More

    11ಕ್ಕೆ ರಾಜ್ಯಮಟ್ಟದ ಸಮಾವೇಶ, ಗುರುವಂದನಾ ಕಾರ್ಯಕ್ರಮ

    ಶಿವಮೊಗ್ಗ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪುಷ್ಪಗಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಫೆ.11ರ ಮಧ್ಯಾಹ್ನ 3ಕ್ಕೆ ಶಿಕಾರಿಪುರದ ಹೊಸ ಸಂತೆ ಮೈದಾನದಲ್ಲಿ ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘಗಳ ರಾಜ್ಯ ಮಟ್ಟದ ಸಮಾವೇಶ ಹಾಗೂ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

    ಶಿಕಾರಿಪುರದಲ್ಲಿ ಏರ್ಪಡಿಸಿರುವುದು ನಮ್ಮ ಸಂಸ್ಥೆಯ 3ನೇ ವರ್ಷದ ಕಾರ್ಯಕ್ರಮವಾಗಿದೆ. ಫೆ.11ರ ಮಧ್ಯಾಹ್ನ 1ಕ್ಕೆ ವಿವಿಧ ಜನಪದ ಕಲಾತಂಡಗಳಿಂದ ಭವ್ಯ ಮೆರವಣಿಗೆ, ವಚನ ಗಾಯನದ ಬಳಿಕ ಸಮಾವೇಶದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನಾಗಯ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕ ಬಿ.ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಚಿತ್ರನಟಿ ತಾರಾ ಸೇರಿ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸುಮಾರು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
    ಪುಷ್ಪಗಿರಿ ಸ್ವಸಹಾಯ ಸಂಘಗಳು 9 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. 2,425 ಸ್ವಸಹಾಯ ಸಂಘಗಳ ಮೂಲಕ 40 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಅನುಕೂಲವಾಗಿದೆ. ಗ್ರಾಮೀಣ ಜನರ ಸಮಸ್ಯೆಗಳಿಗೆ ಸಂಸ್ಥೆ ಸ್ಪಂದಿಸುತ್ತಿದೆ. ಸ್ವ ಉದ್ಯೋಗ ತರಬೇತಿ, ಸಾವಯವ ಕೃಷಿ, ಆರೋಗ್ಯ, ನೈರ್ಮಲ್ಯ, ಯುವ ರೈತ ಸಂಘಗಳ ಸ್ಥಾಪನೆ, ವಿದ್ಯಾರ್ಥಿ ಸಂಘಗಳ ರಚನೆಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ ಎಂದು ಹೇಳಿದರು.
    ಶಿಕಾರಿಪುರದಲ್ಲಿ ಈ ವರ್ಷದಿಂದ ವಿದ್ಯಾರ್ಥಿ ಸಂಘಗಳ ರಚನೆಗೆ ಆದ್ಯತೆ ನೀಡಲಾಗಿದೆ. ಸಂಘದ ಮೂಲಕ ಶೈಕ್ಷಣಿಕ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು. ಯುವ ರೈತ ಸಂಘಗಳನ್ನೂ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಎಂ.ತಿಮ್ಮಪ್ಪ, ಜಯರಾಜ್, ಎಂ.ಆರ್.ಸುರೇಶ್, ಗಜೇಂದ್ರಪ್ಪ, ಅರುಣ್‌ಕುಮಾರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts