More

    ಸುಳ್ಳನ್ನು ಸತ್ಯವೆಂದು ಬಿಂಬಿಸಲು ಪ್ರಯತ್ನ: ಬಿಜೆಪಿ ವಿರುದ್ಧ ಎಐಸಿಸಿ ಮಾಜಿ ಕಾರ್ಯದರ್ಶಿ ಕ್ಯಾಪ್ಟನ್ ಧಾವಲ್ ಕಿಡಿ

    ಕೋಲಾರ: ದೇಶದಲ್ಲಿ ಕಾಂಗ್ರೆಸ್ ಇತಿಹಾಸ ಹಾಗೂ ಇಂದಿರಾಗಾಂಧಿ ಸಾಧನೆ ಗೊತ್ತಿಲ್ಲದೆ ಬಿಜೆಪಿ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವೆಂದು ಬಿಂಬಿಸುವ ಮೂಲಕ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದೆ ಎಂದು ಎಐಸಿಸಿ ಮಾಜಿ ಕಾರ್ಯದರ್ಶಿ ಕ್ಯಾಪ್ಟನ್ ಧಾವಲ್ ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ಬಾಂಗ್ಲಾ ವಿಮೋಚನಾದಿನ ಕಾರ್ಯಕ್ರಮದಲ್ಲಿ ಬಾಂಗ್ಲಾ ವಿಮೋಚನೆ ಪಡೆದ ಕುರಿತು ಸವಿಸ್ತಾರವಾಗಿ ವಿವರಿಸಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಸಕ್ರಿಯವಾಗಿ ಭಾಗವಹಿಸಿತ್ತು. ನೆಹರು ದೇಶದ ಪ್ರಥಮ ಪ್ರಧಾನಿಯಷ್ಟೇಅಲ್ಲ, ಜಗತ್ತಿನ ಉತ್ತುಮ ಹಾಗೂ ಸಮರ್ಥ ಪ್ರಧಾನಿ ಎಂದು ಕರೆಸಿಕೊಂಡಿದ್ದರು ಎಂದರು.

    ಬಾಂಗ್ಲಾ ವಿಮೋಚನಾ ಚಳವಳಿ ಕುರಿತು ತಿಳಿಸಿ, 1971ರ ಡಿ.3ರಂದು ಭಾರತವು ಬಾಂಗ್ಲಾದೇಶದ ಪರ ಯುದ್ಧದಲ್ಲಿ ಮಧ್ಯಪ್ರವೇಶಿಸಿತು. ಡಿ.16ರಂದು, ಪೂರ್ವ ಪಾಕಿಸ್ತಾನದಲ್ಲಿನ ಪಾಕಿಸ್ತಾನದ ಸೇನಾಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎ.ಎನ್. ಕೆ. ನಿಯಾಜಿ ಭಾರತದ ಸೈನ್ಯಕ್ಕೆ ಶರಣಾಗತಿಯ ಸಲಹೆಗೆ ಸಹಿ ಹಾಕಿದರು. 90,000ಕ್ಕಿಂತ ಹೆಚ್ಚು ಪಾಕಿಸ್ತಾನಿ ಪಡೆ ಭಾರತೀಯ ಸೇನೆಗೆ ಶರಣಾಯಿತು. ಎರಡನೇ ಮಹಾಯುದ್ಧದ ನಂತರ ಇದು ಅತಿ ದೊಡ್ಡ ಶರಣಾಗತಿಯಾಗಿದ್ದು, ಬಂಗ್ಲಾ ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂತು ಎಂದರು.
    ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಬಾಂಗ್ಲಾ ವಿಮೋಚನಾ ಚಳುವಳಿಗೆ 50 ವರ್ಷ ಪೂರ್ಣಗೊಂಡಿದೆ. ಇಂದಿರಾಗಾಂಧಿಗೆ ಹೆಸರು ಬಂದಿದ್ದು ಈ ಚಳುವಳಿಯಿಂದಲೇ. ಆದರೆ ಬಿಜೆಪಿ ಸುಳ್ಳನ್ನು ನೂರು ಬಾರಿ ಹೇಳಿ ನಿಜ ಮಾಡಲು ಹೊರಟಿದೆ. ಚರಿತ್ರೆಯನ್ನು ತಿರುಚಿ ಬರೆಯುತ್ತಿದ್ದಾರೆ. ನಟಿ ಕಂಗನಾ ರಾವತ್ ನೀಡಿದ ಹೇಳಿಕೆ ವಿರುದ್ಧ ಬಿಜೆಪಿಯ ಯಾರೂ ಪ್ರತಿರೋಧ ವ್ಯಕ್ತಪಡಿಸಲಿಲ್ಲ ಎಂದು ಟೀಕಿಸಿದರು.

    ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿ, ಬಾಂಗ್ಲಾದೇಶ ವಿಮೋಚನಾ ಚಳುವಳಿ ಇಂದಿರಾಗಾಂಧಿ ನಾಯಕತ್ವದಲ್ಲಿ ನಡೆದಿದೆ. ಎಲ್ಲ ಜಾತಿ ಧರ್ಮದವರು ಗಾಂಧಿ ಜತೆಗಿನ ಹೋರಾಟದಲ್ಲಿ ಭಾಗವಹಿಸಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಬಿಜೆಪಿ ಸಂವಿಧಾನವನ್ನೇ ಬದಲಾಯಿಸಲು ಹೊರಟಿದೆ ಎಂದರು.

    ಬಿಟ್ ಕಾಯಿನ್ ನ್ಯಾಯಾಂಗ ತನಿಖೆಯಾಗಲಿ: ಬಿಟ್ ಕಾಯಿನ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಒತ್ತಾಯಿಸಿದರು.
    ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಟ್ ಕಾಯಿನ್ ಅಂತರ್ಜಾಲದಲ್ಲಿ ನಡೆಯುವ ವ್ಯವಹಾರ. ಬಿಟ್ ಕಾಯಿನ್ ವ್ಯವಹಾರ ತಪ್ಪಲ್ಲ, ಹ್ಯಾಕಿಂಗ್ ಆಗಿದ್ದು ತಪ್ಪು. ಹ್ಯಾಕಿಂಗ್ ಆದ ಮೇಲೆ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಇದರಲ್ಲಿ ಕಾಂಗ್ರೆಸ್ಸಿಗರ ಮಕ್ಕಳಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರ ಇದೆ, ತನಿಖೆ ಮಾಡಿಸಲಿ ಎಂದರು. ಬಿಟ್ ಕಾಯಿನ್ ಪ್ರಕರಣವನ್ನು ಸರ್ಕಾರ ಸಿಬಿಐ, ಇಡಿ ತನಿಖೆ ನಡೆಸುತ್ತಿದೆ ಎಂದು ಬಿಜೆಪಿ ಮಾಧ್ಯಮಗಳಲ್ಲಿ ಹೇಳುತ್ತಿದೆಯೇ ವಿನಾ ಪುರಾವೆ ಇಲ್ಲ ಎಂದರು.

    2016ರಲ್ಲೇ ಹ್ಯಾಕಿಂಗ್ ಆಗಿದ್ದರೆ ದೂರು ದಾಖಲಾಗಬೇಕಿತ್ತು. ಯಾವುದೇ ವಿಚಾರವಾದರೂ ಕೇಸು ದಾಖಲಾದ ಮೇಲಷ್ಟೇ ತನಿಖೆ ನಡೆಸಲು ಸಾಧ್ಯ. ಸಿದ್ದರಾಮಯ್ಯ ಅವಧಿಯಲ್ಲಿ ಕೇಸು ದಾಖಲಾಗಿದ್ದರೆ ತನಿಖೆ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ಅವರು, ಇವರು ಭಾಗಿಯಾಗಿದ್ದಾರೆಂದು ಆಪಾದನೆ ಮಾಡುವ ಬದಲು ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಿ ಎಂದರು.

    ನಾವೇ ಗೆಲ್ತೇವೆ: ವಿಧಾನ ಪರಿಷತ್‌ಗೆ ಕೋಲಾರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿ.ಆರ್.ಸುದರ್ಶನ್, ಕೆ.ಚಂದ್ರಾರೆಡ್ಡಿ, ಅನಿಲ್‌ಕುಮಾರ್, ಚಿಕ್ಕಬಳ್ಳಾಪುರದಿಂದ ಕೇಶವರೆಡ್ಡಿ ಪ್ರಬಲ ಆಕಾಂಕ್ಷಿಗಳಿದ್ದಾರೆ. ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎರಡೂ ಜಿಲ್ಲೆಯ ನಾಯಕರೊಂದಿಗೆ ಚರ್ಚಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಇತ್ತಾದರೂ ಕಾರಣಾಂತರದಿಂದ ಕಳೆದುಕೊಂಡೆವು. ಈ ಭಾರಿ ನಾವೇ ಗೆಲ್ಲುತ್ತೇವೆ ಎಂದ ರಾಮಲಿಂಗಾರೆಡ್ಡಿ, ಹಾಲಿ ಸದಸ್ಯ ಜೆಡಿಎಸ್‌ನ ಸಿ.ಆರ್.ಮನೋಹರ್ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ವಿಚಾರ ನಿರಾಕರಿಸಿದರು.

    ಶಾಸಕಿ ಎಂ. ರೂಪಕಲಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಚಂದ್ರಾರೆಡ್ಡಿ, ಉಪಾಧ್ಯಕ್ಷ ಸೀತಿಹೊಸೂರು ಮುರಳಿಗೌಡ, ವಕ್ತಾರ ಎಲ್.ಎ ಮಂಜುನಾಥ್, ಕಿಸಾನ್ ಖೇತ್ ಅಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಬ್ಲಾಕ್ ಅಧ್ಯಕ್ಷ ರಾಮಲಿಂಗಾರೆಡ್ಡಿ, ಪ್ರಸಾದ್‌ಬಾಬು, ಮಹಿಳಾ ಜಿಲ್ಲಾಧ್ಯಕ್ಷೆ ರತ್ನಮ್ಮ, ಎಸ್ಸಿ ಘಟಕ ಅಧ್ಯಕ್ಷ ಕೆ.ಜಯದೇವ್, ಒಬಿಸಿ ಘಟಕದ ಎಸ್. ಮಂಜುನಾಥ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts