More

    ನ್ಯಾಯಾಂಗ ವಿದ್ವಾಂಸ ಡಾ. ರಾಮಾ ಜೋಯಿಸ್

    | ದು. ಗು. ಲಕ್ಷ್ಮಣ

    ಅದು 50ರ ದಶಕದ ಕೊನೆಯ ಚರಣ. ಶಿವಮೊಗ್ಗದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಆರೆಸ್ಸೆಸ್ ಸಂಘಶಿಕ್ಷಾವರ್ಗ ಏರ್ಪಟ್ಟಿತ್ತು. ಮಧ್ಯದಲ್ಲೊಂದು ದಿನ ಶಿಕ್ಷಾರ್ಥಿಗಳಿಂದ ಮನರಂಜನೆಯ ಕಾರ್ಯಕ್ರಮ. ಶಿಬಿರದಲ್ಲಿ ವ್ಯವಸ್ಥೆಯ ದೃಷ್ಟಿಯಿಂದ ಆಗಿರಬಹುದಾದ ತಪು್ಪಗಳ ಬಗ್ಗೆ ಒಂದು ಅದಾಲತ್ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ನ್ಯಾಯಾಧೀಶನ ಪಾತ್ರವಹಿಸಿ ಆತ ನೀಡುತ್ತಿದ್ದ ಚುರುಕಿನ ತೀರ್ಪಗಳು ಅಲ್ಲಿದ್ದ ಸಂಘದ ಹಿರಿಯ ಪ್ರಚಾರಕರಾಗಿದ್ದ ಯಾದವರಾವ್ ಜೋಷಿಯವರ ಗಮನ ಸೆಳೆಯಿತು. ಕಾರ್ಯಕ್ರಮ ಮುಗಿದ ಬಳಿಕ ಆ ತರುಣನನ್ನು ಹತ್ತಿರ ಕರೆದು ‘ಜಡ್ಜ್ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿರುವೆ. ನೀನೇಕೆ ಕಾನೂನು ಪದವಿ ಓದಿ ನ್ಯಾಯವಾದಿ ಆಗಬಾರದು?’ ಎಂದರು. ‘ಮನೆಯಲ್ಲಿ ಬಡತನ. ಈಗ ಡಿಗ್ರಿ ಮುಗಿಸಿರುವುದೇ ದೊಡ್ಡದು. ಇನ್ನು ಲಾ ಓದಲು ದುಡ್ಡೆಲ್ಲಿ? ನಾನು ಯಾವುದಾದರೂ ಹೈಸ್ಕೂಲಿನಲ್ಲಿ ಶಿಕ್ಷಕನಾಗಿ ದುಡಿಯಬೇಕೆಂದಿರುವೆ’ ಎಂದು ಆ ತರುಣ ವಿನೀತನಾಗಿ ಹೇಳಿದ. ಆದರೆ ಯಾದವರಾವ್​ಜೀ ಬಿಡಲಿಲ್ಲ. ‘ಇಲ್ಲ, ನೀನು ಬೆಂಗಳೂರಿಗೆ ಬಾ, ನಿನಗೆ ಲಾ ಒದಲು ಎಲ್ಲ ವ್ಯವಸ್ಥೆ ಮಾಡುವೆ’ ಎಂದು ಭರವಸೆ ಕೊಟ್ಟರು.

    ಬೆಂಗಳೂರಿನಲ್ಲಿ ‘ವಿಕ್ರಮ’ ವಾರಪತ್ರಿಕೆಯಲ್ಲಿ ತಾತ್ಕಾಲಿಕ ಉಪಸಂಪಾದಕನಾಗಿ ಕೆಲಸ, ಸಂಜೆಯಾದ ಮೇಲೆ ಲಾ ಕಾಲೇಜಿನಲ್ಲಿ ವ್ಯಾಸಂಗ. ಹೀಗೆ ಕಾನೂನು ಪದವೀಧರನಾಗಿ ಆ ತರುಣ ವಕೀಲಿವೃತ್ತಿ ಆರಂಭಿಸಿದ. ಕೈಗೆ ತೆಗೆದುಕೊಂಡ ಒಂದೊಂದು ಮೊಕದ್ದಮೆಗಳಲ್ಲೂ ಗೆಲುವು, ಜನಪ್ರಿಯತೆಯನ್ನು ತಂದುಕೊಟ್ಟವು. ಹೈಕೋರ್ಟ್​ನಲ್ಲಿ ವೃತ್ತಿ ಆರಂಭಿಸಿ ಜನಪ್ರಿಯ ರಿಟ್ ಪಿಟಿಷನ್ ಲಾಯರ್ ಎನಿಸಿಕೊಂಡ. ಹೀಗೆ ಹೈಸ್ಕೂಲ್ ಶಿಕ್ಷಕನಾಗಿ ಎಲ್ಲೋ ಕಳೆದುಹೋಗಬೇಕಿದ್ದ ಆ ತರುಣನೇ ಮುಂದೆ ಪ್ರಖ್ಯಾತ ನ್ಯಾಯಾಧೀಶರೆನಿಸಿ ಕೊಂಡ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.

    1975ರ ತುರ್ತು ಪರಿಸ್ಥಿತಿಯ ವೇಳೆ ಬಂಧನದಲ್ಲಿದ್ದ ವಾಜಪೇಯಿ, ಆಡ್ವಾಣಿ ಪರ ಕೋರ್ಟಿನಲ್ಲಿ ವಾದಿಸಿ ಅವರನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದ್ದರು. ಅವರ ವಾದ ಎಷ್ಟು ಪರಿಣಾಮಕಾರಿಯಾಯಿತೆಂದರೆ ಅರಸು ಸರ್ಕಾರ ಸ್ವತಃ ರಾಮಾ ಜೋಯಿಸ್ ಅವರನ್ನೇ ಮೀಸಾ ಕಾಯ್ದೆಯಡಿ ಬಂಧಿಸಿ 21 ತಿಂಗಳ ಕಾಲ ಕಾರಾಗೃಹದಲ್ಲಿರಿಸಿತ್ತು. ತುರ್ತು ಪರಿಸ್ಥಿತಿ ತೊಲಗಿ ಎಲ್ಲರ ಬಿಡುಗಡೆಯಾಗಿ ಕೇಂದ್ರದಲ್ಲಿ ಜನತಾ ಸರ್ಕಾರದ ಆಡಳಿತ ಬಂದಾಗ ರಾಮಾ ಜೋಯಿಸರು ನ್ಯಾಯಾಧೀಶರಾಗುವ ಭಾಗ್ಯ ತಾನಾಗಿ ಒಲಿಯಿತು. ನಂತರ ಪಂಜಾಬ್-ಹರಿಯಾಣ ಹೈಕೋರ್ಟಿನ ನ್ಯಾಯಮೂರ್ತಿಗಳಾಗಿ, ಬಳಿಕ ಮುಖ್ಯ ನ್ಯಾಯಮೂರ್ತಿಯೂ ಆಗಿ ನಿವೃತ್ತರಾದ ಅವರಿಗೆ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೇರಿದಾಗ ಬಿಹಾರ, ಬಳಿಕ ಜಾರ್ಖಂಡ್ ರಾಜ್ಯಗಳ ರಾಜ್ಯಪಾಲರಾಗುವ ಅವಕಾಶವೂ ಒದಗಿ ಬಂತು. ಸರ್ಕಾರಿ ಮಟ್ಟದ ಅನೇಕ ಉನ್ನತ ಸಮಿತಿಗಳಿಗೆ ಸದಸ್ಯರಾಗಿ, ಅಧ್ಯಕ್ಷರಾಗಿ, ಮಾರ್ಗದರ್ಶಕರಾಗಿ ಅವರ ಸೇವೆ ಪ್ರಶಂಸನೀಯ. ರಾಜ್ಯಸಭಾ ಸದಸ್ಯರಾಗಿಯೂ ಅವರ ಸೇವೆ ಸ್ಮರಣೀಯ.

    ರಾಮಾ ಜೋಯಿಸ್ ಹಲವು ಉಪಯುಕ್ತ ಗ್ರಂಥಗಳನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ. ಸಂವಿಧಾನ, ಕಾನೂನುಕಟ್ಟಳೆ ಕುರಿತು ಅವರು ನೀಡಿರುವ ಹಲವಾರು ಮಹತ್ವದ ತೀರ್ಪಗಳು ಈಗಲೂ ರೆಫರೆನ್ಸ್ ಜಡ್ಜಮೆಂಟ್​ಗಳಾಗಿ ಬಳಸಲ್ಪಡುತ್ತವೆ. ತುಮಕೂರು ಬಳಿಯ ದಲಿತ ಕೇರಿಯ ಜಮೀನನ್ನು ಯಾರೋ ಪಟ್ಟಭದ್ರರು ವಶಪಡಿಸಿಕೊಂಡು ತೊಂದರೆ ನೀಡಿದಾಗ ದಲಿತ ಬಂಧುಗಳ ಪರ ವಕಾಲತ್ತುವಹಿಸಿ ಅವರಿಗೆ ನ್ಯಾಯ ಸಿಗುವಂತೆ ಮಾಡಿದರು. ಮತ್ತೆ ಭೂಮಿ ಪಡೆದುಕೊಂಡ ಅಲ್ಲಿನ ದಲಿತರು ತಮ್ಮ ಕೇರಿಗೆ ‘ರಾಮಾ ಜೋಯಿಸ್ ನಗರ’ ಎಂದು ನಾಮಕರಣ ಮಾಡಿದ್ದು ಅವರ ಸಾಮಾಜಿಕ ಸಾಮರಸ್ಯ, ಸಮಾನತೆ, ಮಾನವೀಯ ಅನುಕಂಪದ ಸಂಕೇತ.

    ಸರಳತೆ, ಶಿಸ್ತು, ಸಜ್ಜನಿಕೆ, ಪ್ರಾಮಾಣಿಕತೆ, ಸಂಸ್ಕಾರಭರಿತ ವ್ಯಕ್ತಿತ್ವದ ಪ್ರತಿರೂಪವೇ ಅವರಾಗಿದ್ದರು. ಸಾಧಾರಣವಾಗಿ ಗಂಭೀರವದನರಾಗಿರುವ ಜಡ್ಜ್​ಗಳನ್ನು ಮಾತನಾಡಿಸುವುದೇ ಕಷ್ಟ. ಆದರೆ ರಾಮಾ ಜೋಯಿಸ್ ಅದಕ್ಕೆ ಅಪವಾದ. ಬೇರೆಯವರು ಮಾತನಾಡಿಸುವ ಮುನ್ನ ಅವರೇ ಪ್ರೀತಿ, ಸಲುಗೆಯಿಂದ ಮಾತನಾಡಿಸಿ ಕುಶಲ ವಿಚಾರಿಸುತ್ತಿದ್ದರು. ತೀರ್ಥಹಳ್ಳಿ ತಾಲ್ಲೂಕು ಕುವೆಂಪು, ಹಾಮಾ ನಾಯಕ, ಎಂ.ಕೆ. ಇಂದಿರಾ, ಅನಂತಮೂರ್ತಿ ಮೊದಲಾದ ಪ್ರಸಿದ್ಧ ಸಾಹಿತಿಗಳನ್ನು ನಾಡಿಗೆ ನೀಡಿದೆ. ಅದೇ ಸಾಲಿನಲ್ಲಿ ರಾಮಾ ಜೋಯಿಸ್​ರಂಥ ಶ್ರೇಷ್ಠ ನ್ಯಾಯಮೂರ್ತಿಯನ್ನೂ ನೀಡಿದೆ ಎನ್ನುವುದು ಮಲೆನಾಡಿಗೆ ಹೆಮ್ಮೆಯ ಸಂಗತಿ. ಹಾಗೆಯೇ ಆರೆಸ್ಸೆಸ್ ಗರಡಿಯಲ್ಲಿ ಬೆಳೆದ ಅವರು ಓರ್ವ ಆದರ್ಶ ಸ್ವಯಂಸೇವಕ ಆಗಿದ್ದರು.

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts