More

    ಅರ್ಕೇಶ್ವರಸ್ವಾಮಿ ದೇವಾಲಯಕ್ಕಿಲ್ಲ ಭದ್ರತೆ

    ಕೆ.ಆರ್.ನಗರ: ಪಟ್ಟಣದ ಅಧಿದೇವತೆ ಹಾಗೂ ದಕ್ಷಿಣ ಕಾಶಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಹಳೇ ಎಡತೊರೆಯ ಶ್ರೀ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿ ದೇವಾಲಯಕ್ಕೆ ಭದ್ರತೆ ಕೊರತೆ ಎದುರಾಗಿದೆ.

    ಪಟ್ಟಣದ ಹೊರವಲಯದಲ್ಲಿರುವ ಹಳೇ ಎಡತೊರೆಯ ಕಾವೇರಿ ನದಿ ದಡದಲ್ಲಿರುವ ಅರ್ಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಭಕ್ತರ ಸಕಲ ಕೋರಿಕೆಗಳನ್ನು ಈಡೇರಿಸುವ ದೇವರಿಗೆ ಬೇಕಿದೆ ಸೂಕ್ತ ರಕ್ಷಣೆ. ಪ್ರತಿ ವರ್ಷ ರಥ ಸಪ್ತಮಿಯಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಮಹಾ ಶಿವರಾತ್ರಿಯಂದು ಸೂರ್ಯನ ಕಿರಣ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಬೀಳುವುದನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವುದು ವಿಶೇಷ.

    ಈ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದು ಪೂಜೆಗಾಗಿ ಅರ್ಚಕರು, ನಿರ್ವಹಣೆಗಾಗಿ ಪಾರುಪತ್ತೆಗಾರರನ್ನು ನೇಮಿಸಿದೆ. ಭದ್ರತೆಗೆ ರಾತ್ರಿ ಕಾವಲುಗಾರರನ್ನು ನೇಮಿಸದಿರುವುದು ಹಾಗೂ ದೇವಾಲಯಗಳಿಗೆ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಪರಿಣಾಮ ದೇವಸ್ಥಾನ ಹಾಗೂ ಭಕ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಲದೇ ರಾತ್ರಿ ವೇಳೆ ದೇವಾಲಯದ ಹೊರವಲಯದಲ್ಲಿ ನಡೆಯಲಿರುವ ಅನೈತಿಕ ಚಟುವಟಿಕೆಗಳಿಗೆ ತಡೆಗೆ ನಿಯಂತ್ರಣ ಇಲ್ಲದಂತಾಗಿದೆ.

    ಕಳ್ಳತನ ಯತ್ನ: ದೇವಾಲಯದಲ್ಲಿ 7 ವರ್ಷ ಅವಧಿಯೊಳಗೆ ಮೂರು ಬಾರಿ ಕಳ್ಳತನ ನಡೆದಿದೆ. ಇದಕ್ಕೂ ಮೊದಲು ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗ ಬಳಿ ನಿಧಿಗಾಗಿ ಶೋಧ ನಡೆದಿದ್ದು, ಹುಂಡಿ ಕಳ್ಳತನ ಮಾಡಲಾಗಿತ್ತು. ಅ.4 ಮಧ್ಯರಾತ್ರಿಯಂದು 10 ಅಡಿ ಎತ್ತರವಿ ರುವ ಗೋಡೆ ಜಿಗಿದೋ ಅಥವಾ ದುಸ್ಥಿತಿಯಲ್ಲಿರುವ ಮುಂಬಾಗಿಲಿನ ಚಿಲಕ ತೆಗೆದೋ ಒಳ ಪ್ರವೇಶಿಸಿರುವ ಖದೀಮರು ದೇವರ ಗುಡಿಯ ಮುಖ್ಯ ಬಾಗಿಲನ್ನು ಹಾರೆಯಿಂದ ಮೀಟಿ ಒಳ ಪ್ರವೇಶಿಸಿ ಭಕ್ತರ ಕಾಣಿಕೆ ಹುಂಡಿಗಳನ್ನು ಒಡೆಯಲು ಯತ್ನಿಸಿ ವಿಫಲರಾಗಿದ್ದರು. ಇನ್ನು ಗರ್ಭಗುಡಿ ಬಳಿಯಿದ್ದ ಹಣ್ಣು-ಕಾಯಿಯನ್ನು ಚೆಲ್ಲಾಪಿಲ್ಲಿ ಮಾಡಿ ದೇವಸ್ಥಾನದ ಪ್ರಾಂಗಣದಲ್ಲಿರುವ ಪ್ರಸಾದ ತಯಾರಿಸುವ ಕೊಠಡಿಗೆ ನುಗ್ಗಿ ಅಡುಗೆ ತಯಾರಿಸುವ ಬೃಹತ್ ಗಾತ್ರದ ಹಿತ್ತಾಳೆ ಪಾತ್ರೆಗಳನ್ನೂ ಚೆಲ್ಲಾಪಿಲ್ಲಿ ಮಾಡಿದ್ದರು. ಇದರೊಂದಿಗೆ ಕಡ್ಲೆಪುರಿ, ಕರಿಬೇವಿನಸೊಪ್ಪು ಮತ್ತು ಇತರ ವಸ್ತುಗಳಿಂದ ಚುರುಮುರಿ ತಯಾರಿಸಿ ಸ್ಥಳದಲ್ಲೆಲ್ಲ ಚೆಲ್ಲಾಡಿ ಹೋಗಿದ್ದರು.
    ಬೆಲೆಬಾಳುವ ವಸ್ತುಗಳು ದೇವಾಲಯದಲ್ಲಿಲ್ಲ

    ದೇವಾಲಯದಲ್ಲಿ ಹಲವಾರು ಬಾರಿ ಕಳ್ಳತನಗಳು ನಡೆದಿದ್ದರಿಂದ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿರುವುದರಿಂದ ಬೆಲೆ ಬಾಳುವ ವಿಗ್ರಹಗಳು, ದೇವರ ಉತ್ಸವ ಮೂರ್ತಿ, ಇತರ ಪೂಜಾ ಸಾಮಗ್ರಿಗಳನ್ನು ತಾಲೂಕು ಆಡಳಿತ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದೆ. ಜಾತ್ರೆ, ಹಬ್ಬಗಳು ನಡೆಯುವ ಸಂದರ್ಭದಲ್ಲಿ ಮಾತ್ರ ಅವುಗಳನ್ನು ದೇವಾಲಯಕ್ಕೆ ತಂದು ಪೂಜೆ ಮುಗಿದ ಮೇಲೆ ತೆಗೆದುಕೊಂಡು ಹೋಗಲಿದೆ. ಇದರಿಂದಾಗಿ ದರೋಡೆ ಮಾಡಲು ಯತ್ನಿಸಿರುವ ಖದೀಮರಿಗೆ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಕ್ಕಿಲ್ಲ.

    ರಾತ್ರಿ ಕಾವಲುಗಾರನಿಲ್ಲ: ದೇವಸ್ಥಾನದಲ್ಲಿ ಅರ್ಚಕರು, ಪಾರುಪತ್ತೆದಾರರು ಸೇರಿದಂತೆ ಬೆಳಗಿನ ಕಾವಲುಗಾರರನ್ನು ಮುಜರಾಯಿ ಇಲಾಖೆಯಿಂದ ನೇಮಕ ಮಾಡಲಾಗಿದ್ದು, ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಕಾವಲುಗಾರನನ್ನು ನೇಮಿಸಿಲ್ಲ. ಪ್ರತಿ ವರ್ಷ ಆರೇಳು ಲಕ್ಷ ರೂ. ಆದಾಯ ತಂದುಕೊಡುವ ದೇವಸ್ಥಾನಕ್ಕೆ ಸೂಕ್ತ ಆಡಳಿತ ವ್ಯವಸ್ಥೆ ಬೇಕಿದೆ ಎಂಬ ಒತ್ತಾಯ ಭಕ್ತರದ್ದು.

    ಸಿಸಿ ಟಿವಿ ಇಲ್ಲ: ದೇವಸ್ಥಾನಕ್ಕೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ ಪ್ರಾಚ್ಯವಸ್ತು, ಧಾರ್ಮಿಕ ದತ್ತಿ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಎರಡು ವರ್ಷಗಳ ಹಿಂದೆ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಾರಂಭವಾಗಿದ್ದರಿಂದ ದೇವಸ್ಥಾನದ ಪ್ರಮುಖ ಭಾಗಗಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನು ಸಂರಕ್ಷಿಸುವ ಕೆಲಸವಾಗಲಿಲ್ಲ. ಬೇಕಾಬಿಟ್ಟಿಯಾಗಿ ಕೆಲಸ ಮಾಡಿದ್ದರಿಂದ ನೀರು, ಬಣ್ಣ ಬಿದ್ದು ಕ್ಯಾಮರಾಗಳು ಕಾರ್ಯ ನಿರ್ವಹಿಸದೆ ಸ್ಥಗಿತಗೊಂಡಿವೆ. ಪರಿಣಾಮ ಅಕ್ರಮ ಚಟುವಟಿಕೆ, ಕಳ್ಳತನಗಳು ನಡೆದರೂ ಪತ್ತೆ ಹಚ್ಚಲು ಸಾದ್ಯವಾಗುತ್ತಿಲ್ಲ.

    ತಾಲೂಕಿನ ಅಧಿದೇವತೆಗೆ ಈ ರೀತಿ ಅಭದ್ರತೆ ಕಾಡಿದರೆ ಸಾಮಾನ್ಯ ಜನರ ಗತಿಯೇನು ಎಂಬುದೇ ಭಕ್ತರ ಪ್ರಶ್ನೆ. ಇನ್ನಾದರೂ ಮುಜರಾಯಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚರಿಕೆ ವಹಿಸಿ ಮೊದಲಿನಂತೆ ದೇವಸ್ಥಾನದಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವ ಜತೆಗೆ ರಾತ್ರಿ ಕಾವಲುಗಾರರನ್ನು ನೇಮಿಸಲಿ ಎಂಬುದು ಸಾರ್ವಜನಿಕ ಒತ್ತಾಯ.

    ಅರ್ಕೇಶ್ವರಸ್ವಾಮಿ ದೇವಸ್ಥಾನ ಪಟ್ಟಣದ ಹೊರ ವಲಯದಲ್ಲಿರುವುದರಿಂದ ಜನಜಂಗುಳಿ ಕಡಿಮೆ ಇರುತ್ತದೆ. ಇಲ್ಲಿಗೆ ಅನೇಕ ಕಡೆಯಿಂದ ಭಕ್ತರು ನಿತ್ಯ ಬರಲಿದ್ದು, ವಿಶೇಷ ದಿನಗಳಲ್ಲಂತೂ ಸಾವಿರಾರು ಜನರು ಆಗಮಿಸುತ್ತಾರೆ. ಇಂತಹ ದೇವಸ್ಥಾನಕ್ಕೆ ಭದ್ರತೆ ಮತ್ತು ರಕ್ಷಣೆ ಇಲ್ಲದೆ ಕಳ್ಳತನ ಹೆಚ್ಚಾಗಿದೆ. ಎರಡು ವರ್ಷಗಳಿಂದ ಕೆಟ್ಟಿರುವ ಸಿಸಿ ಕ್ಯಾಮರಾಗಳನ್ನು ಸರಿಪಡಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತದೆ.
    ರವಿಪೂಜಾರಿ ಗುತ್ತಿಗೆದಾರ, ಮಧುವನಹಳ್ಳಿ ಬಡಾವಣೆ

    ದೇವಸ್ಥಾನದಲ್ಲಿ ಈ ಹಿಂದೆ ಕಳ್ಳತನ ಯತ್ನ ನಡೆದಿದ್ದು, ಸ್ಥಳ ಪರಿಶೀಲನೆ ಮಾಡಲಾಗಿದೆ. ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದು, ಶೀಘ್ರ ದೇವಸ್ಥಾನದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡುವುದರೊಂದಿಗೆ ರಾತ್ರಿ ಕಾವಲುಗಾರನನ್ನು ನೇಮಿಸಲು ಅನುಮತಿ ಪಡೆಯಲಾಗುವುದು.
    ಸಿ.ಎಸ್.ಪೂರ್ಣಿಮಾ, ತಹಸೀಲ್ದಾರ್, ಕೆ.ಆರ್.ನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts