More

    ಜೋಡಿ ಕೊಲೆ ಆರೋಪಿಗಳ ಬಂಧನ

    ಹಾವೇರಿ: ತಾಲೂಕಿನ ಯತ್ತಿನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳು ಒಂದೇ ದಿನದಲ್ಲಿ ಭೇದಿಸಿದ್ದು, ಕೊಲೆಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಈ ಕುರಿತು ಗುರುವಾರ ನಗರದ ಡಿವೈಎಸ್​ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್​ಪಿ ಕೆ.ಜಿ. ದೇವರಾಜ್, ಆರೋಪಿಗಳಾದ ಯತ್ತಿನಹಳ್ಳಿ ಗ್ರಾಮದ ನಿವಾಸಿ ಶಂಭುಲಿಂಗ ಪೋರಾಪುರ ಹಾಗೂ ಆತನ ಲಾರಿ ಚಾಲಕ ಮಂಜುನಾಥ ಯರೇಶಿಮಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

    ಮಂಗಳವಾರ ತಡರಾತ್ರಿ ಯತ್ತಿನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿಯ ಕಾಂಪ್ಲೆಕ್ಸ್​ನಲ್ಲಿ ಮಲಗಿದ್ದ ನಿಂಗಪ್ಪ ಶಿರಗುಪ್ಪಿ (28) ಹಾಗೂ ಗಣೇಶ ಕುಂದಾಪುರ (13) ಅವರನ್ನು ಹತ್ಯೆ ಮಾಡಲಾಗಿತ್ತು. ಈ ಕುರಿತು ಕೊಲೆಯಾದ ನಿಂಗಪ್ಪನ ಸಹೋದರ ಸಂಜೀವ ಶಿರಗುಪ್ಪಿ ದೂರು ನೀಡಿದ್ದರು.

    ತಮ್ಮ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ವಿಜಯಕುಮಾರ ಸಂತೋಷ, ಪಿಎಸ್​ಐ ಪ್ರಹ್ಲಾದ ಚನ್ನಗಿರಿ, ಪಿಎಸ್​ಐ ಎಸ್.ಪಿ. ಹೊಸಮನಿ, ಪಿ.ಜಿ. ನಂದಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು. ದೂರುದಾರರ ಸಂಶಯದ ಮೇಲೆ ವಿಚಾರಣೆ ನಡೆಸಿದಾಗ ಯತ್ತಿನಹಳ್ಳಿಯ ಶಂಭುಲಿಂಗ ಪೋರಾಪುರ ಮತ್ತು ಆತನ ಲಾರಿ ಚಾಲಕ ಮಂಜುನಾಥ ಯರೇಶಿಮಿ ಇಬ್ಬರೂ ಕೊಲೆಯಾದ ನಂತರ ಗ್ರಾಮದಿಂದ ನಾಪತ್ತೆಯಾಗಿರುವ ವಿಷಯ ಗೊತ್ತಾಯಿತು. ಇಬ್ಬರೂ ಹಾನಗಲ್ಲನಲ್ಲಿರುವುದಾಗಿ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಹಾನಗಲ್ಲ ಬಸ್ ನಿಲ್ದಾಣದಿಂದ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಿದಾಗ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದರು.

    ಹಣಕ್ಕಾಗಿ ಪೀಡಿಸಿದ್ದ ನಿಂಗಪ್ಪ

    ಕೊಲೆಯಾದ ನಿಂಗಪ್ಪ ಮತ್ತು ಕೊಲೆ ಆರೋಪಿ ಶಂಭುಲಿಂಗ ಇಬ್ಬರೂ ಸ್ನೇಹಿತರಾಗಿದ್ದು, ನಿಂಗಪ್ಪ ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದ. ಈ ಹಿಂದೆ ನಾಲ್ಕೈದು ಲಕ್ಷ ರೂಪಾಯಿಗಳನ್ನು ಪಡೆದು ಅದನ್ನೂ ಹಿಂದಿರುಗಿಸಿರಲಿಲ್ಲ. ಶಂಭುಲಿಂಗಪ್ಪನಿಂದ ಕಾರು, ಬೈಕ್ ಪಡೆದುಕೊಂಡಿದ್ದ ನಿಂಗಪ್ಪ ಮರಳಿ ಕೊಟ್ಟಿರಲಿಲ್ಲ. ಅಲ್ಲದೆ, ವಾಹನ ಅಪಘಾತ ಮಾಡಿಕೊಂಡು ಬರುತ್ತಿದ್ದ. ಈ ಬಗ್ಗೆ ಕೇಳಿದರೆ ಸೊಕ್ಕಿನಿಂದ ಮಾತನಾಡುತ್ತಿದ್ದ. ಶಂಭುಲಿಂಗಪ್ಪ ಯತ್ತಿನಹಳ್ಳಿಯ ಕಾಂಪ್ಲೆಕ್ಸ್​ನಲ್ಲಿ ಮಾಡಿಕೊಂಡಿದ್ದ ಆಫೀಸ್​ಗೆ ನಿಂಗಪ್ಪ ತನ್ನೊಂದಿಗೆ ಗಣೇಶನನ್ನು ಕರೆದುಕೊಂಡು ಬಂದು ಕುಡಿಯುವುದು, ತಿನ್ನುವುದು ಮಾಡುತ್ತಿದ್ದ. ಇಲ್ಲಿಗೆ ಬರಬೇಡ ಎಂದರೂ ಕೇಳುತ್ತಿರಲಿಲ್ಲ. ಅಲ್ಲದೆ, ಕೊಲೆ ಬೆದರಿಕೆ ಹಾಕಲು ಶುರು ಮಾಡಿದ್ದ. ನಿಂಗಪ್ಪ ಮತ್ತು ಗಣೇಶನ ಕಾಟ ಜಾಸ್ತಿಯಾದ್ದರಿಂದ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು.

    ಬೇಲ್ ಮೇಲೆ ಬಿಡಿಸಿ ಕೊಲೆ

    ಕೊಲೆಯಾದ ನಿಂಗಪ್ಪ ಶಿರಗುಪ್ಪಿಯ ಹಿನ್ನೆಲೆಯೂ ಸರಿಯಿರಲಿಲ್ಲ. 2014ರಲ್ಲಿ ರಾಣೆಬೆನ್ನೂರಿನಲ್ಲಿ ಡಕಾಯಿತಿ ಕೇಸ್​ನಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದ. ಕಳೆದ ವರ್ಷ ಮಾರ್ಚ್​ನಲ್ಲಿ ಶಂಭುಲಿಂಗಪ್ಪನೇ ಆತನನ್ನು ಬೇಲ್​ನಲ್ಲಿ ಬಿಡಿಸಿದ್ದ. ಈಗ ಆತನೇ ಕೊಲೆ ಮಾಡಿದ್ದು, ಹೆಚ್ಚಿನ ವಿಚಾರಣೆ ನಡೆಸಿ ಶೀಘ್ರದಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು. ಆರೋಪಿಗಳಿಗೆ ಹೆಚ್ಚಿನ ಶಿಕ್ಷೆ ಆಗುವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಕಾರ್ಯಾಚರಣೆಯಲ್ಲಿ ಶಹರ ಠಾಣೆ ಸಿಬ್ಬಂದಿ ಆರ್.ವಿ. ಸೊಪ್ಪಿನ, ವೈ.ಎಫ್. ತಹಶೀಲ್ದಾರ್, ಎಂ.ಎಂ. ತುಂಗಳದ, ಸಿ.ಎಂ. ಪೂಜಾರ, ಎಂ.ಜಿ. ದೊಡ್ಡಕಾರಗಿ, ಪಿ.ಕೆ. ಕರಿಯಣ್ಣನವರ, ಗುಡ್ಡಪ್ಪ ಹಳ್ಳೂರ, ಪರಶುರಾಮ ತಿಪ್ಪಣ್ಣನವರ, ಶಂಭು ಸುಳ್ಳಳ್ಳಿ, ಗುರುಶಾಂತ ಉಮ್ಮಚಗಿ, ಬಿ.ಬಿ. ಅರಳಿ, ಎಂ.ಡಿ. ಹಿರೇಮಠ, ಎಸ್.ಬಿ. ನಾಡಗೌಡ್ರ, ಎಂ.ಎಂ. ಬಂಕಾಪುರ, ಮಾರುತಿ ಹಾಲಬಾವಿ, ವಿನಾಯಕ ಮಳವಳ್ಳಿ ಇತರರು ಪಾಲ್ಗೊಂಡಿದ್ದರು. ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ಬಹುಮಾನ ಘೊಷಿಸಲಾಗಿದೆ ಎಂದರು.

    ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್​ಪಿ ವಿಜಯಕುಮಾರ ಸಂತೋಷ, ಪಿಎಸ್​ಐ ಪ್ರಹ್ಲಾದ ಚನ್ನಗಿರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts