More

    ಶಾಲೆಗಳ ಅಭಿವೃದ್ಧಿಗೆ ಶಾಸಕರ ಅನುದಾನ ಕೇಳಿ

    ಧಾರವಾಡ: ಶಾಸಕರು ತಲಾ 5 ಶಾಲೆಗಳನ್ನು ದತ್ತು ತೆಗೆದುಕೊಳ್ಳಲಿದ್ದಾರೆ. ಈ ಯೋಜನೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಸದುಪಯೋಗಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಶಾಸಕರು ಗುಡಿ- ಗೋಪುರಗಳಿಗೆ ಹಣ ವಿನಿಯೋಗ ಮಾಡುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

    ಇಲ್ಲಿಯ ಜಿ.ಪಂ. ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಗುಡಿ-ಗೋಪುರ, ದೇವಸ್ಥಾನಗಳಿಗೆ ದುಡ್ಡು ಕೊಟ್ಟರೆ ಮತ ಸಿಗುತ್ತವೆ. ಶಾಲೆಗೆ ಅನುದಾನ ಕೊಟ್ಟರೆ ಮತ ಸಿಗುವುದಿಲ್ಲ. ಆದ್ದರಿಂದ ಶಾಸಕರು ತಾವಾಗಿ ಶಾಲೆಗೆ ಹಣ ಕೊಡುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ ಸಚಿವರು, ಶಾಲಾ ದತ್ತು ಯೋಜನೆಯ ಅನುದಾನವನ್ನು ಸಂಕೋಚ ಬಿಟ್ಟು ಶಾಸಕರಿಂದ ಪಡೆಯಬೇಕು ಎಂದರು.

    ಇಲಾಖೆ ಆಯುಕ್ತ ಅನಿರುದ್ಧ ಶ್ರವಣ ಪ್ರತಿಕ್ರಿಯಿಸಿ, ರೈತರ ಬೇಡಿಕೆಗೆ ಅನುಗುಣವಾಗಿ ಬೃಹತ್ ಕೃಷಿ ಹೊಂಡಗಳನ್ನು ನಿರ್ವಿುಸಬಹುದು. ಆದರೆ, ಯಂತ್ರ ಬಳಸದೆ ಕೂಲಿ ಕಾರ್ವಿುಕರಿಗೆ ಕೆಲಸ ನೀಡಬೇಕು ಎಂದು ಸೂಚಿಸಿದರು.

    ಸಾಮಾಜಿಕ ಅರಣ್ಯ ಇಲಾಖೆ ಎಲ್ಲೆಡೆ ರೋಗಗ್ರಸ್ಥವಾಗಿದೆ. ಗುರಿ ಸಾಧನೆಗೆ ಚುರುಕಿನಿಂದ ಕೆಲಸ ಮಾಡಬೇಕು ಎಂದು ಸಚಿವ ಈಶ್ವರಪ್ಪ ತಾಕೀತು ಮಾಡಿದರು.

    ಪ್ರತಿ ಮನೆಗೆ ನಳದ ನೀರು

    ಜಲಜೀವನ್ ಮಿಷನ್ ಯೋಜನೆ ಆಯುಕ್ತ ಡಾ. ಆರ್. ವಿಶಾಲ ಮಾತನಾಡಿ, ಕೇಂದ್ರ ಸರ್ಕಾರ 2024ಕ್ಕೆ ಗ್ರಾಮೀಣ ಭಾಗದ ಪ್ರತಿ ಮನೆಗೂ ನಳದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಜಲಧಾರೆ ಯೋಜನೆಯಡಿ ‘ಹರ್ ಘರ್ ನಲ್ ಸೇ ಜಲ್’ (ಪ್ರತಿ ಮನೆಗೆ ನಳದ ನೀರು) ಯೋಜನೆ ರೂಪಿಸಿದೆ. ನೈಸರ್ಗಿಕ ಹಾಗೂ ಸ್ಥಳೀಯ ಜಲಮೂಲಗಳಿಂದ ಗ್ರಾಮದ ಮೇಲ್ಮಟ್ಟದ ಟ್ಯಾಂಕ್​ಗಳಿಗೆ ನೀರು ತುಂಬಿಸಿ ನಳದ ಮೂಲಕ ಮನೆಗೆ ನೀರು ಪೂರೈಸುವ ಗುರಿ ಇದೆ. ಮಂಡ್ಯ, ರಾಯಚೂರು, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ 5,500 ಕೋಟಿ ರೂ. ವೆಚ್ಚದ ಯೋಜನೆ ಹಮ್ಮಿಕೊಳ್ಳಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ 354 ಜನವಸತಿಗಳಿಗೆ ಸೌಲಭ್ಯ ಸಿಗಲಿದೆ. ಯೋಜನೆಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

    ನಮಗೆ ಭಯ!

    ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕೆಲ ನಿಮಿಷ ತಡವಾಗಿ ವೇದಿಕೆಗೆ ಬಂದರು. ಸಚಿವ ಈಶ್ವರಪ್ಪ ಅವರು ಪಕ್ಕದಲ್ಲಿ ಕುಳಿತಿದ್ದ ಶಾಸಕ ಅಮೃತ ದೇಸಾಯಿ ಅವರೊಂದಿಗೆ ಮಾತನಾಡುತ್ತ ‘ವಿಧಾನ ಪರಿಷತ್​ನವರು ಬಂದರೆ ಭಯವಾಗುತ್ತದೆ’ ಎಂದರು. ಇತ್ತೀಚೆಗೆ ಪರಿಷತ್​ನಲ್ಲಿ ನಡೆದ ವಿದ್ಯಮಾನ ಸ್ಮರಿಸಿಕೊಂಡು ಹಾಸ್ಯ ಚಟಾಕಿ ಹಾರಿಸಿದರು.

    ವರ್ಷಕ್ಕೊಮ್ಮೆ ಬದಲಿಸಿ

    ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧಕರಿಂದ ಕಿರುಕುಳ, ಹಣ ವಸೂಲಿಯ ದೂರುಗಳಿವೆ. ಅವರನ್ನು ವರ್ಷಕ್ಕೊಮ್ಮೆ ಬದಲಿಸಬೇಕು. ಸಾಮಾಜಿಕ ಲೆಕ್ಕ ಪರಿಶೋಧಕರು ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts