More

    ಹದಿನೈದು-ಹದಿನೆಂಟು; ವಯಸ್ಸಿನ ಕಗ್ಗಂಟು

    ಅಸ್ಸಾಂನಲ್ಲಿ ಈಚೆಗೆ ಪೋಕ್ಸೊ ಕಾಯ್ದೆ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ 2,500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ವಿಶೇಷ ಕಾಯ್ದೆಗಳು ಹಾಗೂ ಮುಸ್ಲಿಂ ವೈಯಕ್ತಿಕ ಕಾನೂನಲ್ಲಿ ಏಕರೂಪತೆ ಇಲ್ಲದಿರುವುದೇ ಈ ಬಂಧನಕ್ಕೆ ಮೂಲ ಕಾರಣ. ವಿವಾಹ ಸಂಬಂಧಿ ವಿವಿಧ ಕಾನೂನುಗಳಲ್ಲಿರುವ ಗೊಂದಲಗಳೇನು? ಇದಕ್ಕೆ ಕೋರ್ಟ್ ಏನು ಹೇಳುತ್ತದೆ? ಈ ಸಮಸ್ಯೆ ನಿವಾರಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ? ಎಂಬುದರತ್ತ ಪಕ್ಷಿನೋಟ ಇಲ್ಲಿದೆ.

    ಅಸ್ಸಾಂ ರಾಜ್ಯಾದ್ಯಂತ ಬಾಲ್ಯವಿವಾಹ ಆರೋಪದಲ್ಲಿ 2,500ಕ್ಕೂ ಹೆಚ್ಚು ಪುರುಷರನ್ನು ಇತ್ತೀಚಿನ ದಿನಗಳಲ್ಲಿ ಬಂಧಿಸಲಾಗಿದೆ. ಬಂಧಿತರ ವಿರುದ್ಧ ಕಟ್ಟುನಿಟ್ಟಿನ ಪೋಕ್ಸೊ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

    ಕಳೆದ ಏಳು ವರ್ಷಗಳಲ್ಲಿ ಬಾಲ್ಯವಿವಾಹದಲ್ಲಿ ಭಾಗವಹಿಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದು, ಈ ವಿವಾಹಗಳನ್ನು ನಡೆಸುವ ಮುಲ್ಲಾಗಳು, ಖಾಜಿಗಳು ಮತ್ತು ಪೂಜಾರಿಗಳ ಮೇಲೆ ಗಮನಹರಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ವಿವಾಹವಾಗುವ ಪುರುಷರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಮತ್ತು 14 ರಿಂದ 18 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗುವವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದೂ ಸಿಎಂ ಹೇಳಿದ್ದಾರೆ.

    ಪೋಕ್ಸೊ ಕಾಯ್ದೆ ವ್ಯಾಖ್ಯಾನ: 2012ರ ಪೋಕ್ಸೊ ಕಾಯ್ದೆ ಪ್ರಕಾರ, ಅಪ್ರಾಪ್ತ ಮತ್ತು ವಯಸ್ಕರ ನಡುವಿನ ಲೈಂಗಿಕತೆಯು ಅಪರಾಧ. ಇದಕ್ಕೆ ಅಪ್ರಾಪ್ತ ವಯಸ್ಸಿನವರ ಒಪ್ಪಿಗೆ ಇದ್ದರೂ ಅದು ಮಾನ್ಯವೆಂದು ಕಾನೂನು ಗುರುತಿಸುವುದಿಲ್ಲ. ಈ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಜಾಮೀನುರಹಿತ ಅಪರಾಧ. ಆದ್ದರಿಂದ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಬಾಲಕಿಯರನ್ನು ಒಳಗೊಂಡ ಬಾಲ್ಯವಿವಾಹದ ಸಂದರ್ಭದಲ್ಲಿ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ. ಈ ಅಪರಾಧ ಸಾಬೀತಾದರೆ ದಂಡದೊಂದಿಗೆ 3ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇದಲ್ಲದೆ, ಪೋಕ್ಸೊ ಕಾಯ್ದೆಯ ಸೆಕ್ಷನ್ 19ರ ಪ್ರಕಾರ, ಮಗುವಿನ ವಿರುದ್ಧದ ಲೈಂಗಿಕ ಅಪರಾಧವನ್ನು ಶಂಕಿಸುವ ಅಥವಾ ತಿಳಿದಿರುವ ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ಪೊಲೀಸ್ ಅಥವಾ ವಿಶೇಷ ಬಾಲ ಪೊಲೀಸ್ ಘಟಕಕ್ಕೆ ವರದಿ ಮಾಡಬೇಕು. ಹಾಗೆ ಮಾಡಲು ವಿಫಲವಾದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.

    ಬಾಲ್ಯವಿವಾಹ ನಿಷೇಧ ಕಾಯ್ದೆ, ಮುಸ್ಲಿಂ ವೈಯಕ್ತಿಕ ಕಾನೂನು

    2006ರ ಬಾಲ್ಯವಿವಾಹ ನಿಷೇಧ ಕಾಯ್ದೆಯು ಬಾಲ್ಯವಿವಾಹ ಕಾನೂನುಬಾಹಿರ; ಆದರೆ, ಅನೂರ್ಜಿತವಲ್ಲ ಎಂದು ಹೇಳುತ್ತದೆ. ಈ ಕಾಯ್ದೆಯು ಮದುವೆಯ ಕನಿಷ್ಠ ವಯಸ್ಸನ್ನು ಮಹಿಳೆಯರಿಗೆ 18 ವರ್ಷ ಹಾಗೂ ಪುರುಷರಿಗೆ 21 ವರ್ಷ ಎಂದು ನಿಗದಿಪಡಿಸುತ್ತದೆ. ಈ ಕಾನೂನು ಉಲ್ಲಂಘಿಸಿದವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಸೆರೆವಾಸ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲು ಅವಕಾಶವಿದೆ. ಇದಲ್ಲದೆ, ಬಾಲ್ಯವಿವಾಹವನ್ನು ನಡೆಸುವ, ನಡೆಸಲು ನಿರ್ದೇಶಿಸುವ ಅಥವಾ ಪೋ›ತ್ಸಾಹಿಸುವ ಯಾರಿಗಾದರೂ ಎರಡು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶವಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಪ್ರೌಢಾವಸ್ಥೆಯನ್ನು (ಋತುಮತಿಯಾದ) ತಲುಪಿದ ಹುಡುಗಿಯ ವಿವಾಹ ಮಾಡಲು ಅವಕಾಶವಿದೆ. ಪುರಾವೆಗಳ ಅನುಪಸ್ಥಿತಿಯಲ್ಲಿ, 15 ವರ್ಷಗಳು ಪೂರ್ಣಗೊಂಡ ನಂತರ ಹೆಣ್ಣುಮಕ್ಕಳು ಪ್ರೌಢಾವಸ್ಥೆ ಹೊಂದಿದ್ದಾರೆ ಎಂದು ಪರಿಗಣಿಸಬಹುದಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಹಾಗೂ ಬಾಲ್ಯವಿವಾಹ ಅಥವಾ ಅಪ್ರಾಪ್ತ ವಯಸ್ಕರ ಲೈಂಗಿಕ ಚಟುವಟಿಕೆಯನ್ನು ನಿಷೇಧಿಸುವ ವಿಶೇಷ ಕಾನೂನುಗಳ ನಡುವಿನ ಈ ಅಂತರದ ಕಾರಣದಿಂದಾಗಿ ಇಂತಹ ವಿವಾಹಗಳ ಮೇಲೆ ಅಪರಾಧದ ಛಾಯೆ ಅವರಿಸುತ್ತಿದೆ.

    ಕರ್ನಾಟಕದಲ್ಲಿ…

    17 ವರ್ಷ ಮತ್ತು 2 ತಿಂಗಳ ವಯಸ್ಸಿನ ಗರ್ಭಿಣಿಯೊಬ್ಬರು ವೈದ್ಯರನ್ನು ಭೇಟಿ ಮಾಡಿದಾಗ, ಅಪ್ರಾಪ್ತೆ ಗರ್ಭಧಾರಣೆ ಮಾಡಿರುವ ಕುರಿತ ಮಾಹಿತಿಯನ್ನು ಕಾನೂನಿನ ಪ್ರಕಾರ ಪೊಲೀಸರಿಗೆ ತಿಳಿಸಿದರು. ನಂತರ ಪೊಲೀಸರು ಗರ್ಭಿಣಿಯ ಮುಸ್ಲಿಂ ಪತಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದರು. 2022ರ ಅಕ್ಟೋಬರ್​ನಲ್ಲಿ ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿತು. 2022ರ ನವೆಂಬರ್​ನಲ್ಲಿ ಇದೇ ರೀತಿಯ ಸಂದರ್ಭಗಳಲ್ಲಿ ಬಂಧಿಸಲಾದ ಮುಸ್ಲಿಂ ವ್ಯಕ್ತಿಗೆ ಇದೇ ಕೋರ್ಟ್ ಜಾಮೀನು ನೀಡಿತು. ಆದರೆ, 2013 ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್, ಬಾಲ್ಯವಿವಾಹ ನಿಷೇಧ ಕಾಯ್ದೆಯು ಮುಸ್ಲಿಂ ವೈಯಕ್ತಿಕ ಕಾನೂನುಗಳ ನಿಬಂಧನೆಗಳನ್ನು ಅನೂರ್ಜಿತಗೊಳಿಸುತ್ತದೆ ಎಂದು ತೀರ್ಪು ನೀಡಿತ್ತು.

    ಕೇಂದ್ರ ಸರ್ಕಾರದ ನಿಲುವೇನು?

    2021ರಲ್ಲಿ ಕೇಂದ್ರ ಸರ್ಕಾರವು ಬಾಲ್ಯ ವಿವಾಹ ತಡೆ (ತಿದ್ದುಪಡಿ) ಮಸೂದೆ 2021 ಅನ್ನು ಮಂಡಿಸಲು ಪ್ರಯತ್ನಿಸಿತು. ಎಲ್ಲಾ ಧರ್ಮಗಳ ಮಹಿಳೆಯರ ನಿರ್ವಹಣಾ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಹೆಚ್ಚಿಸಲು ಇದರಲ್ಲಿ ಉದ್ದೇಶಿಸಲಾಗಿತ್ತು. ಆದರೆ, ಇದನ್ನು ಪರಿಶೀಲಿಸುತ್ತಿರುವ ಸಂಸತ್ತಿನ ಸಮಿತಿ ಇನ್ನೂ ವರದಿಯನ್ನು ಸಲ್ಲಿಸಿಲ್ಲ. ಕೇಂದ್ರದ ಪ್ರಯತ್ನಗಳಿಗೆ ಅನುಗುಣವಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2020ರ ಜೂನ್​ನಲ್ಲಿ ಜಯಾ ಜೇಟ್ಲಿ ಸಮಿತಿ ರಚಿಸಿತು. ಈ ಸಮಿತಿಯು ಮಹಿಳೆಯರ ವಿವಾಹದ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸಬೇಕು ಎಂದು ಶಿಫಾರಸು ಮಾಡಿದೆ.

    ನ್ಯಾಯಾಲಯಗಳು ಏನು ಹೇಳುತ್ತವೆ?

    ವಿವಿಧ ಹೈಕೋರ್ಟ್​ಗಳು ವಿಭಿನ್ನವಾಗಿ ತೀರ್ಪು ನೀಡಿರುವುದರಿಂದ ಸುಪ್ರೀಂ ಕೋರ್ಟ್ ಪ್ರಸ್ತುತ ಈ ವಿಷಯವನ್ನು ಪರಿಶೀಲಿಸುತ್ತಿದೆ. ಜನವರಿ13ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ನೇತೃತ್ವದ ಪೀಠವು, ಪ್ರೌಢಾವಸ್ಥೆಯನ್ನು ಪಡೆದ ನಂತರ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು 16.5 ವರ್ಷದ ಮುಸ್ಲಿಂ ಬಾಲಕಿಗೆ ಅವಕಾಶ ನೀಡಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ನ 2022ರ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿ ಆಲಿಸಲು ಒಪ್ಪಿಕೊಂಡಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್​ಸಿಪಿಸಿಆರ್) ಈ ಮೇಲ್ಮನವಿ ಸಲ್ಲಿಸಿದೆ. ವೈಯಕ್ತಿಕ ಕಾನೂನುಗಳು ವಿಶೇಷ ಕಾನೂನುಗಳನ್ನು ಅತಿಕ್ರಮಿಸಲಾಗದು ಎಂಬ ಕಾರಣಕ್ಕಾಗಿ ಎನ್​ಸಿಪಿಸಿಆರ್ ಹೈಕೋರ್ಟ್​ನ ತೀರ್ಪನ್ನು ಪ್ರಶ್ನಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಸಹ 2022ರ ಡಿಸೆಂಬರ್​ನಲ್ಲಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಮುಸ್ಲಿಮರಿಗೆ ಕೂಡ ಕನಿಷ್ಠ ವಿವಾಹ ವಯಸ್ಸನ್ನು ಇತರ ಸಮುದಾಯಗಳಿಗೆ ಸಮನಾಗಿರುವಂತೆ ಆದೇಶಿಸಲು ಕೋರಿದೆ. ಈ ಕುರಿತು ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಹಿರಿಯ ವಕೀಲ ರಾಜಶೇಖರ್ ರಾವ್ ಅವರನ್ನು ಅಮಿಕಸ್ ಕ್ಯೂರಿಯಾಗಿ (ನ್ಯಾಯಾಲಯಕ್ಕೆ ಸಹಾಯಕ) ನೇಮಕ ಮಾಡಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ಅನೇಕ ತೀರ್ಪಗಳು, ಮುಸ್ಲಿಂ ಯುವತಿ ಪ್ರೌಢಾವಸ್ಥೆಗೆ ಬಂದ ನಂತರ ಕಾನೂನುಬದ್ಧವಾಗಿ ಮದುವೆಯಾಗಬಹುದು ಎಂದು ಹೇಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts