More

    ಕುಂಬಳಕಾಯಿಗೆ ಬೆಲೆ ಸಿಗದೆ ಕೃಷಿಕರಿಗೆ ಸಂಕಷ್ಟ

    ಕೋಟ: ಇಲ್ಲಿನ ಕೋಡಿ ಕನ್ಯಾಣ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಸಾಹಿ ಯುವ ಕೃಷಿಕರ ತಂಡ ಸುಮಾರು 10 ಎಕರೆ ಕೃಷಿ ಭೂಮಿಯಲ್ಲಿ ಹಸಿರುಕುಂಬಳ ಬೆಳೆದಿದ್ದು, ಕಟಾವಿಗೆ ಬಂದ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಕಾಯಕಕ್ಕೆ ಸೂಕ್ತ ಪ್ರತಿಫಲ ಇಲ್ಲದಂತಾಗಿದೆ.

    ]ಕೋಡಿ ಕನ್ಯಾಣದ ಕೃಷ್ಣ ಪೂಜಾರಿ, ವಿಶ್ವನಾಥ ಪೂಜಾರಿ, ಶೇಖರ್ ಮರಕಾಲ, ರಾಜು ಪೂಜಾರಿ ತಮ್ಮ ತಮ್ಮ ಕೃಷಿಭೂಮಿಯ ಒಟ್ಟು 10 ಎಕರೆ ಪ್ರದೇಶದಲ್ಲಿ ಹಸಿರುಕುಂಬಳ ಬೆಳೆದಿದ್ದಾರೆ. ಅಕಾಲಿಕ ಮಳೆಯಿಂದ ಹಳದಿ ರೋಗದ ಬಾಧೆಯಿಂದ ಸಾಮಾನ್ಯ ಫಸಲು ಬಂದಿದೆ. ಆದರೆ ಅದಕ್ಕೂ ಸೂಕ್ತ ಬೆಲೆ ಸಿಗದೆ ಮಾರಾಟ ಕಷ್ಟವಾಗಿದೆ.
    ಕುಂಬಳಕಾಯಿ ಬೆಳೆದ ಬಳಿಕ ಕಟಾವು ಮಾಡದೆ ಹೆಚ್ಚು ದಿನ ಗದ್ದೆಯಲ್ಲಿಯೇ ಉಳಿಸಿದರೆ ಹಾನಿಯಾಗಿ ಕೊಳೆಯಲು ಆರಂಭಿಸುತ್ತದೆ. ಹಾಗೇ ಕೃಷ್ಣ ಪೂಜಾರಿ ಹಾಗೂ ಇತರರು ಬೆಳೆದ ಕುಂಬಳಕಾಯಿಗೂ ರೋಗ ಬಂದು ಕೆಲವಾರು ಕಾಯಿಗಳು ಹಾನಿಗೊಂಡಿದೆ.

    ಮಧ್ಯವರ್ತಿಗಳ ಹಾವಳಿ: ರೈತ ಬೆಳೆದ ಯಾವುದೇ ವಸ್ತುಗಳಿಗೆ ಮಧ್ಯವರ್ತಿಗಳ ಕಾಟ ತಪ್ಪಿದ್ದಲ್ಲ. ಮಾರುಕಟ್ಟೆಯಲ್ಲಿ ಕುಂಬಳಕಾಯಿ ಖರೀದಿಸುವ ದರ 10 ರೂ. ಇದ್ದರೆ ಕೃಷಿಕನ ಗದ್ದೆಯಲ್ಲಿ ಮಧ್ಯವರ್ತಿಗಳು ಕಿಲೋಗೆ 3 ರೂಪಾಯಿಗೆ ಕೇಳುತ್ತಿದ್ದಾರೆ. ಈ ಬೆಲೆಗೆ ಮಾರಿದರೆ ನಮ್ಮ ಶ್ರಮಕ್ಕೆ ಯಾವುದೇ ಪ್ರತಿಫಲ ಇಲ್ಲ, ಸರ್ಕಾರ ಇಲಾಖೆ ಮೂಲಕ ಬೆಂಬಲ ಮೂಲ ಬೆಲೆಯಲ್ಲಿ ಖರೀದಿಸಿದರೆ ಸ್ವಲ್ಪ ಮಟ್ಟಿನ ಸಮಾಧಾನವಿರುತ್ತದೆ ಎಂದು ಈ ಕೃಷಿಕರು ಮನವಿ ಮಾಡಿದ್ದಾರೆ.

    ಬೇಕಿದ್ದವರು ಸಂಪರ್ಕಿಸಿ
    ಕೋಡಿ ಕನ್ಯಾಣದ ಕೃಷಿಕರು ಒಟ್ಟು 10 ಎಕರೆಯಲ್ಲಿ ಸುಮಾರು 40 ಟನ್ ಕುಂಬಳಕಾಯಿ ಫಸಲು ಬಂದಿದ್ದು, ರಖಂ ಆಗಿ ಖರೀದಿಸುವ ಆಸಕ್ತರು ಕೃಷ್ಣ ಪೂಜಾರಿ (94489 55444) ಅವರನ್ನು ಸಂಪರ್ಕಿಸಬಹುದು.

    ನಾವು ಪ್ರತಿವರ್ಷ ಕುಂಬಳಕಾಯಿ ಅಥವಾ ಕಲ್ಲಂಗಡಿ ಬೆಳೆಸುತ್ತೇವೆ. ಈ ವರ್ಷ ಕುಂಬಳಕಾಯಿ ಕೃಷಿ ಮಾಡಿದ್ದೇವೆ. ಬದಲಾದ ವಾತಾವರಣದ ವ್ಯವಸ್ಥೆಯಲ್ಲಿ ಚಂಡಮಾರುತದ ಪ್ರಭಾವದಿಂದ ಬೆಳೆ ಹಾನಿಯಾಗಿದೆ. ಅಲ್ಪಸ್ವಲ್ಪ ಫಸಲು ಬಂದರೂ ದರ ಸಿಗದೆ ಕೃಷಿ ಕಾಯಕದ ಮೇಲೆ ಕರಿನೆರಳು ಬೀಳುವಂತಾಗಿದೆ.
    ಕೃಷ್ಣ ಪೂಜಾರಿ ಪಿ., ಪ್ರಗತಿಪರ ಯುವ ಕೃಷಿಕ

    ಇಂದಿನ ಮಾರುಕಟ್ಟೆ ವ್ಯವಸ್ಥೆಯಲ್ಲಿ ನೇರ ಮಾರುಕಟ್ಟೆಗೆ ಇಳಿಯುವುದು ಒಳ್ಳೆಯದು. ಏಕೆಂದರೆ ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ನೇರ ಮಾರುಕಟ್ಟೆ ಪರಿಣಾಮ ಬೀರಿದ್ದು ಲಾಭದಾಯಕ ದರ ಸಿಕ್ಕಿದೆ. ಹಾಪ್‌ಕಾಮ್ಸ್ ಮೂಲಕವೂ ವ್ಯವಹಾರ ನಡೆಸಬಹುದು. ನಮ್ಮಲ್ಲಿ ದೊಡ್ಡ ಮಟ್ಟದ ಸ್ಟೋರೇಜ್ ವ್ಯವಸ್ಥೆಗಳಿಲ್ಲ.
    ಭುವನೇಶ್ವರಿ, ತೋಟಗಾರಿಕಾ ಉಪನಿರ್ದೇಶಕರು ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts