More

    ಏಷ್ಯಾಕಪ್ ಸೂಪರ್-4 ಹಂತಕ್ಕೆ ಭಾರತ ಹಾಕಿ ತಂಡ ; ಇಂಡೋನೇಷ್ಯಾ ವಿರುದ್ಧ 16-0 ಗೋಲುಗಳಿಂದ ಜಯ

    ಜಕಾರ್ತ: ಗೋಲಿನ ಸುರಿಮಳೆಗೈದ ಭಾರತ ತಂಡ ಏಷ್ಯಾಕಪ್ ಹಾಕಿ ಟೂರ್ನಿಯ ತನ್ನ ನಿರ್ಣಾಯಕ ಲೀಗ್ ಪಂದ್ಯದಲ್ಲಿ 16-0 ಗೋಲುಗಳಿಂದ ಆತಿಥೇಯ ಇಂಡೋನೇಷ್ಯಾ ತಂಡವನ್ನು ಸೋಲಿಸಿ ಸೂಪರ್-4ರ ಹಂತಕ್ಕೇರಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಗೋಲು ಲೆಕ್ಕಾಚಾರದಲ್ಲಿ ಹಿಂದಿಕ್ಕಿದ ಬೀರೇಂದ್ರ ಲಾಕ್ರಾ ಪಡೆ ಎ ಗುಂಪಿನಿಂದ 2ನೇ ಸ್ಥಾನಿಯಾಗಿ ಮುನ್ನಡೆ ಸಾಧಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ತಂಡ 2-3 ಗೋಲುಗಳಿಂದ ಗೆದ್ದ ಜಪಾನ್ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು.

    ಮೊದಲ ಪಂದ್ಯದಲ್ಲಿ ಪಾಕ್ ಎದುರು ಡ್ರಾ ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಜಪಾನ್ ಎದುರು 2-5 ರಿಂದ ಸೋಲು ಕಂಡಿತ್ತು. ಇದರಿಂದಾಗಿ ಭಾರತ ಕನಿಷ್ಠ 15-0 ಗೋಲಿನ ಅಂತರದಿಂದ ಗೆದ್ದರಷ್ಟೇ 2ನೇ ಸುತ್ತಿಗೇರುವ ಅವಕಾಶ ಹೊಂದಿತ್ತು. ವಿಜಯಿ ಭಾರತ ತಂಡದ ಪರ ದಿಪ್ಸನ್ ಟರ್ಕಿ (41, 46, 58, 59ನೇ ನಿಮಿಷ) 4 ಗೋಲು ಬಾರಿಸಿದರೆ, ಕನ್ನಡಿಗ ಆಭರಣ್ ಸುದೇವ್ (44, 45, 54ನೇ ನಿಮಿಷ) 3 ಗೋಲು ಸಿಡಿಸಿದರು. ಅನುಭವಿ ಎಸ್‌ವಿ ಸುನೀಲ್ (18, 23), ಪವನ್ ರಾಜ್‌ಭಾರ್ (9, 10), ಕಾರ್ತಿ ಸೆಲ್ವಂ (39, 55) ತಲಾ 2 ಮತ್ತು ಉತ್ತಮ್ ಸಿಂಗ್ (13), ಬಿರೇಂದರ್ ಲಾಕ್ರಾ (40) ಹಾಗೂ ನೀಲಂ ಸಂಜೀಪ್ (19) ತಲಾ ಒಂದು ಗೋಲು ಬಾರಿಸಿದರು.

    ಬಿ ಗುಂಪಿನಿಂದ ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳು ಸೂಪರ್-4 ಹಂತಕ್ಕೇರಿದ್ದು, ಇನ್ನು 4 ತಂಡಗಳ ನಡುವೆ ರೌಂಡ್ ರಾಬಿನ್ ಮಾದರಿ ಪಂದ್ಯಗಳು ನಡೆಯಲಿವೆ. ಅಗ್ರ 2 ತಂಡಗಳು ಫೈನಲ್‌ಗೇರಿದರೆ, ಉಳಿದೆರಡು ತಂಡಗಳು 3ನೇ ಸ್ಥಾನಕ್ಕೆ ಆಡಲಿವೆ. ಭಾರತ ಶನಿವಾರ ಜಪಾನ್ ವಿರುದ್ಧ ಸೂಪರ್-4ರ ಮೊದಲ ಪಂದ್ಯ ಆಡಲಿದೆ. ಬಳಿಕ ಮಲೇಷ್ಯಾ (ಮೇ 29) ಮತ್ತು ದಕ್ಷಿಣ ಕೊರಿಯಾ (ಮೇ 31) ತಂಡಗಳನ್ನು ಎದುರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts