More

    ಅಥಣಿಯಲ್ಲಿ 8 ಕಡೆ ಸೀಲ್‌ಡೌನ್

    ಅಥಣಿ: ಸಂಡೇ ಲಾಕ್‌ಡೌನ್ ಬಳಿಕವೂ ಸೋಮವಾರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳ ಬಂದ್ ಮುಂದುವರಿದಿದೆ. ಹಾಲು, ಔಷಧ ಅಂಗಡಿಗಳು ಮಾತ್ರ ತೆರೆದಿದ್ದವು. ಕರೊನಾ ವೈರಸ್ ಪ್ರಕರಣಗಳು ಹೆಚ್ಚು ದೃಢಪಟ್ಟಿದ್ದರಿಂದ ಜು. 12ರ ವರೆಗೆ ವ್ಯಾಪಾರ-ವಹಿವಾಟು ಮಾಡದಿರಲು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ.
    ಕರೊನಾ ವೈರಸ್ ತೀವ್ರತೆ ಕಡಿಮೆಯಾಗದಿದ್ದರೆ ಮತ್ತೆ ಬಂದ್ ಮುಂದುವರಿಸುವ ಉದ್ದೇಶ ವ್ಯಾಪಾರಸ್ಥರದ್ದಾಗಿದೆ ಎಂದು ಹಿರಿಯ ವ್ಯಾಪಾರಸ್ಥ ಭರತ ಸೋಮಯ್ಯ ಎಂ.ಡಿ. ತೊದಲಬಾಗಿ ತಿಳಿಸಿದ್ದಾರೆ.

    ಎಂದಿನಂತೆ ಕಾರ್ಯ ನಿರ್ವಹಣೆ: ಸೋಮವಾರ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಅಂಚೆ ಇಲಾಖೆ, ಸೊಸೈಟಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಗ್ರಾಮೀಣ ಭಾಗದಿಂದ ಬಂದ ಜನರು ಸರದಿ ಸಾಲಿನಲ್ಲಿ ನಿಂತು ವ್ಯವಹಾರದಲ್ಲಿ ತೊಡಗಿದ್ದರು. ಸಾರಿಗೆ ಇಲಾಖೆ ಕೂಡ ಅವಶ್ಯಕ ಮಾರ್ಗಗಳಲ್ಲಿ ಮಾತ್ರ ಬಸ್ ಸಂಚಾರ ಆರಂಭಿಸಿದೆ.
    ದೇವಸ್ಥಾನಗಳು ಬಂದ್: ಪಟ್ಟಣದಲ್ಲಿರುವ ಪ್ರಮುಖ ದೇವಸ್ಥಾನಗಳನ್ನು ಕೂಡ ಸಾರ್ವಜನಿಕರ ದರ್ಶನಕ್ಕೆ ಬಂದ್ ಮಾಡಲಾಗಿದೆ. ಗಚ್ಚಿನಮಠ, ಮೋಟಗಿಮಠ, ಸಿದ್ಧೇಶ್ವರ ದೇವಸ್ಥಾನ, ಗಣೇಶ ಮಂದಿರ, ರಾಯರ ಗುಡಿ, ಹನುಮಾನ ಮಂದಿರ ಸೇರಿ ತಾಲೂಕಿನ ದೇವಸ್ಥಾನಗಳಿಗೂ ಪ್ರವೇಶಕ್ಕೆ ಅವಕಾಶವಿಲ್ಲ.

    ಪ್ರಮುಖ ಬಡಾವಣೆಗಳು ನಿರ್ಬಂಧಿತ ಪ್ರದೇಶ: ವಿಕ್ರಂಪುರ, ಶಾಂತಿನಗರ, ಶಂಕರನಗರ, ಸಾಯಿನಗರ, ನಾಲಬಂದ ಗಲ್ಲಿ, ಡೌರಿ ಗಲ್ಲಿ, ದೇಸಾಯಿ ವಾಡೆ ಹತ್ತಿರ, ಗಸ್ತಿ ಪ್ಲಾಟ್ ಸೀಲ್‌ಡೌನ್ ಆಗಿವೆ. ಜನರು ಸಂಚಾರ ಮಾಡದಂತೆ ನಿರ್ಬಂಧಿತ ಪ್ರದೇಶವೆಂದು ಪುರಸಭೆಯವರು ಫಲಕ ಅಳವಡಿಸಿ ಬಂದ್ ಮಾಡಿದ್ದಾರೆ.

    ಅಕ್ರಮ ವಲಸಿಗರ ಮೇಲೆ ತೀವ್ರ ನಿಗಾ: ಗಡಿ ಪ್ರದೇಶ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಯಾರೂ ಬರುವಂತಿಲ್ಲ. ಆದರೂ ಕಳ್ಳ ಮಾರ್ಗದಿಂದ ಬರುವ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಸಿಪಿಐ ಶಂಕರಗೌಡ ಬಸನಗೌಡರ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಜನರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ವ್ಯಾಪಾರಸ್ಥರು ಮನವಿ ಮಾಡಿದ್ದಾರೆ. ಏಕೆಂದರೆ, ಕೆಲವು ಖಾಸಗಿ ಆಸ್ಪತ್ರೆಗಳು ಕೂಡ ಕ್ವಾರಂಟೈನ್ ಆಗಿದ್ದರಿಂದ ವೈದ್ಯರ ಸೇವೆ ಸಿಗುತ್ತಿಲ್ಲ.

    ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ರೋಗಿಗಳಿಗೆ ಚಿಕಿತ್ಸೆ ಸಿಗುವಂತೆ ತಾಲೂಕಾಡಳಿತ ವ್ಯವಸ್ಥೆ ಕಲ್ಪಿಸಬೇಕೆಂದು ವ್ಯಾಪಾರಸ್ಥರಾದ ರಾಜನ ಸೋಮಯ್ಯ, ಶೇಖರ ಕೋಲಾರ, ಬಾಳಪ್ಪ ಬುಕಿಟಗಾರ, ಶಿವು ಬುರ್ಲಿ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts