More

    ನಾಗರಿಕತೆಯ ಬೆಳವಣಿಗೆಗೆ ಮುನ್ನುಡಿ ಬರೆದವರು

    ಪ್ರತಿವರ್ಷ ಕನ್ಯಾ ಸಂಕ್ರಮಣದಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಕನ್ಯಾ ಸಂಕ್ರಮಣವು ಬಹುತೇಕ ಪ್ರತಿ ಸೆ.17ರಂದು ಬರುತ್ತದೆ. ಈ ದಿನವು ವೇದ-ವೇದಾಂತಗಳಲ್ಲಿ ವರ್ಣಿಸಲ್ಪಟ್ಟಿರುವ ಆದಿ ವಿಶ್ವಕರ್ಮರನ್ನು ಆರಾಧಿಸುವ ಪರ್ವಕಾಲ. ನಾಡಿನಾದ್ಯಂತ ಇರುವ ವಿಶ್ವಕರ್ಮ ಸಮಾಜವು ಬಹುಕಾಲದಿಂದ ಆಚರಿಸಿಕೊಂಡು ಬಂದಿರುವ ವಿಶ್ವಕರ್ಮ ಮಹೋತ್ಸವವನ್ನು, ಇತ್ತೀಚೆಗೆ ಸರ್ಕಾರ ಅಧಿಕೃತವಾಗಿ ಆಚರಿಸುತ್ತಿರುವುದು ಸಮಾಜದ ಸಂಘಟನೆಗೆ ಮತ್ತಷ್ಟು ಶಕ್ತಿ ಬಂದಿದೆ.

    ನಾಗರಿಕತೆಯ ಬೆಳವಣಿಗೆಗೆ ಮುನ್ನುಡಿ ಬರೆದವರು| ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು, ವಿಶ್ವಕರ್ಮ ಜಗದ್ಗುರು ಪೀಠ
    ನಾಡಿನಲ್ಲಿ ಪ್ರಮುಖವಾಗಿರುವ ವಿಶ್ವಕರ್ಮ ಸಮುದಾಯವು ಪ್ರಪಂಚದ ಆದಿಯಿಂದ ಇಲ್ಲಿಯವರೆಗಿನ ನಾಗರಿಕತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶಿಲಾಯುಗದಿಂದ ಇಲ್ಲಿಯವರೆಗೆ ಮಾನವ ಜನಾಂಗಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ನಿರ್ವಿುಸಿಕೊಡುವ ಮೂಲಕ ನಾಗರಿಕತೆಯ ಬೆಳವಣಿಗೆಗೆ ಮುನ್ನುಡಿ ಬರೆದವರು ವಿಶ್ವಕರ್ಮರು.

    ಪ್ರಮುಖವಾಗಿ ಪಂಚ ಕಸುಬುಗಳನ್ನು ಮಾಡುವವರು ವಿಶ್ವಕರ್ಮರು. ಕಬ್ಬಿಣದಿಂದ ಆಯತಶಿಲ್ಪ, ಮರದಿಂದ ಕಾಷ್ಠಶಿಲ್ಪ, ಎರಕದಿಂದ ಲೋಹಶಿಲ್ಪ, ಕಲ್ಲಿನಿಂದ ಶಿಲಾಶಿಲ್ಪ, ಬಂಗಾರದಿಂದ ಸುವರ್ಣಶಿಲ್ಪದ ಕೆಲಸವನ್ನು ಮಾಡುವ ಮೂಲಕ ಬಸವಣ್ಣನವರು ಹೇಳಿರುವ ‘ಕಾಯಕವೇ ಕೈಲಾಸ’ ಎಂಬ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ. ಜಗತ್ತಿನ ಬಹುತೇಕ ಜನರ ಅಗತ್ಯವನ್ನು ಪೂರೈಸುವ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಸಮುದಾಯವಿದು.

    ಪಾಣಿನಿ ಮಹರ್ಷಿಯು ತನ್ನ ಸಂಸ್ಕೃತ ನಿಘಂಟು ‘ಸಿದ್ಧಾಂತ ಕೌಮುದಿ’ಕೃತಿಯಲ್ಲಿ ವಿಶ್ವಕರ್ಮ ಪದಕ್ಕೆ ಹೀಗೆ ಅರ್ಥ ಬರೆದಿದ್ದಾನೆ : ‘‘ವಿಶ್ವಂ ಕೃತ್ಸ್ನ ಕರ್ಮಕ್ರಿಯಾ ವ್ಯಾಪಾರೋ ಯಸ್ಯಾ ಸಃ ವಿಶ್ವಕರ್ಮ’ ಇದರರ್ಥ ಜಗತ್ತಿನ ಸಮಸ್ತ ಕ್ರಿಯೆಗಳಿಗೆ ಕಾರಣೀಕರ್ತನಾದವನು ವಿಶ್ವಕರ್ಮ.

    ನಿರಾಕಾರ ವಿಶ್ವಕರ್ಮ ಮಹೋತ್ಸವ: ವಿಶ್ವಕರ್ಮ ಎಂಬ ಪದವು ವ್ಯಕ್ತಿ ಅಥವಾ ಜನಾಂಗ ಸೂಚಕವಲ್ಲ; ಬದಲಾಗಿ ವ್ಯಕ್ತಿತ್ವ ಅಥವಾ ಕ್ರಿಯಾ ಸೂಚಕ. ಮೂಲ ವಿಶ್ವಕರ್ಮನಿಗೆ ಪಂಚವಕ್ತೆ್ರೕಶ್ವರ ಎಂಬ ಹೆಸರಿದೆ. ಆ ಪಂಚಮುಖಗಳಿಂದ ಮನು, ಮಯ, ತ್ವಷ್ಟ, ದೈವಜ್ಞ(ಶಿಲ್ಪಿ), ವಿಶ್ವಜ್ಞ ಎಂಬ ಪಂಚಬ್ರಹ್ಮರು ಉತ್ಪನ್ನವಾಗುತ್ತಾರೆ. ಆ ಪಂಚಬ್ರಹ್ಮರಿಂದ ಸನಗ, ಸನಾತನ, ಅಹಭೌನಸ, ಪ್ರತ್ನಾಸ, ಸುಪರ್ಣಸ ಎಂಬ ಐವರು ಗೋತ್ರ ಋಷಿಗಳು ಉದ್ಭವಿಸಿದ್ದು, ಆ ಪರಂಪರೆಯಲ್ಲಿ ಅನೇಕ ದೇವಶಿಲ್ಪಿಗಳು ಬರುತ್ತಾರೆ. ಆಧುನಿಕ ಪರಿಭಾಷೆಯಲ್ಲಿ ವಿಶ್ವಕರ್ಮರನ್ನು ‘ಡಿವೈನ್ ಇಂಜಿನಿಯರ್ಸ್’ ಎನ್ನಬಹುದು. ಅಂತಹ ಹಲವಾರು ದೇವಶಿಲ್ಪಿಗಳ ಪ್ರಸ್ತಾಪ ಅನೇಕ ಪುರಾಣ, ಮಹಾಕಾವ್ಯಗಳಲ್ಲಿ ಬರುತ್ತವೆ. ಇಂದ್ರನಿಗೆ ವಜ್ರಾಯುಧ, ಕೃಷ್ಣನಿಗೆ ದ್ವಾರಕ, ಪಾಂಡವರಿಗೆ ಇಂದ್ರಪ್ರಸ್ಥ, ಕುಬೇರನಿಗೆ ಸ್ವರ್ಣಲಂಕೆಯನ್ನು ನಿರ್ವಿುಸಿದವರು ಆ ಎಲ್ಲ ದೇವಶಿಲ್ಪಿಗಳು. ಭೂಲೋಕದಲ್ಲಿಯೂ ಅಂತಹ ವಿಸ್ಮಯ ಕಾರ್ಯವನ್ನು ಮಾಡಿ ತೋರಿದ ಜಕಣಾಚಾರಿ ಅವರನ್ನು ವಿಶ್ವಕರ್ಮರತ್ನ ಎಂದು ಗುರುತಿಸಲಾಗುತ್ತದೆ.

    ಸೆಪ್ಟೆಂಬರ್ 16 ಅಥವಾ 17ಕ್ಕೆ ಬರುವ ಕನ್ಯಾ ಸಂಕ್ರಮಣವು ವಿಶ್ವಕರ್ಮರು ಹುಟ್ಟಿದ ದಿನವಲ್ಲ. ಬದಲಿಗೆ ನಿರಾಕಾರನಾದ ಮೂಲ ವಿಶ್ವಕರ್ಮನು ಪ್ರಕಟವಾದ ದಿನ. ದೇವಾನುದೇವತೆಗಳೆಲ್ಲರೂ ಒಮ್ಮೆ ನಿರಾಕಾರ ವಿಶ್ವಕರ್ಮನನ್ನು ಕುರಿತು ಪ್ರಾರ್ಥಿಸುತ್ತಾರೆ. ಆಗ ಪ್ರಕಟನಾದ ವಿಶ್ವಕರ್ಮನು ಎಲ್ಲ ದೇವತೆಗಳಿಗೆ ಅವರವರ ಜವಾಬ್ದಾರಿಗಳನ್ನು ವಹಿಸುತ್ತಾನೆ. ಹಾಗೆ ಪ್ರಕಟವಾದ ದಿನವೇ ಕನ್ಯಾ ಸಂಕ್ರಮಣ.

    ವಿಶ್ವಕರ್ಮ ಸಮುದಾಯದ ಸಂಘಟನೆ: ರಾಜ್ಯ ಮತ್ತು ರಾಷ್ಟ್ರವ್ಯಾಪಿ ಇರುವ ವಿಶ್ವಕರ್ಮರ ಅಭಿವೃದ್ಧಿಗೆ ಹಲವು ಮಠಾಧೀಶರು, ಮುಖಂಡರು, ಅವಿರತವಾಗಿ ಶ್ರಮಿಸಿದ ಫಲವಾಗಿ, ವಿಶ್ವಕರ್ಮರ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸುವ ನಿರ್ಣಯ, ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆ, ಜಕಣಾಚಾರಿ ಸ್ಮರಣೋತ್ಸವ ಇತ್ಯಾದಿ ಕಾರ್ಯಗಳು ಆಡಳಿತಾರೂಢ ಸರ್ಕಾರಗಳಿಂದ ಆಯಾಯ ಕಾಲದಲ್ಲಿ ಆಗಿರುವುದು ಸಮಾಜದ ಸಂಘಟನೆಗೆ ಬಲತಂದಿದೆ. ವಿಶೇಷವಾಗಿ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠವು ವಿಶ್ವಕರ್ಮ ಸಮಾಜದ ಸಂಘಟನೆಗಾಗಿ ಹಲವು ದಶಕಗಳಿಂದ ಕೆಲಸ ಮಾಡುತ್ತಿದೆ. ಶ್ರೀಸುಜ್ಞಾನಪ್ರಭು ಮಹಾಸ್ವಾಮಿಗಳಿಂದ ಆರಂಭವಾದ ಈ ಪೀಠವು ಈವರೆಗೆ 18 ಪೀಠಾಧಿಪತಿಗಳನ್ನು ಕಂಡಿದೆ.

    (ನಿರೂಪಣೆ : ಪ್ರಶಾಂತ ರಿಪ್ಪನ್​ಪೇಟೆ)

    ಕುಂದಾಪುರದಲ್ಲಿ ನಾಯಿಗೆ ಹೆದರಿ ಓಡಿ ಹೋಗಿ ಬಾವಿಗೆ ಬಿದ್ದ ಚಿರತೆ!

    ಕರ್ತವ್ಯದಲ್ಲಿದ್ದ ಪೊಲೀಸ್ ಕುಸಿದು ಬಿದ್ದು ಸಾವು; ನಿಲ್ಲದ ಹಠಾತ್ ಹೃದಯಾಘಾತ ಪ್ರಕರಣಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts