More

    ಟೆಂಡರ್ ನಿಬಂಧನೆಗೆ ಗುತ್ತಿಗೆದಾರರು ಹಿಂದೇಟು ; 20.50 ಲಕ್ಷ ರೂ ವೆಚ್ಚದಲ್ಲಿ ಅರ್ಕಾವತಿ ಶುದ್ಧೀಕರಣ ಯೋಜನೆ

    ರಾಮನಗರ: ಕಲುಷಿತಗೊಂಡಿರುವ ಅರ್ಕಾವತಿ ನದಿ ಶುದ್ಧೀಕರಣಕ್ಕಾಗಿ 20.50 ಕೋಟಿ ರೂ.ಗಳ ಯೋಜನೆ ಸಿದ್ಧಗೊಂಡಿದ್ದು, ಕೆಲಸ ಮಾಡಲು ಗುತ್ತಿಗೆದಾರರು ಬಾರದಿರುವುದು ಯೋಜನೆ ಹಿಂದುಳಿಯಲು ಕಾರಣವಾಗಿದೆ.

    ರಾಮನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ನದಿಯಲ್ಲಿ ಕಲುಷಿತ ನೀರು ಸೇರುವುದನ್ನು ತಪ್ಪಿಸಿ ನದಿ ಪಾತ್ರವನ್ನು ಮಲಿನಮುಕ್ತಗೊಳಿಸಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 20.50 ಕೋಟಿ ರೂ.ಗಳ ವೆಚ್ಚದ ಯೋಜನೆ ಸಿದ್ಧಪಡಿಸಿದೆ.

    ರಾಮನಗರದ ವ್ಯಾಪ್ತಿಯಲ್ಲಿ ಸುಮಾರು 5 ಕಿ.ಮೀ. ಹರಿಯುವ ನದಿಗೆ ನಗರದ ಕೊಳಚೆ ನೀರು ಸೇರುತ್ತಿದೆ. ಜಿಲ್ಲಾ ಕೇಂದ್ರದಲ್ಲಿ 31 ವಾರ್ಡ್‌ಗಳಿದ್ದು, ಬಹುತೇಕ ಕಡೆ ಒಳಚರಂಡಿ (ಯುಜಿಡಿ ಸಂಪರ್ಕ) ವ್ಯವಸ್ಥೆ ಇದೆ. ಆದರೆ, ಅದು ಅವೈಜ್ಞಾನಿಕವಾಗಿದ್ದು, ಹಲವೆಡೆ ಚರಂಡಿ ನೀರು ನೇರವಾಗಿ ನದಿಗೆ ಹರಿಯುತ್ತಿದೆ. ನಗರ ಹೊರವಲಯದಲ್ಲಿರುವ ಯುಜಿಡಿ ನೀರು ಶುದ್ಧೀಕರಣ ಘಟಕಕ್ಕೆ ಒಳಚರಂಡಿ ನೀರು ತಲುಪುತ್ತಿಲ್ಲ. 5 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಜಾಗಗಳಲ್ಲಿ ಒಳಚರಂಡಿ ನೀರು ನದಿ ಸೇರುತ್ತಿದೆ. ಇದರ ಜತೆಗೆ ನದಿ ಪಾತ್ರದ ಹಳ್ಳಿಗಳಿಂದಲೂ ಕಲುಷಿತ ನೀರು ಸೇರುತ್ತಿದೆ. ಬೆಂಗಳೂರಿನ ವೃಷಭಾವತಿ ನದಿಯ ಸ್ಥಿತಿಯೇ ಅರ್ಕಾವತಿಗೂ ಆಗಿದೆ. ಇದರಿಂದಾಗಿ ನದಿ ಮೂಲ ಸ್ವರೂಪವನ್ನೆ ಕಳೆದುಕೊಂಡಿದೆ.

    ಕಲುಷಿತ ನದಿಗಳಲ್ಲಿ ಅರ್ಕಾವತಿಯೂ ಒಂದು: ರಾಜ್ಯದಲ್ಲಿ ಅತ್ಯಂತ ಕಲುಷಿತ ಎಂದು ಗುರುತಿಸಲ್ಪಟ್ಟ 17 ನದಿಗಳ ಪಟ್ಟಿಯಲ್ಲಿ ಅರ್ಕಾವತಿಯೂ ಒಂದು. ಕಲುಷಿತ ನೀರು ನದಿಯಲ್ಲಿ ಹರಿಯದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಯೋಜನೆ ತಯಾರಿಸಿದ್ದು, ಸರ್ಕಾರದಿಂದ 20.50 ಕೋಟಿ ರೂ.ಗೆ ಅನುಮೋದನೆ ದೊರಕಿದೆ. ಆದರೆ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಐದು ವರ್ಷ ನಿರ್ವಹಣೆಯಂತಹ ಕಠಿಣ ನಿಬಂಧನೆ ಹಾಕಿರುವ ಕಾರಣದಿಂದಾಗಿ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕರೆದಿದ್ದ ಪ್ರತ್ಯೇಕ ಟೆಂಡರ್‌ಗಳು ರದ್ದುಗೊಂಡಿವೆ. ಈಗ ರಾಮನಗರಕ್ಕೆ ಪ್ರತ್ಯೇಕವಾಗಿ ಕರೆದಿರುವ ಟೆಂಡರ್‌ನಲ್ಲಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಯೋಜನೆಗೆ ಚಾಲನೆ ಸಿಗಲಿದೆ ಎಂಬ ನಿರೀಕ್ಷೆ ಇದೆ.

    ಬೇರೆ ಯೋಜನೆಗೆ ಹಣ?: ಅರ್ಕಾವತಿ ನದಿ ಶುದ್ಧೀಕರಣಕ್ಕಾಗಿಯೇ 2019-20ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನದ ಯೋಜನೆಯಡಿ 75 ಲಕ್ಷ ರೂ.ಗಳನ್ನು ಮೀಸಲಿಡಲಾಗಿತ್ತು. ಆದರೆ ಶಾಸಕಿ ಅನಿತಾ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿ ಯೋಜನೆಗೆ ಮೀಸಲಿಟ್ಟ ಹಣವನ್ನು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 15 ವಿವಿಧ ಕಾಮಗಾರಿ ಕೈಗೊಳ್ಳಲು ನೀಡುವಂತೆ ಜಿಲ್ಲಾಧಿಕಾರಿಗೆ ಕೋರಿದ್ದಾರೆ. ಇದರಿಂದ ಶುದ್ಧೀಕರಣಕ್ಕೆ ಬಳಕೆ ಆಗಬೇಕಿದ್ದ 75 ಲಕ್ಷ ರೂ.ಗಳೂ ಇಲ್ಲದಂತೆ ಆಗಿದೆ.

    ಅರ್ಕಾವತಿ ನದಿಗೆ ಕಲುಷಿತ ನೀರು ಸೇರುವುದನ್ನು ತಪ್ಪಿಸಲು ನಗರ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಲು 20.50 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿದೆ. ಎರಡು ಬಾರಿ ಕರೆದಿದ್ದ ಟೆಂಡರ್‌ಗಳಲ್ಲಿ ಗುತ್ತಿಗೆದಾರರು ಪಾಲ್ಗೊಂಡಿಲ್ಲ, ಮೂರನೇ ಬಾರಿಗೆ ಕರೆದಿರುವ ಟೆಂಡರ್‌ನಲ್ಲಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಆರಂಭಗೊಳ್ಳಲಿದೆ.
    ಗಂಗಾಧರ್, ಎಇಇ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts