More

    ಭಾರತದ ತಿರುಗೇಟಿಗೆ ಇಂಗ್ಲೆಂಡ್ ತತ್ತರ, ಅಶ್ವಿನ್ ಹೊಸ ದಾಖಲೆ

    ಚೆನ್ನೈ: ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಒಟ್ಟು 15 ವಿಕೆಟ್ ಪತನ ಕಂಡ 2ನೇ ದಿನದಾಟದಲ್ಲಿ ಭಾರತ ತಂಡ ನೀಡಿದ ತಿರುಗೇಟಿಗೆ ಪ್ರವಾಸಿ ಇಂಗ್ಲೆಂಡ್ ತಂಡ ತತ್ತರಿಸಿದೆ. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ (43ಕ್ಕೆ 5) ಮಾರಕ ದಾಳಿಗೆ ಕುಸಿದ ಇಂಗ್ಲೆಂಡ್ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಸ್ಪಷ್ಟ ಮೇಲುಗೈ ಬಿಟ್ಟುಕೊಟ್ಟಿದೆ. ಭಾರತ ತಂಡ ಒಟ್ಟಾರೆ 250ರ ಸನಿಹದ ಮುನ್ನಡೆ ಸಂಪಾದಿಸುವುದರೊಂದಿಗೆ ಮೂರು ಅಥವಾ ನಾಲ್ಕನೇ ದಿನವೇ ಗೆಲುವು ಒಲಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದೆ. ಈ ಮೂಲಕ ಸರಣಿ ಸಮಬಲ ಸಾಧಿಸುವ ತವಕದಲ್ಲಿದೆ.

    ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ 6 ವಿಕೆಟ್‌ಗೆ 300 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ 329 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ ರನ್ ಗಳಿಸಲು ಪರದಾಡಿ ಕೇವಲ 134 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 195 ರನ್ ಮುನ್ನಡೆ ಸಂಪಾದಿಸಿದ ಭಾರತ ತಂಡ 2ನೇ ಸರದಿಯಲ್ಲಿ ದಿನದಂತ್ಯಕ್ಕೆ 1 ವಿಕೆಟ್‌ಗೆ 54 ರನ್ ಪೇರಿಸಿತು. ಆರಂಭಿಕ ಶುಭಮಾನ್ ಗಿಲ್ (14) ಮತ್ತೊಮ್ಮೆ ವೈಲ್ಯ ಕಂಡರೆ, ಮೊದಲ ಇನಿಂಗ್ಸ್ ಶತಕವೀರ ರೋಹಿತ್ ಶರ್ಮ (25*) ಮತ್ತು ಚೇತೇಶ್ವರ ಪೂಜಾರ (7*) ಕ್ರೀಸ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಪಡೆ ಈಗ ಒಟ್ಟು 249 ರನ್ ಮುನ್ನಡೆ ಸಾಧಿಸಿ ಬಲಿಷ್ಠ ಸ್ಥಿತಿಯಲ್ಲಿದೆ.

    ಇದನ್ನೂ ಓದಿ: ಕೋಮು ಆಧಾರದಲ್ಲಿ ತಂಡ ಆಯ್ಕೆ, ನಿರ್ಗಮನ ಕೋಚ್​ ವಾಸಿಂ ಜಾಫರ್ ವಿರುದ್ಧ ಉತ್ತರಾಖಂಡ ಆರೋಪ

    ಹರ್ಭಜನ್ ಹಿಂದಿಕ್ಕಿದ ಅಶ್ವಿನ್
    ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿ ಭಾರತದಲ್ಲಿ 2ನೇ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಆರ್. ಅಶ್ವಿನ್ ಪಾತ್ರರಾದರು. ಬೆನ್ ಸ್ಟೋಕ್ಸ್ ವಿಕೆಟ್ ಕಬಳಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಹರ್ಭಜನ್ ಭಾರತದಲ್ಲಿ 265 ವಿಕೆಟ್ ಕಬಳಿಸಿದ್ದರೆ, ಅಶ್ವಿನ್ ಈಗ ತವರಿನಲ್ಲಿ 268 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ ಭಾರತದಲ್ಲಿ ಅತ್ಯಧಿಕ 350 ವಿಕೆಟ್ ಕಬಳಿಸಿದ ದಾಖಲೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು ವಿಕೆಟ್ ಗಳಿಕೆಯನ್ನು 391ಕ್ಕೆ ಏರಿಸಿಕೊಂಡಿರುವ ಅಶ್ವಿನ್, 400 ವಿಕೆಟ್ ಸಂಪಾದಿಸಿದ 4ನೇ ಭಾರತೀಯರೆನಿಸುವ ಸನಿಹ ತಲುಪಿದ್ದಾರೆ. ಅನಿಲ್ ಕುಂಬ್ಳೆ (619), ಕಪಿಲ್ ದೇವ್ (434) ಮತ್ತು ಹರ್ಭಜನ್ ಸಿಂಗ್ (417) ಮೊದಲ ಮೂವರು ಭಾರತೀಯರು.

    ಆರ್. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 29ನೇ ಬಾರಿ 5 ವಿಕೆಟ್ ಗೊಂಚಲು ಪಡೆದರು. ತವರಿನ 45 ಟೆಸ್ಟ್‌ಗಳಲ್ಲಿ ಅಶ್ವಿನ್‌ಗೆ ಇದು 23ನೇ 5 ವಿಕೆಟ್ ಗೊಂಚಲಾಗಿದೆ. ಈ ಮೂಲಕ ಜೇಮ್ಸ್ ಆಂಡರ್‌ಸನ್ (22) ಸಾಧನೆ ಹಿಂದಿಕ್ಕಿದರು. ಮುರಳೀಧರನ್ (45), ಹೆರಾತ್ (26) ಮತ್ತು ಅನಿಲ್ ಕುಂಬ್ಳೆ (25) ತವರಿನಲ್ಲಿ ಅಶ್ವಿನ್‌ಗಿಂತ ಹೆಚ್ಚು ಬಾರಿ ಈ ಸಾಧನೆ ಮಾಡಿದ್ದಾರೆ. ಆರ್. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳ 200 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಆಗಿದ್ದಾರೆ.

    ಭಾರತ: 95.5 ಓವರ್‌ಗಳಲ್ಲಿ 329 (ಪಂತ್ 58*, ಅಶ್ವಿನ್ 13, ಮೊಯಿನ್ ಅಲಿ 128ಕ್ಕೆ 4, ಸ್ಟೋನ್ 47ಕ್ಕೆ 3, ಲೀಚ್ 78ಕ್ಕೆ 2) ಮತ್ತು 18 ಓವರ್‌ಗಳಲ್ಲಿ 1 ವಿಕೆಟ್‌ಗೆ 54 (ರೋಹಿತ್ ಶರ್ಮ 25*, ಶುಭಮಾನ್ 14, ಪೂಜಾರ 7*, ಲೀಚ್ 19ಕ್ಕೆ 1). ಇಂಗ್ಲೆಂಡ್: 59.5 ಓವರ್‌ಗಳಲ್ಲಿ 134 (ಬರ್ನ್ಸ್ 0, ಸಿಬ್ಲೆ 16, ಲಾರೆನ್ಸ್ 9, ರೂಟ್ 6, ಸ್ಟೋಕ್ಸ್ 18, ಪೋಪ್ 22, ೆಕ್ಸ್ 42*, ಅಶ್ವಿನ್ 43ಕ್ಕೆ 5, ಇಶಾಂತ್ ಶರ್ಮ 22ಕ್ಕೆ 2, ಅಕ್ಷರ್ ಪಟೇಲ್ 40ಕ್ಕೆ 2, ಸಿರಾಜ್ 5ಕ್ಕೆ 1).

    ಪಾಕಿಸ್ತಾನ ವಿರುದ್ಧ 2ನೇ ಟಿ20 ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ, ಸರಣಿ ಸಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts