More

    ಟೀಮ್ ಇಂಡಿಯಾವನ್ನು ಕುಗ್ಗಿಸಲು ಆಸ್ಟ್ರೇಲಿಯಾ ಮೈಂಡ್‌ಗೇಮ್!

    ಬೆಂಗಳೂರು: ಬ್ಯಾಟ್-ಚೆಂಡಿನಿಂದ ಮಾತ್ರವಲ್ಲದೆ ನಿಂದನೆಗಳ ಮೂಲಕವೂ ಪ್ರವಾಸಿ ತಂಡಗಳ ಮೇಲೆ ಆಕ್ರಮಣ ಮಾಡುವುದು ಆಸ್ಟ್ರೇಲಿಯನ್ನರ ಚಾಳಿ. ತವರಿನ ಪ್ರತಿ ಸರಣಿಗೆ ಮುನ್ನ ಆಸೀಸ್ ಮಾಜಿ ಆಟಗಾರರು ಕೂಡ ವಿವಿಧ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಪ್ರವಾಸಿ ತಂಡದ ಮನೋಬಲ ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಈ ಬಾರಿಯೂ ಭಾರತ ತಂಡದ ವಿರುದ್ಧದ ಮಹತ್ವದ ಸರಣಿಗೆ ಮುನ್ನ ಆಸೀಸ್‌ನಿಂದ ಇಂಥದ್ದೇ ಮೈಂಡ್‌ಗೇಮ್ ಶುರುವಾಗಿದೆ.

    ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿ ವಿವಿಧ ಹೇಳಿಕೆಗಳನ್ನು ನೀಡುತ್ತಿರುವ ಆಸೀಸ್ ಹಾಲಿ-ಮಾಜಿ ಆಟಗಾರರು, ಪಿತೃತ್ವ ರಜೆಯಿಂದಾಗಿ ಟೆಸ್ಟ್ ಸರಣಿಯ ಕೊನೆಯ 3 ಪಂದ್ಯಗಳಲ್ಲಿ ಅವರಿಲ್ಲದೆ ಭಾರತ ತಂಡ ಪರದಾಡಲಿದೆ ಎಂಬಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜತೆಗೆ ಸೀಮಿತ ಓವರ್ ಸರಣಿಗೆ ರೋಹಿತ್ ಶರ್ಮ ಗೈರಾಗಿರುವುದು ಕೂಡ ಭಾರತ ತಂಡಕ್ಕೆ ಹಿನ್ನಡೆಯಾಗುತ್ತದೆ ಎಂಬ ಹೇಳಿಕೆಗಳಿಂದ ಪ್ರವಾಸಿಗರ ಆತ್ಮವಿಶ್ವಾಸ ಕುಂದಿಸುವ ಪ್ರಯತ್ನಗಳು ನಡೆಯುತ್ತಿವೆ.

    2018-19ರ ಕಳೆದ ಪ್ರವಾಸದ ವೇಳೆ ಆತಿಥೇಯ ಆಸೀಸ್ ತಂಡ ಡೇವಿಡ್ ವಾರ್ನರ್-ಸ್ಟೀವನ್ ಸ್ಮಿತ್ ಅವರಿಲ್ಲದೆ ಪರದಾಡಿತ್ತು ಮತ್ತು ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಜಯ ದಾಖಲಿಸಿ ಬೀಗಿತ್ತು. ಅದಕ್ಕೆ ಈ ಬಾರಿ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಆಸೀಸ್‌ನಿಂದ ಪ್ರವಾಸದ ಆರಂಭದಲ್ಲೇ ಮೈಂಡ್‌ಗೇಮ್ ಶುರುವಾಗಿದೆ. ಈ ಮೂಲಕ ಐಪಿಎಲ್‌ನ ಗೆಳೆತನ ಕಾಂಗರೂ ನೆಲದ ಮೈದಾನದಲ್ಲಿ ಮುಂದುವರಿಯುವುದಿಲ್ಲ ಎಂಬ ಸುಳಿವು ರವಾನಿಸಿದ್ದಾರೆ.

    ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅವರ ಗೈರು ಭಾರತ ತಂಡಕ್ಕೆ ಹಿನ್ನಡೆಯಾಗುವುದಿಲ್ಲ. ಯಾಕೆಂದರೆ ಅವರ ಸ್ಥಾನವನ್ನು ತುಂಬಲು ಕನ್ನಡಿಗ ಕೆಎಲ್ ರಾಹುಲ್ ಅವರಂಥ ಪ್ರತಿಭಾನ್ವಿತ, ಭರವಸೆಯ ಆಟಗಾರರು ತಂಡದಲ್ಲಿದ್ದಾರೆ ಎಂಬ ಹೇಳಿಕೆಗಳ ಮೂಲಕ ಭಾರತದ ಕೆಲ ಹಾಲಿ-ಮಾಜಿ ಆಟಗಾರರೂ ಈಗಾಗಲೆ ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡುತ್ತಿದ್ದಾರೆ. ಒಟ್ಟಾರೆಯಾಗಿ ನವೆಂಬರ್ 27ರಂದು ಸಿಡ್ನಿ ಮೈದಾನದಲ್ಲಿ ಏಕದಿನ ಸರಣಿಯ ಮೂಲಕ ಕ್ರಿಕೆಟ್ ಕದನ ಆರಂಭವಾಗುವುದಕ್ಕೆ ಮುನ್ನ, ಉಭಯ ತಂಡಗಳ ವಾಗ್ಬಾಣದ ಝಲಕ್ ಇಲ್ಲಿದೆ.

    ಆಸೀಸ್ ವಾಗ್ಬಾಣಗಳು:
    *ಕೊಹ್ಲಿ ತವರಿಗೆ ಮರಳಿದ ಬಳಿಕ ಭಾರತ ತಂಡ ಬ್ಯಾಟಿಂಗ್ ಮತ್ತು ನಾಯಕತ್ವದಲ್ಲಿ ಒತ್ತಡ ಎದುರಿಸಲಿದೆ. ಇದರಿಂದ ತಂಡದ ಇತರ ಆಟಗಾರರೂ ಒತ್ತಡಕ್ಕೆ ಸಿಲುಕಲಿದ್ದಾರೆ. ರಹಾನೆ ನಾಯಕತ್ವದಿಂದ ಹೆಚ್ಚುವರಿ ಒತ್ತಡ ಎದುರಿಸಬೇಕಾಗುತ್ತದೆ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಟಗಾರನನ್ನು ಗುರುತಿಸುವುದು ಕೂಡ ಸುಲಭವಲ್ಲ.
    ರಿಕಿ ಪಾಂಟಿಂಗ್, ಮಾಜಿ ನಾಯಕ

    *ಕೊಹ್ಲಿ ನಿರ್ಗಮನದ ಬಳಿಕ ಭಾರತ ತಂಡದ ಬ್ಯಾಟಿಂಗ್ ಸರದಿಯಲ್ಲಿ ದೊಡ್ಡ ಕಂದಕ ಉಂಟಾಗಲಿದೆ. ಅವರ ಸ್ಥಾನ ತುಂಬುವ ಆಟಗಾರರ ಆಯ್ಕೆ ಬಗ್ಗೆಯೂ ಗೊಂದಲ ಏರ್ಪಡಲಿದೆ.
    ಇಯಾನ್ ಚಾಪೆಲ್, ಮಾಜಿ ನಾಯಕ

    *ರೋಹಿತ್ ಶರ್ಮ ಆರಂಭಿಕರಾಗಿ ಸ್ಥಿರ ನಿರ್ವಹಣೆ ತೋರುತ್ತ ಬಂದಿದ್ದಾರೆ. ಹೀಗಾಗಿ ಅವರು ಸೀಮಿತ ಓವರ್ ಸರಣಿಗೆ ಇಲ್ಲದಿರುವುದು ನಮಗೆ ನೆರವಾಗಲಿದೆ.
    ಗ್ಲೆನ್ ಮ್ಯಾಕ್ಸ್‌ವೆಲ್, ಆಲ್ರೌಂಡರ್

    *ಆಸ್ಟ್ರೇಲಿಯಾ ತಂಡದ ಗೆಲುವಿನ ಬಗ್ಗೆ ನನಗೆ ವಿಶ್ವಾಸವಿದೆ. ಯಾಕೆಂದರೆ ಕೊಹ್ಲಿ ಒಂದೇ ಟೆಸ್ಟ್ ಆಡಲಿದ್ದಾರೆ. ಬ್ಯಾಟ್ಸ್‌ಮನ್ ಮತ್ತು ನಾಯಕರಾಗಿ ಅವರ ಸ್ಥಾನವನ್ನು ಬೇರೆಯವರು ತುಂಬುವುದು ಕಷ್ಟ. ಆಸೀಸ್ 2-1ರಿಂದ ಟೆಸ್ಟ್ ಸರಣಿ ಗೆಲ್ಲಲಿದೆ.
    ಅಲನ್ ಬಾರ್ಡರ್, ಮಾಜಿ ನಾಯಕ

    *ಕೊಹ್ಲಿ ಕೊನೇ 3 ಟೆಸ್ಟ್ ಪಂದ್ಯಗಳನ್ನು ಆಡದಿರುವುದು ಭಾರತ ತಂಡದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿದೆ. ಭಾರತ ಅತ್ಯುತ್ತಮ ತಂಡವನ್ನು ಹೊಂದಿದೆ. ಆದರೆ ತಂಡದಲ್ಲಿ 2ನೇ ಕೊಹ್ಲಿ ಇಲ್ಲ.
    ಜಸ್ಟಿನ್ ಲ್ಯಾಂಗರ್, ಆಸೀಸ್ ಕೋಚ್

    *ಕೊಹ್ಲಿ ಗೈರು ಭಾರತ ತಂಡಕ್ಕೆ ದೊಡ್ಡ ಹಿನ್ನಡೆ. ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಕೂಡ ಸವಾಲಾಗಬಲ್ಲರು. ಕೊಹ್ಲಿ ಗೈರಿನಲ್ಲೂ ಭಾರತ ತಂಡದಿಂದ ದೊಡ್ಡ ಸವಾಲು ಎದುರಾಗಬಹುದು.
    ನಾಥನ್ ಲ್ಯಾನ್, ಸ್ಪಿನ್ನರ್

    ಭಾರತೀಯರ ತಿರುಗೇಟು:
    *ಹಿಂದಿನ ದೃಷ್ಟಾಂತಗಳನ್ನು ಗಮನಿಸಿದರೆ ಭಾರತ ತಂಡ ಕೊಹ್ಲಿ ಗೈರಿನಲ್ಲೂ ಉತ್ತಮ ನಿರ್ವಹಣೆ ತೋರಿದೆ. ಆಸೀಸ್ ವಿರುದ್ಧದ ಧರ್ಮಶಾಲಾ ಟೆಸ್ಟ್, ಅ್ಘಾನಿಸ್ತಾನ ವಿರುದ್ಧದ ಟೆಸ್ಟ್, 2018ರ ಏಷ್ಯಾಕಪ್, ನಿದಾಹಾಸ್ ಕಪ್‌ಗಳು ಇದಕ್ಕೆ ಸಾಕ್ಷಿ. ಕೊಹ್ಲಿ ಗೈರಿನಲ್ಲಿ ಇತರ ಆಟಗಾರರು ನಿರ್ವಹಣೆಯ ಮಟ್ಟವನ್ನು ಏರಿಸಿದ್ದಾರೆ.
    ಸುನೀಲ್ ಗಾವಸ್ಕರ್, ಮಾಜಿ ನಾಯಕ

    *ಭಾರತ ತಂಡ ಎಲ್ಲ 3 ಪ್ರಕಾರದಲ್ಲೂ ಸರಣಿ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಸೀಮಿತ ಓವರ್ ಸರಣಿಯಿಂದಲೇ ಪ್ರವಾಸ ಆರಂಭವಾಗುತ್ತಿರುವುದು ಉತ್ತಮ ಅಂಶ. ಐಪಿಎಲ್‌ನಿಂದ ಭಾರತದ ಆಟಗಾರರು ಉತ್ತಮ ಲಯದಲ್ಲಿದ್ದಾರೆ.
    ವಿವಿಎಸ್ ಲಕ್ಷ್ಮಣ್, ಮಾಜಿ ಬ್ಯಾಟ್ಸ್‌ಮನ್

    *ವಾರ್ನರ್-ಸ್ಮಿತ್ ಇದ್ದರೂ ಆಸ್ಟ್ರೇಲಿಯಾವನ್ನು ಸೋಲಿಸಬಲ್ಲ ತಂಡವನ್ನು ನಾವು ಹೊಂದಿದ್ದೇವೆ. ಕೊನೇ 3 ಟೆಸ್ಟ್‌ಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ ಸ್ಥಾನವನ್ನು ಕೆಎಲ್ ರಾಹುಲ್ ತುಂಬಬಲ್ಲರು. ರಾಹುಲ್ ಆರಂಭಿಕರಾಗಿ ಮಾತ್ರವಲ್ಲದೆ, 3, 4ನೇ ಕ್ರಮಾಂಕದಲ್ಲೂ ಆಡಬಲ್ಲರು.
    ಹರ್ಭಜನ್ ಸಿಂಗ್, ಹಿರಿಯ ಸ್ಪಿನ್ನರ್

    *ವಾರ್ನರ್-ಸ್ಮಿತ್ ವಾಪಸಾತಿಯಿಂದ ಈ ಬಾರಿ ಆಸೀಸ್ ಬ್ಯಾಟಿಂಗ್ ಬಲಿಷ್ಠವಾಗಿರಬಹುದು. ಆದರೆ 2018-19ರಲ್ಲೂ ನಮಗೆ ಸುಲಭವಾಗಿ ಗೆಲುವು ಒಲಿದಿರಲಿಲ್ಲ. ವಿದೇಶದಲ್ಲಿ ಗೆಲ್ಲಬೇಕಾದರೆ ಯಾವಾಗಲೂ ಕಠಿಣ ಪರಿಶ್ರಮ ಅಗತ್ಯ. ನಮ್ಮ ಬೌಲಿಂಗ್ ವಿಭಾಗ ಈ ಬಾರಿ ಇನ್ನಷ್ಟು ಬಲಿಷ್ಠವಾಗಿದೆ.
    ಚೇತೇಶ್ವರ ಪೂಜಾರ, ಟೆಸ್ಟ್ ಬ್ಯಾಟ್ಸ್‌ಮನ್

    *ವಾರ್ನರ್-ಸ್ಮಿತ್ ಮರಳಿದ್ದರೇನಂತೆ, ಭಾರತವೂ ವಿಶ್ವದರ್ಜೆಯ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ನಾವೂ ಅವರಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದೇವೆ. ಬ್ಯಾಟ್ಸ್‌ಮನ್ ಯಾರಾಗಿದ್ದರೇನಂತೆ, ಒಂದು ಉತ್ತಮ ಎಸೆತದಲ್ಲಿ ಅವರನ್ನು ಔಟ್ ಮಾಡಬಹುದು.
    ಮೊಹಮದ್ ಶಮಿ, ಟೀಮ್ ಇಂಡಿಯಾ ವೇಗಿ

    ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಟೀಮ್‌ಗೆ ಸೋಲುಣಿಸಿದ ವಿರಾಟ್ ಕೊಹ್ಲಿ ಬಳಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts