More

    ಅಥಣಿಯಲ್ಲಿ ಯಮರೂಪಿ ರಸ್ತೆಗಳು

    ಅಥಣಿ: ಅಥಣಿ ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಇಲ್ಲಿನ ಟ್ರಾಫಿಕ್ ಸಮಸ್ಯೆ ಪರಿಹರಿಸದಿರುವುದರಿಂದ ಹಾಗೂ ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ರಸ್ತೆ ಅಪಾಘತಗಳಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿವೆ.

    ಇದಕ್ಕೆ ಗುರುವಾರ ಪಟ್ಟಣದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಸ್ಥಳೀಯ ಯುವಕ ಮಹೇಶ ಅನಿಲ ಭೋಸಲೆ ಘಟನೆಯೇ ಸಾಕ್ಷಿ. ಈತ ಪಟ್ಟಣದ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಯ ಶಿವಾಜಿ ವೃತ್ತದಲ್ಲಿ ರಸ್ತೆಯ ಡಿವೈಡರ್ ದಾಟುವ ವೇಳೆ ಟಿಪ್ಪರ್ ಹಾಯ್ದು ಪ್ರಾಣ ತೆತ್ತಿದ್ದಾನೆ. ಅಪಘಾತದ ರಭಸಕ್ಕೆ ದೇಹ ಛಿದ್ರಗೊಂಡಿದೆ. ರಸ್ತೆಪಕ್ಕದ ಸಿಸಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯಾವಳಿ ಸೆರೆಯಾಗಿದೆ.

    ತಾಲೂಕಿನಲ್ಲಿ ಪ್ರತಿ ತಿಂಗಳು ಸಾಮಾನ್ಯವಾಗಿ 30-40 ಅಪಘಾತ ಪ್ರಕರಣಗಳು ಸಂಭವಿಸುತ್ತಿವೆ. ಈಗ ಈ ಸಂಖ್ಯೆ ಅಧಿಕಗೊಳ್ಳುತ್ತಿದೆ. ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ಮತ್ತು ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಪಟ್ಟಣದಲ್ಲಿ ಹಾಯ್ದು ಹೋಗಿವೆ. ಇಲ್ಲಿ ಸಂಚರಿಸುವ ವಾಹನಗಳಿಗೆ ವೇಗ ಮಿತಿ ಇಲ್ಲ. ಹೀಗಾಗಿ ಅಡ್ಡಾದಿಡ್ಡಿಯಾಗಿ ವಾಹನಗಳು ವೇಗವಾಗಿ ಸಂಚರಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಪಾದಚಾರಿಗಳು, ಬೈಕ್ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿತ್ಯ ಸಾರ್ವಜನಿಕರು ಜೀವ ಭಯದಲ್ಲೇ ಸಂಚರಿಸುತ್ತಿದ್ದಾರೆ. ವಿಜಯಪುರ ರಸ್ತೆಯ ಕರಿಮಸೂತಿಯಿಂದ ಮಿರಜ ರಸ್ತೆಯ ಶಿವಾಜಿ ವೃತ್ತದವರೆಗೆ ದ್ವಿಪಥ ರಸ್ತೆ ನಿರ್ಮಿಸಿದ್ದು, ಎಲ್ಲಿಯೂ ಹಂಪ್ಸ್ ಇಲ್ಲ. ಈ ರಸ್ತೆಯ ಎರಡೂ ಬದಿಗಳಲ್ಲಿ ಸರ್ಕಾರಿ ಕಚೇರಿಗಳು, ಮಿನಿ ವಿಧಾನಸೌಧ, ಅಂಗಡಿಗಳು, ಶಾಲೆ-ಕಾಲೇಜು, ಹೋಟೆಲ್, ದೇವಸ್ಥಾನಗಳು, ಪೆಟ್ರೋಲ್ ಬಂಕ್‌ಗಳು ಇವೆ. ಹೀಗಾಗಿ, ಸಾಮಾನ್ಯವಾಗಿ ಈ ರಸ್ತೆಯಲ್ಲಿ ಜನ ಸಂಚಾರ ಅಧಿಕವಾಗಿದೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಲು ಜನ ಪರದಾಡುವಂತಾಗಿದೆ. ವಾಹನಗಳಿಗೆ ವೇಗ ಮಿತಿ ಇಲ್ಲದಿರುವುದರಿಂದ ಅಪಘಾತಗಳಿಗೆ ಲೆಕ್ಕವಿಲ್ಲದಂತಾಗಿದೆ.

    ಮಾದರಿ ತಾಲೂಕು ಮಾಡಿ: ಅಥಣಿಯನ್ನು ಮಾದರಿ ತಾಲೂಕು ಕೇಂದ್ರವನ್ನಾಗಿಸಲು ಸ್ಥಳೀಯ ಶಾಸಕರು, ಸಚಿವರು ಮುಂದಾಗಬೇಕು. ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸಬೇಕು. ಸಿಗ್ನಲ್ ಹಾಗೂ ಸಿಸಿ ಕ್ಯಾಮರಾ ಅಳವಡಿಕೆ, ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಆನಂದ ಟೋನಪಿ, ಅಜಿತ ಇನಾಮದಾರ, ಸಂತೋಷ ಲಠ್ಠೆ ಆಗ್ರಹಿಸಿದ್ದಾರೆ.

    ಭಾರಿ ಗಾತ್ರದ ವಾಹನಗಳಿಗೆ ವೇಗ ಮಿತಿ ಕಡ್ಡಾಯವಾಗಲಿ

    ಅಥಣಿಯಲ್ಲಿನ ಪ್ರಮುಖ ವೃತ್ತಗಳಲ್ಲಿ ಶೀಘ್ರ ಸಿಸಿ ಕ್ಯಾಮರಾ ಅಳವಡಿಸಬೇಕಿದೆ. ಅಪಘಾತ, ಕಳ್ಳತನ ಘಟನೆ ಸಂಭವಿಸಿದರೆ ಅದನ್ನು ಪರಿಶೀಲಿಸಲು ಅನುಕೂಲವಾಗುತ್ತದೆ. ತಾಲೂಕಿನಲ್ಲಿ 5 ಸಕ್ಕರೆ ಕಾರ್ಖಾನೆಗಳು, ಮತ್ತಿತರ ಕೈಗಾರಿಕೆಗಳು ಇವೆ. ವಿವಿಧ ರಾಜ್ಯಗಳಿಂದ ನಿತ್ಯ ನೂರಾರು ಭಾರಿ ಗಾತ್ರದ ವಾಹನಗಳು ಸಂಚರಿಸುತ್ತವೆ. ಟ್ರಾಫಿಕ್ ಸ್ನಿಗಲ್ ವ್ಯವಸ್ಥೆ ಇಲ್ಲದಿರುವುದರಿಂದ ನಿತ್ಯ ಒಂದಿಲ್ಲೊಂದು ರಸ್ತೆ ಅಪಘಾತ ನಡೆಯುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಲು ಪಟ್ಟಣದಲ್ಲಿ ಹಾಯ್ದು ಹೋಗುವ ಭಾರಿ ಗಾತ್ರದ ವಾಹನಗಳಿಗೆ ವೇಗ ಮಿತಿ ಕಡ್ಡಾಯಗೊಳಿಸಬೇಕು. ಆಗ ಮಾತ್ರ ಅಪಘಾತ ತಪ್ಪಿಸಲು ಸಾಧ್ಯ.

    ವೃತ್ತಗಳಲ್ಲಿಲ್ಲ ಸಿಸಿ ಕ್ಯಾಮರಾ

    ಪ್ರಮುಖ ವೃತ್ತಗಳಾದ ಅಂಬೇಡ್ಕರ್ ವೃತ್ತ, ಶಿವಯೋಗಿ ವೃತ್ತ, ಬಸವೇಶ್ವರ ವೃತ್ತ, ಶಿವಾಜಿ ವೃತ್ತ್ತ, ಸಂಗೊಳ್ಳಿ ರಾಯಣ್ಣ ವೃತ್ತಗಳಲ್ಲಿ ಹೆಚ್ಚು ಜನ ಸಂಚಾರವಿರುತ್ತದೆ. ಇಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸರಿಯಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಿಲ್ಲ. ಸಿಗ್ನಲ್ ಹಾಗೂ ಸಿಸಿ ಕ್ಯಾಮರಾ ಅಳವಡಿಕೆಯೂ ಇಲ್ಲ. ಇದರಿಂದ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತಗಳೂ ಸಂಭವಿಸುತ್ತಿವೆ. ಅಲ್ಲದೆ, ರಸ್ತೆಗಳು ಯಾವ ಊರುಗಳಿಗೆ ಸಂಪರ್ಕ ಕಲ್ಪಿಸುತ್ತವೆ ಎನ್ನುವ ಮಾರ್ಗ ಸೂಚಿ ಫಲಕಗಳನ್ನೂ ಅಳವಡಿಸಿಲ್ಲ.

    ಅಥಣಿ ಪಟ್ಟಣವು ವೇಗವಾಗಿ ಬೆಳೆಯುತ್ತಿದೆ. ಜನ ಸಂಚಾರವೂ ಅಧಿಕವಾಗಿದೆ. ಇದಕ್ಕೆ ತಕ್ಕಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅತಿ ಅಗತ್ಯವಿದೆ. ವಿವಿಧ ಸರ್ಕಾರಿ ಇಲಾಖೆಯವರೊಂದಿಗೆ ಚರ್ಚಿಸಿ, ಪ್ರಮುಖ ರಸ್ತೆಗಳಲ್ಲಿ ಹಂಪ್ಸ್ ನಿರ್ಮಾಣ ವ್ಯವಸ್ಥೆ ಮಾಡಲಾಗುವುದು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಸಂಚರಿಸುವ ಭಾರಿ ಗಾತ್ರದ ವಾಹನಗಳಿಗೆ ವೇಗ ಮಿತಿ ಕಡ್ಡಾಯಗೊಳಿಸಿ ಅಪಘಾತಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಲಾಗುವುದು.
    | ಎಸ್.ವಿ. ಗಿರೀಶ ಡಿವೈಎಸ್‌ಪಿ ಅಥಣಿ

    | ರಾಜು ಎಸ್. ಗಾಲಿ ಅಥಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts