More

    ಆಶಾ ಕಾರ್ಯಕರ್ತೆಯರ ಹೋರಾಟ ತಾತ್ಕಾಲಿಕ ಸ್ಥಗಿತ

    ಬೆಂಗಳೂರು: ಅಧಿವೇಶನ ನಂತರ (ಫೆ. 23ರ ಬಳಿಕ) ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ‘ವಿಧಾನಸೌಧ ಚಲೋ’ ಅಹೋರಾತ್ರಿ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರ ನಿಯೋಗ ಕರೆದು ಚರ್ಚಿಸಿದರು. ಈ ವೇಳೆ ಅಧಿವೇಶನ ನಂತರ ಸಿಎಂ ಅಧ್ಯಕ್ಷತೆಯಲ್ಲಿ ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಸಂಘದ ಪದಾಧಿಕಾರಿಗಳನ್ನು ಒಳಗೊಂಡ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ.

    ಸಿಎಂ ಜೊತೆಗಿನ ಸಭೆ ನಂತರ ಆಶಾ ಸಂಘಟನೆ ಮುಖಂಡರು ಹೋರಾಟ ಮುಂದೂಡುವ ತೀರ್ಮಾನ ಕೈಗೊಳ್ಳಲಾಗಿದೆ. ಅಧಿವೇಶನ ನಂತರದ ಸಭೆಯಲ್ಲಿ ಸರ್ಕಾರ ಕೈಗೊಳ್ಳಲಿರುವ ಕ್ರಮ ಆಧರಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ತಿಳಿಸಿದ್ದಾರೆ.

    ಆಶಾ ಕಾರ್ಯಕರ್ತೆಯರು ಬೇಡಿಕೆಗಳು: ಕೇಂದ್ರ, ರಾಜ್ಯ ಸರ್ಕಾರಗಳಿಂದ ಮಾಸಿಕ ವೇತನ 15 ಸಾವಿರ ರೂ. ನಿಗದಿ, ಪ್ರೋತ್ಸಾಹಧನ ಸಿಗದೆ ಆಗುತ್ತಿರುವ ವಂಚನೆ ತಡೆಗೆ ಆರ್.ಸಿ.ಎಚ್. ಪೋರ್ಟಲ್ ಅನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಡೀಲಿಂಕ್ ಮಾಡುವುದು, ಒತ್ತಾಯಪೂರ್ವಕ ಮೊಬೈಲ್ ಕೆಲಸಗಳನ್ನು ಕೈಬಿಟ್ಟು, ಮೊಬೈಲ್ ಬಳಕೆ ಬಾರದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು, ಮೊಬೈಲ್ ಡಾಟಾ ಒದಗಿಸಿ, ಅದರಲ್ಲಿ ಕೆಲಸ ಮಾಡುವವರಿಗೆ ಪ್ರೋತ್ಸಾಹಧನ ನಿಗದಿಪಡಿಸುವುದು. ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನಗಳಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts