More

    ಪ್ರಜ್ವಲ್ ರೇವಣ್ಣನನ್ನು ಬಂಧಿಸಿ, ಸಂತ್ರಸ್ತರಿಗೆ ರಕ್ಷಣೆ ನೀಡಿ: ನಗರದಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

    ಮಂಡ್ಯ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ವಿದೇಶದಿಂದ ಕರೆತಂದು ತನಿಖೆಗೊಳಪಡಿಸಬೇಕು. ಈ ಪ್ರಕರಣದ ಸಂತ್ರಸ್ತರಿಗೆ ಬಲಾಢ್ಯ ಆರೋಪಿಗಳಿಂದ ಅಪಾಯವಿರುವುದರಿಂದ ಅವರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಭಾನುವಾರ ಸಂಜೆ ನಗರದಲ್ಲಿ ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
    ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಹೆಣ್ಣು ಮಕ್ಕಳ ಗೌಪ್ಯತೆಗೆ ಧಕ್ಕಯಾಗದಂತೆ ಅತ್ಯಂತ ಸೂಕ್ಷ್ಮವಾಗಿ ತನಿಖೆ ನಡೆಯಬೇಕು. ಸುಭದ್ರತೆ ಮತ್ತು ಘನತೆಯಿಂದ ಜೀವನ ಮುಂದುವರೆಸಲು ಅವಕಾಶವಾಗಬೇಕು. ಪ್ರಜ್ವಲ್ ರೇವಣ್ಣನಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ಅಡಿಯಲ್ಲಿ ವೀಸಾ ಸಿಗುವಂತೆ ಪ್ರಭಾವ ಬೀರಿದವರು ಯಾರು ಎಂಬ ವಿಚಾರವನ್ನೂ ಎಸ್‌ಐಟಿ ತನ್ನ ತನಿಖೆಯ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ಅಂತಹವರನ್ನೂ ಆರೋಪಿಯೆಂದು ಪರಿಗಣಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
    ಅತ್ಯಂತ ಭಯಂಕರವಾದ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯನ್ನು ತಮ್ಮ ಅಭ್ಯರ್ಥಿಯನ್ನಾಗಿಸಿ ಕರ್ನಾಟಕದ ಹೆಣ್ಣುಮಕ್ಕಳನ್ನು ಮತ್ತು ಜನತೆಯನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದ ಬಿಜೆಪಿ- ಜೆಡಿಎಸ್ ಪಕ್ಷಗಳು ಬಹಿರಂಗ ಕ್ಷಮಾಪಣೆ ಕೇಳಬೇಕು. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದಿರುವ ಮಹಿಳೆಯರ ಮೇಲಿನ ಎಲ್ಲಾ ದೌರ್ಜನ್ಯದ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಮತ್ತು ಶಿಕ್ಷೆಯನ್ನು ಖಾತ್ರಿಪಡಿಸಲು, ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಿಯಂತ್ರಿಸುವ ಮಾರ್ಗಸೂಚಿ ಕ್ರಮಗಳಿಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ಸರ್ಕಾರ ಕೂಡಲೇ ರಚಿಸಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರೊ.ಜಿ.ಟಿ.ವೀರಪ್ಪ, ಲಿಂಗಪ್ಪಾಜಿ, ವಿಜಯಕುಮಾರ್, ಪೂರ್ಣಿಮಾ, ಸಿದ್ದರಾಜು, ಎನ್.ನಾಗೇಶ್, ಸುಬ್ರಮಣ್ಯ, ನಗರಕೆರೆ ಜಗದೀಶ್, ಶಿಲ್ಪಾ, ಸೌಮ್ಯ, ರಾಧಾಮಣಿ, ಹನುಮಂತಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts