More

    ಭಾರತೀಯ ಸಂಸ್ಕೃತಿ ದೃಷ್ಟಿಯಲ್ಲಿ ‘ವಿಶ್ವ ಸ್ನೇಹ ದಿನ’; ಸ್ನೇಹಕ್ಕೆ ಭಾಷೆ, ಧರ್ಮ, ಸಂಪ್ರದಾಯಗಳ ನಿರ್ಬಂಧಗಳಿಲ್ಲ..

    | ಮೇಧಾ ಪ್ರ. ಜೋಶಿ

    ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಆಚರಣೆಗಳು ಒಂದು ಆಧ್ಯಾತ್ಮಿಕ, ಧಾರ್ಮಿಕ, ಪೌರಾಣಿಕ ಹಿನ್ನೆಲೆಯಲ್ಲಿ ನೆಲೆ ಕಟ್ಟಿವೆ. ಅಗೆದಷ್ಟು ಆಳ, ಏರಿದಷ್ಟು ಎತ್ತರ ನಮ್ಮ ಭಾರತೀಯ ಸಂಪ್ರದಾಯ. ಇಂದಿನ ಆಧುನಿಕತೆಯಲ್ಲಿ ಸಾಂಪ್ರದಾಯಿಕ ಹಿನ್ನೆಲೆಗಳನ್ನು ಅಲ್ಲಗಳೆದು ಎಲ್ಲದಕ್ಕೂ ಪಾಶ್ಚಾತ್ಯರ ಮುಖವಾಡ ಧರಿಸುವುದೇ ಬುದ್ಧಿಜೀವಿತ್ವವಾಗಿದೆ. ಕೆಲವರಿಗೆ ಸಂಪ್ರದಾಯಗಳನ್ನು ಆಚರಿಸುವುದು, ಅವುಗಳಲ್ಲಿ ನಂಬಿಕೆ ಇಡುವುದು, ಒಂದು ರೀತಿಯ ಅಸಡ್ಡೆ, ಅವಮಾನದ ಸಂಗತಿಯಾಗಿದೆ.

    ಇರಲಿ.. ಈ ವಿಶ್ವ ಸ್ನೇಹ ದಿನದ ಒಂದು ಪಾಶ್ಚಾತ್ಯ ಹಿನ್ನೆಲೆಯನ್ನು ತಿಳಿಯೋಣ. ಇದು ಮೂಲತಃ 1958ರಲ್ಲಿ ಅಮೆರಿಕದಲ್ಲಿ ಪ್ರಾರಂಭವಾದದ್ದು. ನಂತರ 2011ರಲ್ಲಿ ವಿಶ್ವಸಂಸ್ಥೆಯು ಅಧಿಕೃತವಾಗಿ ಜುಲೈ 30ರಂದು ರಾಷ್ಟ್ರೀಯ ಸ್ನೇಹದಿನ” ಎಂದು ಘೋಷಿಸಿತು. ನಂತರ ವಿಶ್ವದ ಅನೇಕ ರಾಷ್ಟ್ರಗಳು ಸ್ನೇಹದಿನವನ್ನು ಆಚರಿಸಲಾರಂಭಿಸಿದವು. ಭಾರತದಲ್ಲಿ ಆಗಸ್ಟ್ ತಿಂಗಳಿನ ಮೊದಲನೆಯ ಭಾನುವಾರದಂದು ಇದನ್ನು ಆಚರಿಸಲಾಗುತ್ತದೆ.

    ವಿವಿಧತೆಯಲ್ಲಿ ಏಕತೆಯ ಭಾವನೆಯನ್ನು ಮೂಡಿಸುವುದು ನಮ್ಮ ಭಾರತೀಯ ಪರಂಪರೆ, “ವಸುಧೈವ ಕುಟುಂಬಕಮ್” “ಇಡೀ ವಿಶ್ವವೇ ಒಂದು ಕುಟುಂಬ” ಎಂಬ ಮಹಾನ್ ಸಂದೇಶವನ್ನು ಜಗತ್ತಿಗೆ ಕೊಟ್ಟಿದ್ದು ನಮ್ಮ ಸನಾತನ ಧರ್ಮ. ಸ್ನೇಹಕ್ಕೆ ಭಾಷೆ, ಧರ್ಮ, ಸಂಪ್ರದಾಯಗಳ ನಿರ್ಬಂಧಗಳಿಲ್ಲ. ನಮಗಿಂತ ಉತ್ತಮರಲ್ಲಿ ಮಾಡುವ ಸ್ನೇಹವೇ ಭಕ್ತಿ. ನಮಗಿಂತ ಹಿರಿಯರಲ್ಲಿ ಮಾಡುವ ಸ್ನೇಹವೇ ಗೌರವ, ನಮ್ಮ ಸಮಾನರಲ್ಲಿ ಮಾಡುವ ಸ್ನೇಹವೇ ಪ್ರೀತಿ-ವಿಶ್ವಾಸಗಳು. ನಮಗಿಂತ ಕಿರಿಯರಲ್ಲಿ ಮಾಡುವ ಸ್ನೇಹವೇ ಕರುಣೆ ಅಂತಃಕರಣ. ಹೀಗೆ ಎಲ್ಲರಲ್ಲಿಯೂ ಮಾಡುವ ಅನೇಕಭಾವನೆಗಳಿಗೆ ಮೂಲ “ಸ್ನೇಹ”.

    ಇಂತಹ ನಿರ್ಮಲ ಸ್ನೇಹದ ಬಗ್ಗೆ ಕೆಲವೊಂದು ಪೌರಾಣಿಕ ಹಿನ್ನೆಲೆಗಳನ್ನು ತಿಳಿಯೋಣ..

    ಹೀಗೆ ಒಂದು ಘಟನೆ ಮಹಾಭಾರತದಲ್ಲಿ ಕರ್ಣ ಮತ್ತು ದುರ್ಯೋಧನರ ಮಧ್ಯೆ ನಡೆಯಿತು. ರಾಜಕೀಯ ಕೆಲಸಕ್ಕಾಗಿ ಒಮ್ಮೆ ದುರ್ಯೋಧನ ರಾಜ್ಯದಿಂದ ಹೊರಗೆ ಹೋಗಿದ್ದ. ದುರ್ಯೋಧನನ ಹೆಂಡತಿ ಭಾನುಮತಿ ಮತ್ತು ಅವನ ಸ್ನೇಹಿತ ಕರ್ಣ ಇಬ್ಬರೂ ಪಗಡೆ ಆಡುತ್ತಿರುವ ಸನ್ನಿವೇಶ, ಆಗ ಸೋಲಿನ ಭಯದಿಂದ ಭಾನುಮತಿ ಆಟದಿಂದ ಮಧ್ಯದಲ್ಲಿ ಎದ್ದಾಗ ಕರ್ಣ ಭಾನುಮತಿಯ ಕೈ ಹಿಡಿದು ಎಳೆದ. ಆಗ ಅವಳ ಸೆರಗಿಗೆ ಅಲಂಕರಿಸಿದ ಮುತ್ತುಗಳೆಲ್ಲ ಬಿಚ್ಚಿ ಉದುರಿದವು. ಅದೇ ಸಮಯದಲ್ಲಿ ಬಂದು ದುರ್ಯೋಧನನ್ನು ನೋಡಿ ಕರ್ಣ ಮತ್ತು ಭಾನುಮತಿ ಸಂಕೋಚದಿಂದ ತಲೆ ತಗ್ಗಿಸಿದರು. ದುರ್ಯೋಧನನು “ಭಾನುಮತಿ! ಈ ಮುತ್ತುಗಳನ್ನು ಆರಿಸಿ ಕೊಡಲಾ ಇಲ್ಲವೇ ಪೋಣಿಸಿ ಕೊಡಲಾ” ಎಂದು ಕೇಳುತ್ತಾನೆ. ದುರ್ಯೋಧನನ ಈ ವಿಶ್ವಾಸ ಕಂಡು ಸ್ನೇಹಿತ ಕರ್ಣ ಕರಗಿ ಹೋಗುತ್ತಾನೆ. ಕರ್ಣ ಸಹ ಪಾಂಡವರು ತನ್ನ ತಮ್ಮಂದಿರು, ಕುಂತಿ ತನ್ನ ತಾಯಿ ಎಂದು ತಿಳಿದರೂ ತನ್ನ ಸ್ನೇಹದ ಪ್ರಾಮಾಣಿಕತೆ ಉಳಿಸಿಕೊಳ್ಳಲು ಸಂಬಂಧಗಳನ್ನು ದೂರಮಾಡಿದ. ಇಲ್ಲಿ ಇವರಿಬ್ಬರ ಸ್ನೇಹ ಮತ್ತು ಪರಸ್ಪರ ವಿಶ್ವಾಸ ಗಮನಾರ್ಹ.

    ನಮ್ಮ ಹಿರಿಯರು ಸಾಂಪ್ರದಾಯಿಕವಾಗಿ “ಸ್ನೇಹದ ದಿನ”ವನ್ನು ಆಚರಿಸುವ ಒಂದು ಬಗೆಯನ್ನು ಹೇಳಿದ್ದಾರೆ. ಅದರ ಹಿನ್ನೆಲೆಯನ್ನು ತಿಳಿಯೋಣ. ಮಹಾಭಾರತದಲ್ಲಿ ಬರುವ ಶ್ರೀಕೃಷ್ಣ ಸುಧಾಮರ ಕಥೆ ಎಲ್ಲರಿಗೂ ತಿಳಿದಿರುವುದು. ಬಡತನದ ಬೇಗೆಯಲ್ಲಿ ಬೆಂದ ಸುಧಾಮ ಏನಾದರೂ ಸಹಾಯವಾದೀತೇ ಎಂಬ ಅಪೇಕ್ಷೆಯಿಂದ ಶ್ರೀಕೃಷ್ಣನನ್ನು ಭೇಟಿಯಾಗಲು ಬಂದ. ಜೊತೆಯಲ್ಲಿ ತಂದದ್ದು ಕೇವಲ ಒಂದು ಹಿಡಿ ಅವಲಕ್ಕಿ, ಶ್ರೀಕೃಷ್ಣನಿಗೆ ಅದನ್ನು ಅರ್ಪಿಸಿದ. ಸರ್ವೋತ್ತಮನಾದ ಶ್ರೀಕೃಷ್ಣನಿಗೆ ಪರಮಾನ್ನಕ್ಕಿಂತಲೂ ರುಚಿಯಾಯಿತು ಆ ಹಿಡಿ ಅವಲಕ್ಕಿ, ಶ್ರೀಕೃಷ್ಣನಿಗೆ ಅದರಲ್ಲಿ ರುಚಿಸಿದ್ದು ಸುಧಾಮನ ನಿಷ್ಕಲ್ಮಷ ಸ್ನೇಹ. ತನ್ನ ಕಷ್ಟವನ್ನು ಹೇಳಿಕೊಂಡು ಏನಾದರೂ ಸಹಾಯ ಬೇಡಬೇಕೆಂದು ಬಂದ ಸುಧಾಮ ಕೊನೆಗೆ ಏನನ್ನೂ ಬೇಡದೆ ಮೂಕನಾಗಿ ತಿರುಗಿ ಹೋದ. ಸ್ನೇಹದ ಮುಖವಾಡ ಧರಿಸಿ ಲೋಭವನ್ನು ಮಾಡಬಾರದು ಎಂಬ ಸುಧಾಮನ ಈ ನಿಸ್ವಾರ್ಥ ಸ್ನೇಹಕ್ಕೆ ಶ್ರೀಕೃಷ್ಣನ ಹೃದಯ ಕರಗಿತು. ಸಕಲ ಐಶ್ವರ್ಯಗಳನ್ನೂ ಕರುಣಿಸಿದ. ಅಂದಿನಿಂದ ನಮ್ಮ ಹಿರಿಯರು ಒಂದು ಸಂಪ್ರದಾಯವನ್ನು ಹಾಕಿಕೊಟ್ಟರು. ಪ್ರತಿ ಗುರುವಾರ “ಸುಧಾಮನ ಹಾಡು” ಎಂದು ಎಲ್ಲರೂ ಹೇಳಿಕೊಂಡು ಅವಲಕ್ಕಿ ನೈವೇದ್ಯವನ್ನು ಮಾಡುವ ಒಂದು ಸಂಪ್ರದಾಯ. ಈ ಸಂಪ್ರದಾಯ ಇವತ್ತಿಗೂ ಎಷ್ಟೋ ಕಡೆಗಳಲ್ಲಿ ಬೆಳೆದು ಬಂದಿದೆ. ಕುಚೇಲ ಸುಧಾಮ ಒಬ್ಬ ಮಹಾನ್ ಪೌರಾಣಿಕ ಪುರುಷನಾದದ್ದು, ಅವನು ಶ್ರೀಕೃಷ್ಣನಲ್ಲಿ ಮಾಡಿದ ಪರಮ ಪವಿತ್ರ ಸ್ನೇಹ. ಹೀಗೆ ಸ್ನೇಹದ ದಿನವನ್ನು ಪ್ರತಿ ಬುಧವಾರ ಸಾಂಪ್ರದಾಯಿಕವಾಗಿ ಆಚರಿಸುವ ನಮ್ಮ ಭಾರತೀಯ ಸಂಸ್ಕೃತಿ.

    ನಮ್ಮ ಹಿರಿಯರು ಹೇಳಿದರು, ಆದರೆ ನಾವು ಅದನ್ನು ತೊರೆದೆವು. ಇದನ್ನೇ ಆಧುನಿಕ ರೀತಿಯಿಂದ ಪಾಶ್ಚಾತ್ಯರು ಹೇಳಿದರು, ಅದನ್ನು ಬೇಗನೇ ಗ್ರಹಿಸಿ ಆಚರಣೆಗೆ ತಂದೆವು. ನಮ್ಮತನವನ್ನು ಬಿಟ್ಟು ಅನ್ಯರಿಗೆ ಮೊರೆ ಹೋಗುವುದು ಬೇಡ. ಪರಸ್ಪರ ಹೂಗುಚ್ಛಗಳನ್ನು ಕೊಡುವುದು ಉಡುಗೊರೆಗಳ ವಿನಿಮಯ ಮಾಡಿಕೊಳ್ಳುವುದು ಹೀಗೆ ಸಂಭ್ರಮವನ್ನು ಹಂಚಿಕೊಳ್ಳುವದು ಒಂದು ಬಗೆ. ಆದರೆ ಆಚರಣೆಯ ನೆಪದಲ್ಲಿ ಯುವಕ ಯುವತಿಯರು ಸಂಸ್ಕೃತಿಯನ್ನು ಮರೆತು ಕಂಡ ಕಂಡ ಹಾಗೆ ವರ್ತಿಸುವುದು ಎಂದಿಗೂ ಬೇಡ. ಏನೇ ಆಚರಣೆಗೆ ತಂದರೂ ಅದರ ಹಿನ್ನೆಲೆ ತಿಳಿದು ನಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಆಚರಿಸೋಣ.

    ಎಲ್ಲರಿಂದಲೂ ಗುಣಗ್ರಹಣವನ್ನು ಮಾಡೋಣ ಆದರೆ ಸ್ವಂತಿಕೆಯನ್ನು ಬಿಡುವುದು ಬೇಡ. ಇಂದು ಎಲ್ಲರೂ ಆಚರಿಸುತ್ತಿರುವ ಈ ಸ್ನೇಹ ದಿನದ ಸಾಂಪ್ರದಾಯಿಕ, ಪೌರಾಣಿಕ ಹಿನ್ನೆಲೆಯೂ ಒಂದು ಇದೆ ಎಂದು ತಿಳಿಯಲು ಈ ಒಂದು ಪ್ರಯತ್ನ. ಪಾಶ್ಚಾತ್ಯರಿಂದ ಆಕರ್ಷಿತರಾಗಿ ಆಚರಿಸುವುದು ಬೇಡ. ಭಾರತೀಯರಾಗಿ ಆಚರಿಸೋಣ. ಭಾರತೀಯರಾಗಿ ಸಂಭ್ರಮಿಸೋಣ.

    ಈಗಿನ ನಮ್ಮ ನಿಮ್ಮೆಲ್ಲರ ಜೀವನದಲ್ಲಿಯೇ ನೋಡೋಣ. ನಮ್ಮೆಲ್ಲರ ಜೀವನದಲ್ಲಿ ಎಷ್ಟೋ ಜನರು ಬಂದು ಹೋಗುತ್ತಾರೆ. ಆದರೆ ನಮ್ಮ ಮನಸ್ಸಿನಲ್ಲಿ ಒಂದು ಸ್ಥಾನವನ್ನು ಮಾಡಿರುವಂತಹ ಆ ಬೆರಳೆಣಿಕೆಯ ನಾಲ್ಕು ಐದು ಸ್ನೇಹಿತರು ಮಾತ್ರ ಇರುತ್ತಾರೆ. ಅವರೆಲ್ಲರ ಜೋತೆ ಯಾವಾಗಲೂ ಭೇಟಿಯಾಗಲು, ನಿತ್ಯ ಮಾತನಾಡಲೂ ಆಗುವುದಿಲ್ಲ. ಆದರೂ ಏನೋ ಒಂದು ನಿಕಟ ಸಂಬಂಧ ಅನುಭವವೇದ್ಯವಾಗುತ್ತದೆ. ಎಷ್ಟೋ ಸಂವತ್ಸರಗಳ ನಂತರ ಎಂದೋ ಒಂದು ದಿನ ಅವರ ಜೊತೆ ಮಾತನಾಡುವ ಅವಕಾಶ ಸಿಕ್ಕರೂ ಅದೇ ಹಳೆಯ ಆತ್ಮೀಯತೆ ಪರಸ್ಪರ ಧ್ವನಿಯಲ್ಲಿ ಕಂಡುಬರುತ್ತದೆ. ತಂದೆ-ತಾಯಿಗಳ ಮುಂದಾಗಲಿ, ಅಕ್ಕ-ತಂಗಿಯರ ಹತ್ತಿರವಾಗಲಿ, ಜೀವನ ಹಂಚಿಕೊಂಡ ಸಂಗಾತಿಯ ಬಳಿಯಾಗಲಿ ಹೇಳಿಕೊಳ್ಳಲಾಗದ ಎಷ್ಟೋ ಮನದಾಳದ ಸಮಸ್ಯೆಗಳನ್ನು ನಾವು ಸ್ನೇಹಿತರ ಜೊತೆಗೆ ಹಂಚಿಕೊಳ್ಳುತ್ತೇವೆ. ಎಷ್ಟೋ ದಿನಗಳ ನಂತರ ನಮ್ಮ ಧ್ವನಿ ಕೇಳಿದರೂ, ಆ ಧ್ವನಿಯಲ್ಲಿ ಸ್ವಲ್ಪ ವಿಕಾರವಿದ್ದರೂ ಅದನ್ನು ತಕ್ಷಣ ಗ್ರಹಿಸಿ “ಏನಾಯಿತು… ಎಲ್ಲ ಆರಾಮಾಗಿದೆ ತಾನೇ..” ಎಂದು ಕೇಳುತ್ತಾರೆ. ಇದು ಮನಸ್ಸಿನ ಬಾಂಧವ್ಯ.

