More

    ಮೋದಿ ತವರಲ್ಲಿ ಮತದಾರನ ಮನ…

    ರಾಘವ ಶರ್ಮ ನಿಡ್ಲೆ

    ವಡ್​ನಗರ (ಗುಜರಾತ್): ಗುಜರಾತ್​ನ ಘಟಾನುಘಟಿ ರಾಜಕಾರಣಿಗಳಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಆನಂದಿಬೆನ್ ಪಟೇಲ್, ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಸೇರಿ ಅನೇಕರು ಮೆಹಸಾನ ಜಿಲ್ಲೆಗೆ ಸೇರಿದವರು. ಕಳೆದ ಚುನಾವಣೆ ವೇಳೆ ಮೆಹಸಾನ ಜಿಲ್ಲೆಯಲ್ಲೇ ಪಾಟಿದಾರ ಆಂದೋಲನ ವ್ಯಾಪಕವಾಗಿದ್ದರಿಂದ ಪ್ರಧಾನಿ ತವರು ಜಿಲ್ಲೆಯಲ್ಲಿ ಬಿಜೆಪಿ ಭಾರಿ ಬೆವರು ಹರಿಸಿತ್ತು. ಎಲ್ಲಕ್ಕಿಂತ ಅಚ್ಚರಿ ಎಂದರೆ ಪ್ರಧಾನಿ ಮೋದಿ ಹುಟ್ಟೂರು ವಡ್​ನಗರದ ಪ್ರಭಾವಳಿ ಮಧ್ಯೆಯೂ ಊಂಜಾ ವಿಧಾನಸಭೆಯಲ್ಲಿ (ವಡ್​ನಗರ ಊಂಜಾ ವ್ಯಾಪ್ತಿಯಲ್ಲಿದೆ) ಬಿಜೆಪಿ ನೆಲಕಚ್ಚಿ, ಕಾಂಗ್ರೆಸ್​ನ ಆಶಾ ಪಟೇಲ್ ಗೆಲುವಿನ ನಗಾರಿ ಬಾರಿಸಿದ್ದರು. ಆದರೆ, ಎರಡೇ ವರ್ಷದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆಶಾ ಪಟೇಲ್ ಬಿಜೆಪಿ ಸೇರಿ, ಉಪ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ ಬಿಜೆಪಿ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಿದರು.

    ಅಂದು ಈ ಭಾಗದಲ್ಲಿ ಪಾಟಿದಾರ ಆಂದೋಲನದ ಮುಂಚೂಣಿ ವಹಿಸಿದ್ದ ಆಶಾ, ಹಾರ್ದಿಕ್ ಪಟೇಲ್​ರೊಂದಿಗೆ ಒಡನಾಟವಿಟ್ಟುಕೊಂಡು ಜನಪ್ರಿಯರಾಗಿದ್ದರು. ದುರದೃಷ್ಟ ವಶಾತ್, ಅನಾರೋಗ್ಯದಿಂದಾಗಿ 2021ರಲ್ಲಿ ಮೃತಪಟ್ಟರು. ಹೀಗಾಗಿ, ಕಿರಿತ್​ಕುಮಾರ್ ಕೇಶವ್​ಲಾಲ್ ಎಂಬವರಿಗೆ ಟಿಕೆಟ್ ನೀಡಿರುವ ಬಿಜೆಪಿ, ಪಾಟಿದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದಂತೆ ಕಾಣುತ್ತಿದೆ. ಊಂಜಾ ವಿಧಾನಸಭೆಯಲ್ಲಿ ಸುಮಾರು 77 ಸಾವಿರ ಪಟೇಲ್ ಸಮುದಾಯದ ಮತದಾರರಿದ್ದಾರೆ. 2017ರಲ್ಲಿ ಪಟೇಲರ ಆಕ್ರೋಶಕ್ಕೆ ತುತ್ತಾಗಿದ್ದ ಬಿಜೆಪಿಯು ಭಾರಿ ಮತಗಳ ಅಂತರದಿಂದ ಸೋತಿತ್ತು!

    ಈಗ ಹೇಗಿದೆ ವಡ್​ನಗರ?

    ಅಹಮದಾಬಾದ್​ನಿಂದ ಸುಮಾರು 110 ಕಿಮೀ ದೂರದಲ್ಲಿರುವ ಮೋದಿ ಹುಟ್ಟೂರು ವಡ್​ನಗರ ನೋಡಲೇಬೇಕಾದ ಪಟ್ಟಣ. ಸಾಮಾನ್ಯ ಹಳ್ಳಿಯಂತಿದ್ದ ವಡ್​ನಗರ ಈಗ ಪಟ್ಟಣವಾಗಿ ಬೆಳೆದುನಿಂತಿದೆ. ಹತ್ತಾರು ಕಟ್ಟಡಗಳು, ನೂರಾರು ಅಂಗಡಿ ಮುಂಗಟ್ಟುಗಳು, ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಬಸ್ಸು, ರೈಲು ನಿಲ್ದಾಣ, ಎಂಬಿಬಿಎಸ್ ಕಾಲೇಜು, ಹೆಚ್ಚಿದ ವ್ಯಾಪಾರ ವರ್ಗದಿಂದಾಗಿ ಪಟ್ಟಣ ಗಿಜಿಗುಡುತ್ತಿದೆ. 2017ರ ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದ್ದ ವಡ್​ನಗರ ಐದು ವರ್ಷಗಳಲ್ಲಿ ಭಾರಿ ಬದಲಾವಣೆಗೆ ಸಾಕ್ಷಿಯಾಗಿದೆ. 250ರಷ್ಟಿದ್ದ ಆಟೋ ರಿಕ್ಷಾಗಳ ಸಂಖ್ಯೆ ಈಗ 1000ಕ್ಕೇರಿದೆ. 10 ವರ್ಷಗಳ ಹಿಂದೆ ರೈಲನ್ನೇ ಕಂಡಿರದ ವಡ್​ನಗರದಲ್ಲಿ ಸದ್ಯ ದಿನಕ್ಕೆ ಮೂರು ರೈಲುಗಳು ಹಾದು ಹೋಗುತ್ತವೆ ಎಂದರೆ ನೀವೇ ಅರ್ಥಮಾಡಿಕೊಳ್ಳಿ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುಭಾಷ್ ಪ್ರಜಾಪತಿ.

    ಸರೋವರ ಅಭಿವೃದ್ಧಿ

    ಕೆಲ ವರ್ಷಗಳ ಹಿಂದೆ ಕೊಳಚೆ ನೀರಿನಿಂದಲೇ ತುಂಬಿದ್ದ ವಡ್​ನಗರದ ಕರೆಯನ್ನು ಸುಸಜ್ಜಿತ ಸರೋವರವನ್ನಾಗಿ ಮಾರ್ಪಡಿಸಲಾಗಿದೆ. ರಿವರ್​ಫ್ರಂಟ್ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸರೋವರದ ಎದುರು ಆರ್ಟ್ ಗ್ಯಾಲರಿಯೊಂದನ್ನು ನಿರ್ಮಾಣ ಮಾಡಲಾಗಿದ್ದು, ಪ್ರಧಾನಿ ಮೋದಿ ಬಾಲ್ಯದಿಂದ ಹಿಡಿದು, ಉನ್ನತ ಸ್ಥಾನಕ್ಕೇರಿದ ಕುರಿತ ಸಂಪೂರ್ಣ ಚಿತ್ರಾವಳಿ ಹಾಗೂ ಮಾಹಿತಿ ಒದಗಿಸಲಾಗಿದೆ. ಗ್ಯಾಲರಿ ನಿರ್ವಣವಾದ್ದರಿಂದ ನಮಗೆಲ್ಲ ಶಾಶ್ವತ ನೌಕರಿ ಸಿಕ್ಕಿತು. ರೂ. 8000 ಸಂಬಳ ಕೊಡುತ್ತಾರೆ. ಇಲ್ಲಿಯವರೆಗೆ ನಾನು ದಿನಗೂಲಿ ಮಾಡುತ್ತಿದ್ದೆ ಎಂದರು ಗಾರ್ಡ್ ಭರತ್ ಭಾಯ್ ಪಟೇಲ್.

    ಅಭಿವೃದ್ಧಿಯಿಂದ ಲಾಭ

    ಹಳ್ಳಿಗಳು ಅಭಿವೃದ್ಧಿಯಾದರಷ್ಟೇ ನೆಮ್ಮದಿ ಜೀವನ ಮಾಡಬಹುದು. ಈ ವಿಷಯದಲ್ಲಿ ಮೋದಿ ಅವರಿಗೆ ಧನ್ಯವಾದ ಹೇಳಲೇಬೇಕು ಎನ್ನುತ್ತಾರೆ ಜಮೀನು ಮಾರಾಟ-ಖರೀದಿಯ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಪುರುಷೋತ್ತಮ್ ಪಟೇಲ್. ‘ಮೊದಲು ನಾನು ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಿದೆ. ಹೆಚ್ಚಿನ ಸಂಪಾದನೆಯಾಗುತ್ತಿರಲಿಲ್ಲ. ಆದರೆ, ಮೋದಿ ಅವರು ವಡ್​ನಗರ ಅಭಿವೃದ್ಧಿಯ ಸುಳಿವು ನೀಡಿದ ನಂತರ ಜಮೀನು ಮಾರಾಟ-ಖರೀದಿ ದಲ್ಲಾಳಿ ಕೆಲಸ ಶುರು ಮಾಡಿದ್ದೇನೆ. ವರ್ಷಕ್ಕೆ ರೂ 5-6 ಲಕ್ಷ ರೂ. ಸಂಪಾದಿಸುತ್ತೇನೆ’ ಎಂದು ಸಂತಸ ಹಂಚಿಕೊಂಡರು. ವಡ್ ನಗರದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಣ್ಣದಾದ ಕಟ್ಲೇರಿ ಅಂಗಡಿ ಇಟ್ಟುಕೊಂಡಿರುವ ಸಾಹಿರಾ ಮನ್ಸೂರಿ, ‘ಮೋದಿ ಅವರಿಂದ ನಾವೆಲ್ಲರೂ ಖುಷಿಯಿಂದ ಜೀವನ ಸಾಗಿಸುತ್ತಿದ್ದೇವೆ. ನನ್ನ ಇಬ್ಬರು ಹೆಣ್ಣುಮಕ್ಕಳು ಓದಿ, ಕೆಲಸ ಮಾಡುತ್ತಿದ್ದಾರೆ. ಹಿರಿಯ ಮಗಳು ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮಹಿಳೆಯರ ಬಗ್ಗೆ ಅವರು ತೋರುವ ಕಾಳಜಿ ಇಷ್ಟವಾಗುತ್ತದೆ’ ಎನ್ನುತ್ತಾರೆ.

    ವಲ್ಸಾಡ್-ವಡ್​ನಗರ ರೈಲು

    ವಡ್​ನಗರಿಂದ ಸುಮಾರು 500 ಕಿಮೀ ದೂರದ ವಲ್ಸಾಡ್​ಗೆ ಹೊಸ ರೈಲೊಂದನ್ನು ಪರಿಚಯಿಸಲಾಗಿದ್ದು, ಸುತ್ತಮುತ್ತಲ ಪ್ರಯಾಣಿಕರೆಲ್ಲರೂ ಈಗ ಖುಷಿಯಾಗಿದ್ದಾರೆ. ಇದುವರೆಗೆ ಸುತ್ತಮುತ್ತಲಿನ ಜನರು ಬಸ್ಸಿನಲ್ಲಿ ಸುಮಾರು ರೂ. 700-800 ಖರ್ಚು ಮಾಡಿ ಪ್ರಯಾಣಿಸಬೇಕಿತ್ತು. ರೈಲಿನಲ್ಲಿ ಸ್ಲೀಪರ್ ಕೋಚ್​ನಲ್ಲಿ ರೂ. 200ಕ್ಕೆ ವಲ್ಸಾಡ್ ತಲುಪಬಹುದು.

    ತೃಪ್ತಿ-ಅತೃಪ್ತಿಗಳ ನಡುವೆ

    ವಡ್​ನಗರದ ಕೆಲ ಮತದಾರರು ಭರ್ಜರಿ ವಿಕಾಸವಾಗಿದೆ ಎಂದರೂ, ಮತ್ತೆ ಕೆಲವರು 27 ವರ್ಷಗಳಿಂದ ಬಿಜೆಪಿ ಸರ್ಕಾರವಿರುವುದರಿಂದ ಹೊಸ ಸರ್ಕಾರ ಬೇಕು ಎಂದು ಬಯಸುತ್ತಿದ್ದಾರೆ. ಕೆಲವರು ಬಹಿರಂಗವಾಗಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ವಡ್​ನಗರದ ಮೆಕ್ಯಾನಿಕ್ ಶಬ್ಬೀರ್ ಭಾಯ್, ಈ ಭಾರಿ ಕಾಂಗ್ರೆಸ್​ಗೆ ವೋಟು ಹಾಕಲ್ಲ, ಆಮ್ ಆದ್ಮಿ ಅಭ್ಯರ್ಥಿ ಗೆಲ್ಲಬೇಕು ಎಂದಾಗ, ಪಕ್ಕದ ಅಂಗಡಿಯಲ್ಲಿ ದೋಖ್ಲಾ ತಿನಿಸು ಮಾರುತ್ತಿದ್ದ ಆತನ ಸ್ನೇಹಿತ ಮಹೇಶ್ ಭಾಯ್, ಬಿಜೆಪಿಯಿಂದ ನೆಮ್ಮದಿ ಇದೆ. ಮತ್ಯಾಕೆ ಬೇರೆ ಪಾರ್ಟಿ ಬೇಕು ಎಂದು ಮರು ಪ್ರಶ್ನೆ ಹಾಕಿದ.

    ಚಹಾ ಅಂಗಡಿ ಏನಾಯ್ತು?

    ತಾನು ಬಾಲ್ಯದಲ್ಲಿದ್ದಾಗ ಇದೇ ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದೆ ಎಂದು ಮೋದಿ ಹೇಳಿದ್ದರಿಂದ ವಡ್​ನಗರ ರೈಲು ನಿಲ್ದಾಣ ದೇಶವ್ಯಾಪಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಮೂರ್ನಾಲ್ಕು ತಿಂಗಳ ಹಿಂದೆ ಇಲ್ಲಿದ್ದ ಚಹಾ ಅಂಗಡಿಯನ್ನು ದೆಹಲಿಗೆ ಸ್ಥಳಾಂತರ ಮಾಡಲಾಯಿತೆಂದು ನಿಲ್ದಾಣದ ಸಿಬ್ಬಂದಿಯೋರ್ವರು ಮಾಹಿತಿ ಹಂಚಿಕೊಂಡರು.

    ಮೋದಿ ಮನೆಯಲ್ಲಿ ಯಾರಿದ್ದಾರೆ?

    ವಡ್​ನಗರದಿಂದ ಸುಮಾರು ಒಂದೂವರೆ ಕಿಮೀ ಹಳ್ಳಿಯೊಳಗೆ ತೆರಳಿದ ನಂತರ ಸಿಗುವ ಲಾಲಾಲೆವು ಸೀಡಿ ಎಂಬ ಕಾಲೊನಿಯಲ್ಲಿರುವ ಮನೆಯಲ್ಲಿ ನರೇಂದ್ರ ಮೋದಿ ಜನಿಸಿದ್ದರು. ನಂತರ ಈ ಮನೆಯನ್ನು ಸೋದರ ಪಂಕಜ್ ಮೋದಿ ಅವರಿಗೆ ನೀಡಿದ್ದರಿಂದ ನರೇಂದ್ರ ಮೋದಿ ಪಕ್ಕದಲ್ಲಿದ್ದ ಮತ್ತೊಂದು ಮನೆಗೆ ತೆರಳಿದರೆಂದು ಸ್ಥಳೀಯರು ಹೇಳುತ್ತಾರೆ. ಪ್ರಸ್ತುತ ಈ ಮನೆಯಲ್ಲಿ ಮೋದಿಯವರ ಕುಟುಂಬಸ್ಥರು ಯಾರೂ ನೆಲೆಸಿಲ್ಲ. ಮೋದಿಯವರ ಮತ್ತೋರ್ವ ಸೋದರ ಸೋಮಭಾಯ್ ಅವರು ವಡ್​ನಗರ ವೃದ್ಧಾಶ್ರಮದಲ್ಲಿ ನೆಲೆಸಿದ್ದಾರೆ ಎಂದು ಸ್ಥಳೀಯರು ತಿಳಿಸುತ್ತಾರೆ. ಮೋದಿ ಜನಿಸಿದ್ದ ಮನೆಯನ್ನು ನರ್ಮದಾ ಬೆನ್ ಎಂಬ ಮಹಿಳೆಗೆ ಬಾಡಿಗೆಗೆ ನೀಡಲಾಗಿದೆ. ‘ನಾನು ತಿಂಗಳಿಗೆ ರೂ 1000 ಬಾಡಿಗೆ ನೀಡುತ್ತೇನೆ’ ಎನ್ನುತ್ತಾರೆ ನರ್ಮದಾ ಬೆನ್. ‘ನಮ್ಮ ಕಾಲನಿಯ ಹುಡುಗ ಈ ಪ್ರಧಾನಿಯಾಗಿರುವುದು ಹೆಮ್ಮೆಯೆನಿಸುತ್ತದೆ. ಮೋದಿ ಮುಖ್ಯಮಂತ್ರಿಯಾಗುವ ಮುನ್ನ ಮದುವೆಯೊಂದರಲ್ಲಿ ಭೇಟಿ ಮಾಡಿದ್ದೆ. ನಂತರ, ಭೇಟಿ ಮಾಡಲೇ ಇಲ್ಲ ಎನ್ನುತ್ತಾರೆ’ ಪಕ್ಕದ ಮನೆ ನಿವಾಸಿ ಸುರೇಶ್​ಭಾಯ್.

    ಮೊದಲ ಹಂತದಲ್ಲಿ ಶೇ. 57 ಮತದಾನ

    ಅಹಮದಾಬಾದ್: ಗುಜರಾತ್ ವಿಧಾನಸಭೆಗೆ ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ. 57ರಷ್ಟು ಮತದಾನವಾಗಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 5ರವರೆಗೂ ನಡೆಯಿತು. ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    2017ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಡಿಮೆ ಮತದಾನವಾಗಿದೆ. 2017ರಲ್ಲಿ ಶೇ. 68ರಷ್ಟು ಮತದಾನವಾಗಿತ್ತು. 19 ಜಿಲ್ಲೆಗಳ 89 ಕ್ಷೇತ್ರಗಳಿಗೆ 70 ಮಹಿಳೆಯರು ಸೇರಿ 788 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

    ಚುನಾವಣಾ ಆಯೋಗಕ್ಕೆ ದೂರು: ಈ ಮಧ್ಯೆ, ರಾಜ್ಯದ ಸೌರಾಷ್ಟ್ರ ಪ್ರದೇಶದ ಕನಿಷ್ಠ 50 ಮತಗಟ್ಟೆಗಳಲ್ಲಿ ಇವಿಎಂ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಿದೆ.

    ಚುನಾವಣಾ ಆಯೋಗದಿಂದ ನೇರ ಪ್ರಸಾರ: ಮತದಾನದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು 19 ಜಿಲ್ಲೆಗಳ 13,065 ಮತಗಟ್ಟೆಗಳ ನೇರ ಪ್ರಸಾರ ಮಾಡಿತ್ತು. ಮತದಾನ ಪ್ರಕ್ರಿಯೆ ಮೇಲೆ ತೀವ್ರ ನಿಗಾ ಇಡಲು ರಾಜ್ಯದ ಶೇ. 50ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ನೇರ ಪ್ರಸಾರದ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು ಎಂದು ಮುಖ್ಯ ಚುನಾವಣಾಧಿಕಾರಿ ಪಿ. ಭಾರತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts