More

    ರಸ್ತೆ, ಕುಡಿಯುವ ನೀರು, ಹಕ್ಕುಪತ್ರಕ್ಕಾಗಿ ಜನರ ಅಹವಾಲು

    ಅಜ್ಜಂಪುರ: ತಾಲೂಕು ಆಡಳಿತದಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನತಾ ದರ್ಶನದಲ್ಲಿ ತಾಲೂಕಿನ ನೂರಾರು ಜನರು ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ಹೇಳಿಕೊಂಡು ಪರಿಹರಿಸಲು ಮನವಿ ಮಾಡಿದರು.
    ಕುರುಬರಹಳ್ಳಿ ಗ್ರಾಮಸ್ಥರು ಕುರುಬರಹಳ್ಳಿ-ಚನ್ನಾಪುರ ರಸ್ತೆಯಲ್ಲಿ ಸಂಚರಿಸಲು ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕೆಂದರು. ಮುಖಂಡ ಜಿ.ನಟರಾಜ್ ಮಾತನಾಡಿ, ಅಜ್ಜಂಪುರ ತಾಲೂಕು ಕೇಂದ್ರವಾದರೂ ಇದುವರೆಗೂ ಚುನಾವಣೆ ನಡೆದಿಲ್ಲ. ಜನಪ್ರತಿನಿಧಿಗಳು ಇಲ್ಲದೆ ಕಾರಣ ಪಟ್ಟಣ ಪ್ರಗತಿ ಕಾಣುತ್ತಿಲ್ಲ. ಶೀಘ್ರ ಚುನಾವಣೆ ನಡೆಸಿ ಎಂದು ಆಗ್ರಹಿಸಿದರು.
    ಜೆಡಿಎಸ್ ಮುಖಂಡ ಎಸ್.ಶಿವಾನಂದ್ ಮಾತನಾಡಿ, ಪಟ್ಟಣದ ಹಲವು ಭಾಗಗಳಲ್ಲಿ ಹಳೆಯ ಶಿಥಿಲ ಕಟ್ಟಡಗಳು ಹಾಳುಬಿದ್ದು ಹಂದಿ, ನಾಯಿಗಳು ವಾಸಿಸುತ್ತಿವೆ. ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಿ ಕಚೇರಿಗಳನ್ನು ಪ್ರಾರಂಭಿಸಬೇಕು. ಅಮೃತ್‌ಮಹಲ್ ತಳಿ ಸಂವರ್ಧನಾ ಕೇಂದ್ರದ ಕಾವಲಿನಲ್ಲಿ ಸರ್ಕಾರದ ಜತೆ ಚರ್ಚಿಸಿ ಮಿನಿ ವಿಧಾನಸೌಧ ನಿರ್ಮಿಸಬೇಕು. ಯಾವುದೇ ಕಾರಣಕ್ಕೂ ಗೌರಾಪುರದಲ್ಲಿ ಕಚೇರಿಗಳು ಪ್ರಾರಂಭ ಆಗುವುದು ಬೇಡ ಎಂದು ಒತ್ತಾಯಿಸಿದರು.
    ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣಪ್ಪ ಮಾತನಾಡಿ, ಪಟ್ಟಣದ ರೈಲ್ವೇ ಗೇಟ್ ಹಿಂಭಾಗ ಸ್ಮಶಾನ ಜಾಗ ನನ್ನದೆಂದು ಒಬ್ಬರು ಶವ ಸಂಸ್ಕಾರಕ್ಕೆ ಗೇಟ್ ಮಾಡಿಸುತ್ತಿದ್ದಾರೆ. ಅವರಿಗೆ ಪರಿಹಾರ ನೀಡಿ ಸರ್ಕಾರದ ವಶಕ್ಕೆ ಪಡೆದು ಸಾರ್ವಜನಿಕರ ಉಪಯೋಗಕ್ಕೆ ನೀಡಿ ಎಂದು ಮನವಿ ಮಾಡಿದರು.
    ವಕೀಲರ ಸಂಘದ ಅಧ್ಯಕ್ಷ ನಿಂಗಪ್ಪ ಮಾತನಾಡಿ, ಅಜ್ಜಂಪುರದಲ್ಲಿ ಕೋರ್ಟ್ ಪ್ರಾರಂಭಕ್ಕೆ ಪೀಠೋಪಕರಣ, ನವೀಕರಣ ಇತರ ಕೆಲಸಗಳಿಗೆ 43 ಲಕ್ಷ ರೂ. ಅನುದಾನ ಬಂದಿದ್ದರೂ ಲೋಕೋಪಯೋಗಿ ಇಲಾಖೆ ಕೆಲಸ ಪ್ರಾರಂಭಿಸಿಲ್ಲ ಎಂದು ಆರೋಪಿಸಿದರು.
    ತ್ಯಾಗದಕಟ್ಟೆ ಗ್ರಾಪಂ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗಿದ್ದು ಬೋರ್‌ವೆಲ್‌ನಲ್ಲಿ ನೀರು ಬರುತ್ತಿಲ್ಲ. ಹೊಸ ಬೋರ್‌ವೆಲ್ ಕೊರೆಸಿ ನೀರು ಒದಗಿಸಿ ಎಂದು ಗ್ರಾಮಸ್ಥರು ವಿನಂತಿಸಿದರು. ತಹಸೀಲ್ದಾರ್ ಶಿವಶರಣಪ್ಪ ಕಟ್ಟೊಳಿ, ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ, ತಾಪಂ ಇಒ ಗೀತಾ ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts