More

    ನಿರಂತರ ಜಿಟಿಜಿಟಿ ಮಳೆಯಿಂದ ಭತ್ತದ ಸಸಿಗಳಿಗೆ ಬಂದಿದೆ ಜೀವ

    ಅಶೋಕ ಬೆನ್ನೂರು ಸಿಂಧನೂರು
    ತಾಲೂಕಿನಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಭತ್ತದ ಹೊಲಗಳೆಲ್ಲ ಹಸಿಗೊಂಡಿದ್ದರಿಂದ ರೈತರು ಖುಷಿಯಾಗಿದ್ದು, ಈಗ ತುಂಗಭದ್ರಾ ಜಲಾಶಯ ಭರ್ತಿಯಾಗುವತ್ತ ಗಮನ ಹರಿಸಿದ್ದಾರೆ.

    ಜೂನ್‌ನಲ್ಲಿ ಸಸಿಮಡಿಗಳನ್ನು ಹಾಕಿಕೊಂಡು ಜಲಾಶಯದ ನೀರಿಗಾಗಿ ಕಾಯುತ್ತಿದ್ದ ರೈತರಿಗೆ ವರುಣ ನಿರಾಸೆ ಮೂಡಿಸಿದ್ದ. ಕೆಲವೆಡೆ ನೀರಿನ ಕೊರೆತೆಯಿಂದ ಸಸಿ ಮಡಿಗಳು ಒಣಗಿ ಹೋಗಿದ್ದವು. ಮುಂಗಾರು ಬೆಳೆ ಎಲ್ಲಿ ಕೈಕೊಡುವುದೋ ಎನ್ನುವ ಅನುಮಾನ ಮೂಡಿಸಿತ್ತು.

    ಜುಲೈ ಎರಡನೆಯ ವಾರವೂ ಮಳೆಯಾಗಲಿಲ್ಲ. ತುಂಗಭದ್ರಾ ಜಲಾಶಯದಲ್ಲೂ ಒಳಹರಿವು ಅಷ್ಟಕ್ಕಷ್ಟೇ ಇತ್ತು. ಇದು ಆತಂಕಕ್ಕೆ ಎಡೆ ಮಾಡಿತ್ತು. ಭತ್ತ ನಾಟಿಗಾಗಿ ಹೊಲಗಳನ್ನು ಸಜ್ಜುಗೊಳಿಸಿ ಮಳೆಗಾಗಿ ಕಾಯಬೇಕಿತ್ತು. ಕೊನೆಗೂ ಜುಲೈ ಮೂರನೇ ವಾರದಲ್ಲಿ ನಿರಂತರ ಜಿಟಿಜಿಟಿ ಮಳೆ ಶುರುವಾಗಿದ್ದು, ಆಗಾಗ ಉತ್ತಮ ಎನಿಸುವಷ್ಟು ಸುರಿಯುತ್ತಿರುವುದರಿಂದ ಭತ್ತದ ಗದ್ದೆಗಳು ಹಸಿಯಾಗಿದೆ.

    ಇನ್ನೊಂದೆಡೆ ತುಂಗಭದ್ರಾ ಜಲಾಶಯದಲ್ಲೂ ಒಳಹರಿವಿನ ಪ್ರಮಾಣವು ಹೆಚ್ಚುತ್ತಿದ್ದು, ನೀರಿನ ಸಂಗ್ರಹ ಹಿರಿದಾಗುತ್ತಿರುವುದು ಸಮಾಧಾನ ತಂದಿದೆ. ಒಂದು ವಾರದೊಳಗೆ ಈಗಿರುವ 18 ಟಿಎಂಸಿ ನೀರಿನ ಜತೆಗೆ ಇನ್ನೂ 20-25 ಟಿಎಂಸಿ ಸಂಗ್ರಹಗೊಳ್ಳುವ ನಿರೀಕ್ಷೆ ರೈತರದಾಗಿದೆ. ಈಗ ಮುಂಗಾರು ಬೆಳೆ ಬೆಳೆಯಬಹುದೆಂಬ ನಿರೀಕ್ಷೆ ಗರಿಗೆದರಿದೆ.

    ಇದನ್ನೂ ಓದಿ: ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ! ಎಲ್ಲೆಲ್ಲಿ ಶಾಲಾ ಕಾಲೇಜುಗಳಿಗೆ ರಜೆ?

    ಈ ಹಿಂದೆಯೂ ಎರಡು ಬಾರಿ ಆಗಸ್ಟ್-ಸೆಪ್ಟೆಂಬರ್ ಆಸುಪಾಸಿನಲ್ಲಿ ಭತ್ತ ನಾಟಿ ಮಾಡಿ, ಮುಂಗಾರು ಬೆಳೆ ಬೆಳೆದು ಬೇಸಿಗೆ ಬೆಳೆಯೂ ತೆಗೆಯಲಾಗಿದೆ. ಈಗ ಅದೇ ಸ್ಥಿತಿ ಮರುಕಳಿಸಿದೆ. ಜಲಾಶಯ ತುಂಬಿದರೆ ಎರಡು ಬೆಳೆ, ಅರ್ಧದಷ್ಟು ತುಂಬಿದರೆ ಒಂದು ಬೆಳೆ ಪಡೆಯುವ ಲೆಕ್ಕಾಚಾರ ಇದೆ. ಈಗೇನಿದ್ದರು ಜಲಾಶಯ ಶೀಘ್ರವೇ ಭರ್ತಿಯಾಗಲಿ ಎಂಬುದು ರೈತರ ಪ್ರಾರ್ಥನೆ.

    ನಿರಂತರ ಜಿಟಿಜಿಟಿ ಮಳೆಯಿಂದ ಭತ್ತದ ಸಸಿಗಳಿಗೆ ಬಂದಿದೆ ಜೀವ
    ಸಿಂಧನೂರು ತಾಲೂಕಿನಲ್ಲಿ ಜಿಟಿಜಿಟಿ ಮಳೆಯಿಂದ ಹಸಿಗೊಂಡಿರುವ ಭೂಮಿ.

    ಕಳೆದ ಎರಡು ದಿನಗಳಿಂದ ತುಂಗಭದ್ರಾ ಜಲಾಶಯದಲ್ಲಿ ಒಳಹರಿವು, ನೀರಿನ ಸಂಗ್ರಹ ಆಶಾದಾಯಕ ಭಾವನೆ ಮೂಡಿಸಿದ್ದು, ಕೃಷಿ ಚಟುವಟಿಕೆಗಳಿಗೆ ಶಕ್ತಿ ನೀಡಿದೆ. ಹೊಲಗಳಿಂದ ದೂರವಿದ್ದ ರೈತರೀಗ ಹಸಿಗೊಂಡಿರುವ ಸಸಿಗಳ ಪರಿಸ್ಥಿತಿ, ಸಸಿಗಳ ಹುಡುಕಾಟ, ಈಗಾಗಲೇ ಹಾಕಿಕೊಂಡಿರುವ ಸಸಿಗಳ ಸ್ಥಿತಿಗತಿಗಳ ಕಡೆ ಗಮನಹರಿಸುತ್ತಿದ್ದಾರೆ.

    ಜಲಾಶಯದಲ್ಲಿ ಅರ್ಧದಷ್ಟು ನೀರು ಸಂಗ್ರಹಗೊಂಡು ಎಡದಂಡೆ ನಾಲೆಗೆ ಹರಿಸಿದರೆ ಈಗ ಹಸಿಗೊಂಡಿರುವ ಭೂಮಿ ಹೆಚ್ಚಿನ ನೀರು ಕುಡಿಯುವುದಿಲ್ಲ. ಎಲ್ಲ ರೈತರು ಏಕಕಾಲಕ್ಕೆ ಭತ್ತ ನಾಟಿ ಮಾಡಬಹುದೆಂಬ ಆಲೋಚನೆ ಇದೆ. ಒಂದು ವೇಳೆ ನಾಲೆಗೆ ನೀರು ಬಂದು, ಮಳೆ ಆಗದಿದ್ದರೆ ರೈತರು ಭತ್ತ ನಾಟಿಗೆ ಹೆಚ್ಚಿನ ಸಮಸ್ಯೆ ಎದುರಿಸಬೇಕಿತ್ತು.

    ಮುಂದಿನ ವಾರದ ವೇಳೆಗೆ ಭತ್ತ ನಾಟಿಗೆ ಸ್ಪಷ್ಟ ಚಿತ್ರಣ ಬೀಳಲಿದೆ. ಒಟ್ಟಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ಮಂಕಾಗಿದ್ದ ಭತ್ತದ ಪ್ರದೇಶದಲ್ಲಿ ಮುಂಗಾರು ಬೆಳೆಯ ಬಗ್ಗೆ ಭರವಸೆ ಮೂಡಿಸಿರುವ ಮಳೆ, ಜಲಾಶಯದ ಒಳಹರಿವು ಇನ್ನಷ್ಟು ಖುಷಿ ನೀಡಿದೆ.

    ಕಳೆದ ಒಂದೂವರೆ ತಿಂಗಳಿಂದ ಮುಂಗಾರು ಭತ್ತದ ಬೆಳೆ ಭರವಸೆ ಕಳೆದುಕೊಂಡಿದ್ದವು. ಈಗ ನಿರಂತರ ಬೀಳುತ್ತಿರುವ ಜಿಟಿಜಿಟಿ ಮಳೆಯಿಂದ ಹೊಲ ಹಸಿಗೊಂಡಿದೆ. ಜತೆಗೆ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚುತ್ತಿದೆ. ವಾರದಲ್ಲಿ ಜಲಾಶಯದಿಂದ ನಾಲೆಗೆ ನೀರು ಬಿಡುವ ಭರವಸೆ ಇದೆ. ಸಸಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ.
    ಈರಪ್ಪ ಗೋನಾಳ, ಕುರುಕುಂದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts