More

    ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್​ ವಾಯುದಾಳಿ: 50ಕ್ಕೂ ಅಧಿಕ ಸಾವು, ಕದನ ವಿರಾಮಕ್ಕೆ ಒತ್ತಾಯ

    ಜೆರುಸಲೇಂ: ಶನಿವಾರ (ನ.04) ರಾತ್ರಿ ಗಾಜಾ ಪಟ್ಟಿಯ ಮಘಾಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ವಾಯುಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಂದಿ ದುರಂತ ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಅರಬ್​ ದೇಶಗಳ ನಾಯಕರು ಕದನ ವಿರಾಮಕ್ಕಾಗಿ ಅಮೆರಿಕವನ್ನು ಒತ್ತಾಯಿಸುತ್ತಿದ್ದಾರೆ.

    ಇಸ್ರೇಲ್​ ರಕ್ಷಣಾ ಪಡೆಗಳು (ಐಡಿಎಫ್​) ಶನಿವಾರ ಇಡೀ ರಾತ್ರಿ ಗಾಜಾ ಮೇಲೆ ದಾಳಿಯನ್ನು ಮುಂದುವರಿಸಿತು ಮತ್ತು ಗಾಜಾ ಪಟ್ಟಿಯ ಉತ್ತರ ಪ್ರದೇಶದಲ್ಲಿ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಹೊಸದಾಗಿ ನಡೆದ ಬಾಂಬ್​ ದಾಳಿಯಲ್ಲಿ ಹಲವಾರು ವಸತಿ ಮನೆಗಳು ನಾಶವಾಗಿವೆ. ಇಸ್ರೇಲ್​ನ ಭೂಸೇನೆಯು ಸಹ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಗಾಜಾದಲ್ಲಿರುವ ಹಮಾಸ್​ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ.

    ನಿನ್ನೆ ನಡೆದ ದಾಳಿಯಲ್ಲಿ ಅಪಾರ ಸಾವು-ನೋವು ಉಂಟಾದ ಬೆನ್ನಲ್ಲೇ ಈಜಿಪ್ಟ್​ ಮತ್ತು ಜೋರ್ಡನ್​ ಸೇರಿದಂತೆ ಅರಬ್​ ರಾಷ್ಟ್ರಗಳ ನಾಯಕರು ಯುಎಸ್​ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರನ್ನು ತಕ್ಷಣದ ಕದನ ವಿರಾಮಕ್ಕೆ ಒತ್ತಾಯಿಸಿದ್ದಾರೆ. ಪ್ರಸ್ತುತ ಆಂಟೋನಿ ಬ್ಲಿಂಕೆನ್ ಅವರು ಮಧ್ಯಪೂರ್ವ ರಾಷ್ಟ್ರಗಳಲ್ಲಿ ರಾಜತಾಂತ್ರಿಕ ಪ್ರವಾಸ ಕೈಗೊಂಡಿದ್ದು, ಅರಬ್​ ನಾಯಕರ ಜತೆಗಿನ ಸಭೆಯಲ್ಲಿ ಅವರ ಕೋಪವನ್ನು ಎದುರಿಸುತ್ತಿದ್ದಾರೆ.

    ನಾಗರಿಕ ಸಾವುಗಳನ್ನು ತಡೆಯುವ ಉದ್ದೇಶದಿಂದ ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಬಾಂಬ್ ಸ್ಫೋಟಗಳಿಗೆ ಮಾನವೀಯ ಆಧಾರದ ಮೇಲೆ ವಿರಾಮ ಘೋಷಣೆ ಮಾಡುವುದನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಆಂಟೋನಿ ಬ್ಲಿಂಕೆನ್ ಒತ್ತಾಯಿಸಿದರು. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕದನ ವಿರಾಮದ ಯಾವುದೇ ಪ್ರಸ್ತಾವನ್ನು ತಳ್ಳಿಹಾಕಿದ್ದು, ಯುದ್ಧ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

    ಅ.7ರಂದು ನಡೆದ ದಾಳಿಗೆ ಹಮಾಸ್​ ನಾಯಕತ್ವ ಕಾರಣ. ನಾವು ಆ ನಾಯಕತ್ವವನ್ನು ಪಡೆಯುತ್ತೇವೆ ನಾವು ಹಮಾಸ್​ ಗಾಜಾ ಮುಖ್ಯಸ್ಥ ಯಾಹ್ಯಾ ಸಿನ್ವಾರ್​ನನ್ನು ತೊಡೆದು ಹಾಕದೇ ಬಿಡುವುದಿಲ್ಲ. ಗಾಜಾದ ನಿವಾಸಿಗಳು ನಮ್ಮ ಮುಂದೆ ಬಂದರೆ, ಅದು ಯುದ್ಧವನ್ನು ಕಡಿಮೆ ಮಾಡುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ.

    ಅ. 7ರಂದು ಇಸ್ರೇಲ್​ ಮೇಲೆ ಹಮಾಸ್​ ಉಗ್ರರು 5 ಸಾವಿರ ರಾಕೆಟ್​ಗಳಿಂದ ದಿಢೀರ್​ ದಾಳಿ ನಡೆಸಿದ್ದಕ್ಕೆ ಪ್ರತಿಕಾರವಾಗಿ ಹಮಾಸ್​ ವಿರುದ್ಧ ಇಸ್ರೇಲ್​ ತಿರುಗಿಬಿದ್ದಿದ್ದೆ. ಇಸ್ರೇಲ್​ ಮತ್ತು ಹಮಾಸ್​ ನಡುವಿನ ಯುದ್ಧ 5ನೇ ವಾರಕ್ಕೆ ಕಾಲಿಟ್ಟಿದ್ದು, ಕದನ ಕಾರ್ಮೋಡ ಮಾತ್ರ ಇನ್ನೂ ತಿಳಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಯುದ್ಧದ ಭೀಕರತೆ ಹೆಚ್ಚತ್ತಲೇ ಇದ್ದು, ಗಾಜಾದಲ್ಲಿರುವ ನಾಗರಿಕರು ತುಂಡು ಬ್ರೆಡ್​ಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಹಮಾಸ್​ ನಡೆಸುತ್ತಿರುವ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭೀಕರ ಯುದ್ಧದಲ್ಲಿ 9400 ಪ್ಯಾಲೆಸ್ತೀನಿಯನ್ನರು ಹತರಾಗಿದ್ದಾರೆ. ವೆಸ್ಟ್​ ಬ್ಯಾಂಕ್​ ವಲಯದಲ್ಲಿ ಸುಮಾರು 140 ಮಂದಿ ಮರಣ ಹೊಂದಿದ್ದಾರೆ. ಗಾಜಾ ಪಟ್ಟಿಯಲ್ಲಿ ಸುಮಾರು 240 ಇಸ್ರೇಲಿಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದ್ದು, ಅವರ ಕುಟುಂಬಗಳು ಇಸ್ರೇಲ್​ನ ಟೆಲ್ ಅವಿವ್‌ನಲ್ಲಿ ಆಯೋಜಿಸಲಾದ ಪ್ರದರ್ಶನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ, ತಡಮಾಡದೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಹಮಾಸ್​ಗೆ ಕರೆ ನೀಡಿದ್ದಾರೆ. (ಏಜೆನ್ಸೀಸ್​)

    ಬಸ್​ ನಿಲ್ಲಿಸಿ ನಡುರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಲು ಹೋದ ನಟಿ, ಬಿಜೆಪಿ ನಾಯಕಿಯ ಬಂಧನ!

    ದ್ವಿಪತ್ನಿತ್ವ ಕೇಸಲ್ಲಿ ಕುಟುಂಬಸ್ಥರ ವಿಚಾರಣೆ ಅಸಾಧ್ಯ; ತಪ್ಪಿತಸ್ಥರ ವಿರುದ್ಧ ಮಾತ್ರ ಕಾನೂನು ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts