More

    400 ರೂ. ತಲುಪಿದ ಹಳೇ ಅಡಕೆ ಧಾರಣೆ

    ಪುತ್ತೂರು: ತಿಂಗಳಿನಿಂದ ಸ್ಥಿರವಾಗಿದ್ದ ಅಡಕೆ ಧಾರಣೆ ಸೋಮವಾರ ಏರಿಕೆ ದಾಖಲಿಸಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಹಳೇ ಅಡಕೆಗೆ 5 ರೂಪಾಯಿ ಏರಿಕೆಯಾಗಿ 400 ರೂ.ಗೆ ಖರೀದಿಯಾಗಿದೆ. ಹೊಸ ಅಡಕೆ 360 ರೂ.ನಲ್ಲೇ ಸ್ಥಿರ ಧಾರಣೆ ಮುಂದುವರಿಸಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಏರಿಕೆ ಕಾಣದೆ ಹೊಸ ಅಡಕೆ 365ರಿಂದ 375 ರೂ., ಹಳೇ ಅಡಕೆ 395ರಿಂದ 405 ರೂ.ಗೆ ಖರೀದಿ ನಡೆಯುತ್ತಿದೆ.

    ಹಳೇ ಅಡಕೆಯತ್ತ ಚಿತ್ತ: ವಾಡಿಕೆಯಂತೆ ಅಕ್ಟೋಬರ್ ಮೊದಲ ವಾರ ಹೊಸ ಅಡಕೆ ಮಾರುಕಟ್ಟೆ ಪ್ರವೇಶಿಸುತ್ತದೆ. ಮಳೆಗಾಲದಲ್ಲಿ ಬಿದ್ದ ಅಡಕೆಯನ್ನು ಬೆಳೆಗಾರರು ಒಣಗಿಸಿ ಈ ಹೊತ್ತಿಗೆ ಮಾರುಕಟ್ಟೆಗೆ ಬಿಡುತ್ತಾರೆ. ಸದ್ಯ ಈ ಅಡಕೆಗೆ ಧಾರಣೆ ಎಷ್ಟು ಸಿಗಬಹುದೆಂಬ ಕುರಿತ ಕುತೂಹಲ ಹೆಚ್ಚಿದೆ.
    ಈ ಬಾರಿ ಅಡಕೆಗೆ ಉತ್ತಮ ಧಾರಣೆ ಸಿಗುತ್ತಿದ್ದಂತೆ ಹೆಚ್ಚಿನವರು ಮಾರಾಟ ಮಾಡಿದ್ದಾರೆ. ದಾಸ್ತಾನು ಇಟ್ಟಿರುವವರು ಕೆಲವರು ಮಾತ್ರ. ಉತ್ತರ ಭಾರತದ ಅಡಕೆ ಬೇಡಿಕೆಯನ್ನು ಇನ್ನೂ ಸರಿಗಟ್ಟುವಷ್ಟು ಪೂರೈಕೆ ನಡೆದಿಲ್ಲ. ಹಾಗಾಗಿ ಅಡಕೆ ಧಾರಣೆ ಸ್ಥಿರವಾಗಿಯೇ ಮುಂದುವರಿಯುತ್ತಿದೆ. ಇದೇ ಮೂಡ್ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರುವ ಹೊಸ ಅಡಕೆಗೂ ಸಿಗಬಹುದು ಎಂಬ ನಿರೀಕ್ಷೆಗಳಿವೆ.

    ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಮಳೆಗಾಲದ ಹೊಸ ಅಡಕೆ ಬಂದಾಗ, ಪ್ರಸಕ್ತ ಇರುವ ಹೊಸ ಅಡಕೆ ಸಿಂಗಲ್ ಚೋಲ್ ಎಂದೂ, ಹಳೇ ಅಡಕೆ ಡಬಲ್ ಚೋಲ್ ಎಂದೂ ಪರಿಗಣಿಸಲ್ಪಡುತ್ತದೆ. ಸಾಮಾನ್ಯವಾಗಿ ಹಳೇ ಅಡಕೆ ಧಾರಣೆ 280- 285 ರೂ. ಆಸುಪಾಸಿನಲ್ಲಿದ್ದರೆ, ಅಕ್ಟೋಬರ್ ಮೊದಲ ವಾರ ಮಾರುಕಟ್ಟೆ ಪ್ರವೇಶಿಸುವ ಹೊಸ ಅಡಕೆ ಧಾರಣೆ 200- 210 ರೂ. ಆಸುಪಾಸಿನಲ್ಲಿರುತ್ತದೆ. ಈ ಬಾರಿ ಹಳೇ ಅಡಕೆ 400 ರೂ. ಗಡಿ ದಾಟಿರುವುದರಿಂದ ಹೊಸ ಅಡಕೆಗೆ ಉತ್ತಮ ಧಾರಣೆ ಸಿಗಬಹುದೆನ್ನುತ್ತಾರೆ ಬೆಳೆಗಾರರು.

    ಹಲವು ದಿನಗಳಿಂದ ಸ್ಥಿರವಾಗಿದ್ದ ಅಡಕೆ ಮಾರುಕಟ್ಟೆ ಧಾರಣೆ ಸೋಮವಾರ ತುಸು ಏರಿಕೆಯಾಗಿದೆ. ಧಾರಣೆ ಬಗ್ಗೆ ಬೆಳೆಗಾರರು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ವಿದೇಶದಿಂದ ಅಡಕೆ ಆಮದು ಈಗಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇಶಿ ಅಡಕೆಗೆ ಧಾರಣೆ ಹೆಚ್ಚಾಗಿದೆ.
    – ಅಶೋಕ್ ಕಿನಿಲ, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts