More

    ಉದ್ಯಮ ಉತ್ತೇಜನ: ರಾಜ್ಯದಲ್ಲಿ ಆಪಲ್ ಫೋನ್ ಘಟಕ ಸ್ಥಾಪನೆಗೆ ಆಸಕ್ತಿ

    ಮೊಬೈಲ್​ಫೋನ್ ತಯಾರಿಕೆ ಕಂಪನಿಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ತೈವಾನ್ ಮೂಲದ ಫಾಕ್ಸ್​ಕಾನ್ ಸಮೂಹದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ಯಂಗ್ ಲಿಯು ನೇತೃತ್ವದ 17 ಉನ್ನತಾಧಿಕಾರಿಗಳ ನಿಯೋಗ ರಾಜ್ಯದಲ್ಲಿ ಆಪಲ್ ಫೋನ್ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಸ್ಥಳ ವೀಕ್ಷಣೆಗೆ ಆಗಮಿಸಿದ್ದು, ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಮೊದಲ ಸುತ್ತಿನ ಚರ್ಚೆ ನಡೆಸಿರುವುದು ರಾಜ್ಯದ ತಂತ್ರಜ್ಞಾನ ಉದ್ಯಮ ವಲಯದಲ್ಲಿನ ಮಹತ್ವದ ಬೆಳವಣಿಗೆಯಾಗಿದೆ.

    ಆಪಲ್ ಫೋನ್ ತಯಾರಿಕೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಫಾಕ್ಸ್​ಕಾನ್ ಕಂಪನಿಯು ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪ ಘಟಕ ತೆರೆಯುವ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಕಂಪನಿಗೆ ದೊಡ್ಡಬಳ್ಳಾಪುರದ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪ್ರದೇಶದಲ್ಲಿ 300 ಎಕರೆ ಜಾಗ ತೋರಿಸಲು ಉದ್ದೇಶಿಸಲಾಗಿದೆ. ಕಂಪನಿಯು ಕರ್ನಾಟಕದಲ್ಲಿ 5750 ಕೋಟಿ ರೂಪಾಯಿ ಹೂಡಿಕೆ ಮಾಡುವುದು ಬಹುತೇಕ ಖಚಿತವಾಗಿದೆ. ಐಫೋನ್ ಬಿಡಿಭಾಗಗಳನ್ನು ರಾಜ್ಯದಲ್ಲಿ ತಯಾರಿಸಲು ಉದ್ದೇಶಿಸಿರುವ ಫಾಕ್ಸ್​ಕಾನ್, ಹ್ಯಾಂಡ್​ಸೆಟ್​ಗಳ ಜೋಡಣೆ ಹಾಗೂ ಎಲೆಕ್ಟ್ರಿಕ್ ವಾಹನಗಳಿಗಾಗಿ ಕೆಲವು ಬಿಡಿಭಾಗಗಳನ್ನು ಕೂಡ ಇಲ್ಲಿ ತಯಾರಿಸುವ ಸಾಧ್ಯತೆ ಇದೆ. ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ ಸಂಸ್ಥೆ ರಾಜ್ಯದಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಆದರೆ, ತೆಲಂಗಾಣ ರೀತಿ ಬೇರೆ ರಾಜ್ಯಗಳು ಕೂಡ ಹಲವಾರು ರಿಯಾಯಿತಿ, ಸೌಲಭ್ಯಗಳನ್ನು ಕಲ್ಪಿಸಿಕೊಡುವ ಆಮಿಷಗಳ ಮೂಲಕ ಫಾಕ್ಸ್​ಕಾನ್ ರೀತಿಯ ಬೃಹತ್ ಕಂಪನಿಗಳ ಹೂಡಿಕೆಯನ್ನು ಸೆಳೆಯಲು ಪೈಪೋಟಿ ನೀಡುತ್ತಿವೆ. ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇರುವ ಐಫೋನ್ ಘಟಕ ರಾಜ್ಯದ ಕೈತಪ್ಪದಂತೆ ಎಚ್ಚರಿಕೆಯನ್ನು ರಾಜ್ಯ ಸರ್ಕಾರ ವಹಿಸಬೇಕಿದೆ.

    ಇದನ್ನೂ ಓದಿ: ಸ್ಮಾರ್ಟ್​ ಟ್ರ್ಯಾಪ್​: ಪ್ರಶಾಂತ್ ಮಾಡಾಳ್​ಗೆ ದೂರುದಾರ ಬಲೆ ಹೆಣೆದಿದ್ದು ಹೇಗೆ?

    2020ರ ಆಗಸ್ಟ್​ನಲ್ಲಿ ನೂತನ ಕೈಗಾರಿಕಾ ನೀತಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗಿದೆ. 2020ರಿಂದ 2025ರ ಅವಧಿಯವರೆಗಿನ ಈ ನೀತಿಯು ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ಸೂಕ್ತ ವಾತಾವರಣ ರೂಪಿಸುವ ಮೂಲಕ 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಆಕರ್ಷಿಸಿ, 20 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿದೆ. ಸುಸ್ಥಿರ, ಸಮತೋಲಿತ, ಸಮಗ್ರ ಅಭಿವೃದ್ಧಿಗೆ ಇದರಲ್ಲಿ ಒತ್ತು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸರ, ಸಂಸ್ಕೃತಿಗೆ ಧಕ್ಕೆಯಾಗದ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಹೂಡಿಕೆ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಇನ್ನೊಂದು ಮಹತ್ವದ ಸಂಗತಿಯೆಂದರೆ, ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆ ಬೆಳವಣಿಗೆ ಸಾಧಿಸುವತ್ತ ರಾಜ್ಯ ಸರ್ಕಾರ ಗಮನ ನೀಡಬೇಕಾದುದು. ಕೈಗಾರಿಕಾ ನೀತಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆಯಾದರೂ ಅದು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು ಹಾಗೂ ರಾಜ್ಯದ ಹಿಂದುಳಿದ ಭಾಗಗಳಲ್ಲಿ ಕೈಗಾರಿಕಾಭಿವೃದ್ಧಿ ಸಾಧಿಸಲು ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ ಭಾಗಗಳಲ್ಲೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಉದ್ಯಮಿಗಳನ್ನು ಸೆಳೆಯುವ ನಿಟ್ಟಿನಲ್ಲಿಯೂ ಸರ್ಕಾರದ ನೇತೃತ್ವ ವಹಿಸುವವರು ಗಮನ ನೀಡಬೇಕಾಗಿದೆ. ಇದರಿಂದ ಕರೊನೋತ್ತರ ದಿನಗಳಲ್ಲಿ ಆರ್ಥಿಕತೆ ಚೇತರಿಕೆಗೆ, ಉದ್ಯೋಗಸೃಷ್ಟಿಗೆ ಇಂಬು ಸಿಗಬಲ್ಲದು.

    ಗಂಡ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಲವರ್​ನ ಕರೆಸಿ ಹೊಡೆಸಿದ ಹೆಂಡತಿ!

    ಟ್ರಾಫಿಕ್ ಫೈನ್, ಮತ್ತೆ 50% ಆಫರ್​​: ಎಷ್ಟು ದಿನಗಳವರೆಗೆ ಅವಕಾಶ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts