More

    ಹರ್ಭಜನ್ ಸಾಧನೆಯನ್ನು ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಆರ್. ಅಶ್ವಿನ್

    ಕಾನ್ಪುರ: ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಆಫ್​ ಸ್ಪಿನ್ನರ್ ಎಂಬ ದಾಖಲೆ ಬರೆದಿದ್ದಾರೆ. ಮಾಜಿ ಆಫ್​ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕುವ ಮೂಲಕ ಅಶ್ವಿನ್ ಈ ದಾಖಲೆ ಬರೆದರು. ಜತೆಗೆ ಭಾರತ ಪರ ಮೂರನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎಂಬ ಸಾಧನೆಯನ್ನೂ ಮಾಡಿದರು. ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ (619) ಮತ್ತು ದಿಗ್ಗಜ ಆಲ್ರೌಂಡರ್ ಕಪಿಲ್ ದೇವ್ (434) ಮೊದಲೆರಡು ಸ್ಥಾನದಲ್ಲಿರುವ ಸಾಧಕರು.

    35 ವರ್ಷದ ಅಶ್ವಿನ್ ಕಿವೀಸ್ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯದ ಅಂತಿಮ ದಿನ ಆರಂಭಿಕ ಟಾಮ್ ಲಾಥಮ್ ಅವರನ್ನು ಔಟ್ ಮಾಡುವ ಮೂಲಕ ವಿಕೆಟ್ ಗಳಿಕೆಯನ್ನು 418ಕ್ಕೇರಿಸಿಕೊಂಡರು. ಅವರು ಆಡಿದ 80ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಹರ್ಭಜನ್ 103 ಟೆಸ್ಟ್‌ಗಳಲ್ಲಿ 417 ವಿಕೆಟ್ ಕಬಳಿಸಿದ್ದರು. ಈ ಮುನ್ನ 4ನೇ ದಿನದಂತ್ಯದಲ್ಲಿ ವಿಲ್ ಯಂಗ್ ವಿಕೆಟ್ ಕಬಳಿಸುವ ಮೂಲಕ ಅಶ್ವಿನ್, ಹರ್ಭಜನ್ ಸಾಧನೆ ಸರಿಗಟ್ಟಿದ್ದರು. ಬಳಿಕ ಬ್ಲಂಡೆಲ್‌ರನ್ನೂ ಔಟ್ ಮಾಡಿ ಒಟ್ಟು ವಿಕೆಟ್ ಗಳಿಕೆಯನ್ನು 419ಕ್ಕೇರಿಸಿಕೊಂಡರು. ಟೆಸ್ಟ್ ಕ್ರಿಕೆಟ್‌ನ ಒಟ್ಟಾರೆ ಗರಿಷ್ಠ ವಿಕೆಟ್ ಟೇಕರ್‌ಗಳಲ್ಲಿ ಅಶ್ವಿನ್ 13ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆಂಡರ್‌ಸನ್ (632) ಮತ್ತು ಸ್ಟುವರ್ಟ್ ಬ್ರಾಡ್ (524) ಸದ್ಯ ಅಶ್ವಿನ್‌ಗಿಂತ ಮುಂದಿರುವ ಹಾಲಿ ಕ್ರಿಕೆಟಿಗರು.

    ‘ಅಶ್ವಿನ್ ನೆಟ್ಟ ಮೈಲಿಗಲ್ಲಿಗಾಗಿ ಅವರನ್ನು ಅಭಿನಂದಿಸುವೆ. ವೆಲ್ ಡನ್. ನೀವು ಭಾರತಕ್ಕೆ ಇನ್ನಷ್ಟು ಪಂದ್ಯಗಳನ್ನು ಗೆದ್ದುಕೊಡುವ ಭರವಸೆ ಇದೆ’ ಎಂದು ಹರ್ಭಜನ್ ಟ್ವಿಟರ್‌ನಲ್ಲಿ ಅಶ್ವಿನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ನಾನೆಂದೂ ಹೋಲಿಕೆಗಳ ಮೇಲೆ ನಂಬಿಕೆ ಇಟ್ಟಿಲ್ಲ. ನಾನು ನಮ್ಮ ಕಾಲದ ಶ್ರೇಷ್ಠ ಕ್ರಿಕೆಟ್ ಆಟವನ್ನು, ಭಿನ್ನ ಎದುರಾಳಿಗಳ ವಿರುದ್ಧ ಆಡಿದ್ದೇವೆ. ನಾನು ದೇಶಕ್ಕಾಗಿ ನನ್ನ ಶ್ರೇಷ್ಠ ನಿರ್ವಹಣೆ ತೋರಿರುವೆ. ಅದರಂತೆ ಅಶ್ವಿನ್ ಕೂಡ ಈಗ ಅತ್ಯುತ್ತಮ ನಿರ್ವಹಣೆ ತೋರುತ್ತಿದ್ದಾರೆ ಎಂದಿದ್ದಾರೆ.

    ಅಶ್ವಿನ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಅವರು ಏಕದಿನ ಕ್ರಿಕೆಟ್‌ನಲ್ಲೂ 111 ಪಂದ್ಯಗಳಲ್ಲಿ 150 ವಿಕೆಟ್ ಮತ್ತು 51 ಟಿ20 ಪಂಧ್ಯಗಳಲ್ಲಿ 61 ವಿಕೆಟ್ ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಒಟ್ಟು ವಿಕೆಟ್ ಗಳಿಕೆ ಈಗ 630ಕ್ಕೇರಿದೆ.

    ಈ ಮೈಲಿಗಲ್ಲು ನನಗೆ ಯಾವುದೇ ವಿಶೇಷ ಅನುಭವ ನೀಡುತ್ತಿಲ್ಲ. ರಾಹುಲ್ ಭಾಯಿ (ದ್ರಾವಿಡ್) ಬಂದ ನಂತರ ಯಾವಾಗಲೂ ಹೇಳುತ್ತಿರುತ್ತಾರೆ, 10 ವರ್ಷಗಳಲ್ಲಿ ನೀವೆಷ್ಟು ವಿಕೆಟ್ ಕಿತ್ತಿರಿ ಎಂಬುದು ನೆನಪಿರಲ್ಲ, ಸ್ಮರಣೀಯ ಕ್ಷಣಗಳಷ್ಟೇ ನೆನಪಿನಲ್ಲಿ ಉಳಿಯುತ್ತವೆ. ಮುಂದಿನ 3-4 ವರ್ಷಗಳಲ್ಲಿ ನಾನು ಅಂಥದ್ದೇ ವಿಶೇಷ ಕ್ಷಣಗಳನ್ನು ನಿರ್ಮಿಸಲು ಬಯಸಿರುವೆ ಎಂದು ಆರ್. ಅಶ್ವಿನ್ ಹೇಳಿದ್ದಾರೆ.

    ‘ಹರ್ಭಜನ್ ಸಿಂಗ್ ಅವರೊಬ್ಬ ಅತ್ಯುತ್ತಮ ಬೌಲರ್. ಅವರೊಂದಿಗೆ ನಾನು ಸಾಕಷ್ಟು ಪಂದ್ಯವಾಡಿರುವೆ. ಅವರ ಸಾಧನೆಯನ್ನು ಈಗ ಅಶ್ವಿನ್ 80 ಟೆಸ್ಟ್‌ಗಳಲ್ಲೇ ಹಿಂದಿಕ್ಕಿದ್ದಾರೆ. ಹೀಗಾಗಿ ಅಶ್ವಿನ್ ಸಾಧನೆ ಅಮೋಘವಾದುದು. ಅಶ್ವಿನ್ ಅವರೊಬ್ಬ ಮ್ಯಾಚ್ ವಿನ್ನರ್. ಈ ಕಠಿಣ ಪಿಚ್‌ನಲ್ಲೂ ಅವರು ಪಂದ್ಯವನ್ನು ನಮ್ಮತ್ತ ತಿರುಗಿಸಿದ್ದರು’ ಎಂದು ಕೋಚ್ ದ್ರಾವಿಡ್ ತಮಿಳುನಾಡು ಸ್ಪಿನ್ನರ್ ಅನ್ನು ಹೊಗಳಿದ್ದಾರೆ.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts