ಬೆಂಗಳೂರು: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಭಾನುವಾರ (ಫೆ. 19ರಂದು) ಎಂ.ಎಸ್. ಬಿಲ್ಡಿಂಗ್ ಎದುರಿನ ಕಬ್ಬನ್ ಉದ್ಯಾನದಲ್ಲಿರುವ ರಾಜ್ಯ ಸರ್ಕಾರಿ ಉದ್ಯೋಗಿಗಳ ಸಂಘದ ಸಭಾಂಗಣದಲ್ಲಿ ಸಂಜೆ 5ಗಂಟೆಗೆ ‘ಸಂಗೀತ ಸಂಜೆ’ ಆಯೋಜಿಸಲಾಗಿದೆ.
ಕಾರ್ಯಕ್ರಮ ದಲ್ಲಿ ಉಸ್ತಾದ್ ರಫೀಕ್ ಖಾನ್ ಹಾಗೂ ಅಂಕುಶ್ ನಾಯಕ್ ಅವರ ಸಿತಾರ್ ಜುಗಲಬಂಧಿ ನಡೆಯಲಿದ್ದು, ಪಂ. ರಾಜೇಂದ್ರ ನಾಕೋಡ್ ತಬಲಾ ಸಾಥ್ ನೀಡಲಿದ್ದಾರೆ. ನಂತರ ಪಂ. ವೆಂಕಟೇಶಕುಮಾರ್ ಗಾನಸುಧೆಗೆ ನರೇಂದ್ರ ನಾಯಕ್ ಹಾರ್ವೆನಿಯಂ ನುಡಿಸಲಿದ್ದು ಕೇಶವ್ ಜೋಶಿ ತಬಲಾ ವಾದನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಪಂ.ವೆಂಕಟೇಶ್ ಕುಮಾರ್
ಧಾರವಾಡದವರಾದ ಇವರು ಗ್ವಾಲಿಯರ್ ಮತ್ತು ಕಿರಾಣಾ ಘರಾನಾದಲ್ಲಿ ಹಿಂದೂಸ್ತಾನಿ ಗಾಯಕರಾಗಿ ಹಲವಾರು ವರ್ಷಗಳ ಕಾಲ ಗದಗದಲ್ಲಿ ಸಂಗೀತಗಾರ ಸಂತ ಪುಟ್ಟರಾಜ ಗವಾಯಿಗಳ ಮಾಗದರ್ಶನದಲ್ಲಿ ತರಬೇತಿ ಪಡೆದವರು. ಪಂ. ವೆಂಕಟೇಶ್ ಕುಮಾರ್ ಅವರ ಸಂಗೀತವು ವೈವಿಧ್ಯಮಯ ಸಂಗೀತದ ಪ್ರಭಾವಗಳ ಮಿಶ್ರಣವಾಗಿದೆ. ಇವರ ಕಲಾ ಸೇವೆಯಿಂದಾಗಿ ಪದ್ಮಶ್ರೀ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಅಂಕುಶ್ ನಾಯಕ್
ಮೂಲತಃ ಮಂಗಳೂರಿನವರಾದ ಇವರು, ಶಿಕ್ಷಣ ತಜ್ಞ ಪೊ›. ನರೇಂದ್ರ ಎಲ್. ನಾಯಕ್ ಮತ್ತು ಡಾ. ಉಷಾಪ್ರಭಾ ಎನ್. ನಾಯಕ್ ಅವರ ಪುತ್ರ. ಒಂಬತ್ತನೇ ವಯಸ್ಸಿನಲ್ಲಿ ಧಾರವಾಡ ಘರಾಣೆಯ ಸಿತಾರ್ ವಾದಕ ಉಸ್ತಾದ್ ರಫೀಕ್ಖಾನ್ ಅವರಿಂದ ಸಿತಾರ್ ಹಾಗೂ ಘಟಂ ಮಾಂತ್ರಿಕ ವಿದ್ವಾನ್ ತಿರುಚ್ಚಿ ಕೆ.ಆರ್. ಕುಮಾರ್ ಅವರಿಂದ ಕರ್ನಾಟಕ ತಾಳ ಪದ್ಧತಿ ಕಲಿತಿದ್ದಾರೆ. 2009 ರಲ್ಲಿ ಆಲ್ ಇಂಡಿಯಾ ರೇಡಿಯೋ ನ್ಯಾಷನಲ್ ಮ್ಯೂಸಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ರವಿ ಕೊಪ್ಪಿಕರ್ ಪ್ರಶಸ್ತಿ, ಅವಿನಾಶ್ ಹೆಬ್ಬಾರ್ ಪ್ರಶಸ್ತಿ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ರಾಜೇಂದ್ರ ನಾಕೋಡ್
ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರ ಕುಟುಂಬದಿಂದ ಬಂದವರಾಗಿದ್ದು, ತಂದೆ, ಪಂಡಿತ್ ಅರ್ಜುನ್ಸಾ ನಾಕೋಡ್ ಪ್ರಸಿದ್ಧ ಗಾಯಕರು. ತಂದೆಯಿಂದ ತರಬೇತಿ ಆರಂಭಿಸಿ, ಬಳಿಕ ಸಹೋದರರಾದ ಪಂಡಿತ್ ರಘುನಾಥ್ ನಾಕೋಡ್ ಮತ್ತು ವಿಶ್ವನಾಥ್ ನಾಕೋಡ್ ಅವರ ಬಳಿ ತಬಲಾ ವಾದಕ ಕಲಿತರು. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ಇವರು, ಪ್ರಸಿದ್ಧ ಸಂಗೀತಗಾರರ ದಿ. ಬಸವರಾಜ ರಾಜಗುರು, ಬೇಗಂ ಪರ್ವೀನ್ ಸುಲ್ತಾನಾ ಮತ್ತು ಪಂಡಿತ್ ವಿಶ್ವ ಮೋಹನ್ ಭಟ್ ಜೊತೆ ಪ್ರದರ್ಶನ ನೀಡಿದ್ದಾರೆ.
ಉಸ್ತಾದ್ ರಫೀಕ್ ಖಾನ್
ಧಾರವಾಡದ ಘರಾನಾ ಮನೆತನದಲ್ಲಿ ಜನಿಸಿದ ಇವರದು ಸಂಗೀತ ಮನೆತನ. ತಂದೆ ದಿ. ಉಸ್ತಾದ್ ಅಬ್ದುಲ್ ಕರೀಂ ಖಾನ್ ಮತ್ತು ಅಜ್ಜ ದಿ.ಸಿತಾರ ರತ್ನ ಉಸ್ತಾದ್ ರಹಿಮತ್ ಖಾನ್ ಪ್ರಖ್ಯಾತ ಸಿತಾರ್ ವಾದಕರಾಗಿ ದ್ದರು. ಹಿರಿಯ ಸಹೋದರ ಉಸ್ತಾದ್ ಬಾಲೆ ಖಾನ್ ಸಹ ಸಂಗೀತ ಕಲಾವಿದರ. ರಫೀಕ್ ಖಾನ್ ಮುಂಬೈನ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಪರೀಕ್ಷೆ ಪಾಸ್ ಮಾಡಿ, ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ಸಂಗೀತ ಕಛೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. 2019ರಲ್ಲಿ ಸುರ್ ಮಣಿ ಪ್ರಶಸ್ತಿ ಮತ್ತು ಸರಗುರು ಪಂಡಿತ್ ಜಸ್ರಾಜ್ ಪ್ರಶಸ್ತಿ ಪಡೆದಿದ್ದಾರೆ. ಕಲಾಂಗನ್ ಕೊಂಕಣಿ ಅಕಾಡೆಮಿಯ ಸಂದೇಶ ಪ್ರಶಸ್ತಿ ಗಳಿಸಿದ್ದಾರೆ.
ವಿವರಗಳಿಗೆ:
ಶಿವಮೂರ್ತಿ- 8884432389/ 6363933258
ಅಖಿಲೇಶ್ – 9986172645 ಸಂರ್ಪಸಿ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ ಈಗಲೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.
Sangeeth Sanjey 2023 – Register Now