    ಇಂದಿನ ಯಾಂತ್ರಿಕ ಯುಗದಲ್ಲಿ ಕುಳಿತಲ್ಲಿಯೇ ಜಗತ್ತಿನ ಯಾವ ಮೂಲೆಯಲ್ಲಿಯೂ ಇದ್ದ ಸ್ನೇಹಿತರ ಜೊತೆಗೆ ನಿತ್ಯ ಸಂಪರ್ಕ ಇಟ್ಟುಕೊಳ್ಳುವ ಅವಕಾಶ ಎಲ್ಲರಿಗೂ ಲಭಿಸಿದೆ. ಮೊಬೈಲ್ ಫೋನ್, ವಾಟ್ಸ್ಆ್ಯಪ್, ಫೇಸ್​​ಬುಕ್, ಟ್ವಿಟ್ಟರ್ ಮುಂತಾದವುಗಳ ಸಹಾಯದಿಂದ ಎಲ್ಲರ ಜೊತೆ ಸಂಪರ್ಕದಲ್ಲಿ ಉಳಿಯುವ ಅವಕಾಶ ಸಿಕ್ಕಿದೆ. ಎಂದೋ ದೂರವಾದ ಎಷ್ಟೋ ಸ್ನೇಹಿತರು ಇಂದು ಫೇಸ್​ಬುಕ್​ನಲ್ಲಿ ಕಂಡಾಗ “ಅವಳೇ ಇವಳು.. ನನ್ನ ಜೊತೆಗೆ ಕೂಡಿ ಶಾಲೆಗೆ ಬರುತ್ತಿದ್ದಳು. ನಾವು ಅದೆಷ್ಟು ಒಳ್ಳೆ ಸ್ನೇಹಿತೆಯರು” ಎಂದು ಕಳೆದು ಹೋದ ವಸ್ತು ಸಿಕ್ಕಷ್ಟು ಆನಂದ ತುಂದಿಲರಾಗುತ್ತೇವೆ. ಸಾಮಾಜಿಕ ಜಾಲತಾಣಗಳಿಂದ ದುಷ್ಪರಿಣಾಮಗಳು ಎಷ್ಟೋ ಇವೆ. ಇರಲಿ, ಆದರೆ ಒಂದು ದೃಷ್ಟಿಕೋನದಿಂದ ಇದರ ಸಹಾಯ ನಮ್ಮ ಜೀವನದಲ್ಲಿ ತುಂಬ ಇದೆ. ನಮಗೆ ಸ್ನೇಹದ ದಿನ ವರ್ಷದ ಒಂದೇ ದಿನಕ್ಕೆ ಮಾತ್ರ ಸೀಮಿತವಲ್ಲ. ಸ್ನೇಹಿತರಿಗಾಗಿ ಜೀವನದ ಪ್ರತಿ ದಿನವೂ ಮೀಸಲು. ಹಿಂದೆ ನಾವು ಯಾವುದೋ ಕಷ್ಟದಲ್ಲಿದ್ದಾಗ ನಮ್ಮ ಸ್ನೇಹಿತ ಸ್ನೇಹಿತೆಯರು ಮಾಡಿದ ಸಹಾಯವನ್ನು ಇಂದಿಗೂ ಮರೆಯದೇ ನಿತ್ಯದಲ್ಲಿ ಅವರ ಉಪಕಾರ ಸ್ಮರಣೆ ಮಾಡುವುದೇ ನಿರಂತರ ಸ್ನೇಹಿತರ ದಿನ. ಕೆಲವೊಮ್ಮೆ ಹಳಿತಪ್ಪಿದ ಬದುಕನ್ನು ತಿದ್ದಿ ಸರಿದಾರಿಗೆ ತಂದು ಉಪಕರಿಸಿದ ಸ್ನೇಹಿತರೂ ಇರುತ್ತಾರೆ. ತಾನು ಉನ್ನತ ಸ್ಥಾನಕ್ಕೇರಿದರೂ, ತನ್ನ ಎಷ್ಟೋ ಜನ ಸ್ನೇಹಿತರಿಗೆ ಸಹಾಯಮಾಡಿ ಪ್ರೋತ್ಸಾಹಿಸಿ ತನ್ನಂತೆ ಉನ್ನತ ಸ್ಥಾನಕ್ಕೇರಿಸಿದ ನಿದರ್ಶನಗಳು ಅನೇಕ ಉಂಟು.

    ನಿಜವಾದ ಸ್ನೇಹಿತನ ಮನಸ್ಸು ಹೇಗಿರುತ್ತದೆ ಎಂಬ ನಿದರ್ಶನಕ್ಕೆ ಒಂದು ಪುಟ್ಟ ಕಥೆ, ಒಮ್ಮೆ ಒಬ್ಬ ವ್ಯಕ್ತಿಯ ಮನೆ ಬೆಂಕಿಯಿಂದ ಪೂರ್ತಿ ಸುಟ್ಟು ಹೋಗುತ್ತದೆ. ಇದನ್ನು ತಿಳಿದ ಗುರುತು ಪರಿಚಯದವರೆಲ್ಲರೂ ಬಂದು ಅವನನ್ನು ಸಂತೈಸಿ ಹೋಗುತ್ತಾರೆ. ಕೊನೆಗೆ ಅವನ ಸ್ನೇಹಿತನೊಬ್ಬ ಬಂದು ಕೇಳುತ್ತಾನೆ. “ಏನೇನು ಉಳಿಯತೋ ನಿನ್ನ ಮನೆಯಲ್ಲಿ” ಎಂದು. ಅದಕ್ಕೆ ಇವನು “ನನ್ನನ್ನು ಬಿಟ್ಟು ಇನ್ನೇನು ಉಳಿದಿಲ್ಲ ಗೆಳೆಯ” ಎಂದು ಹೇಳುತ್ತಾನೆ. ಅದನ್ನು ಕೇಳಿ ನಿಟ್ಟುಸಿರು ಬಿಟ್ಟ ಅವನ ಮಿತ್ರ “ಆಯಿತಲ್ಲ, ನೀನುಳಿದಿದ್ದೀಯಲ್ಲ. ಇನ್ನೇನು ಸುಟ್ಟಿದೆ. ಏನೂ ಇಲ್ಲ..” ಎಂದು ಹೇಳುತ್ತಾನೆ. ಇದು ನಿಜವಾದ ಸ್ನೇಹಿತನು ನೋಡುವ ದೃಷ್ಟಿಕೋನ.

    ಕೇವಲ ಪರಸ್ಪರ ಶುಭಾಶಯಪತ್ರ ಕೊಡುವುದು, ಫ್ರೆಂಡ್​ಶಿಪ್ ಬ್ಯಾಂಡ್ ಕಟ್ಟಿ ಮುಗಿಸಿದರೆ ಅದು ತೋರಿಕೆಯ ಸ್ನೇಹವಾಗುತ್ತದೆ. ಸ್ನೇಹಿತ ಅಂದರೆ ನಮ್ಮ ಎದೆಯಲ್ಲಿ ಹುದುಗಿದ ಸುಪ್ತಗೀತೆಯನ್ನೂ ಕೇಳಿಸಿಕೊಳ್ಳುವವ. ಕಣ್ಣಂಚಿನಲ್ಲಿಯೇ ಬತ್ತಿಹೋದ ಕಣ್ಣೀರನ್ನೂ ಕಾಣುವವ. ಮೌನದಲ್ಲಿಯೂ ಮಾತನ್ನು ಕೇಳಿಸಿಕೊಳ್ಳುವವ. ಅವನೇ ನಿಜವಾದ ಸ್ನೇಹಿತ ಸ್ನೇಹ ಎಂಬುದು ಒಂದು ಸುಂದರ ಕವನ ಎಷ್ಟು ಬರೆದರೂ ಮುಗಿಯದ ಕಥನ.

    ಬದುಕಿನ ಜಂಜಾಟದಲ್ಲಿ ಬೇಸತ್ತ ಮನಸ್ಸಿಗೆ ಸಂಚಲನೆಯೇ ಸ್ನೇಹ. ಸ್ನೇಹಕ್ಕೆ ಜಾತಿ-ಧರ್ಮದ ಅರಿವಿಲ್ಲ. ಕಪ್ಪು-ಬಿಳಿ ಎನ್ನುವ ಭೇದವಿಲ್ಲ. ಬಡವ-ಸಿರಿವಂತ ಎಂಬ ದೃಷ್ಟಿಕೋನವಿಲ್ಲ. ಸ್ನೇಹಿತರನ್ನು ನಿತ್ಯವೂ ಭೇಟಿಯಾಗಬೇಕೆಂಬ ಆಗ್ರಹವೇನೂ ಇಲ್ಲ. ಸ್ನೇಹಿತರಿಗೆ ಸದಾ ಒಳ್ಳೆಯದಾಗಲಿ ಎಂಬ ಹಾರೈಕೆ ಮನಸ್ಸಿನಲ್ಲಿದ್ದರೆ ಅದೇ ನಿತ್ಯ ಸ್ನೇಹದ ದಿನವಾಗುವದು.

    ಪಾಪಾನ್ನಿವಾರಯತಿ ಯೋಜಯತೇ ಹಿತಾಯ ಗುಹ್ಯಂ ನಿಗೂಹಯತಿ ಗುಣಾನ್ ಪ್ರಕಟೀಕರೋತಿ |

    ಆಪದ್ದತಂ ಚ ನ ಜಹಾತಿ ದದಾತಿ ಕಾಲೇ ಸನ್ಮತ್ರಲಕ್ಷಣಮಿದಂ ಪ್ರವದಂತಿ ಸಂತಃ || (ಸುಭಾಶಿತರತ್ನಭಾಂಡಾಗಾರ)

    ದುಶ್ಚಟಗಳಿಂದ ರಕ್ಷಿಸುವವನು ಸ್ನೇಹಿತ. ಹಿತವನ್ನು ಬಯಸುವವ ಸ್ನೇಹಿತ. ಹಂಚಿಕೊಂಡ ಗೌಪ್ಯವನ್ನು ರಕ್ಷಿಸುವವನು ಸ್ನೇಹಿತ. ನಮ್ಮ ಸಣ್ಣಗುಣಗಳನ್ನು ಪ್ರೋತ್ಸಾಹಿಸುವವನು ಸ್ನೇಹಿತ. ಆಪತ್ತಿನಲ್ಲಿ ಸಹಾಯಕ್ಕೆ ಬರುವವನು ನಿಜವಾದ ಸ್ನೇಹಿತ. ಇದು ಉತ್ತಮ ಸ್ನೇಹಿತನ ಗುಣಲಕ್ಷಣಗುಳು.

    ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ದಂಪತಿಗೆ 3 ವರ್ಷ ಜೈಲು; 70.25 ಲಕ್ಷ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts