More

    ಹಲ್ಲೆಗೆ ಪ್ರಚೋದಿಸಿದ ವೈದ್ಯರ ಮೇಲೂ ಕ್ರಮ ಕೈಗೊಳ್ಳಿ

    ಚನ್ನಮ್ಮ ಕಿತ್ತೂರು: ಮಹಿಳಾ ವೈದ್ಯೆ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣದ ಆರೋಪಿಗಳಿಗೆ ಪ್ರಚೋದನೆ ನೀಡಿದ ಇಬ್ಬರು ವೈದ್ಯರ ಮೇಲೆ ಪ್ರಕರಣ ದಾಖಲಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂ ಹಾಗೂ ಆರೋಗ್ಯ ಇಲಾಖೆ ಸಚಿವರ ಮೇಲೆ ಒತ್ತಡ ತರುವಂತೆ ಗುರುವಾರ ನಡೆದ ಸಭೆಯಲ್ಲಿ ಶಾಸಕ ಮಹಾಂತೇಶ ದೊಡಗೌಡರ ಅವರನ್ನು ಒತ್ತಾಯಿಸಲಾಯಿತು.

    ವೈದ್ಯೆ ಮೇಲೆ ಹಲ್ಲೆ ನಡೆದ ಸಂಬಂಧ ಮಾಹಿತಿ ಪಡೆಯಲು ಪಟ್ಟಣದ ಕೋಟೆ ಆವರಣದಲ್ಲಿ ಶಾಸಕ ಮಹಾಂತೇಶ ದೊಡಗೌಡರ ನೇತೃತ್ವದಲ್ಲಿ ಅಧಿಕಾರಿಗಳು, ಸಂಘಟನೆಗಳ ಪದಾಧಿಕಾರಿ ಸಭೆ ಹಮ್ಮಿಕೊಳ್ಳಲಾಗಿತ್ತು.

    ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಪ್ರಕರಣದ ಹಿಂದೆ ಇಬ್ಬರು ವೈದ್ಯರ ಕುಮ್ಮಕ್ಕು ಇರುವುದಾಗಿ ತಿಳಿದುಬಂದಿದೆ. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೌಕರರು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ.
    ತಪ್ಪಿತಸ್ಥರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.

    ಜಿಲ್ಲಾ ಆರೋಗ್ಯಾಧಿಕಾರಿ ಮೇಲೆ ಕ್ರಮಕ್ಕೆ ಒತ್ತಾಯ: ಘಟನೆಯಿಂದ ಮನನೊಂದು ಮಾಹಿತಿ ನೀಡಲು ತೆರಳಿದ ವೈದ್ಯೆಯೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ನಡೆದುಕೊಂಡ ವರ್ತನೆಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಅವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು.

    ಹಿರಿಯ ಆರೋಗ್ಯಾಧಿಕಾರಿ ಐ.ಪಿ.ಗಡಾದ, ತಹಸೀಲ್ದಾರ್ ಪ್ರವೀಣ ಜೈನ್, ತಾಪಂ ಇಒ ಸುಭಾಸ ಸಂಪಗಾವಿ, ಸಿಪಿಐ ಶ್ರೀಕಾಂತ ತೋಟಗಿ, ಟಿಎಚ್‌ಒ ಎಸ್.ಎಸ್.ಸಿದ್ದಣ್ಣವರ, ಎಸ್.ಸಿ.ಮಾಸ್ತಿಹೊಳಿ, ಸಂದೀಪ ದೇಶಪಾಂಡೆ, ಬಸವರಾಜ ಪರವಣ್ಣವರ, ಮಲ್ಲಣ್ಣ ಸಾಣಿಕೊಪ್ಪ, ವಿ.ಡಿ.ಉಣಕಲ್ಲಕರ, ಮೋಹನ ಅಂಗಡಿ, ಜಗದೀಶ ಬಿಕ್ಕಣ್ಣವರ, ಹನುಮಂತ ಲಂಗೋಟಿ, ಮಹಾದೇವಿ ಮಣವಡ್ಡರ, ಡಾ.ಮಂಜುನಾಥ ಮುದಕನಗೌಡರ, ಎಸ್.ಪಿ.ಹಿರೇಮಠ ಇತರರು ಇದ್ದರು. ವರ್ತಕರ ಸಂಘ, ಮಹಿಳಾ ಸಂಘ, ಖಾಸಗಿ ವೈದ್ಯರ ಸಂಘ ಸೇರಿ ವಿವಿಧ ಸಂಘಟನೆಗಳು ಕಠಿಣ ಕ್ರಮಕ್ಕೆ ಆಗ್ರಹಿಸಿ ಶಾಸಕರು ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

    ಚ.ಕಿತ್ತೂರ ಬಂದ್‌ಗೆ ಉತ್ತಮ ಬೆಂಬಲ

    ಮಹಿಳಾ ವೈದ್ಯೆಗೆ ಜೀವ ಬೆದರಿಕೆ, ಹಲ್ಲೆಗೆ ಯತ್ನಿಸಿದ ಘಟನೆ ಖಂಡಿಸಿ ಪಟ್ಟಣದ ವರ್ತಕರ ಸಂಘ ಸೇರಿ ವಿವಿಧ ಸಂಘ ಸಂಸ್ಥೆಗಳು ನೀಡಿದ್ದ ಕಿತ್ತೂರು ಬಂದ್‌ಗೆ ಗುರುವಾರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.ಬೆಳಗ್ಗೆಯಿಂದ ಎಲ್ಲರೂ ಅಂಗಡಿಗಳನ್ನು ಬಂದ್ ಮಾಡಿದ್ದರು. ವರ್ತಕರ ಸಂಘ, ಖಾಸಗಿ ವೈದ್ಯರ ಸಂಘ, ನ್ಯಾಯವಾದಿಗಳ ಸಂಘ, ಮದ್ಯಮಾರಾಟಗಾರರ ಸಂಘ, ವಿವಿಧ ಮಹಿಳಾ ಸಂಘಟನೆಗಳು, ಯುವಕ ಸಂಘಟನೆಗಳು ಪಕ್ಷಾತೀತವಾಗಿ ಬಂದ್‌ಗೆ ಬೆಂಬಲ ನೀಡಿದ್ದವು.

    ದಿಗ್ವಿಜಯ ನ್ಯೂಸ್ ವರದಿಗೆ ಮೆಚ್ಚುಗೆ

    ಸರ್ಕಾರಿ ವ್ಯದ್ಯೆ ಮೇಲೆ ನಡೆದ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನದ ಸಿಸಿಟಿವಿ ದೃಶ್ಯಾವಳಿಗಳನ್ನು ಗುರುವಾರ ದಿಗ್ವಿಜಯ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು. ವರದಿಗೆ ಸಭೆಯಲ್ಲಿ ವೈದ್ಯರು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಪ್ರಕರಣ ಸಂಬಂಧ ಎರಡು ದಿನಗಳಿಂದ ದಿಗ್ವಿಜಯ ಚಾನಲ್‌ನಲ್ಲಿ ಸರಣಿ ವರದಿ ಪ್ರಸಾರವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts