ಶಿವಮೊಗ್ಗ: ಕರೊನಾ ಪಾಸಿಟಿವ್ ಇದ್ದ ಮತ್ತು ಅವರ ಜತೆಗೆ ಪ್ರಾಥಮಿಕ ಸಂಪರ್ಕದ್ದಲ್ಲಿದ್ದು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಾಸ್ಕ್ ಧರಿಸದೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದ ಇಬ್ಬರಿಗೆ ತೀರ್ಥಹಳ್ಳಿ ನ್ಯಾಯಾಲಯವು ಮೂರು ತಿಂಗಳ ಸಾದಾ ಶಿಕ್ಷೆ ವಿಧಿಸಿದೆ.
ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿಯ ಮಹೇಶ್ ಮತ್ತು ಮಂಜುನಾಥ ಶಿಕ್ಷೆಗೆ ಒಳಗಾದವರು. 2021ರ ಮೇ 9ರಂದು ಹೊಸಳ್ಳಿ ಗ್ರಾಪಂಗೆ ಇಬ್ಬರು ಮಾಸ್ಕ್ ಧರಿಸದೇ ಭೇಟಿ ನೀಡಿದ್ದರು. ಈ ವೇಳೆ ಮಹೇಶ್ ಅವರಿಗೆ ಪಾಸಿಟಿವ್ ಇದ್ದರೆ, ಮಂಜುನಾಥ ಅವರು ಮಹೇಶ್ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದರು.
ಕರೊನಾ ನಿಯಮಗಳನ್ನು ಪಾಲನೆ ಮಾಡಿರಲಿಲ್ಲ. ಈ ಬಗ್ಗೆ ಅಂದಿನ ಪಿಡಿಒ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರ ವಿರುದ್ಧ ಅಂದಿನ ವೃತ್ತ ನಿರೀಕ್ಷಕ ಪ್ರವೀಣ್ ನೀಲಮ್ಮನವರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ತೀರ್ಥಹಳ್ಳಿ ಹಿರಿಯ ಸಿಜೆ ಮತ್ತು ಜೆಎಂಎಸ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಇಬ್ಬರಿಗೂ ತಲಾ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಮಹೇಶ್ ಅವರಿಗೆ 50 ಸಾವಿರ ರೂ. ದಂಡ ವಿಧಿಸಿದ್ದು ದಂಡ ಪಾವತಿಸಲು ವಿಫಲರಾದರೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ಮಂಜುನಾಥ ಅವರಿಗೆ ಒಂದು ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲರಾದರೆ ಮೂರು ತಿಂಗಳು ಸಾದಾ ಶಿಕ್ಷೆ ನೀಡಿ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಡಿ.ಜೆ.ಪ್ರೇಮಲೀಲಾ ವಾದ ಮಂಡಿಸಿದ್ದರು.