomb’ ಎಂದೇ ವಿಶ್ಲೇಷಿಸಲ್ಪಟ್ಟಾಗ ಈ ಸಂಬಂಧದ ಪವಿತ್ರ ಸ್ವರೂಪ ಎಂಥದ್ದು? ಇದೇ ಮೊದಲಾದ ಗಹನವಾದ ಪ್ರಶ್ನೆಗಳು ಪ್ರಾಮಾಣಿಕ ಮನಸ್ಸುಗಳಲ್ಲಿ ಮೂಡುವುದು ಸಹಜ ಮತ್ತು ಉತ್ತರಗಳನ್ನು ಕಂಡುಕೊಳ್ಳಬೇಕಾದ್ದು ಅನಿವಾರ್ಯ ಎನ್ನಿಸದಿರದು!

    ‘ಸಮಾಜವು ಶಿಕ್ಷಕನಲ್ಲಿ ಭರವಸೆ ಕಳೆದುಕೊಳ್ಳುವ ಮೊದಲೇ ಶಿಕ್ಷಕನು ತನ್ನ ವೃತ್ತಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ!’ ‘ಒಂದಾನೊಂದು ಕಾಲದಲ್ಲಿ ಒಬ್ಬ ಬಡಮೇಷ್ಟ್ರು ಇದ್ದರು’ ಎಂಬ ಮಾತೂ ಇಂದು ಅಪ್ರಸ್ತುತ. ಮರದ ಕೆಳಗೆ ಪಾಠ ಮಾಡಿ ಭಾರತರತ್ನರನ್ನೇ ನಿರ್ವಿುಸಿದ ಧ್ರುವನಕ್ಷತ್ರದಂಥ ಗುರುವು ಇಂದಿನ ಶಿಕ್ಷಕರ ದೃಷ್ಟಿಗೆ ಗೋಚರಿಸುತ್ತಿಲ್ಲವೇ? ವಿಶ್ವವಿದ್ಯಾಲಯಗಳಿಂದ ಹೊರಬಂದ ಶಿಷ್ಯವೃಂದದಲ್ಲಿ ‘ನಕ್ಷತ್ರಿಕ’ರ ಸಂಖ್ಯೆ ಹೆಚ್ಚಲು ಕಾರಣಗಳೇನು? ಈ ಸಂದಿಗ್ಧ ಸನ್ನಿವೇಶದಲ್ಲಿ ಶಿಕ್ಷಕರು ತಮ್ಮ ಮುಂದಿರುವುದನ್ನು ಪ್ರತಿಬಂಧಕಗಳೆಂದೋ, ಸವಾಲುಗಳೆಂದೋ ಅಥವಾ ಶತ್ರುಗಳೆಂದೋ ವಿಶ್ಲೇಷಿಸುವುದಾದರೆ ಇವೆಲ್ಲವುಗಳ ಯಶಸ್ವೀ ನಿರ್ವಹಣೆಗೆ ಗಮನಿಸಲೇಬೇಕಾದ ವಿಚಾರಗಳನ್ನು ಚಿಂತಿಸೋಣ.

    ಮಹಾಭಾರತ ಹೇಳುತ್ತದೆ: ಆಚಾರ್ಯಾತ್ ಪಾದಮಾದತ್ತೇ ಪಾದಂ ಶಿಷ್ಯ ಸ್ವಮೇಧಯಾ| ಕಾಲೇನ ಪಾದಮಾದತ್ತೇ ಪಾದಂ ಸಬ್ರಹ್ಮಚಾರಿಭಿಃ||

    ಶಿಷ್ಯರು ವಿದ್ಯೆಯ ಕಾಲುಭಾಗವನ್ನು ಆಚಾರ್ಯನಿಂದ, ಕಾಲುಭಾಗವನ್ನು ಸ್ವಬುದ್ಧಿಯಿಂದ, ಕಾಲುಭಾಗವನ್ನು ಸಹಪಾಠಿಗಳಿಂದ ಮತ್ತು ಅಂತಿಮ ಕಾಲುಭಾಗವನ್ನು ಜೀವನಾನುಭವದಿಂದ ಸಂಪಾದಿಸುತ್ತಾನೆ! ಆದರೆ ಶ್ರೀ ಗುರುವು ಅನುಗ್ರಹಿಸಿದ ಮೊದಲ ಕಾಲುಭಾಗವೇ ಇನ್ನುಳಿದ ಎಲ್ಲಕ್ಕೂ ಪ್ರಾರಂಭ ಹಾಗೂ ಅಡಿಪಾಯ! ಶಿಕ್ಷಣ ಓದಬಲ್ಲ ಅಕ್ಷರಸ್ಥನನ್ನಷ್ಟೇ ಉತ್ಪಾದಿಸಿದರೆ ಸಾಲದು! ಯಾವುದು ಓದಲು ಯೋಗ್ಯ, ಯಾವುದರ ಕಲಿಕೆಯಿಂದ ಮನುಷ್ಯ ಆಲೋಚನಾಶೀಲನಾಗಬಲ್ಲ? ಎಂಬ ಗಂಭೀರ ಚಿಂತನೆಯೇ ಶಿಕ್ಷಣದ ಮೌಲ್ಯಕ್ಕೆ ಮಾನದಂಡವೆನಿಸದೇ? ಜಗತ್ತಿನ ಇತಿಹಾಸದಲ್ಲಿ ಪ್ರಮುಖವಾದ ವಿಚಾರಗಳ ಬಗ್ಗೆ ಕ್ರಾಂತಿಗಳೇ ಭುಗಿಲೆದ್ದರೂ ಅವು ಊಹೆ ಮೀರಿ ವೈಫಲ್ಯ ತಂದಿವೆ! ಪ್ರಮುಖವಾದುವೆಂದರೆ ಅಡ್ಡಿಯೇ ಇಲ್ಲದ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಕ್ರಾಂತಿ, ಹೆಚ್ಚು ಜನರಿಗೆ ಹೇರಳ ಸುಖ ನೀಡುವ ಭರವಸೆಯ ಕ್ರಾಂತಿ, ಐಹಿಕ ಸಂಪತ್ತನ್ನು ಅಧಿಕಗೊಳಿಸುವ ಭರವಸೆಯ ಕ್ರಾಂತಿ, ಅಪರಿಮಿತ ಪ್ರಗತಿಯ ಮಹಾಭರವಸೆ ಮತ್ತು ಪ್ರಕೃತಿಯನ್ನೇ ನಿಯಂತ್ರಿಸುವ ಪ್ರಾಬಲ್ಯದ ಭರವಸೆಯ ಕ್ರಾಂತಿ- ಅಯ್ಯೋ! ಈ ಎಲ್ಲ ಕ್ರಾಂತಿಗಳು ‘ಭ್ರಾಂತಿ’ಗಳಾಗಲಿಲ್ಲವೇ?

    ‘ಸ್ವಾತಂತ್ರ್ಯ, ಸೃಜನಶೀಲ ಅಭಿವ್ಯಕ್ತತೆ ಮತ್ತು ಪ್ರಕೃತಿ-ಮನುಷ್ಯರ ನಡುವೆ ಕ್ರಿಯಾತ್ಮಕ ಸಂವಹನ ಸಾಧಿಸುವುದೇ ಶಿಕ್ಷಣತತ್ತ್ವದ ಪ್ರಧಾನಾಂಶಗಳು. ಶಿಕ್ಷಣ ನಮ್ಮನ್ನು ಮೋಹ ಮತ್ತು ಪೂರ್ವಗ್ರಹಗಳಿಂದ ಮುಕ್ತಗೊಳಿಸಬೇಕು ಮತ್ತು ವಿಶ್ವನಿಯಮದ ಬಗೆಗಿನ ಪೂರ್ವಗ್ರಹದಿಂದಲೂ ನಮ್ಮನ್ನು ಬಿಡುಗಡೆಗೊಳಿಸಬೇಕು’ ಎಂದಿದ್ದಾರೆ ವಿಶ್ವಕವಿ ರವೀಂದ್ರನಾಥ ಟ್ಯಾಗೋರ್. ಸ್ವಭಾವತಃ ಮಾನವನು ಆಂತರಿಕವಾಗಿ ಸ್ವಾತಂತ್ರ್ಯಪ್ರಿಯ. ಇದು ಮೂಲಭೂತ ಹಾಗೂ ಜನ್ಮಸಿದ್ಧ ಹಕ್ಕೂ ಆಗಿದೆ. ಆದರೆ ಸ್ವಾತಂತ್ರ್ಯವನ್ನು ಯೋಗ್ಯ ರೀತಿಯಲ್ಲಿ ಸಂಪಾದಿಸುವ ಪರಿ, ಸಂಪಾದಿಸಿದ ಸ್ವಾತಂತ್ರ್ಯದ ಸದುಪಯೋಗದ ವಿಧಾನ ಮತ್ತು ಈ ಸ್ವಾತಂತ್ರ್ಯದಿಂದ ವೈಯಕ್ತಿಕ ಹಾಗೂ ಸಾಮಾಜಿಕ ಅಭ್ಯುದಯ ಸಾಧಿಸುವುದು ಹೇಗೆಂಬ ವಿಚಾರಗಳನ್ನು ನಮ್ಮ ವಿದ್ಯಾಭ್ಯಾಸವೇ ತಿಳಿಸಿಕೊಡಬೇಕು.

    ‘ನಿಮ್ಮ ಮಕ್ಕಳನ್ನು ಪ್ರಾಮಾಣಿಕವಾಗಿ ರೂಪಿಸುವುದೇ ನಿಜಶಿಕ್ಷಣದ ಪ್ರಾರಂಭ’ ಎಂದು ಜಾನ್ ರಸ್ಕಿನ್ ಹೇಳಿದರೆ, ‘ಧರ್ಮವನ್ನು ಬಿಟ್ಟು ಶಿಕ್ಷಣ ನೀಡಿದರೆ ಬುದ್ಧಿವಂತ ರಾಕ್ಷಸರನ್ನು ತಯಾರಿಸಿದಂತೆ’ ಎನ್ನುತ್ತಾರೆ ಆರ್ಥರ್ ವೆಲ್ಲೆಸ್ಲಿ. ಶಿಕ್ಷಕರೇ, ‘Do you love your profession?’ ಎಂಬ ಪ್ರಶ್ನೆ ನಿಮಗೆ ಎದುರಾದಾಗ ಮೇಲೆ ಪ್ರಸ್ತಾಪಿಸಿದ ವಿಚಾರಗಳ ಅರಿವು ನಿಮಗೆ ಇರಲೇಬೇಕಲ್ಲವೇ?

    ವೈಯಕ್ತಿಕ ನೆಲೆ: ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದ ಮಾತಾಪಿತೃಗಳು ಮತ್ತು ಗುರುಗಳು ‘ಹಂಸಗಳ ನಡುವೆ ಬಕಪಕ್ಷಿ’ಯಂತಹ ಪ್ರಜೆಗಳನ್ನು ಸಮಾಜಕ್ಕೆ ಅರ್ಪಿಸುತ್ತಾರೆ! ಶಿಕ್ಷಕರ ಪ್ರಾಮಾಣಿಕ ನಿಲುವು-ಧೋರಣೆಗಳಿಂದ ಅವರು ವಿದ್ಯಾರ್ಥಿಗಳ ಕುಟುಂಬದ ಅವಿಭಾಜ್ಯ ಅಂಗಸದಸ್ಯರಾಗಬಹುದು. ಪಾಲಕ-ಶಿಕ್ಷಕರ ನಡುವೆ ನೈತಿಕ ಬದ್ಧತೆ ಹಾಗೂ ಯೋಗ್ಯ ಸಹಕಾರ ಮನೋಭಾವಗಳಿದ್ದರೆ ಮಕ್ಕಳು ದಾರಿ ತಪು್ಪವುದು ಅತಿ ಕಡಿಮೆ!

    ಶಿಕ್ಷಕರ ಮೌಲ್ಯಯುತ ಜೀವನ ಪ್ರಾರಂಭವಾಗುವುದೇ ಅವನು Comfort Zoneದಿಂದ ಹೊರಬಂದು ಶ್ರಮಿಸಲು ಮುಂದಾದಾಗಲೇ! ಶಿಕ್ಷಕರೇ, ನೀವು ‘ಅಂಧರ ನಾಡಿನಲ್ಲಿ ಒಕ್ಕಣ್ಣನೇ ರಾಜ’ ಎಂದಾಗಬಾರದು. ಟಿ.ಪಿ.ಕೈಲಾಸಂ ಹೇಳುವಂತೆ, ‘ಮೈ ನೋಡೋಕ್ ಜಟ್ಟಿ; ತಲೆ ಖಾಲಿ ಬುಟ್ಟಿ’ ಎಂಬುದು ಎಂದಿಗೂ ನಿಮಗೆ ಅನ್ವಯಿಸಬಾರದು! ಶಿಕ್ಷಕರಿಗೆ ಜೀವನದಲ್ಲಿ ದೊಡ್ಡ ಗುರಿ ಇರಬೇಕು, ‘ಸೋಮಾರಿತನವೆಂಬುದು ಗುಲಾಮಗಿರಿಗೆ ಪರ್ಯಾಯಪದ! ಪರಿಶ್ರಮದಿಂದ ಧೀರರಾಗೋಣ, ಸೋಲನ್ನು ಸಮಾಧಾನಚಿತ್ತದಿಂದ ಸ್ವೀಕರಿಸೋಣ. ಅನುಭವದ ದಾಸರಾಗೋಣ, ಶ್ರಮಸಂಸ್ಕೃತಿಯ ವಾರಸುದಾರರಾಗೋಣ’ ಎಂಬ ಸಂಕಲ್ಪ ಅತ್ಯಗತ್ಯ. ‘ನಾವು ಯಾವುದರ ಬಗ್ಗೆ ಬುದ್ಧಿವಂತಿಕೆಯಿಂದ ಮಾತನಾಡಲಾರೆವೋ ಅದರ ಬಗ್ಗೆ ಮೌನವಾಗಿರಲೇಬೇಕು. ಆದರದು ಜ್ಞಾನಾರ್ಜನೆಗಾಗಿ ತಳೆದ ಮೌನವಾಗಿರಬೇಕೇ ಹೊರತು ಅಜ್ಞಾನದ ಮೌನವಾಗಿರಬಾರದು’ ಎಂಬ ಚಿಂತಕ ವಿಟ್​ಗೆನ್ ಸ್ಟೆ ೖನ್​ರ ಮಾತನ್ನು ಶಿಕ್ಷಕರು ಮರೆಯಬಾರದು.

    ‘ಜೀವನದಲ್ಲಿ ಸಾವೇ ದೊಡ್ಡ ನಷ್ಟವಲ್ಲ! ಬದುಕಿರುವಾಗಲೇ ನಮ್ಮ ಆಂತರ್ಯದಲ್ಲಿ ಉತ್ತಮ ವಿಚಾರಗಳನ್ನು ಕೊಲ್ಲುತ್ತೇವಲ್ಲ, ಅದುವೇ ಬಹುದೊಡ್ಡ ನಷ್ಟ! ಅಲ್ಲವೇ? ಕತ್ತಲಿಗೆ ಹೆದರುವ ಮಗುವನ್ನು ಕ್ಷಮಿಸಬಹುದು, ಆದರೆ ಬೆಳಕಿಗೇ ಹೆದರುವ ಮಾನವ ವರ್ತನೆ ದುರಂತದೆಡೆಗೆ ಒಯ್ಯುವುದಿಲ್ಲವೇ?’ ಯೋಚಿಸಿ ಶಿಕ್ಷಕರೇ!

    ನಮಗೆ ನಾವೇ ಯಜಮಾನರಾದಾಗಷ್ಟೇ ನಿಜಾರ್ಥದಲ್ಲಿ ಸ್ವಾತಂತ್ರ್ಯದ ಸವಿಯನ್ನು ಆನಂದಿಸುತ್ತೇವೆ. ಬಹಿರಂಗ ಜಗತ್ತಿನಲ್ಲಿ ನಾವು ಅಸಂಖ್ಯಾತ ಜನರಿಗೆ ಯಜಮಾನರಿರಬಹುದು. ಅಷ್ಟೇಕೆ, ಜಗತ್ತಿಗೇ ಒಡೆಯರಿರಬಹುದು! ಆದರೆ ನಮಗೆ ನಾವೇ ಯಜಮಾನರಾಗದೇ ನಾವು ಸ್ವತಂತ್ರರೆಂದು ತಿಳಿಯುವುದು ಭ್ರಮೆ! ಇಂತಹ ವಿಚಾರಗಳು ಶಿಕ್ಷಕರ ಆತ್ಮವಿಶ್ಲೇಷಣೆಗೆ ಸಹಾಯಕ.

    ಮೌಲಿಕ ನೆಲೆ: ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಯಾವುದೇ ಹಂತದಲ್ಲೂ ರೂಪಿಸುವ ಕ್ರಿಯೆಯಲ್ಲಿ ಇನ್ಯಾವುದೇ ವ್ಯಕ್ತಿಗಿಂತ ಶಿಕ್ಷಕನದ್ದೇ ಸಿಂಹಪಾಲು. ಶಿಕ್ಷಕರಿಗೆ ತಮ್ಮ ವೃತ್ತಿಯ ಬಗ್ಗೆ ಹತಾಶೆ ಬೇಡ. ಯಾವುದೇ ಉದ್ಯೋಗಕ್ಕೆ ಸ್ವಂತ ಭವಿಷ್ಯ ಇರುವುದಿಲ್ಲ, ಬದಲಾಗಿ ಅದಕ್ಕೆ ಭವಿಷ್ಯ ಬರುವುದು ಆ ಉದ್ಯೋಗ ಮಾಡುವ ವ್ಯಕ್ತಿಯಿಂದ! ಸುಜ್ಞಾನಿ ಶಿಕ್ಷಕನು ಮಾತ್ರ ವಿದ್ಯಾರ್ಥಿಗಳಲ್ಲಿ ಜ್ಞಾನದ ಕಿಡಿಯನ್ನು ಪ್ರಜ್ವಲಿಸಬಲ್ಲ. ಅಲ್ಲದೇ ‘ವಿದ್ಯೆ ಕಲಿಸಲು ಪುಸ್ತಕಜ್ಞಾನವಷ್ಟೇ ಸಾಕು; ಆದರೆ ಶೀಲ ಕಲಿಸಲು ಶೀಲವಂತ ಶಿಕ್ಷಕನೇ ಬೇಕು’ ಎಂಬ ವಿಷಯದ ಬಗ್ಗೆ ಶಿಕ್ಷಕ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿರಬೇಕು. ಮಕ್ಕಳಿಗೆ ‘ಚಾರಿತ್ರ್ಯ ಪತ್ರ’ ನೀಡುವವನು ಶಿಕ್ಷಕನೇ ಅಲ್ಲವೇ?

    ಆಕ್ಸ್​ಫರ್ಡ್​ನ ಸಂಶೋಧನಾ ವಿಭಾಗದ ನಿರ್ದೇಶಕರಾಗಿದ್ದ ಜಾನ್ ವಿಲ್ಸನ್ ಹೇಳುತ್ತಾರೆ: ‘ರಾಷ್ಟ್ರವೊಂದರ ಜನತೆ ಕುಟುಂಬದ ಅಥವಾ ಶಾಲೆಯ ಹದಿವಯಸ್ಕರಿದ್ದಂತೆ. ಉತ್ತಮ ಶಿಕ್ಷಣವನ್ನು ನೀಡುವುದರಿಂದಷ್ಟೇ ಅವರ ಭವಿಷ್ಯದ ಜೀವನ ಸುರಕ್ಷಿತ ಹಾಗೂ ಆನಂದದಾಯಕವಾಗಲು ಸಾಧ್ಯ. ಈ ವಿಚಾರದಲ್ಲಿ ಎಚ್ಚರ ತಪ್ಪಿದರೆ ಅವರುಗಳ ಜೀವನ ಗೊಂದಲಮಯವಾಗುತ್ತದೆಯಲ್ಲದೆ ಇನ್ಯಾವುದೋ ಸಂಕುಚಿತ, ಸ್ವಾರ್ಥ ಬಲಯುತ ಸಂಘಟನೆಗಳ ಹೀನಬೋಧನೆಗಳಿಗೆ ಬಲಿಯಾಗುತ್ತದೆ!’

    ‘ಜನರಿಗೆ ಹಿರಿಯರಿಂದ ಬರುವ ಆಸ್ತಿಗಳಲ್ಲಿ ಭಾಷೆಯೂ ಒಂದು. ಭಾಷೆ ಚೆನ್ನಾಗಿ ಇದ್ದಷ್ಟೂ ಭೂಷಣ’ ಎಂದಿದ್ದಾರೆ ಕವಿ ಬಿ.ಎಂ.ಶ್ರೀ. ಶಿಕ್ಷಕರು ನೆನಪಿಡಬೇಕು, ‘ಅತಿಯಾದ ವಿಚಾರಗಳಲ್ಲಿ ಅಪಾರ್ಥ ಮಾಡಿಸುವುದಕ್ಕಿಂತ ಅವಶ್ಯಕವಾದುದನ್ನು ಅರ್ಥ ಮಾಡಿಸಿದರಾಯ್ತು’. ಶಿಕ್ಷಕನು ಯಾವುದೇ ಕಾರ್ಯಕ್ಕೆ ಹೆಚ್ಚುವರಿ ಹಣ ಬಯಸುವುದರಿಂದ ಅವನ ನೈತಿಕ ಶಕ್ತಿ ಕುಗ್ಗುತ್ತದೆ. ವಿದ್ಯಾರ್ಥಿಗಳ ದೃಷ್ಟಿಯಲ್ಲೂ ಅವನು ಕೀಳಾಗುತ್ತಾನೆ. ಅಲ್ಲದೆ ಸುಲಭವಾಗಿ ಹಣಸಂಪಾದನೆ ಮತ್ತು ಶ್ರಮವೇ ಇಲ್ಲದೆ ಕೀರ್ತಿಯನ್ನು ಗಿಟ್ಟಿಸಿಕೊಳ್ಳಲು ಅಪೇಕ್ಷಿಸುವ ಹಾಗೂ ಸಲಹೆ ನೀಡುವ ಶಿಕ್ಷಕರು ‘ವಂಚಕ’ರ ಸಾಲಿನಲ್ಲಿ ನಿಂತಂತೆ! ಅಲ್ಲವೇ?

    ‘ಸಮಾಜದಲ್ಲಿ ಶ್ರೀಮಂತರು ಮತ್ತು ಅಕ್ಷರಸ್ಥರು ಅಪರಾಧ ಎಸಗುವುದು ಅತ್ಯಾಸೆ ಮತ್ತು ಅಧಿಕಾರ ಲಾಲಸೆಗಳ ಕಾರಣಗಳಿಗಾಗಿ. ಶ್ರೀಸಾಮಾನ್ಯನು ಅಪರಾಧ ಎಸಗುವುದು ಬಡತನದ ಕಾರಣಕ್ಕಾಗಿ. ಆದರೆ ಎಲ್ಲ ಅಪರಾಧಗಳ ಹಿಂದಿರುವ ಕಾರಣ ಆತ್ಮಗೌರವದ ‘ಅಭಾವ’ ಎಂದಿದ್ದಾರೆ ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು. ಇಂದು ಶಿಕ್ಷಣಸಂಸ್ಥೆಗಳಿಂದ ಹೊರಬರುತ್ತಿರುವ ಮಕ್ಕಳ ಧೋರಣೆ, ತಮಗೆ ನೀರು ಕೊಡುವ ಬಾವಿಗೆ ತಾವೇ ಕಸವನ್ನು ಸುರಿಯುತ್ತಿರುವಂತಿದೆ!

    ಸಾಮಾಜಿಕ ನೆಲೆ: ಇಂದಿನ ಮಕ್ಕಳೇ ಜಗತ್ತಿನ ಭವಿಷ್ಯ! ಅವರಿಗೆ ಬೆಳಕು ತುಂಬಿದ ಮೌಲ್ಯಗಳನ್ನು ನೀಡುವುದರೊಂದಿಗೆ ನಾವು ಭವಿಷ್ಯದ ವ್ಯಕ್ತಿತ್ವದ ಗುಣಾಂಶಗಳನ್ನು ಸಕಾರಾತ್ಮಕವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡಬಹುದು. ಸಮಾಜವು ಮೌಲ್ಯಾಧಾರಿತವಾಗದೆ ಯಾವುದೇ ಜನತಂತ್ರ ದೇಶ ಹೆಚ್ಚುಕಾಲ ಬಾಳದು. ಶಿಕ್ಷಕರೇ, ಜಗತ್ತು ಸದ್ಗುಣಿಯಲ್ಲ. ಆದರೂ ಅದು ಸದ್ಗುಣವನ್ನು ಗೌರವಿಸುತ್ತದೆ! ಜಗತ್ತು ಬದಲಾವಣೆಗಳನ್ನು ಪುರಸ್ಕರಿಸುವುದಿಲ್ಲ. ಆದರೂ ಅಭಿವೃದ್ಧಿ ಹೊಂದಲು ಬದಲಾವಣೆಗೆ ಒಳಪಡದೆ ಅದಕ್ಕೆ ಮತ್ಯಾವ ದಾರಿಯೂ ಇಲ್ಲ! ಸಾಮಾನ್ಯ ಜನರ ಮೇಲೆ ಪರಿಸರ ಪ್ರಭಾವ ಬೀರುತ್ತದೆ, ಚತುರರು ಪರಿಸರದಿಂದ ಪ್ರಯೋಜನ ಗಿಟ್ಟಿಸುತ್ತಾರೆ! ಆದರೆ ಸಮರ್ಥರು ಪರಿಸರದ ಮೇಲೆ ತಾವೇ ಪ್ರಭಾವ ಬೀರುತ್ತಾರೆ! ಬದುಕಿನ ಬಗ್ಗೆ ಶಿಕ್ಷಕರು ಮಕ್ಕಳಿಗೆ ಧೈರ್ಯ-ಭರವಸೆಯಿತ್ತರೆ ಮಕ್ಕಳು ಧೀಮಂತರಾಗುತ್ತಾರೆ!

    ಉಪಸಂಹಾರ: ಸ್ವಾತಂತ್ರ್ಯಪ್ತಾಪ್ತಿಯ ನಂತರ ಶಿಕ್ಷಣವನ್ನು ರಾಷ್ಟ್ರೀಯ ಅಭಿವೃದ್ಧಿಗೆ ಅತ್ಯುತ್ತಮ ಉಪಕರಣವಾಗಿ ಬಳಸುವಲ್ಲಿ ನಾವು ಸೋತಿದ್ದೇವೆ! ಶ್ರೇಷ್ಠ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳಿದ್ದರೂ We are not poor by nature but poor by policy! ನೈಸರ್ಗಿಕವಾಗಿ ಬಡವರಲ್ಲದಿದ್ದರೂ ರಾಜನೀತಿ-ಕಾರ್ಯನೀತಿ ವಿಚಾರಗಳಲ್ಲಿ ದರಿದ್ರರು! ಸತ್ವಹೀನರು! ಬಡತನವನ್ನು ಅವಿಸ್ಮರಣೀಯಗೊಳಿಸುವ ಕಲೆ ನಮಗೆ ಸಿದ್ಧಿಸಿದೆ! ಇದಲ್ಲವೇ ಗುಲಾಮಗಿರಿ!

    ಶಿಕ್ಷಕರೇ ನಿಮ್ಮ ಶತ್ರುಗಳಾರೆಂದು ಈಗಾಗಲೇ ತಿಳಿದಿರಬೇಕು. ‘ಆಹಾರ, ಸುಖಭೋಗಗಳಿಗಷ್ಟೇ ಸೀಮಿತರಾಗಿಸುವ ಶಿಕ್ಷಣ ಪ್ರಾರಂಭದಲ್ಲಿ ಅದ್ಭುತವಾಗಿ ಕಂಡರೂ, ಕಡೆಗೆ ಕಳಪೆಯಾಗಿ ನಾಶದತ್ತ ಸಾಗುತ್ತದೆ. ಇಂತಹ ಶಿಕ್ಷಣ ಭೋಗದ ಪೈಪೋಟಿಗೆ ಎಡೆಮಾಡಿಕೊಟ್ಟು ವ್ಯಕ್ತಿ, ಸಮಾಜದಲ್ಲಿ ದ್ವೇಷಾಸೂಯೆ, ಅನೈತಿಕ ಸ್ಪರ್ಧೆ ಮತ್ತು ನಿರ್ದಾಕ್ಷಿಣ್ಯ ಕ್ರೌರ್ಯಕ್ಕೆ ದಾರಿ ಮಾಡಿದೆ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.

    ಅಂತರಂಗದ, ಅಜ್ಞಾನದ ಕತ್ತಲನ್ನು ನೂರಾರು ಸೂರ್ಯಚಂದ್ರರೂ ನಿವಾರಿಸಲಾರರು. ಅದು ಜ್ಞಾನಿಗಳ ನುಡಿಗಳಿಂದಷ್ಟೇ ಸಾಧ್ಯ. ಶಿಕ್ಷಕರೇ ನೀವೇ ಅಜ್ಞಾನವನ್ನು ಆನಂದಿಸುವವರಾದರೆ ಜಗತ್ತು ಅನಾಥರ ಕೂಪವಾಗದೆ ಮತ್ತೇನಾದೀತು!

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts