More

    ಅನನ್ಯ ವಿದ್ವತ್ತಿನ ಅಪೂರ್ವ ಸಂತ ಸ್ವಾಮಿ ಹರ್ಷಾನಂದ ಜೀ..

    ಅನನ್ಯ ವಿದ್ವತ್ತಿನ ಅಪೂರ್ವ ಸಂತ ಸ್ವಾಮಿ ಹರ್ಷಾನಂದ ಜೀ..| ಸ್ವಾಮಿ ವೀರೇಶಾನಂದ ಸರಸ್ವತೀ

    ಶ್ರೀ ರಾಮಕೃಷ್ಣ ಮಹಾಸಂಘದ ಹಿರಿಯ ಯತಿಗಳಲ್ಲೊಬ್ಬರಾದ, ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದ ಸ್ವಾಮಿ ಹರ್ಷಾನಂದಜೀ ಮಹಾರಾಜ್ ತಮ್ಮ ಅದ್ವಿತೀಯ ಬರಹಗಳಿಂದ ವಿಶ್ವವಿಖ್ಯಾತಿ ಗಳಿಸಿದ್ದರು. ನಾಲ್ಕು ತಲೆಮಾರುಗಳ ಹಿಂದೆ ಪೂಜ್ಯರ ಪೂರ್ವಿಕರು ತುಮಕೂರು ಜಿಲ್ಲೆ ಪಾವಗಡದವರು. ಆನಂತರದ ದಿನಗಳಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. ಸ್ವಾಮೀಜಿಯವರು ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದಲ್ಲಿ ಬೆಳೆದರು. ಯುವಕರಾಗಿದ್ದಾಗ ಅಂದಿನ ದಿಗ್ಗಜರಾಗಿದ್ದ ಹೊ.ವೆ. ಶೇಷಾದ್ರಿಯವರ ಗರಡಿಗೆ ಸೇರಿದರು. ತಮ್ಮ ರಕ್ತಸಂಬಂಧಿ ಸಿದ್ಧವನಹಳ್ಳಿ ಕೃಷ್ಣಶರ್ಮರ ಪ್ರಭಾವಕ್ಕೆ ಒಳಗಾಗಿ ಗಾಂಧಿ ಸಾಹಿತ್ಯ ಸಂಘದ ಸಕ್ರಿಯ ಸದಸ್ಯರೂ ಆದರು.

    ಆನಂತರದ ದಿನಗಳಲ್ಲಿ ಬಸವನಗುಡಿಯ ಶ್ರೀರಾಮಕೃಷ್ಣ ಮಠಕ್ಕೆ ಬರಲಾರಂಭಿಸಿದರು. ಅಂದಿನ ಅಧ್ಯಕ್ಷರಾಗಿದ್ದ ಸ್ವಾಮಿ ತ್ಯಾಗೀಶಾನಂದಜಿ ಮತ್ತು ನಂತರ ಸ್ವಾಮಿ ಯತೀಶ್ವರಾನಂದಜಿ ಮಹಾರಾಜರ ದಿವ್ಯ ಸಂಪರ್ಕದಲ್ಲಿ ರಾಮಕೃಷ್ಣ ಮಹಾಪರಂಪರೆಗೆ ಆಕರ್ಷಿತರಾದರು. ಆದರೆ ಆಶ್ರಮಕ್ಕೆ ಮೇಲಿಂದ ಮೇಲೆ ಭೇಟಿ ನೀಡುವುದನ್ನು ಅವರ ಪಾಲಕರು ವಿರೋಧಿಸುತ್ತಿದ್ದರು. ಈ ಅಳಲನ್ನು ಒಮ್ಮೆ ಸ್ವಾಮಿ ತ್ಯಾಗೀಶಾನಂದರಲ್ಲಿ, ‘ಪೂಜ್ಯರೇ, ನಾನು ಆಶ್ರಮಕ್ಕೆ ಬರಲು ಮನೆಯಲ್ಲಿ ಪ್ರೋತ್ಸಾಹವಿಲ್ಲ. ಸುಳ್ಳು ಹೇಳಿ ಬರುತ್ತಿರುವೆ. ನಾನು ತಪು್ಪ ಮಾಡುತ್ತಿದ್ದೇನಲ್ಲವೇ?’ ಎಂದು ಪ್ರಶ್ನಿಸಿದಾಗ ತ್ಯಾಗೀಶಾನಂದರು ಹೇಳಿದರಂತೆ, ‘ಪ್ರಿಯ ಮಗು,A lie that leads to light is not lie’ (ಬೆಳಕಿನೆಡೆಗೆ ಕರೆದೊಯ್ಯುವ ಸುಳ್ಳು ಸುಳ್ಳಲ್ಲ)’ ಎಂದು. ಸ್ವಾಮಿ ವಿವೇಕಾನಂದರ ನೇರ ಶಿಷ್ಯರಾದ ಸ್ವಾಮಿ ವಿರಜಾನಂದರಿಂದ ಅವರು ಮಂತ್ರದೀಕ್ಷೆ ಪಡೆದಿದ್ದರು.

    ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆ, ಶ್ರೀ ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (RINSE) ವಿಭಾಗಗಳಲ್ಲಿ ಸ್ವಾಮಿ ಹರ್ಷಾನಂದರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಅಂದಿನ ರಾಜ್ಯ ಸರ್ಕಾರ ಶಿಕ್ಷಕರನ್ನು ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ತರಬೇತಿಗಾಗಿ ಈ ಸಂಸ್ಥೆಗೆ ನಿಯೋಜಿಸುತ್ತಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ಸಹಸ್ರಾರು ಶಿಕ್ಷಕರು ಸ್ವಾಮಿ ಹರ್ಷಾನಂದರ ಬೋಧನೆಗಳಿಂದ ಆಕರ್ಷಿತರಾಗಿದ್ದರು. ಇಂದು ರಾಜ್ಯದ ಒಂದು ಸಹಸ್ರ ಶಾಲೆಗಳಲ್ಲಿ ಪೂಜ್ಯರಿಗೆ ಪರಿಚಯವಿರುವ ಶಿಕ್ಷಕರಿದ್ದಾರೆಂದರೆ ಉತ್ಪ್ರೇಕ್ಷೆಯಲ್ಲ!

    ಯುವ ಸಮ್ಮೇಳನಗಳನ್ನು, ಶಿಕ್ಷಕ ಸಮ್ಮೇಳನಗಳನ್ನು ಮತ್ತು ಭಕ್ತ ಸಮಾವೇಶಗಳನ್ನು ಸ್ವಾಮಿ ಹರ್ಷಾನಂದರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಅವರು ನಡೆಸಿಕೊಡುತ್ತಿದ್ದ ಪ್ರಶ್ನೋತ್ತರ ಕಾರ್ಯಕ್ರಮಗಳು ಲಕ್ಷಾಂತರ ಜನರನ್ನು ಆಕರ್ಷಿಸಿತ್ತು.

    ಪೂಜ್ಯರು ‘We have nationalized our reads, banks, transport system and so many things, but we have not yet nationalized our Nation’ ಎಂದು ಬಹಳಷ್ಟು ಸಲ ನೊಂದುಕೊಂಡಿದ್ದುಂಟು.

    ಕಳೆದ ಮೂರ್ನಾಲ್ಕು ದಶಕಗಳಿಂದ ಪೂಜ್ಯರನ್ನು ಹತ್ತಿರದಿಂದ ಬಲ್ಲವನು ನಾನು. ಅವರ ಸಮಯಪ್ರಜ್ಞೆ, ಕಾರ್ಯಕ್ರಮದಲ್ಲಿ ಅಚ್ಚುಕಟ್ಟು, ಉಪನ್ಯಾಸಕ್ಕೆ ತಯಾರಿ. ಅಬ್ಬ! ನಿಜಕ್ಕೂ ಅದ್ಭುತ. ಅವರ ವೈಯಕ್ತಿಕ ಗ್ರಂಥಾಲಯದಲ್ಲಿ ಹದಿನೈದು ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದವು! ‘ಓದುವ ಅಭಿಲಾಷೆ, ಹವ್ಯಾಸವಿದ್ದರೆ ಉತ್ತಮ ಪುಸ್ತಕವು ಜೀವನಪರ್ಯಂತ ನಮ್ಮ ಆಪ್ತ ಸ್ನೇಹಿತ’ ಎನ್ನುತ್ತಿದ್ದರು. ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಭಗವಾನ್ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರ ಹಾಗೂ ಸ್ವಾಮಿ ವಿವೇಕಾನಂದ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜ್ಯರು ಭಾಗವಹಿಸಿದ್ದರು. ಕರ್ನಾಟಕದಲ್ಲಿ ರಾಮಕೃಷ್ಣ ವಿವೇಕಾನಂದ ಭಾರತ ಪ್ರಚಾರ ಪರಿಷತ್ತನ್ನು ಪ್ರಾರಂಭಿಸಿ ಅದರ ಅಧ್ಯಕ್ಷರಾಗಿ ಶ್ರಮಿಸಿದರು. ಅದರ ರಾಜ್ಯ ಸಂಚಾಲಕರಾಗಿ ಶ್ರಮಿಸಲು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದರು. ತುಮಕೂರಿನ ವಿಶ್ವವಿದ್ಯಾಲಯದಲ್ಲಿ ಡಾ. ಎಸ್.ಸಿ. ಶರ್ಮಾ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಸ್ಥಳೀಯ ಆಶ್ರಮದ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನೆರವೇರಿದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ, ನನ್ನ, ‘ಸ್ವಾಮಿ ವಿವೇಕಾನಂದ ಮತ್ತು ಮಾನವ ಅಭ್ಯುದಯ’ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.

    ಸ್ವಾಮಿ ಹರ್ಷಾನಂದರ ‘ಹಿಂದೂಧರ್ಮದ ವಿಶ್ವಕೋಶ’ದ ನಾಲ್ಕು ಸಂಪುಟಗಳ ಬೃಹತ್ ಕಾರ್ಯವನ್ನು ಕಂಡು ಸಿದ್ಧಗಂಗೆಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನನ್ನ ಬಳಿ ಹೇಳಿದ್ದುಂಟು, ‘ವೀರೇಶಾನಂದರೇ, ಈ ಕೃತಿಗಳ ರಚನೆ ಇದೊಂದು ಜೀವಮಾನ ಸಾಧನೆ ಎಂದೆನಿಸುತ್ತೆ ನನಗೆ’ ಎಂದು. ಪೂಜ್ಯರು ನಿಜಕ್ಕೂ ಶತಮಾನದ ಸಂತರೆನಿಸಿದ್ದಾರೆ. ಅವರ ಅಖಂಡ ಕಾರ್ಯಗಳು ಬಹಳ ಕಾಲ ನಮ್ಮ ಸಮಾಜಕ್ಕೆ ದಾರಿದೀಪ ಆಗಬಲ್ಲದು. ತಮ್ಮ ನಡೆ, ನುಡಿ, ಚಾರಿತ್ರ್ಯ, ತಪೋಜೀವನ, ಕಾರ್ಯಶೀಲತೆಯಿಂದ ನನ್ನಂಥ ನೂರಾರು ಯತಿಗಳಿಗೆ ಅವರು ದಾರಿದೀಪವಾಗಿದ್ದಾರೆ. ತುಮಕೂರಿನ ಆಶ್ರಮಕ್ಕೆ ರಾಮಕೃಷ್ಣ-ವಿವೇಕಾನಂದ ಆಶ್ರಮ ಎಂದು ನಾಮಕರಣ ಮಾಡಿದ, ನನಗೆ ಸಂನ್ಯಾಸ ದೀಕ್ಷೆಗೆ ಪರಿಚಯಪತ್ರ ಕೊಟ್ಟ, ಹತ್ತುಹಲವು ರೀತಿಗಳಲ್ಲಿ ನನ್ನನ್ನು ತಿದ್ದಿ ಮಾರ್ಗದರ್ಶನ ನೀಡಿ ಮುನ್ನಡೆಸಿದ ಪೂಜ್ಯ ಸ್ವಾಮಿ ಹರ್ಷಾನಂದರು ನನ್ನ ಬದುಕಿನಲ್ಲೂ ಪ್ರಾತಃಸ್ಮರಣೀಯರಾಗಿದ್ದಾರೆ.

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts