More

    ಪಶುಸಂಗೋಪನೆ ಇಲಾಖೆಗೆ 400 ವೈದ್ಯರ ನೇಮಕಕ್ಕೆ ಒಪ್ಪಿಗೆ

    ಪಿರಿಯಾಪಟ್ಟಣ: ಪಶುಸಂಗೋಪನೆ ಇಲಾಖೆಯಲ್ಲಿ 400 ವೈದ್ಯರ ನೇಮಕಾತಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

    ರೇಷ್ಮೆ ಇಲಾಖೆ ವತಿಯಿಂದ ತಾಲೂಕಿನ ಕಗ್ಗುಂಡಿ ಬಳಿಯ ರೇಷ್ಮೆ ಕೃಷಿ ಕ್ಷೇತ್ರದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹುಣಸೂರು ಉಪ ವಿಭಾಗ ಮಟ್ಟದ ರೇಷ್ಮೆ ಬೆಳೆಗಾರರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

    ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. 18 ಸಾವಿರ ಹುದ್ದೆಗಳಿಗೆ ಪ್ರಸ್ತುತ 8 ಸಾವಿರ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನೂ 10 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಇದೇ ಪರಿಸ್ಥಿತಿ ರೇಷ್ಮೆ ಇಲಾಖೆಯಲ್ಲಿಯೂ ಇದ್ದು ಆದಷ್ಟು ಶೀಘ್ರ ಖಾಲಿ ಉಳಿದಿರುವ ಹುದ್ದೆಗಳನ್ನು ಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ತಂಬಾಕು ಬೆಳೆಯುವುದು ಎಷ್ಟು ಕಷ್ಟ ಎಂಬುದನ್ನು ನಾನು ಸ್ವಂತ ಅನುಭವದಿಂದಲೇ ಕಲಿತಿದ್ದೇನೆ ಎಂದ ಸಚಿವರು, ತಂಬಾಕು ಬೆಳೆಗೆ ಬ್ಯಾಂಕುಗಳಲ್ಲಿ ಅಪಾರ ಸಾಲ ನೀಡುತ್ತಿರುವುದರಿಂದ ಬಹುತೇಕ ತಂಬಾಕು ಬೆಳೆಗಾರರು ತಂಬಾಕಿನಿಂದ ವಿಮುಖರಾಗುತ್ತಿಲ್ಲ ಎಂದರು.

    ರಾಜ್ಯದಲ್ಲಿ 49 ಸಾವಿರ ಅಧಿಕೃತ ತಂಬಾಕು ಬೆಳೆಗಾರರು ಮತ್ತು 21ಸಾವಿರ ಅನಧಿಕೃತ ತಂಬಾಕು ಬೆಳೆಗಾರರು ಸೇರಿದಂತೆ ಒಟ್ಟು 70 ಸಾವಿರ ರೈತರು ತಂಬಾಕು ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ತಂಬಾಕು ಬೆಳೆಯುವುದನ್ನು ಸಂಪೂರ್ಣವಾಗಿ ಬಿಡಿ ಎಂದು ನಾನು ಹೇಳುತ್ತಿಲ್ಲ ಮಿಶ್ರ ವಾಣಿಜ್ಯ ಬೆಳೆ ಪದ್ಧತಿ ಅನುಸರಿಸಿದಲ್ಲಿ ನಷ್ಟದ ಪ್ರಮಾಣ ಕಡಿಮೆಯಾಗಲಿದ್ದು, ಉತ್ತಮ ಲಾಭ ನಿರೀಕ್ಷಿಸಬಹುದಾಗಿದೆ ಎಂದರು.

    ತಂಬಾಕು ಬೆಳೆಗಾರರು ತಂಬಾಕು ಮಂಡಳಿ ನಿಗದಿಪಡಿಸುವ ಪ್ರಮಾಣಕ್ಕಿಂತಲೂ ಕಡಿಮೆ ಪ್ರಮಾಣವನ್ನು ಉತ್ಪಾದಿಸಿದರೆ ಬೇಡಿಕೆ ಹೆಚ್ಚಲಿದ್ದು, ಉತ್ತಮ ದರ ಸಿಗಲಿದೆ ಎಂದರು.

    ಐಟಿಸಿ ಮತ್ತಿತರ ತಂಬಾಕು ಖರೀದಿದಾರ ಕಂಪನಿಗಳು ತಂಬಾಕು ಬೆಳೆಗಾರರಿಗೆ 2ನೇ ಬೆಳೆಯನ್ನೂ ತಂಬಾಕು ಬೆಳೆಯುವಂತೆ ಪುಸಲಾಯಿಸುವ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರ ಮಾತುಗಳಿಗೆ ರೈತರು ಮಾರುಹೋಗದೆ ರೇಷ್ಮೆ ಸೇರಿದಂತೆ ಮಿಶ್ರ ವಾಣಿಜ್ಯ ಬೆಳೆ ಪದ್ಧತಿಗೆ ತೊಡಗಿಸಿಕೊಳ್ಳಿ ಎಂದರು.

    ಕಳೆದೆರಡು ವರ್ಷ ಶುಂಠಿಗೆ ಉತ್ತಮ ದರ ದೊರಕಿರುವುದರಿಂದ ಈ ವರ್ಷ ಬಹುತೇಕ ಕಡೆಗಳಲ್ಲಿ ರೈತರು ಶುಂಠಿ ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ್ದೇನೆ ಎಂದರು.

    ವಿಶ್ವದಲ್ಲಿ ಮೈಸೂರು ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದ್ದು ಸಿಲ್ಕ್ ಫ್ಯಾಕ್ಟರಿಯಿಂದ ಔಟ್ ಲೆಟ್‌ಗಳಿಗೆ ನಮ್ಮ ಉತ್ಪನ್ನಗಳು ತಲುಪುತ್ತಿದ್ದಂತೆ ಒಂದೇ ದಿನದಲ್ಲಿ ಖಾಲಿಯಾಗುತ್ತಿವೆ. ಬೈವೊಲ್ಟಿನ್ (ದ್ವಿತಳಿ) ರೇಷ್ಮೆಗೂಡಿಗೆ ಈವರೆಗೆ ಸರ್ಕಾರ ನೀಡುತ್ತಿದ್ದ ಒಂದು ಕೆಜಿಗೆ ಹತ್ತು ರೂ. ಪ್ರೋತ್ಸಾಹ ಧನವನ್ನು 30 ರೂ.ಗಳಿಗೆ ಹೆಚ್ಚಿಸಲಾಗಿದೆ. ರೈತರಿಗೆ ಕಡಿಮೆ ದರದಲ್ಲಿ ರೇಷ್ಮೆ ಹುಳು ಮಾರಾಟ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಸರ್ಕಾರಿ ಚಾಕಿ ಸಾಕಣೆ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

    ಪ್ರಗತಿಪರ ರೈತ ಮುಳ್ಳೂರು ಶಿವಣ್ಣ ಮಾತನಾಡಿ, ಚೀನಾ ನಂತರ ಅತಿ ಹೆಚ್ಚು ರೇಷ್ಮೆ ಉತ್ಪಾದನೆ ಆಗುತ್ತಿರುವ ದೇಶ ಭಾರತವಾಗಿದ್ದು ನಮ್ಮ ದೇಶದ ಒಟ್ಟು ಉತ್ಪಾದನೆಯ ಶೇ. 90ರಷ್ಟು ರೇಷ್ಮೆ ಉತ್ಪಾದನೆ ನಮ್ಮ ರಾಜ್ಯದಿಂದಲೇ ಆಗುತ್ತಿದೆ ಎಂದರು.

    ರಾಜ್ಯದಲ್ಲಿ ಕೋಲಾರ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಕೃಷಿಯಲ್ಲಿ ತೊಡಗಿದ್ದರು. ನಗರೀಕರಣದ ಹೆಚ್ಚಳದಿಂದಾಗಿ ಇತ್ತೀಚಿನ ದಿನಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆ ಕುಂಠಿತವಾಗುತ್ತಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಯ ಹವಾಮಾನ ರೇಷ್ಮೆ ಕೃಷಿಗೆ ಹೇಳಿ ಮಾಡಿಸಿದಂತಿದ್ದು ಪಿರಿಯಾಪಟ್ಟಣ ಭಾಗವನ್ನು ರೇಷ್ಮೆ ಬಿತ್ತನೆ ಗೂಡಿನ ಪ್ರದೇಶ ಎಂದು ಘೋಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

    ಕಾರ್ಯಾಗಾರದಲ್ಲಿ ಕೇಂದ್ರೀಯ ರೇಷ್ಮೆ ಸಂಶೋಧನೆಯ ವಿಜ್ಞಾನಿ ಡಾ.ಕೆ.ಬಿ.ಚಂದ್ರಶೇಖರ್, ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಕುಲಸಚಿವ ಡಾ.ಟಿ.ರಾಮೇಗೌಡ, ವಿಜ್ಞಾನಿ ಡಾ.ಆರ್.ಎಂ.ಶಿವಪ್ರಸಾದ್, ಡಾ.ಶಾನ್‌ಬಾಗ್, ಎಚ್.ರಾಜಪ್ಪ ರೇಷ್ಮೆ ಬೆಳೆಗಾರರಿಗೆ ಮಾಹಿತಿ ನೀಡಿದರು.
    ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಬಿ.ಆರ್.ಪ್ರತಿಭಾ, ಉಪ ನಿರ್ದೇಶಕ ಎಸ್.ಕೆ.ಮಂಜುಳಾ, ಸಹಾಯಕ ನಿರ್ದೇಶಕ ಮಾದೇಶ್, ಎನ್.ಉಮೇಶ್, ಎಂ.ಶಿವಮೂರ್ತಿ, ಡಿ.ಜಿ.ಮಂಜುನಾಥ್, ಮೈಸೂರು ರೇಷ್ಮೆ ರೈತ ಉತ್ಪಾದಕ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಎ.ಪ್ರಕಾಶ್, ತಾಪಂ ಇಒ ಡಿ.ಬಿ.ಸುನೀಲ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಹಿಟ್ಟನೆ ಹೆಬ್ಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಮರಾಜ್, ಕೆಪಿಸಿಸಿ ಸದಸ್ಯ ಅನಿಲ್‌ಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊಲದಪ್ಪ, ಪರಮೇಶ್ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ, ಕೆ.ಆರ್.ನಗರ ತಾಲೂಕುಗಳ ರೇಷ್ಮೆ ಬೆಳೆಗಾರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts