More

    ಹಲ್ಲೆ ಮಾಡಿದ 12 ವರ್ಷಗಳ ಬಳಿಕ ವೈದ್ಯರ ಕ್ಷಮೆ ಕೋರಿದ ಕುಟುಂಬಗಳು!

    ಉಪ್ಪಿನಂಗಡಿ: 12 ವರ್ಷಗಳ ಹಿಂದೆ ತಂಡವೊಂದು ಉಪ್ಪಿನಂಗಡಿಯ ಖಾಸಗಿ ಕ್ಲಿನಿಕ್‌ಗೆ ದಾಳಿ ಮಾಡಿ ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅಂದು ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಗುಂಪು, ಮತ್ತೆ ಅದೇ ಕ್ಲಿನಿಕ್‌ಗೆ ಆಗಮಿಸಿ ವೈದ್ಯರ ಬಳಿ ಕ್ಷಮೆಯಾಚಿಸಿದ ಅಪರೂಪದ ಪ್ರಸಂಗ ಕಳೆದ ಬುಧವಾರ ನಡೆದಿದೆ.

    2008ರ ಸೆಪ್ಟಂಬರ್ 26ರಂದು ಮಹಿಳಾ ರೋಗಿಯ ಜತೆಗೆ ಅಸಭ್ಯವಾಗಿ ವರ್ತಿಸಿದರೆಂದು ಆಪಾದಿಸಿ ಉಪ್ಪಿನಂಗಡಿಯ ಖಾಸಗಿ ಕ್ಲಿನಿಕ್ ಮೇಲೆ ಎರಡು ಕುಟುಂಬಗಳ ಸದಸ್ಯರು ದಾಳಿ ನಡೆಸಿ ವೈದ್ಯರ ಮೇಲೆ ಹಲ್ಲೆಗೈದಿದ್ದರು. ದಾಳಿ ನಡೆಸಿದ ತಂಡ ಪ್ರಭಾವಿಗಳಾಗಿದ್ದರಿಂದ ಈ ಬಗ್ಗೆ ವೈದ್ಯರು ಕಾನೂನು ಕ್ರಮಕ್ಕೆ ಮುಂದಾಗದೆ , ತನ್ನನ್ನು ಆಪಾದನೆಯಿಂದ ಮುಕ್ತಗೊಳಿಸುವಂತೆ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿಯ ಮೊರೆ ಹೋಗಿದ್ದರು.

    ಘಟನೆ ನಡೆದ 12 ವರ್ಷದ ಬಳಿಕ ಫೆ.10ರಂದು ಅಂದು ಹಲ್ಲೆ ನಡೆಸಿದ್ದ ಎರಡು ಕುಟುಂಬಗಳ ಸದಸ್ಯರು ಕ್ಲಿನಿಕ್‌ಗೆ ಆಗಮಿಸಿ ಅಂದಿನ ಘಟನೆಗೆ ವಿಷಾದ ವ್ಯಕ್ತಪಡಿಸಿ ವೈದ್ಯರ ಕ್ಷಮೆಕೋರಿದ್ದಾರೆ. ಮಹಿಳೆಯ ಕಟ್ಟುಕಥೆಯನ್ನು ನಂಬಿ ತಾವು ಅಂತಹ ಕೃತ್ಯ ಎಸಗಬೇಕಾಯಿತು ಎಂದು ಹೇಳಿಕೊಂಡಿರುವ ಕುಟುಂಬ, ಇದರಿಂದಾಗಿ ನಾವು ಸಾಕಷ್ಟು ಮಾನಸಿಕ ಹಾಗೂ ಕೌಟುಂಬಿಕವಾಗಿ ನೊಂದಿದ್ದೇವೆ. ಅಂದಿನ ಘಟನೆಯನ್ನು ಮನ್ನಿಸಿ ನಮಗೆ ಎದುರಾಗಿರುವ ಸಮಸ್ಯೆಗಳಿಂದ ಪಾರು ಮಾಡಬೇಕು ಎಂದು ವೈದ್ಯರಲ್ಲಿ ಮನವಿ ಮಾಡಿದ್ದಾರೆ. ಮಾತ್ರವಲ್ಲದೆ ತಮ್ಮ ತಪ್ಪನ್ನು ಪತ್ರಿಕಾ ಜಾಹೀರಾತು ಮೂಲಕ ಪ್ರಕಟಿಸಿ ವೈದ್ಯರಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.

    ಮಹಿಳಾರೋಗಿ ಜತೆ ಅನುಚಿತ ವರ್ತನೆ ಆಪಾದನೆ ಹೊರಿಸಿ 12 ವರ್ಷಗಳ ಹಿಂದೆ ನನ್ನ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆಗೈದವರು ಪ್ರಭಾವಿಗಳಾಗಿದ್ದರಿಂದ ಕಾನೂನು ಹೋರಾಟದಲ್ಲಿ ನ್ಯಾಯ ದೊರೆಯುವ ವಿಶ್ವಾಸವಿರಲಿಲ್ಲ. ಹಾಗಾಗಿ ಅಣ್ಣಪ್ಪ ದೈವದ ಮೊರೆ ಹೋಗಿದ್ದೆ. ಈಗ 12 ವರ್ಷದ ಬಳಿಕ ಹಲ್ಲೆಗೈದವರಿಗೆ ತಾವೆಸಗಿದ ತಪ್ಪಿನ ಅರಿವಾಗಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ನಂಬಿದ ದೈವ ನನಗೆ ನ್ಯಾಯ ಒದಗಿಸಿದ ಹಿನ್ನೆಲೆಯಲ್ಲಿ ಅವರನ್ನು ನಾನು ಕ್ಷಮಿಸಿದ್ದೇನೆ.
    ಡಾ.ನಿರಂಜನ ರೈ, ಉಪ್ಪಿನಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts