More

    VIDEO: ಸ್ಪಿನ್ ಮಾಂತ್ರಿಕ ಶೇನ್ ವಾರ್ನ್‌ಗೆ ಭಾವಪೂರ್ಣ ಅಂತಿಮ ನಮನ

    ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ಗೆ ಕುಟುಂಬದ ಸದಸ್ಯರು, ಮಾಜಿ-ಹಾಲಿ ಕ್ರಿಕೆಟಿಗರು, ಸಹ-ಆಟಗಾರರು, ಸ್ನೇಹಿತರು, ಸಂಗೀತ-ಸಿನಿಮಾ ಮತ್ತು ಇತರ ಕ್ರೀಡಾಕ್ಷೇತ್ರದ ಆಪ್ತರು ಹಾಗೂ ರಾಜಕೀಯ ನಾಯಕರ ಹಾಜರಿಯಲ್ಲಿ ಬುಧವಾರ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದ ಭಾವಪೂರ್ಣ ಕಾರ್ಯಕ್ರಮದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಅವರ ನೆಚ್ಚಿನ ಮೈದಾನದಲ್ಲಿ ಸೇರಿದ್ದ 50 ಸಾವಿರಕ್ಕೂ ಅಧಿಕ ಅಭಿಮಾನಿಗಳು ‘ವಾರ್ನೀ’ ಎಂಬ ಉದ್ಗೋಷದೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸರ್ಕಾರಿ ಗೌರವಗಳೊಂದಿಗೆ ವಾರ್ನ್‌ಗೆ ಅಂತಿಮ ವಿದಾಯ ನೀಡಲಾದ ಸಮಾರಂಭದಲ್ಲಿ ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಕೂಡ ಹಾಜರಿದ್ದರು.

    52 ವರ್ಷದ ಶೇನ್ ವಾರ್ನ್ ವಿಶ್ರಾಂತಿಗಾಗಿ ಥಾಯ್ಲೆಂಡ್‌ಗೆ ತೆರಳಿದ್ದ ವೇಳೆ ಮಾರ್ಚ್ 4ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ವಾರ್ನ್ 2006ರಲ್ಲಿ 700ನೇ ಟೆಸ್ಟ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿದ್ದ ಎಂಸಿಜಿ ಕ್ರೀಡಾಂಗಣದ ಪ್ರೇಕ್ಷಕರ ಸ್ಟಾೃಂಡ್ ಒಂದಕ್ಕೆ ಈಗ ಅವರದೇ ಹೆಸರಿಡಲಾಗಿದೆ. ಹೆತ್ತವರು, ಮೂವರು ಮಕ್ಕಳು ಮತ್ತು ಮಾಜಿ ಪತ್ನಿಯ ಸಹಿತ ಅವರ ಕುಟುಂಬದ ಸದಸ್ಯರು ಕಳೆದ ವಾರವೇ ಖಾಸಗಿ ಸಮಾರಂಭದಲ್ಲಿ ಅಂತಿಮ ನಮನ ಸಲ್ಲಿಸಿದ್ದರು.

    ಅಲನ್ ಬಾರ್ಡರ್, ಮಾರ್ಕ್ ಟೇಲರ್, ಮಾರ್ವ್ ಹ್ಯೂಸ್, ನಾಸಿರ್ ಹುಸೇನ್, ಬ್ರಿಯಾನ್ ಲಾರಾ ಸಹಿತ ಅನೇಕ ಮಾಜಿ ಕ್ರಿಕೆಟಿಗರು ಮತ್ತು ಇತರ ಸೆಲೆಬ್ರಿಟಿಗಳು ವಾರ್ನ್ ಜತೆಗಿನ ಒಡನಾಟವನ್ನು ನೆನೆದು ಭಾವುಕರಾದರು. ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ವಾರ್ನ್ ಜತೆಗಿನ ಮೈದಾನದೊಳಗಿನ ವೈರತ್ವ ಮತ್ತು ಹೊರಗಿನ ಸ್ನೇಹವನ್ನು ಹಂಚಿಕೊಂಡ ವಿಡಿಯೋವನ್ನು ಸಮಾರಂಭದ ವೇಳೆ ದೈತ್ಯ ಪರದೆಯಲ್ಲಿ ಪ್ರಸಾರ ಮಾಡಲಾಯಿತು. ಹಲವು ಕಲಾವಿದರು ಹಾಡು-ಸಂಗೀತದ ಮೂಲಕ ವಾರ್ನ್‌ಗೆ ಗೌರವ ಸಲ್ಲಿಸಿದರು.

    ಎಂಸಿಜಿ ಕ್ರೀಡಾಂಗಣದ ಹೊರಗೆ ಇರುವ ವಾರ್ನ್ ಪ್ರತಿಮೆ ಎದುರು ಕಳೆದ 3 ವಾರಗಳಿಂದಲೂ ಅಭಿಮಾನಿಗಳು ಬಂದು ಬಿಯರ್ ಬಾಟಲಿ, ಸಿಗರೇಟ್, ಪುಷ್ಪಗುಚ್ಛ, ಕ್ರಿಕೆಟ್ ಚೆಂಡು, ಅವರ ನೆಚ್ಚಿನ ಖಾದ್ಯಗಳನ್ನು ಇಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು.

    ಸ್ನೇಹಿತರೆಂದರೆ ವಾರ್ನ್‌ಗೆ ಪ್ರಾಣ!
    ವಿವಾದಗಳ ರಾಜನಾಗಿದ್ದರೂ ವಾರ್ನ್‌ಗೆ ಸ್ನೇಹಿತರೆಂದರೂ ಪ್ರಾಣ. ಅಂತಿಮ ವಿದಾಯದ ವೇಳೆ ಹಾಜರಿದ್ದ ಸೆಲೆಬ್ರಿಟಿಗಳ ಗಡಣ, ಅವರ ಸ್ನೇಹದ ಶಕ್ತಿಗೆ ಸಾಕ್ಷಿಯಾಗಿತ್ತು. ವಾರ್ನ್ ಸ್ನೇಹದ ಮಹಿಮೆಯನ್ನು ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ ಇತ್ತೀಚೆಗೆ ಬಿಚ್ಚಿಟ್ಟಿದ್ದರು. ವಾರ್ನ್ ಆಡುತ್ತಿದ್ದ ದಿನಗಳಲ್ಲಿ ಆಸೀಸ್ ತಂಡ ಎದುರಾಳಿಗೆ ನಿಷ್ಠುರವಾಗಿ ಸ್ಲೆಡ್ಜಿಂಗ್ ಮಾಡುತ್ತಿತ್ತು. ಆದರೆ ವಾರ್ನ್ ಸ್ನೇಹ ಹೊಂದಿರುವ ಆಟಗಾರ ಎದುರಾಳಿ ತಂಡದಲ್ಲಿದ್ದರೆ ಆಸೀಸ್ ತಂಡದ ಯಾವ ಆಟಗಾರನೂ ಸ್ಲೆಡ್ಜಿಂಗ್ ಮಾಡುತ್ತಿರಲಿಲ್ಲವಂತೆ! ಅದುವೇ ಆಸೀಸ್ ತಂಡದ ಸೀಕ್ರೆಟ್ ಮತ್ತು ವಾರ್ನ್ ಸ್ನೇಹಿತರನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದರು ಎಂಬುದಕ್ಕೂ ಅದು ಸಾಕ್ಷಿಯಾಗಿತ್ತು ಎಂದು ಅನಿಲ್ ಕುಂಬ್ಳೆ ವಿವರಿಸಿದ್ದರು.

    ನೀಲಿಚಿತ್ರ ನಟಿಯಿಂದ ಶಮಿಗೆ ಮೆಚ್ಚುಗೆ; ಕ್ರಿಕೆಟ್ ಪ್ರೇಮಿಗಳಿಗೆ ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts