ಸಿನಿಮಾ

ಅರೆಂದೂರು ನಾಲಾ ಖಾಲಿ.. ಖಾಲಿ…

ಸಿದ್ದಾಪುರ: ಪಟ್ಟಣಕ್ಕೆ ನೀರು ಒದಗಿಸುವ ಅರೆಂದೂರು ನಾಲಾದಲ್ಲಿ ನೀರು ಬತ್ತಿ ಹೋಗಿದೆ. ಬಿಸಿಲಿನ ತಾಪಕ್ಕೆ ಜನರು ನೀರಿಗಾಗಿ ಪರದಾಡುತ್ತಿದ್ದು ಪಟ್ಟಣ ಪಂಚಾಯಿತಿಯು ಟ್ಯಾಂಕರ್ ಮೂಲಕ ಜನತೆಗೆ ನೀರು ಪೂರೈಸುತ್ತಿದೆ.

ಸಿದ್ದಾಪುರ ಪಪಂನಲ್ಲಿ 15 ವಾರ್ಡ್‌ಗಳಿದ್ದು, 3556ಕ್ಕೂ ಹೆಚ್ಚು ಕುಟುಂಬಗಳಿವೆ. 14,500ಕ್ಕೂ ಹೆಚ್ಚು ಜನಸಂಖ್ಯೆ ಇದೆ. 2600ಕ್ಕೂ ಹೆಚ್ಚು ನಳಗಳ ಸಂಪರ್ಕವನ್ನು ಪಟ್ಟಣ ಪಂಚಾಯಿತಿಯಿಂದ ಜೋಡಿಸಲಾಗಿದೆ. ಆದರೆ, ಒಂದು ವಾರದಿಂದ ನಳದಲ್ಲಿ ನೀರು ಬರುತ್ತಿಲ್ಲ.

ಪಟ್ಟಣ ಪಂಚಾಯಿತಿಯು ಟ್ಯಾಂಕರ್ ಮತ್ತು ಟಿಪ್ಪರನಲ್ಲಿ ಎರಡು ಸಾವಿರ ಲೀಟರ್‌ನ ಟ್ಯಾಂಕ್ ಇಟ್ಟು ಅದರಲ್ಲಿ ನೀರು ತುಂಬಿಕೊಂಡು ಮನೆ ಮನೆಗೆ ಪಪಂ ನಿಗದಿಪಡಿಸಿದಷ್ಟು ನೀರು ಪೂರೈಸುತ್ತಿದೆ.

ಎಲ್ಲಿಂದ ನೀರು?: ಅರೆಂದೂರು ನಾಲಾದಲ್ಲಿ ನೀರು ಬತ್ತಿ ಹೋಗಿದ್ದರಿಂದ ಪಪಂನ ಮೀನು ಮಾರುಕಟ್ಟೆ ಸಮೀಪದ ಬೋರವೆಲ್‌ನಿಂದ ಟ್ಯಾಂಕರ್‌ಗೆ ತುಂಬಿ ನೀರು ನೀಡಲಾಗುತ್ತಿದೆ.

ಮಳೆ ಇಲ್ಲ. ನೀರೂ ಇಲ್ಲ

ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಬೀಳದ್ದರಿಂದ ಅರೆಂದೂರು ನಾಲಾದಲ್ಲಿ ನೀರು ಇಲ್ಲದಂತಾಗಿದೆ. ನಾಲಾ ಮೇಲ್ಭಾಗದ ಹೊಂಡಗಳಲ್ಲಿದ್ದ ನೀರನ್ನೆಲ್ಲ ಒಂದೆಡೆ ಶೇಖರಿಸಿ ಅದನ್ನೂ ಪಪಂ ಜನತೆಗೆ ನೀಡಿದೆ.

ಪಟ್ಟಣದಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪಪಂ ವ್ಯಾಪ್ತಿಯ ಐದು ಕಡೆಗಳಲ್ಲಿ ಬೋರವೆಲ್ ತೆಗೆಸಲು ಮುಂದಾಗಿದೆ.

ಈಗಾಗಲೇ ಈ ಕುರಿತು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.
ಪಪಂ ನ 15 ವಾರ್ಡ್‌ಗಳಿಂದ ಒಟ್ಟು 118 ಸರ್ಕಾರಿ ತೆರೆದ ಬಾವಿಗಳಿದ್ದು, ಅವುಗಳಲ್ಲಿಯೂ ನೀರು ಕಡಿಮೆಯಾಗಿದೆ. ಕೆಲವು ಬಾವಿಗಳಲ್ಲಿ ಈಗಾಗಲೇ ನೀರು ಬತ್ತಿ ಹೋಗಿದೆ.

ಇದರಿಂದ ಮತ್ತಷ್ಟು ನೀರಿನ ಅಭಾವ ಹೆಚ್ಚಾಗಿರುವುದರಿಂದ ಪಟ್ಟಣ ಪಂಚಾಯಿತಿಯು ಜನತೆಗೆ ನೀರು ಪೂರೈಸಲು ಹರಸಾಹಸ ಪಡುವಂತಾಗಿದೆ.

ಜನತೆಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದೆ. ಅರೆಂದೂರು ನಾಲಾದಲ್ಲಿ ನೀರು ಖಾಲಿ ಆಗಿದ್ದರಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಜನರ ನಿರೀಕ್ಷೆಯಷ್ಟು ನೀರನ್ನು ನೀಡಲಾಗದಿದ್ದರೂ ತೊಂದರೆಯಾಗದಂತೆ ನೀರು ನೀಡಲಾಗುತ್ತಿದೆ.
-ಐ.ಜಿ. ಕೊನ್ನೂರು ಪಪಂ ಮುಖ್ಯಾಧಿಕಾರಿ, ಸಿದ್ದಾಪುರ

Latest Posts

ಲೈಫ್‌ಸ್ಟೈಲ್