ಹುಬ್ಬಳ್ಳಿ: ನಮ್ಮಲ್ಲಿ ಯಾವುದೇ ಕಲೆ, ಕೌಶಲ ಅಭಿವೃದ್ಧಿಗೊಳ್ಳಬೇಕಾದರೆ ಅದು ನಮ್ಮಿಂದ ಶೃದ್ಧೆ, ಕೆಲಸದ ಪ್ರೀತಿ ಮತ್ತು ಕಠಿಣ ಶ್ರಮವನ್ನು ಬೇಡುತ್ತದೆಯೇ ಹೊರತು ನಮ್ಮ ಜಾತಿ, ಧರ್ಮ, ಲಿಂಗ, ಭಾಷೆ ಯಾವುದನ್ನೂ ಕೇಳುವುದಿಲ್ಲ. ಕಲೆ, ಕೌಶಲಕ್ಕೆ ಧರ್ಮದ ಹಂಗು ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಹುಬ್ಬಳ್ಳಿಯ ಮುಸ್ಲಿಂ ಮಹಿಳೆ ಸುಮನ್ ಹಾವೇರಿ.
ಜೀವನೋಪಾಯಕ್ಕೆ ಯಾವುದಾದರೂ ಮಾರ್ಗ ಕಂಡುಕೊಳ್ಳಬೇಕಲ್ಲವೆ? ಹೀಗೆ ಪ್ರಶ್ನೆ ಎದುರಾದಾಗ ಇವರು ಆಯ್ದುಕೊಂಡದ್ದು ಗಣೇಶನ ಮೂರ್ತಿ ತಯಾರಿಸುವ ಕಾರ್ಯ. ಉದ್ಯೋಗ ಅರಸಿ ಬೇರೆಲ್ಲೋ ಹೋಗಲಿಲ್ಲ ಅಥವಾ ನನಗೇನೂ ಬಾರದು ಎಂದು ಕೈಹೊತ್ತು ಕುಳಿತುಕೊಳ್ಳಲಿಲ್ಲ. ತಮ್ಮಲ್ಲಿರುವ ಕೌಶಲವನ್ನೇ ವೃತ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಸ್ಪೀಡ್ ಪೋಸ್ಟ್ ಸೇವೆ ಮರು ಆರಂಭಿಸಿದ ಅಂಚೆ ಇಲಾಖೆ
ಗಣೇಶನ ಮೂರ್ತಿ ತಯಾರಿಸುವ ಘಟಕದಲ್ಲಿ ತಂಡದ ಸಹಾಯಕಿಯಾಗಿ ಕಳೆದೆರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದ ಆರಂಭಕ್ಕೂ ಮುನ್ನ ನಗರದಲ್ಲಿ ಗಣೇಶನ ಮೂರ್ತಿ ತಯಾರಿಸುವ ಕಾರ್ಯ ಪ್ರಾರಂಭವಾಗುತ್ತದೆ.
ವಿಗ್ರಹ ತಯಾರಕ ಅರುಣ್ ಯಾದವ್ ಅವರ ಈ ಕೆಲಸದಲ್ಲಿ ಇತರ ಇಬ್ಬರು ಮಹಿಳೆಯರ ಜೊತೆಗೆ ಸುಮನ್ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿಗ್ರಹಗಳ ಮೇಲೆ ಆಭರಣಗಳನ್ನು ವಿನ್ಯಾಸಗೊಳಿಸಿ, ವಿಗ್ರಹಕ್ಕೆ ಅಂತಿಮ ಸ್ಪರ್ಶವನ್ನು ನೀಡುತ್ತಾರೆ. ವಿಶಿಷ್ಟ ಹಾಗೂ ಪರಿಸರ ಸ್ನೇಹಿ ವಿಗ್ರಹಗಳ ತಯಾರಿಕೆಯಲ್ಲಿ ಎಲ್ಲಿಲ್ಲದ ಆಸಕ್ತಿ ಇವರಿಗೆ.
ಇದನ್ನೂ ಓದಿ: ಕೋವಿಡ್-19: ರಾಜ್ಯ ಸರ್ಕಾರದ ಹೊಸ ಪರೀಕ್ಷಾ ನೀತಿ ಏನು?
ಎರಡು ವರ್ಷಗಳ ಹಿಂದೆ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶನ ಮೂರ್ತಿಗಳನ್ನು ನಿಷೇಧಿಸಿದ ನಂತರ, ನಾನು ಕಾಗದದ ವಿಗ್ರಹಗಳನ್ನು ತಯಾರಿಸಲು ಪ್ರಾರಂಭಿಸಿದೆ. ಅಂದಿನಿಂದ ನಾನು ಈ ಕೆಲಸಕ್ಕೆ ವಿವಿಧ ಸಮುದಾಯಗಳಿಗೆ ಸೇರಿದ ಆರು ಜನರನ್ನು ನೇಮಿಸಿಕೊಂಡಿದ್ದೇನೆ ಎನ್ನುತ್ತಾರೆ ಯಾದವ್.
ಈ ಪ್ರದೇಶದಲ್ಲಿ ಕಾಗದದ ಗಣೇಶ ವಿಗ್ರಹಗಳನ್ನು ತಯಾರಿಸುವ ಏಕೈಕ ವ್ಯಕ್ತಿ ಅವರು. ಗಣೇಶ ಚತುರ್ಥಿ ಅವಧಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲು ಅವರು ಪ್ರತಿವರ್ಷ ಗರಿಷ್ಠ 10 ಅಡಿ ಎತ್ತರದ 600 ಕ್ಕೂ ಹೆಚ್ಚು ವಿಗ್ರಹಗಳನ್ನು ಮಾಡುತ್ತಾರೆ.