More

    ಆಸ್ತಿ ರಕ್ಷಣೆಗೆ ‘ಕೋಟಿವೃಕ್ಷ’ ಯೋಜನೆ

    ಬೆಳಗಾವಿ: ಸರ್ಕಾರಿ ಆಸ್ತಿ ಸಂರಕ್ಷಣೆ ಹಾಗೂ ಅರಣ್ಯೀಕರಣಕ್ಕಾಗಿ 2021-22ನೇ ಸಾಲಿನಲ್ಲಿ ಕೋಟಿ ಗಿಡಗಳನ್ನು ನೆಡಲು ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಂದಾಗಿದೆ.

    ಗ್ರಾಮೀಣ ಪ್ರದೇಶಗಳಲ್ಲಿರುವ ಸಾವಿರಾರು ಎಕರೆ ಸರ್ಕಾರಿ ಗಾಯರಾಣ, ಮೈದಾನ, ಸಾರ್ವಜನಿಕ ಸ್ಥಳ ಸೇರಿದಂತೆ ಸರ್ಕಾರಿ ಆಸ್ತಿಗಳಿಗೆ ಸೂಕ್ತ ರಕ್ಷಣೆ ಇಲ್ಲದ್ದರಿಂದ ಅವು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಹೀಗಾಗಿ ಸರ್ಕಾರಿ ಆಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ‘ಕೋಟಿವೃಕ್ಷ ಯೋಜನೆ’ ಹಮ್ಮಿ ಕೊಂಡಿದ್ದು, ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯಡಿ ಸರ್ಕಾರಿ ಆಸ್ತಿಗಳಲ್ಲಿ ಸಸಿ ನೆಡಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

    ಒತ್ತುವರಿ ತಡೆಗೆ ಅಗತ್ಯ ಕ್ರಮ: ಅರಣ್ಯೀಕರಣಕ್ಕಾಗಿ ಹುಣಸೆ, ಬೇವು, ಮಾವು ಹಾಗೂ ವಿವಿಧ ಹಣ್ಣುಗಳ 1 ಕೋಟಿ ಸಸಿಗಳನ್ನು ಬೆಳೆಸಲು ಜಿಲ್ಲಾ ಪಂಚಾಯಿತಿ, ಅರಣ್ಯ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಜಿಲ್ಲೆಯ 506 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಗೆ ಸೇರಿದ 1ಲಕ್ಷಕ್ಕೂ ಅಧಿಕ ಸರ್ಕಾರಿ ಆಸ್ತಿಗಳಿವೆ. ಆದರೆ, ಸಮರ್ಪಕ ನಿರ್ವಹಣೆ, ಸೂಕ್ತ ಸಂರಕ್ಷಣೆ ಇಲ್ಲದ್ದರಿಂದ ಆಸ್ತಿಗಳು ಒತ್ತುವರಿಯಾಗಿವೆ. ಇವುಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಈ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ.

    ಏಪ್ರಿಲ್‌ನಲ್ಲಿ ಅನುಷ್ಠಾನ: ಸರ್ಕಾರದ ಆಸ್ತಿಯನ್ನೂ ಕೆಲವರು ನಕಲಿ ದಾಖಲೆ ಸೃಷ್ಟಿಸಿಕೊಂಡು ಮಾರಾಟ ಮಾಡಿದ್ದಾರೆ. ಮತ್ತೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ, ಕಟ್ಟಡಗಳ ನಿರ್ಮಾಣದ ಹೆಸರಿನಲ್ಲಿ ಪ್ರತಿವರ್ಷ ನೂರಾರು ಮರಗಳನ್ನು ಕಟಾವು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಅವಧಿಯಲ್ಲಿ ಸರ್ಕಾರಿ ಆಸ್ತಿಗಳ ಸಂರಕ್ಷಣೆ, ಅರಣ್ಯ ಪ್ರದೇಶ ಮತ್ತು ಮರಗಳ ಸಂಖ್ಯೆ ಹೆಚ್ಚಳಕ್ಕಾಗಿ ‘ಕೋಟಿವೃಕ್ಷ ಯೋಜನೆ’ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಎಲ್ಲ ಗ್ರಾಪಂಗಳಿಂದ ಸರ್ಕಾರಿ ಆಸ್ತಿಗಳ ವಿವರ ಪಡೆದುಕೊಳ್ಳಲಾಗುತ್ತಿದ್ದು, ಕೆಲವು ಕಡೆ ಗಿಡ ನೆಡಲು ಸ್ಥಳ ಗುರುತಿಸಿ ಅಂತಿಮಗೊಳಿಸಲಾಗಿದೆ. 2021ರ ಏಪ್ರಿಲ್ ಮೊದಲ ವಾರದಿಂದಲೇ ‘ಕೋಟಿವೃಕ್ಷ ಯೋಜನೆ’ಯಡಿ ಸಸಿ ನೆಡುವ ಕಾರ್ಯ ಆರಂಭಿಸಲಾಗುವುದು ಎಂದು ಜಿಪಂ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕೋಟಿವೃಕ್ಷ ಯೋಜನೆಯಡಿ ಸಸಿ ನೆಡಲು ಕ್ರಿಯಾಯೋಜನೆ ತಯಾರಿಸಲಾಗುತ್ತಿದ್ದು, ಅರಣ್ಯ ಇಲಾಖೆಗಳ ವಲಯಗಳಲ್ಲಿ 1 ಕೋಟಿ ವಿವಿಧ ತಳಿ ಸಸಿಗಳ ನರ್ಸರಿ ಕೆಲಸ ಆರಂಭಿಸಲಾಗಿದೆ. 2021ರ ಏಪ್ರಿಲ್‌ನಲ್ಲಿ 1 ಕೋಟಿ ಗುಂಡಿ ತೆಗೆಯಲಾಗುವುದು. ಬಳಿಕ ಆಗಸ್ಟ್ ತಿಂಗಳಲ್ಲಿ ಸಸಿ ನೆಡಲು ಆರಂಭಿಸಲಾಗುವುದು. ಇದರಿಂದ ಸಾವಿರಾರು ಕಾರ್ಮಿಕರಿಗೂ ಉದ್ಯೋಗ ಸಿಗಲಿದೆ. ಅಲ್ಲದೆ, ಸರ್ಕಾರಿ ಆಸ್ತಿಗಳ ಸಂರಕ್ಷಣೆ ಜತೆಗೆ ಅರಣ್ಯ ಪ್ರದೇಶವೂ ಹೆಚ್ಚಳವಾಗಲಿದೆ.
    | ಎಸ್.ಬಿ. ಮುಳ್ಳಳ್ಳಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ)

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts