More

    ಅನರ್ಘ್ಯ ರತ್ನಗಳಿಗೆ ಜಾಗತಿಕ ಮನ್ನಣೆ; ಇಂದು ವಿಶ್ವ ಪರಂಪರೆ ದಿನ

    ನಮ್ಮ ರಾಜ್ಯದಲ್ಲಿ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳಿ ಗೇನೂ ಕೊರತೆ ಇಲ್ಲ. ಆದರೂ ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಯಲ್ಲಿ ಈಗ ಇರುವ ನಮ್ಮ ಪ್ರೇಕ್ಷಣೀಯ ತಾಣಗಳು ಬೆರಳೆಣಿಕೆಯಷ್ಟು. ಹಾಗಾಗಿ ನಮ್ಮಲ್ಲಿರುವ ಪಾರಂಪರಿಕ ಸ್ಥಳಗಳಿಗೆ ಜಾಗತಿಕ ಮನ್ನಣೆಯ ಟ್ಯಾಗ್ ಕೊಡಿಸುವ ವಿಚಾರದಲ್ಲಿ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನಿಸುತ್ತಿಲ್ಲವೇ ಎಂಬ ಗಂಭೀರ ಅನುಮಾನವಿದೆ.

    | ಶ್ರೀಕಾಂತ್ ಶೇಷಾದ್ರಿ

    ವಿಶ್ವದ ವಿವಿಧ ದೇಶಗಳು ತಮ್ಮಲ್ಲಿನ ಅಪರೂಪದ ಸ್ಥಳಗಳನ್ನು ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ದೊಡ್ಡ ಲಾಬಿಯನ್ನೇ ನಡೆಸುತ್ತವೆ. ನಮ್ಮಲ್ಲಿ ಎಲ್ಲಾ ಆಯಾಮದಲ್ಲೂ ಅರ್ಹತೆ ಇರುವ ಸ್ಥಳಗಳಿದ್ದರೂ ಪಟ್ಟಿಗೆ ಸೇರಿಸಲು ಬೇಕಾದ ಪ್ರಯತ್ನ ಸಾಕಾಗುತ್ತಿಲ್ಲ ಎಂಬ ಕೂಗಿದೆ. ಈಗಾಗಲೇ ಹಂಪಿ, ಪಟ್ಟದಕಲ್ಲು ಹಾಗೂ ಪಶ್ಚಿಮಘಟ್ಟಗಳು ಈ ಪಟ್ಟಿಗೆ ಸೇರ್ಪಡೆಯಾದ ರಾಜ್ಯದ ಮೂರು ತಾಣಗಳು. ಈ ಪಟ್ಟಿಗೆ ಮೈಸೂರು ದಸರಾ, ಡೆಕ್ಕನ್ ಸುಲ್ತಾನರು ಮತ್ತು ಹೊಯ್ಸಳರ ಆಳ್ವಿಕೆಯ ಸ್ಥಳಗಳನ್ನು ಸೇರಿಸಬೇಕೆಂಬ ಪ್ರಸ್ತಾವನೆ ರಾಜ್ಯದಿಂದ ಸಲ್ಲಿಕೆಯಾಗಿತ್ತು. ಮೈಸೂರು ದಸರಾ ಪ್ರಸ್ತಾವನೆಯನ್ನು ಯುನೆಸ್ಕೋ ಒಪ್ಪಿಕೊಂಡೂ ಇಲ್ಲ, ತಿರಸ್ಕರಿಸಿಯೂ ಇಲ್ಲ. ಒಂದರ್ಥದಲ್ಲಿ ಪ್ತಸ್ತಾವನೆ ತ್ರಿಶಂಕು ಸ್ಥಿತಿಯಲ್ಲಿದೆ. ಉಳಿದ ಪ್ರಸ್ತಾವನೆಗಳೂ ತಾತ್ಕಾಲಿಕ ಪಟ್ಟಿಯಲ್ಲಿದ್ದು, ಯುನೆಸ್ಕೋವನ್ನು ಒಪ್ಪಿಸಲು ಆಳುವ ಸರ್ಕಾರದ ಒತ್ತಾಸೆ ಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೈಚಳಿ ಬಿಟ್ಟು ಲಾಬಿ ಮಾಡಬೇಕಾಗಿದೆ. ಈ ಪ್ರಸ್ತಾವನೆ ಬಾಕಿಯಾಗಿ ಆರು ವರ್ಷಗಳೇ ಕಳೆದಿವೆ. ಕಳೆದ ಒಂದು ದಶಕದಿಂದ ದೇಶದ ಪ್ರಸ್ತಾವನೆಗೆ ರಾಜ್ಯದ ಕಡೆಯಿಂದಲೂ ಕೋರಿಕೆ ಸಲ್ಲಿಕೆಯಾಗಿದೆ. ಮೈಸೂರು- ದಸರಾ, ಡೆಕ್ಕನ್ ಸುಲ್ತಾನರ ಕಲಬುರಗಿ, ಬೀದರ್ ಹಾಗೂ ವಿಜಯಪುರ, ಶ್ರೀರಂಗಪಟ್ಟಣ ಮತ್ತು ಹೊಯ್ಸಳರು ರೂಪಿಸಿದ ಬೇಲೂರು ಹಾಗೂ ಹಳೆಬೀಡನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲು ಪ್ರಯತ್ನಗಳಾದವು. ಪ್ರಯತ್ನ ತುದಿಮುಟ್ಟಿಲ್ಲ. ತಾತ್ಕಾಲಿಕ ಪಟ್ಟಿಯಲ್ಲೇ ಉಳಿದಿದೆ. ಯುನೆಸ್ಕೊ ಬಯಸುವ ಮಾಹಿತಿ ನೀಡಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಕೊನೆಗಾಣಿಸುವ ಕೆಲಸವಾಗಿಲ್ಲ.

    ಇಲ್ಲಿದೆ ಆಗರ್ಭ ಶ್ರೀಮಂತಿಕೆ: ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಯೋಗ್ಯವಾದ ಸ್ಥಳಗಳು ಕರುನಾಡಲ್ಲಿ ಸಾಕಷ್ಟಿವೆ. ಹಾಲಿ ಜಾಗತಿಕ ಪಟ್ಟಿಯಲ್ಲಿರುವ ಸ್ಥಳಗಳನ್ನು ಗಮನಿಸಿದಾಗ ತಲಕಾಡಿನ ಅಪರೂಪದ ರಚನೆ, ಜಗದ್ವಿಖ್ಯಾತ ಜೋಗ ಜಲಪಾತ, ಸೇಂಟ್ ಮೇರೀಸ್ ದ್ವೀಪ, ಚಿತ್ರದುರ್ಗದ ಏಳು ಸುತ್ತಿನ ಕೋಟೆ ಕೂಡ ಯಾವುದಕ್ಕೂ ಕಡಿಮೆ ಇಲ್ಲ ಎಂಬಂತಿವೆ. ಪಟ್ಟಿಗೆ ಸೇರಿಸುವ ಪ್ರಯತ್ನ ರಾಜ್ಯ ಸರ್ಕಾರದ ಕಡೆಯಿಂದ ಆಗಬೇಕಷ್ಟೆ. ಅಂದಹಾಗೆ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಇಬ್ಬಗೆಯ ಅಭಿಪ್ರಾಯವಿದೆ. ಮಾಹಿತಿ ಕೊರತೆಯಿಂದ ಒಂದಷ್ಟು ಬೆದರಿಕೆಯ ಗುಮ್ಮವೂ ಉಂಟು. ‘ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದರೆ ಆ ಸ್ಥಳ ಯುನೆಸ್ಕೋ ಪಾಲಾಗುತ್ತದೆ, ಸುತ್ತಮುತ್ತಲ ಪ್ರದೇಶದಲ್ಲಿ ಜನವಸತಿ ತೆರವು ಮಾಡಲಾಗುತ್ತದೆ’ ಎಂಬ ಅಂತೆಕಂತೆಗಳ ಸಂತೆಯೂ ಇದೆ.

    ಪಟ್ಟಿಗೆ ಸೇರಿಸುವವರು ಯಾರು?: ವಿಶ್ವಸಂಸ್ಥೆಯ ಸಾಂಸ್ಕೃತಿಕ ಅಂಗಸಂಸ್ಥೆಯಾದ ಯುನೆಸ್ಕೋ ವಿಶ್ವದ ವಿಶಿಷ್ಟ ತಾಣಗಳನ್ನು ವಿಶ್ವ ಪರಂಪರೆಯ ತಾಣವಾಗಿ ಘೊಷಿಸುತ್ತದೆ. 21 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ‘ಯುನೆಸ್ಕೋ ವಿಶ್ವ ಪರಂಪರೆ ತಾಣ ಸಮಿತಿ’ಯು ಪ್ರಸ್ತಾವಿತ ತಾಣಗಳ ಅರ್ಹತೆಯನ್ನು ಅಳೆದು, ಮಾನದಂಡಗಳಿಗೆ ಹೊಂದಿಕೆಯಾಗುವಂತಿದ್ದರೆ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುತ್ತದೆ

    ಯಾವುದನ್ನು ಪರಿಗಣಿಸುತ್ತಾರೆ?: ಸ್ಮಾರಕ, ಕಟ್ಟಡ, ಸಂಕೀರ್ಣ, ಅರಣ್ಯ, ಪರ್ವತ, ಮರುಭೂಮಿ, ಸರೋವರ ಮುಂತಾಗಿ ಏನು ಬೇಕಾದರೂ ಆಗಿರಬಹುದು. ಅಷ್ಟೇ ಏಕೆ, ಒಂದು ನಗರವನ್ನು ಕೂಡ, ಅದಕ್ಕೆ ಅರ್ಹತೆ ಇದ್ದರೆ, ಪರಿಗಣಿಸಲಾಗುತ್ತದೆ.

    ಉದ್ದೇಶವೇನು?: ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಮಹತ್ವ ಹೊಂದಿದ ಸ್ಥಳ ಗುರುತಿಸಿ ಅದಕ್ಕೆ ಜಾಗತಿಕ ಟ್ಯಾಗ್ ನೀಡಿದಾಗ ಅದರ ಮಹತ್ವ ಆ ಪ್ರದೇಶದ ಜನರಿಗಾಗುತ್ತದೆ ಮತ್ತು ಅದನ್ನು ಸಂರಕ್ಷಣೆ ಮಾಡಬೇಕಾದವರ ಜವಾಬ್ದಾರಿ ತಿಳಿಸಿಕೊಟ್ಟಂತಾಗುತ್ತದೆ. ಅಷ್ಟೇ ಅಲ್ಲದೆ, ಗುರುತಿಸಲ್ಪಟ್ಟ್ಟ ಪ್ರತಿ ತಾಣವೂ ಆಯಾ ರಾಷ್ಟ್ರದ ಸ್ವತ್ತೇ ಆಗಿದ್ದರೂ ಅವುಗಳನ್ನು ಕಾಪಿಡುವ ಜವಾಬ್ದಾರಿ ಸಮಸ್ತ ಪ್ರಪಂಚಕ್ಕೆ ಸೇರಿದ್ದೆಂಬುದನ್ನು ತಿಳಿಸಿಕೊಟ್ಟಂತಾಗುತ್ತದೆ. ಸ್ಥಳೀಯ ಸರ್ಕಾರ ಸಂರಕ್ಷಣೆಯ ಜವಾಬ್ದಾರಿಯನ್ನು ಮರೆತಾಗ ಜಾಗತಿಕ ತಾಣದ ಬಗ್ಗೆ ಅವಗಣನೆ ಮಾಡಲಾಗಿದೆ ಎಂದೇ ಬಿಂಬಿತವಾಗುತ್ತದೆ.

    ಆಯ್ಕೆ ನಡೆಯುವುದು ಹೀಗೆ: ಮೊದಲಿಗೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕೆಂದಿರುವ ಸ್ಥಳದ ನಾಮನಿರ್ದೇಶನವನ್ನು ಸ್ಥಳೀಯ ಸರ್ಕಾರ ಮಾಡಬೇಕಾಗುತ್ತದೆ. ನಂತರ ವರ್ಲ್್ಡ ಹೆರಿಟೇಜ್ ಕಮಿಟಿ ಆ ಸ್ಥಳದ ಪರಿಶೀಲನೆ ನಡೆಸಿ ಪಟ್ಟಿಗೆ ಸೇರಿಸುವುದು ಸೂಕ್ತವೋ, ಅಲ್ಲವೋ ಎಂಬ ಅಭಿಪ್ರಾಯ ನೀಡುತ್ತದೆ. ಅಂತಿಮವಾಗಿ ಯುನೆಸ್ಕೋ ತೀರ್ಮಾನ ಕೈಗೊಳ್ಳುತ್ತದೆ. ಪ್ರಾರಂಭಿಕ ಹಂತದಲ್ಲಿ ಒಂದು ದೇಶ ತನ್ನ ಎಲ್ಲಾ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಆಸ್ತಿಗಳ ಪಟ್ಟಿ ಅಂತಿಮಗೊಳಿಸಬೇಕು. ಮುಂದೆ ಈ ಪಟ್ಟಿಯೊಳಗಿನ ತಾಣಗಳನ್ನು ಮಾತ್ರ ವಿಶ್ವ ಪರಂಪರೆಯ ತಾಣವಾಗಿ ಘೊಷಿಸಲು ನಾಮಕರಣ ಸಲ್ಲಿಸಬಹುದಾಗಿರುತ್ತದೆ. ಪ್ರಸ್ತಾವನೆಯು ತಾಣದ ಬಗೆಗಿನ ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳನ್ನು ಒಳಗೊಂಡಿರಬೇಕು. ಪ್ರಸ್ತಾವನೆ ಸಲ್ಲಿಕೆಯಾದ ಬಳಿಕ ಅಂತಾರಾಷ್ಟ್ರೀಯ ಸ್ಮಾರಕ ಮತ್ತು ತಾಣಗಳ ಸಮಿತಿ ಅಧ್ಯಯನ ಮಾಡಿ ವರದಿಯನ್ನು ಶಿಫಾರಸುಗಳೊಂದಿಗೆ ವಿಶ್ವ ಪರಂಪರಾ ಸಮಿತಿಗೆ ಸಲ್ಲಿಸುತ್ತವೆ. ವರ್ಷಕ್ಕೊಮ್ಮೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ.

    ಹಣ ಬಂದಿದ್ದು ಅಷ್ಟಕ್ಕಷ್ಟೆ: ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಕೂಡಲೇ ಆ ಸ್ಥಳದ ಅಭಿವೃದ್ಧಿಗೆ, ಸಂರಕ್ಷಣೆಗೆ ಹಣದ ಹೊಳೆ ಹರಿಯುತ್ತದೆ ಎಂದೇನಿಲ್ಲ. ಈವರೆಗೆ ದೇಶದಲ್ಲಿ ಅಥವಾ ರಾಜ್ಯದಲ್ಲಿರುವ ವಿಶ್ವ ಪಾರಂಪರಿಕ ತಾಣಕ್ಕೆಂದು ಯುನೆಸ್ಕೊದಿಂದ ಎಷ್ಟು ಹಣ ಬಂದಿದೆ ಎಂದರೆ ಸರ್ಕಾರದ ಬಳಿ ಸ್ಪಷ್ಟ ಉತ್ತರವಿಲ್ಲ. ಪಟ್ಟಿಯಲ್ಲಿರುವ ಸ್ಥಳಗಳಿಗೆ ಪ್ರತಿ ವರ್ಷ ಯುನೆಸ್ಕೊದಿಂದ 40 ಲಕ್ಷ ಡಾಲರ್ ಒದಗಿಸಲಾಗುತ್ತದೆ. ಈ ಅನುದಾನ ಬಿಡುಗಡೆ ಯಾಗಬೇಕಾದರೆ ಸ್ಥಳಿಯ ಸರ್ಕಾರ ಮತ್ತು ದಾನಿಗಳೂ ಪಾಲು ಕೊಡಬೇಕು. ಬಳಿಕ ಯುನೆಸ್ಕೊ ಸೂಚನೆಯಂತೆ ಸಂರಕ್ಷಣಾ ಕೆಲಸ ನಡೆಯಬೇಕು ಎಂಬ ಮಾಹಿತಿ ಇದೆ. ಆದರೆ ಅಧಿಕಾರಿಗಳಲ್ಲಿ ಇದರ ಬಗ್ಗೆ ಸ್ಪಷ್ಟತೆ ಇಲ್ಲ.

    ಲಾಬಿ ದೊಡ್ಡದು: ನಿಯಮಾವಳಿಯ ಪ್ರಕಾರ ದೇಶಗಳು ತಮ್ಮಲ್ಲಿರುವ ಅಪರೂಪದ ತಾಣಗಳನ್ನು ತಾತ್ಕಾಲಿಕ ಪಟ್ಟಿಗೆ ಸೇರಿಸುವಂತೆ ಮೊದಲು ಒತ್ತಾಯಿಸಬೇಕು. ಬಳಿಕ ಅದನ್ನು ಖಾಯಂ ಪಟ್ಟಿಗೆ ಸೇರಿಸಲು ಪ್ರಯತ್ನಿಸಬೇಕು. ಲಭ್ಯ ಮಾಹಿತಿಯ ಪ್ರಕಾರ 193 ರಾಷ್ಟ್ರಗಳ ಪೈಕಿ 184 ರಾಷ್ಟ್ರಗಳು ತಮ್ಮ ತಾಣಗಳನ್ನು ಜಾಗತಿಕ ಪಟ್ಟಿಯಲ್ಲಿ ಸೇರಿಸಲು ನಿರಂತರವಾಗಿ ಒತ್ತಾಯಿಸುತ್ತಲೇ ಬಂದಿವೆ. ಭಾರತದ ಪ್ರಯತ್ನ ಏನೇನೂ ಸಾಲದು ಎಂಬ ಅಭಿಪ್ರಾಯ ಇದೆ.

    ವಿಶ್ವಕ್ಕೆ ಶೋಕೇಸ್​: ವಿಶ್ವ ಪರಂಪರೆ ತಾಣ ಎಂದು ಗುರುತಿಸುವ ಮೂಲಕ ವಿಶ್ವಕ್ಕೆ ಪರಿಚಯಿಸುವುದು ಹಾಗೂ ಭವಿಷ್ಯದ ಪೀಳಿಗೆಗಾಗಿ ಜತನದಿಂದ ಕಾಪಾಡಲು ಮಹತ್ವ ನೀಡುವುದೇ ಈ ಜಾಗತಿಕ ಪಟ್ಟಿಯ ಉದ್ದೇಶ. ವಿಶ್ವ ಪಾರಂಪರಿಕ ತಾಣ ನಮ್ಮ ಪ್ರದೇಶದಲ್ಲಿದೆ ಎಂಬುದು ಜನರಿಗೂ ಹೆಮ್ಮೆ, ಸರ್ಕಾರಕ್ಕೂ ಇದನ್ನು ವಿಶ್ವದ ಮುಂದೆ ಶೋಕೇಸ್ ಮಾಡಲು ಅವಕಾಶ. ಪ್ರವಾಸೋದ್ಯಮ ಬೆಳೆಸಲು ಪೂರಕ. ಅಷ್ಟೇ ಅಲ್ಲ, ಈ ತಾಣವನ್ನು ಕೇಂದ್ರವಾಗಿ ಇಟ್ಟುಕೊಂಡು ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ಜೋಡಿಸಿ ಪ್ರವಾಸಿ ಸರ್ಕ್ಯೂಟ್ ಮಾಡಲು ಅವಕಾಶವಿರುತ್ತದೆ.

    ಪರಿಗಣನೆ ಸಲೀಸಲ್ಲ…: ಯಾವುದೇ ಸ್ಥಳವು ವಿಶ್ವ ಪರಂಪರೆ ತಾಣವಾಗಿ ಘೊಷಿಸಲ್ಪಡಬೇಕಾದರೆ ಹತ್ತು ಮಾನದಂಡಗಳಿಂದ ಪರೀಕ್ಷೆಗೆ ಒಳಪಡುತ್ತದೆ. ಒಂದು ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆ ಹೊಂದಿರಬೇಕು ಅಥವಾ ಇಂದು ಜೀವಂತವಾಗಿರುವ ಇಲ್ಲವೇ ನಶಿಸಿಹೋಗಿರುವ ನಾಗರಿಕತೆಯೊಂದರ ದ್ಯೋತಕವಾಗಿರಬೇಕು. ಅತಿ ವಿಶಿಷ್ಟ ನೈಸರ್ಗಿಕ ಸ್ವರೂಪವನ್ನು ಹೊಂದಿರಬೇಕು. ಇಲ್ಲವೇ ಅದ್ಭುತ ಪ್ರಕೃತಿ ಸೌಂದರ್ಯದ ಪ್ರದೇಶವಾಗಿರಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts