More

    ಸವಲತ್ತುಗಳು ಅರ್ಹರಿಗೆ ತಲುಪಲಿ

    ಅರಕಲಗೂಡು: ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದು ಪಡಿತರ ಚೀಟಿ ಹೊಂದಿಲ್ಲದ ವ್ಯಕ್ತಿಗಳು ಹಾಗೂ ವಲಸೆ ಕಾರ್ಮಿಕರಿಗೂ ಪಡಿತರ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

    ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಸಮಯದಲ್ಲಿ ಎಲ್ಲ ವರ್ಗದ ಜನರ ಸಮಸ್ಯೆಯನ್ನು ಮನಗಂಡು ಸರ್ಕಾರ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಸವಲತ್ತುಗಳು ಅರ್ಹರಿಗೆ ತಲುಪಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ರೈತರಿಗೆ ಸಿಗುವ ಜೋಳದ ಬೆಳೆ ಆರ್ಥಿಕ ಸಹಾಯದಲ್ಲಿ ಭ್ರಷ್ಟಾಚಾರ ಆಗದಂತೆ ಕ್ರಮವಹಿಸಬೇಕು. ಮೊದಲು ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದನ್ನು ರೈತರಿಗೆ ತಿಳಿಸಬೇಕು. ಬಿತ್ತನೆ ಬೀಜ, ಆಲೂಗಡ್ಡೆ ಬೆಳೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದು ತಿಳಿಸಿದರು.

    ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಾಗ ಪೂರ್ಣ ಗ್ರಾಮವನ್ನು ಸೀಲ್ಡೌನ್ ಮಾಡಿದರೆ ರೈತರು ಕೃಷಿ ಕಾರ್ಯ ಕೈಗೊಳ್ಳಲು ತೀವ್ರ ತೊಂದರೆಯಾಗಲಿದೆ. ಈ ಕುರಿತು ನಿಯಾಮವಳಿ ಬದಲಿಸಲು ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಶಾಸಕರು ಸಲಹೆ ನೀಡಿದರು.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕೊಳಗಾದ ರೈತರು ಆರ್ಥಿಕ ನೆರವು ಪಡೆಯಲು ದಾಖಲೆಗಳನ್ನು ಹೊಂದಿಸಲು ಪರದಾಡುವಂತಾಗಿದೆ. ಸುಲಭವಾಗಿ ಹಾಗೂ ತುರ್ತಾಗಿ ದಾಖಲೆಗಳು ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಿದರು.

    ಇದಕ್ಕೆ ಸಮ್ಮತಿಸಿದ ಸಚಿವರು, ಸೀಲ್ಡೌನ್ ಕುರಿತು ಗ್ರಾಮೀಣ ಭಾಗಗಳಿಗೆ ಬೇರೆಯದೆ ಮಾನದಂಡ ಅಳವಡಿಸಿಕೊಳ್ಳಬೇಕು. ಸೋಂಕು ಪೀಡಿತ ವ್ಯಕ್ತಿಯ ಸುತ್ತಮುತ್ತಲಿನ 20 ಮನೆಗಳನ್ನು ನಿರ್ಬಂಧಗೊಳಿಸಬೇಕು. ಫಲಾನುಭವಿಗಳಿಗೆ ಸುಲಭ ರೀತಿಯಲ್ಲಿ ದಾಖಲೆಗಳು ದೊರಕಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಬಿ.ಎ. ಪರಮೇಶ್, ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಆಸ್ಪತ್ರೆಗೆ ಭೇಟಿ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಸಚಿವರು ವೀಕ್ಷಿಸಿದರು. ಕರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts