More

    ಖಾಕಿ ಖೆಡ್ಡಾಗೆ ಬಿದ್ದ ಹಂತಕರು

    ಕೋಲಾರ: ಪ್ರತ್ಯೇಕ ಎರಡು ಕೊಲೆ ಪ್ರಕರಣಗಳಿಗೆ ಸಂಬಂಸಿದಂತೆ ಮಹಿಳೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಕೋಲಾರ ಗ್ರಾಮಾಂತರ ಹಾಗೂ ಮಾಸ್ತಿ ಠಾಣೆಯ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು.
    ಬ್ಲಾಕ್‌ಮೇಲ್‌ಗೆ ಬೇಸತ್ತು ಕೊಲೆ:

    ಕೋಲಾರ ತಾಲೂಕಿನ ಅಮ್ಮೇರಹಳ್ಳಿ ಕೆರೆಯಲ್ಲಿ 2023ರ ಏಪ್ರಿಲ್ 19ರಂದು ಮಹಿಳೆಯ ಶವ ಪತ್ತೆಯಾಗಿತ್ತು. ಕೊಲೆ ಮಾಡಿ ಮೃತದೇಹಕ್ಕೆ ಕಲ್ಲುಗಳನ್ನು ಕಟ್ಟಿ ನೀರಿಗೆ ಎಸೆಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು.
    ಕೋಲಾರದ ನೂರ್‌ನಗರ ವಾಸಿ, ಬೆಂಗಳೂರಿನ ಎಚ್.ಎ.ಎಲ್., ಬಸವನಗರದ ರಾಮಯ್ಯರೆಡ್ಡಿ ಕಾಲನಿಯಲ್ಲಿ ಮೊಬೈಲ್ ಸರ್ವೀಸ್ ಇಟ್ಟುಕೊಂಡಿದ್ದ ಅಬ್ರಾರ್ ಅಹಮದ್‌ಗೆ ಅಂಗಡಿಗೆ ಬರುತ್ತಿದ್ದ ಸುಲ್ತಾನಾ ತಾಜ್ ಎಂಬ ಮಹಿಳೆ ಪರಿಚಯವಾಗಿತ್ತು. ಇದು ಅನೈತಿಕ ಸಂಬಂಧಕ್ಕೆ ತಿರುವು ಪಡೆದುಕೊಂಡಿತ್ತು. ಈ ವೇಳೆ ಆಕೆ, ಇಬ್ಬರ ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡಿ ಸಾಕಷ್ಟು ಹಣ ಪಡೆದುಕೊಂಡಿದ್ದಳು. ಈ ಬಗ್ಗೆ ಅಬ್ರಾರ್ ಅಹಮದ್ ಎಚ್‌ಎಎಲ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪೊಲೀಸರು ರಾಜಿ ಮಾಡಿದ್ದರೂ ಕಿರುಕುಳ ಮುಂದುವರಿದಿತ್ತು. ಇದರಿಂದ ರೋಸಿಹೋಗಿದ್ದ ಅಬ್ರಾರ್ ಅಹಮದ್, ಕೋಲಾರದಲ್ಲಿದ್ದ ಸಂಬಂಧಿ ರಹಮತ್ ನಗರದ ಸಾದಿಕ್ ಪಾಷಾ ನೆರವಿನೊಂದಿಗೆ ಆಕೆಯನ್ನು ಪುಸಲಾಯಿಸಿ, ಬೆಂಗಳೂರಿನಿಂದ ಅಮ್ಮೇರಹಳ್ಳಿ ಕೆರೆಯ ಬಳಿಗೆ ಕರೆ ತಂದು ಕೊಲೆ ಮಾಡಿ, ಶವವನ್ನು ಕರೆಗೆ ಎಸೆದು ಪರಾರಿಯಾಗಿದ್ದರು. ಖದೀಮರು ಬರೊಬ್ಬರಿ 45 ಸಿಮ್‌ಕಾರ್ಡ್ ಬಳಸುವ ಮೂಲಕ ಯಾವುದೇ ದಾಖಲೆ ಸಿಗದಂತೆ ತಂತ್ರ ಮಾಡಿದ್ದರು ಎಂದು ಎಸ್‌ಪಿ ತಿಳಿಸಿದರು.
    6 ಲಕ್ಷ ಕರೆಗಳ ಪರಿಶೀಲನೆ:

    ತನಿಖೆಯಲ್ಲಿ ಮಹಿಳೆ ಗುರುತು ಪತ್ತೆ ಮಾಡಿದ ಪೊಲೀಸರು, ಸುಮಾರು 6 ಲಕ್ಷ ಕರೆಗಳ ಪರಿಶೀಲನೆ ನಡೆಸಿದ ಬಳಿಕ ಆರೋಪಿ ಅಬ್ರಾರ್ ಅಹಮದ್ ಹಾಗೂ ಸಾದಿಕ್ ಪಾಷಾರನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು.
    ಎಎಸ್ಪಿ ರವಿಶಂಕರ್, ಡಿವೈಎಸ್ಪಿ ಎಂ.ಎಚ್.ನಾಗ್ತೆ, ವೃತ್ತ ನಿರೀಕ್ಷಕ ಕಾಂತರಾಜ್, ಪಿಎಸ್‌ಐ ಭಾರತಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ೫ ಸಾವಿರ ರೂ. ಬಹುಮಾನ ಘೋಷಿಸಿದರು.

    ತಿಳಿ ಹೇಳಿದ್ದಕ್ಕೆ ಕೊಲೆ:
    ಮಾಸ್ತಿ ಠಾಣೆ ವ್ಯಾಪ್ತಿಯ ದಿನ್ನೆಹಳ್ಳಿ ಗ್ರಾಮದಲ್ಲಿ ಮೋಟಾರು ರಿಪೇರಿ ಮಾಡುವ ಗುಂಡಪ್ಪ ಎಂಬುವವರ ಶವ ಪಾಳುಬಾವಿಯಲ್ಲಿ ಪತ್ತೆಯಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಇದು ಕೂಡ ಅನೈತಿಕ ಸಂಬಂಧದ ವಿಚಾರಕ್ಕೆ ಕೊಲೆಯಾಗಿದೆ ಎಂಬ ಸತ್ಯ ಬಯಲಾಗಿದೆ.
    ಅದೇ ಗ್ರಾಮದ ನಾರಾಯಣಸ್ವಾಮಿ, ಗುಂಡಪ್ಪನ ತಮ್ಮನ ಪತ್ನಿ ಕವಿತಾ ಜತೆ ಅನೈತಿಕ ಸಂಬಂಧ ಹೊಂದಿದ್ದ. ಈ ಬಗ್ಗೆ ತಿಳಿದ ಗುಂಡಪ್ಪ, ಸಹೋದರ ಹಾಗೂ ಆತನ ಪತ್ನಿಗೆ ಬುದ್ಧಿ ಹೇಳಿ, ಸ್ವಲ್ಪ ದಿನದ ಮಟ್ಟಿಗೆ ತಮಿಳುನಾಡಿಗೆ ಹೋಗುವಂತೆ ತಿಳಿಸಿದ್ದ.
    ಇದರಿಂದ ಆಕ್ರೋಶಗೊಂಡ ಕವಿತಾ, ಪ್ರಿಯಕರ ನಾರಾಯಣಸ್ವಾಮಿಗೆ ತಿಳಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಮೋಟಾರು ರಿಪೇರಿಗೆ ಗುಂಡಪ್ಪ ಜತೆ ಹೋಗಿದ್ದ ನಾರಾಯಣಸ್ವಾಮಿ, ಅಲ್ಲಿಯೇ ಕೊಲೆ ಮಾಡಿ, ಶವವನ್ನು ಟಾರ್ಪಲ್‌ನಲ್ಲಿ ಸುತ್ತಿ, ಕಲ್ಲುಗಳನ್ನು ಕಟ್ಟಿ ಬಾವಿಗೆ ಎಸೆದಿದ್ದ. ನಾರಾಯಣಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಾದ ಕವಿತಾ ಹಾಗೂ ನಾರಾಯಣಸ್ವಾಮಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು. ಎಎಸ್ಪಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ನಾಗ್ತೆ, ಮಾಸ್ತಿ ಪಿಎಸ್ ಐ ರಾಮಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts