More

    ಅಥಣಿಗೆ ಬೇಕಿದೆ ನಗರಸಭೆ ಗರಿ

    ಅಥಣಿ: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಘೋಷಿಸಬೇಕು, ಜನಸಂಖ್ಯೆ ಆಧಾರದಲ್ಲಿ ಕೆಲ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಬೇಕು ಎಂಬ ಕೂಗಿನ ಮಧ್ಯೆ ಅಥಣಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವುದು ಯಾವಾಗ ಎಂಬ ಪ್ರಶ್ನೆಯನ್ನು ಸ್ಥಳೀಯರು ಕೇಳುತ್ತಿದ್ದಾರೆ. ಶತಮಾನಗಳಷ್ಟು ಹಳೆಯದಾದ ಪುರಸಭೆಯನ್ನು ನಗರಸಭೆಯಾಗಿಸಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆ.

    ಕಾಲಕಾಲಕ್ಕೆ ಪಟ್ಟಣಗಳ ಸುಧಾರಣೆಯಾಗಬೇಕು. ಅಗತ್ಯ ಮೂಲಸೌಕರ್ಯ ವೃದ್ಧಿಯಾಗಬೇಕು ಎನ್ನುವುದು ಜನರ ಬೇಡಿಕೆ. ಆದರೆ, ಅತ್ಯಂತ ಹಳೆಯ ಪುರಸಭೆಯಾಗಿರುವ ಅಥಣಿ ಇನ್ನೂ ಅದೇ ಮಾದರಿಯಲ್ಲಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿಯವರೆಗೂ ನಗರಸಭೆಯಾಗುವ ಯೋಜನೆ ನನೆಗುದಿಗೆ ಬಿದ್ದಿದೆ. ಎಲ್ಲ ರೀತಿಯ ಸೌಕರ್ಯ,ನಗರಸಭೆಗೆ ಬೇಕಾಗಿರುವ ಜನಸಂಖ್ಯೆ ಇರುವ ಪಟ್ಟಣ ನಗರಸಭೆಯಾಗುವ ಅಗತ್ಯವಿದೆ.

    ಬ್ರಿಟಿಷ್ ಕಾಲದ ಪುರಸಭೆ: ಅಥಣಿ ಪುರಸಭೆ ಅತ್ಯಂತ ಹಳೆಯ ಕಾಲದ್ದು. ಪಟ್ಟಣದ ಜತೆ ಜತೆಯಲ್ಲೇ 1853ರಲ್ಲಿ ಆರಂಭವಾದ ಮಹಾರಾಷ್ಟ್ರದ ಪುಣೆ ಪುರಸಭೆ ಇಂದು ಮಹಾನಗರ ಪಾಲಿಕೆಯಾಗಿ ವಿಜೃಂಭಿಸುತ್ತಿದೆ. ಸುಮಾರು 167 ವರ್ಷಗಳಷ್ಟು ಹಳೆಯದಾದ ಪುರಸಭೆ ನಗರಸಭೆಯಾಗಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಹೇಳುವ ಪ್ರಕಾರ ಜನಸಂಖ್ಯೆ ಕೊರತೆ ಕಾರಣವಂತೆ. ನಗರಸಭೆಯಾಗುವ ಎಲ್ಲ ಅರ್ಹತೆ ಹೊಂದಿರುವ ಅಥಣಿ ಪಟ್ಟಣ ನಗರಸಭೆ ಆಗುವ ಭಾಗ್ಯ ಇನ್ನೂ ಒದಗಿಬಂದಿಲ್ಲ. ಜನಸಂಖ್ಯೆ ಲೆಕ್ಕದಲ್ಲಿ ನಗರಸಭೆಯಾಗುವ ಅರ್ಹತೆ ಇದೆ. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಮುತುವರ್ಜಿ ವಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಗಿರೀಶ ಬುಟಾಳೆ ಆಗ್ರಹಿಸಿದ್ದಾರೆ.

    2011ರ ಜನಗಣತಿ ಪ್ರಕಾರ ಪಟ್ಟಣದ ಜನಸಂಖ್ಯೆ 47 ಸಾವಿರಕ್ಕೂ ಅಧಿಕವಿದೆ. 23 ವಾರ್ಡ್ ಹೊಂದಿರುವ ಪಟ್ಟಣದಲ್ಲಿ ಉಪ ವಾರ್ಡ್‌ಗಳು ಬೆಳೆದು ನಿಂತಿವೆ. ಅದಕ್ಕೆ ಪೂರಕವಾಗಿ ಅಭಿವೃದ್ಧಿಯಾಗಲು ಹೆಚ್ಚು ಅನುದಾನದ ಅವಶ್ಯಕತೆ ಇದೆ. ಜನರಿಗೆ ಮೂಲ ಸೌಕರ್ಯ ಒದಗಿಸಲು ಅಥಣಿ ನಗರಸಭೆಯಾಗುವುದು ಅಗತ್ಯವಾಗಿದೆ.

    ಅಥಣಿ ಪಟ್ಟಣದ ಅಭಿವೃದ್ಧಿ ಹಾಗೂ ಅನುದಾನ ಬಿಡುಗಡೆ ಮಾಡಿಸುವಲ್ಲಿ ಮತ್ತು ನಗರಸಭೆ ಮಾಡಬೇಕೆಂಬ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ವಿಳಂಬವಾಗುತ್ತಿದೆ. ಇನ್ನಾದರೂ ಸಮಗ್ರ ಅಥಣಿ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಮತ್ತು ಸರ್ಕಾರ ಕೂಡಲೇ ಅಥಣಿ ಪುರಸಭೆಯನ್ನು ನಗರಸಭೆಯನ್ನಾಗಿಸಬೇಕು.
    | ಗಜಾನನ ಮಂಗಸೂಳಿ ಕಾಂಗ್ರೆಸ್ ಮುಖಂಡ

    ಅಥಣಿ ಪಟ್ಟಣವನ್ನು ಅವೈಜ್ಞಾನಿಕವಾಗಿ ವಿಂಗಡಿಸಲಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಸ್ಥಳ, ಪ್ರದೇಶ, ವಾರ್ಡ್‌ಗಳು
    ಗ್ರಾಮೀಣ ಪ್ರದೇಶಕ್ಕೆ ಸೇರ್ಪಡೆಯಾಗಿವೆ. ಅದರಂತೆ ಹಲ್ಯಾಳ ರಸ್ತೆಯ ಸ್ಥಳಗಳು, ಶಿವಯೋಗಿ ನಗರ, ಚಮಕೇರಿ ಮಡ್ಡಿ, ಸಂಕೋನಟ್ಟಿಯ ಕೆಲ ಪ್ರದೇಶಗಳು ಪುರಸಭೆ ವ್ಯಾಪ್ತಿಯಲ್ಲಿವೆ. ಸರಿಯಾದ ನಕ್ಷೆ ತಯಾರಿಸಬೇಕು. ಸಮರ್ಪಕ ಸರ್ವೇ ನಡೆಸಿ, ಕ್ಷೇತ್ರವನ್ನು ಮರುವಿಂಗಡಿಸಿ ಪುರಸಭೆ ಸರಹದ್ದಿನಲ್ಲಿರುವ ಸ್ಥಳಗಳನ್ನು ಪಟ್ಟಣದೊಂದಿಗೆ ವಿಲೀನಗೊಳಿಸಿದರೆ ಅಥಣಿ ಪಟ್ಟಣ ನಗರಸಭೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
    | ಬಿ.ಎಲ್.ಪಾಟೀಲ ಹಿರಿಯ ನಾಗರಿಕ ಅಥಣಿ

    ನಗರಸಭೆಯಾಗುವ ಎಲ್ಲ ಅರ್ಹತೆ ಅಥಣಿ ಪಟ್ಟಣಕ್ಕಿದೆ. ಈಗಾಗಲೆ 23 ವಾರ್ಡ್ ವಿಗಂಡಿಸಿ 27ಕ್ಕೆ ಏರಿಸಲಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ವಿಳಂಬವಾಗಿದೆ. 2011ರ ಜನಗಣತಿ ಪ್ರಕಾರ ಜನಸಂಖ್ಯೆ ಕಡಿಮೆ ಇತ್ತು. 50 ಸಾವಿರ ಜನಸಂಖ್ಯೆಗೆ ಸರಿದೂಗುವಂತೆ ಪಟ್ಟಣಕ್ಕೆ ಹತ್ತಿರದ ಪ್ರದೇಶಗಳನ್ನು ಸೇರಿಸಿಕೊಂಡು ನೀಲಿನಕ್ಷೆಯೊಂದಿಗೆ ಸರ್ವೇ ಮಾಡಲಾಗಿದೆ. ಲೋಪದೋಷ ಸರಿಪಡಿಸಿ ಸರ್ಕಾರಕ್ಕೆ ಮರುಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಆದೇಶ ಬರಬಹುದು.
    | ಮಹಾಂತೇಶ ಕವಲಾಪುರ ಪುರಸಭೆ ಮುಖ್ಯಾಧಿಕಾರಿ

    | ರಾಜು.ಎಸ್.ಗಾಲಿ ಅಥಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts