More

    ಶೋಷಣೆ-ಅಸಮಾನತೆ ಕೊನೆಯಾಗಲಿ; ಇಂದು ಸಾಮಾಜಿಕ ನ್ಯಾಯ ದಿನ

    | ಪ್ರವೀಣ್ ಯಕ್ಷಿಮಠ ಉಡುಪಿ

    ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆ ಮೂಲತಃ ಯುರೋಪಿನದು ಎಂದು ಹೇಳುತ್ತಾರಾದರೂ ಹತ್ತು ಹನ್ನೆರಡನೇ ಶತಮಾನದಲ್ಲೇ ನಮ್ಮ ದೇಶದಲ್ಲಿ ಆ ಕುರಿತು ಚಳವಳಿ, ಆಂದೋಲನಗಳು ನಡೆದಿದ್ದವು. ಸಮಸಮಾಜದ ನಿರ್ಮಾಣ ಆಗಬೇಕು ಎನ್ನುವ ಕೂಗಿಗೆ ದೊಡ್ಡ ಇತಿಹಾಸವೇ ಇದೆ. ಕ್ರಾಂತಿಪುರುಷ ಬಸವೇಶ್ವರ ಆ ಕಾಲದಲ್ಲೇ ನಮ್ಮಲ್ಲಿ ಸಾಮಾಜಿಕ ನ್ಯಾಯದ ಕ್ರಾಂತಿಯ ಅಲೆ ಎಬ್ಬಿಸಿದ್ದರು. ಹತ್ತೊಂಬತ್ತನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಆಫ್ರೋ-ಏಶ್ಯನ್ ದೇಶಗಳಲ್ಲೂ ಬೇರೆ ಬೇರೆ ಸನ್ನಿವೇಶ, ಕಾಲಮಾನಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳ ಬಹುಮುಖ್ಯ ಅಂಶವಾಗಿ ಈ ಸಾಮಾಜಿಕ ನ್ಯಾಯ ಎನ್ನುವ ಪದ ತೆರದುಕೊಂಡಿದೆ. ಇಪ್ಪತ್ತನೆ ಶತಮಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವಧಿಯಲ್ಲಿ ಭಾರತದೊಳಗೆ ಸಾಮಾಜಿಕ ನ್ಯಾಯದ ಮತ್ತೊಂದು ಶಕೆ ಆರಂಭವಾಯಿತು. ರಾಜಕೀಯ ಮತ್ತು ಕಾನೂನಾತ್ಮಕ ನೆಲೆಗಟ್ಟಿನಲ್ಲಿ ನಡೆದ ಆ ಹೋರಾಟಕ್ಕೆ ಇತಿಹಾಸದಲ್ಲಿ ವಿಶೇಷವಾದ ಸ್ಥಾನಮಾನವಿದೆ.

    ‘ಪ್ರತಿಯೊಬ್ಬ ವ್ಯಕ್ತಿಯೂ ನೈಜ, ಅರ್ಥಪೂರ್ಣ ಹಾಗೂ ಗೌರವಯುತ ಬದುಕನ್ನು ಬದುಕುವುದೇ ಸಾಮಾಜಿಕ ನ್ಯಾಯ, ಆ ಕಾರಣಕ್ಕಾಗಿ ಸರ್ಕಾರ ತನ್ನ ಪ್ರಜೆಗಳಿಗೆ ಸಾಮಾಜಿಕ ನ್ಯಾಯದ ಬದುಕನ್ನು ಬದುಕಲು ತಕ್ಕ ವಾತಾವರಣ ನಿರ್ವಿುಸಿಕೊಡಬೇಕು’ ಎಂದು ಸಂವಿಧಾನ ಹೇಳುತ್ತದೆ. ಆದರೆ ಒಂಬತ್ತು ಶತಮಾನಗಳ ದೀರ್ಘಕಾಲೀನ ಹೋರಾಟ, ಚಳವಳಿಗಳು ಸಾಗಿ ಬಂದರೂ ಈ ದೇಶದಲ್ಲಿನ ಪ್ರಜೆಗಳಿಗೆ ಸಾಮಾಜಿಕ ನ್ಯಾಯ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

    ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಸಮಸಮಾಜದ ಹೋರಾಟಗಳು ಸ್ವಾತಂತ್ರ್ಯ ನಂತರದ ಭಾರತದಲ್ಲಿ ದಿಕ್ಕು ದೆಸೆಗಳೆರಡನ್ನೂ ಕಳೆದುಕೊಂಡಿತು. ಬ್ರಿಟಿಷ್ ಆಡಳಿತ ಮುಗಿದು ಹೋದ ನಂತರ ಆರಂಭಗೊಂಡ ಪ್ರಜಾಪ್ರಭುತ್ವದ ಆಡಳಿತದಲ್ಲಿ ಸಾಮಾಜಿಕ ನ್ಯಾಯದ ಬೆಳವಣಿಗೆಯಲ್ಲಿ ಗಣನೀಯ ಬದಲಾವಣೆಯಾಗುತ್ತದೆ ಎಂದು ಭಾವಿಸಲಾಯಿತಾದರೂ, ಮಹತ್ತರ ಬದಲಾವಣೆಗಳ್ಯಾವುದೂ ಜರುಗಲಿಲ್ಲ. ಸಂವಿಧಾನದ ಬತ್ತಳಿಕೆಯಿಂದ ಹೊರಬಂದ ‘ಮೀಸಲಾತಿ’ ಅಸ್ತ್ರ ಮೇಲು, ಕೀಳು, ಅಸಮಾನತೆಗಳ ವಿರುದ್ಧ ಸಮರವನ್ನೇನೋ ಸಾರಿತು. ಆದರೆ ಅದರ ಬೆನ್ನಿಗೆ ಮೀಸಲಾತಿ ಎನ್ನುವ ‘ಸವಲತ್ತಿನ’ ದುರುಪಯೋಗ ಕೂಡ ನಡೆಯಿತು.

    ಹಿಂದೆಲ್ಲ ಜಾತಿ ಆಧಾರಿತವಾಗಿ ನಡೆಯುತ್ತಿದ್ದ ‘ಸಾಮಾಜಿಕ ಅನ್ಯಾಯಗಳು’ ಸ್ವಾತಂತ್ರ್ಯ ನಂತರದಲ್ಲಿ ಪ್ರಜಾಪ್ರಭುತ್ವದ ಪ್ರತಿಯೊಂದು ಅಂಗಗಳಲ್ಲೂ ನಡೆಯುತ್ತಿವೆ. ಅಲ್ಲದೆ ಜಾತಿ ವ್ಯವಸ್ಥೆ, ಮೇಲುಕೀಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೇಲಿನ ದಬ್ಬಾಳಿಕೆ ಇವತ್ತಿಗೂ ಅಲ್ಲಲ್ಲಿ ಕಾಣಸಿಗುತ್ತವೆ. ಹಿಂದುಳಿದ ವರ್ಗಗಳ ಪರವಾಗಿ ನಡೆದ ಹೋರಾಟಗಳಿಂದ ರಾಜಕೀಯ ಲಾಭಗಳಾಗುತ್ತವೆ ಎನ್ನುವ ಸತ್ಯ ಯಾವಾಗ ರಾಜಕಾರಣದ ಅರಿವಿಗೆ ಬಂದಿತೋ, ಆಗಲೇ ಸಾಮಾಜಿಕ ನ್ಯಾಯದ ಹೋರಾಟಗಳ ದಿಕ್ಕೇ ಬದಲಾಗಿ ಹೋಯಿತು.

    1969ರ ಹೊತ್ತಿಗೆ ಕಾಂಗ್ರೆಸ್ ಪಕ್ಷದೊಳಗೆ ಇಂದಿರಾ ಗಾಂಧಿಯ ಪ್ರಭಾವ ತಗ್ಗಿಸಲು ಆ ಪಕ್ಷದ ಕೆಲ ನಾಯಕರು ಯತ್ನಿಸಿದರು. ಬೆಂಗಳೂರಿನ ಲಾಲ್​ಬಾಗ್​ನ ಗ್ಲಾಸ್​ಹೌಸಿನೊಳಗೆ ಕಾಂಗ್ರೆಸ್ ಇಬ್ಭಾಗವಾದ ಬಳಿಕ ದೇವರಾಜ ಅರಸರು ಇಂದಿರಾ ಗಾಂಧಿ ಎದುರು ‘ಸಾಮಾಜಿಕ ನ್ಯಾಯ’ ಎನ್ನುವ ರಾಜಕೀಯ ಸಿದ್ಧಾಂತವನ್ನು ಗಟ್ಟಿಯಾಗಿ ಉಚ್ಚರಿಸಿದರು. ಆರ್ಥಿಕವಾಗಿ, ಸಾಮಾಜಿಕವಾಗಿ ಬಲಾಢ್ಯರಾಗಿದ್ದ ಮೇಲ್ವರ್ಗಗಳು ಸ್ವಾತಂತ್ರ್ಯ ಚಳವಳಿಯ ಮಂಚೂಣಿಯಲ್ಲಿದ್ದವು, ಹಾಗಾಗಿ ಸ್ವಾತಂತ್ರ್ಯ ನಂತರದ ರಾಜಕೀಯ ಪರಮಾಧಿಕಾರ ಕೂಡ ಅವರ ಕೈಗೆ ಹೋಯಿತು. ಇದನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದ ದೇವರಾಜ ಅರಸರು ಉರುಳಿಸಿದ ‘ಅಹಿಂದ’ ದಾಳ ಕಾಂಗ್ರೆಸಿಗೆ ರಾಜಕೀಯ ಲಾಭವಾಗಿ ಪರಿಣಮಿಸಿತು. ಅಲ್ಲಿಂದ ಅಹಿಂದ ಮತಗಳು ಗಣನೀಯವಾಗಿ ದೇವರಾಜ ಅರಸರ ಬೊಕ್ಕಸಕ್ಕೆ ಜಮೆಯಾಗಿ ಹೋದವು.

    ಸಾಮಾಜಿಕ ಸಮಾನತೆ ಎಂಬುದು ನೈಸರ್ಗಿಕ ನಿಯಮಕ್ಕೆ ವಿರುದ್ಧವಾದದ್ದು ಎಂಬುದನ್ನು ಕೂಡ ನಾವು ಒಪ್ಪಿಕೊಳ್ಳಬೇಕು. ಏಕೆಂದರೆ ವ್ಯಕ್ತಿ-ವ್ಯಕ್ತಿಗಳ ನಡುವೆ ಸಾಮರ್ಥ್ಯ, ಜ್ಞಾನ, ಅರ್ಹತೆ ಮತ್ತು ಸಾಮಾಜಿಕ ಪರಿಸರದ ಆಧಾರದಲ್ಲಿ ಭಿನ್ನತೆಯಿದ್ದೇ ಇರುತ್ತದೆ. ಆದ್ದರಿಂದ ಎಲ್ಲರೂ ಒಂದೇ ಸಮನಾದ ಸಾಮರ್ಥ್ಯ ಹೊಂದಿರಲಾರರು. ಆದರೆ, ಅವರ ಅರ್ಹತೆಗೆ ತಕ್ಕ ಅವಕಾಶ ಮತ್ತು ವಾತಾವರಣ ಕಲ್ಪಿಸಬೇಕಾದ್ದು ಸಮಾನ ಸಮಾಜದ ಕರ್ತವ್ಯವಾಗುತ್ತದೆ. ಸಮಾಜ ಯಾವಾಗಲೂ ಗತಿಶೀಲ. ಕೇವಲ ಕಾಲಮಾನಕ್ಕೆ ತಕ್ಕುದಾದ ಕಾಯಿದೆಗಳನ್ನು ರಚಿಸಿದರೆ ಸಾಲದು. ಅವುಗಳು ಸೂಕ್ತವಾಗಿ ಜಾರಿಗೊಂಡಾಗ ಈ ಕಾನೂನುಗಳಿಗೆ ಅರ್ಥಬರುತ್ತದೆ.

    ಅಪಾಯ ಅರಿಯಬೇಕಿದೆ: ದುರ್ಬಲರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ದೌರ್ಜನ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಲು ನ್ಯಾಯಾಂಗ ದೇಶದ ಕಾನೂನಿನಲ್ಲಿ ಸಾಕಷ್ಟು ಅವಕಾಶ ಕೊಟ್ಟಿದೆ. ಆದರೂ ದುರ್ಬಲ ವರ್ಗಗಳ ಮೇಲೆ ಬಲಿಷ್ಠ ವರ್ಗಗಳ ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ‘ಕಾನೂನು ಮತ್ತು ಸುವ್ಯವಸ್ಥೆ, ಸಾಮಾಜಿಕ ನ್ಯಾಯವನ್ನು ಅಸ್ತಿತ್ವಕ್ಕೆ ತರದೆ ಹೋದರೆ ಅವು ಅಪಾಯಕಾರಿ ಅಣೆಕಟ್ಟೆಗಳು ಇದ್ದಂತೆ’ ಎಂದು ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದರು. ಇಂದು ಆ ಅಪಾಯಕಾರಿ ಅಣೆಕಟ್ಟು ಬಿರುಕು ಬಿಟ್ಟು ಒಡೆದು ಹೋಗುವ ಪರಿಸ್ಥಿತಿಗೆ ಬಂದು ನಿಂತಿದೆ.

    ಸಮಸಮಾಜದ ನಿರ್ವಣದ ಹೋರಾಟಗಳಲ್ಲಿ ಕೆಳವರ್ಗದವರಷ್ಟೇ ಅಲ್ಲದೆ ಮೇಲ್ವರ್ಗದ ಜನರೂ ತೊಡಗಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಕುದ್ಮುಲ್ ರಂಗರಾವ್ ಹೋರಾಟ ಇದರಲ್ಲಿ ಮುಖ್ಯವಾಗಿ ಕಾಣಸಿಗುತ್ತದೆ. ‘ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ, ಸರ್ಕಾರಿ ನೌಕರಿಗೆ ಸೇರಿ, ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು, ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು. ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ’ ಎಂದು ಸದಾಕಾಲವೂ ಹೇಳುತ್ತಿದ್ದ ಅವರು ದಲಿತೋದ್ಧಾರಕ್ಕಾಗಿ ಕ್ರಾಂತಿಯನ್ನೇ ನಡೆಸಿದ್ದರು. ಅಂದಹಾಗೆ ಇಂದು ‘ಸಾಮಾಜಿಕ ನ್ಯಾಯ ದಿನ’. ವಿಜ್ಞಾನದ ಕಕ್ಷೆಯೊಳಗೆ ವೇಗವಾಗಿ ಸುತ್ತುತ್ತಿರುವ ಈ ಸಮಾಜ, ಮೇಲು, ಕೀಳು, ಅಸಮಾನತೆ ಎನ್ನುವ ಪರಿಧಿಯಿಂದ ಆದಷ್ಟು ಬೇಗ ಆಚೆಗೆ ಬರಲಿ ಎಂದು ಹಾರೈಸೋಣ.

    (ಲೇಖಕರು ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts